ರಸ್ತೆ ಬದಿ, ಚರಂಡಿಯಲ್ಲಿನ ವಿದ್ಯುತ್ ಕಂಬಗಳ ತೆರವು
Team Udayavani, Oct 13, 2018, 3:00 PM IST
ಸವಣೂರು : ಸವಣೂರಿನ 33/11 ಕೆವಿ ವಿದ್ಯುತ್ ವಿತರಣೆ ಕೇಂದ್ರದ 5 ಎಂವಿಎ ಪವರ್ ಟ್ರಾನ್ಸ್‌ಫಾರ್ಮರ್ ಅನ್ನು ಉನ್ನತೀಕರಿಸುವ ಸಲುವಾಗಿ ಸವಣೂರಿನಿಂದ ಕಾಣಿಯೂರು ಕಡೆಗೆ 11 ಕೆವಿ ಎಚ್‌ಟಿ ವಿದ್ಯುತ್ ತಂತಿಯನ್ನು ಎಳೆಯುವ ನಿಟ್ಟಿನಲ್ಲಿ ಆಲಂಕಾರು, ಕಾಣಿಯೂರು, ಏಣಿತ್ತಡ್ಕ, ಭಕ್ತಕೋಡಿ ಫೀಡರ್‌ಗಳಿಗೆ ವಿದ್ಯುತ್ ಸರಬರಾಜುಗೊಳಿಸುವ ಹಿನ್ನೆಲೆಯಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಕಂಬಗಳನ್ನು ಮುಖ್ಯರಸ್ತೆಯ ಚರಂಡಿಗಳಲ್ಲಿ ಹಾಕಲಾಗಿತ್ತು. ರಸ್ತೆ ಬದಿ ಹಾಗೂ ಚರಂಡಿಯಲ್ಲಿರುವ ಕಂಬಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೆಸ್ಕಾಂ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಸಾರ್ವಜನಿಕ ಒತ್ತಾಯ
ಶುಕ್ರವಾರ ಕಂಬ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಚರಂಡಿಯಲ್ಲಿ ಕಂಬಗಳನ್ನು ಅಳವಡಿಸಿದ್ದರಿಂದ ಲೋಕೋಪಯೋಗಿ ರಸ್ತೆಯ ಚರಂಡಿ ಬ್ಲಾಕ್ ಆಗುವ ಸಾಧ್ಯತೆಯ ಕುರಿತು ಮತ್ತು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವವುದರಿಂದ ರಸ್ತೆ ಬದಿಯ ಚರಂಡಿಯಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು.
ಎಂಜಿನಿಯರ್ ಪರಿಶೀಲನೆ
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಮೋದ್ ಅವರ ಸೂಚನೆ ಮೇರೆಗೆ ರಸ್ತೆ ಮೇಲ್ವಿಚಾರಕ ಲಿಂಗಪ್ಪ ಅವರು ಕಂಬ ಅಳವಡಿಸಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂತರದಲ್ಲಿ ಚರಂಡಿ ಮೇಲಿರುವ ಹಾಗೂ ರಸ್ತೆ ಬದಿಯಲ್ಲಿರುವ ಕಂಬಗಳನ್ನು ತೆರವು ಮಾಡುವಂತೆ ವಿದ್ಯುತ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಸವಣೂರು ಮೆಸ್ಕಾಂ ಜೆಇ ನಾಗರಾಜ್ ಕೆ., ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಉಮೇಶ್ವರಿ ಅಗಳಿ, ಉಪಾಧ್ಯಕ್ಷ ಹರೀಶ್ ಕೆರೆನಾರು, ಸವಣೂರು ಗ್ರಾ.ಪಂ. ಸದಸ್ಯರಾದ ಸತೀಶ್ ಬಲ್ಯಾಯ, ಎಂ.ಎ. ರಫೀಕ್ ಉಪಸ್ಥಿತರಿದ್ದರು.
ಎರಡೆರಡು ಬಾರಿ ‘ಸುದಿನ’ ವರದಿ ಪ್ರಕಟ
ಸಾರ್ವಜನಿಕ ಸಮಸ್ಯೆಯ ಹಿನ್ನೆಲೆಯಲ್ಲಿ ‘ಉದಯವಾಣಿ’ ಸುದಿನ ಅ.4ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಮಾತ್ರವಲ್ಲದೆ ಪುತ್ತೂರು ತಾ.ಪಂ. ಕೆಡಿಪಿ ಸಭೆ ಹಾಗೂ ಶಾಸಕರ ಜನಸಂಪರ್ಕ ಸಭೆಯಲ್ಲೂ ಈ ವಿಚಾರ ಪ್ರಸ್ತಾವವಾಗಿತ್ತು. ಕಂಬ ತೆರವುಗೊಳಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಮೆಸ್ಕಾಂಗೆ ಸೂಚಿಸಿದ್ದರು. ಈ ವಿಚಾರದ ಕುರಿತು ಇಷ್ಟೆಲ್ಲ ಬೆಳವಣಿಗೆಯಾಗಿದ್ದರೂ, ಕಂಬಗಳನ್ನು ತೆರವುಗೊಳಿಸುವ ಬದಲು ಕಂಬಕ್ಕೆ ತಂತಿ ಅಳವಡಿಸುವ ಕಾರ್ಯ ನಡೆಸಲಾಗಿತ್ತು. ಈ ಕುರಿತು ‘ಉದಯವಾಣಿ’ ಸುದಿನ ಅ. 10ರಂದು ಫಾಲೋಅಪ್ ವರದಿಯನ್ನು ಪ್ರಕಟಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.