ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ 2 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಾಣ
Team Udayavani, Oct 20, 2020, 4:12 AM IST
ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ ಹಾಸ್ಟೆಲ್‌ಗಾಗಿ ಮೀಸಲಿಟ್ಟಿರುವ ನಿವೇಶನ.
ಬಂಟ್ವಾಳ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸರಕಾರ ವಿವಿಧ ಇಲಾಖೆಗಳ ಮೂಲಕ ಹಾಸ್ಟೆಲ್ ನಿರ್ಮಿಸಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಡಬ್ಲ್ಯುಡಿ)ಯ ಮೂಲಕ 2 ಕೋ.ರೂ.ವೆಚ್ಚದಲ್ಲಿ ಕಲ್ಲಡ್ಕ ಸಮೀಪದ ಬೊಂಡಾಲದಲ್ಲೊಂದು ಬಾಲಕಿ ಯರ ಹಾಸ್ಟೆಲ್ ನಿರ್ಮಾಣಗೊಳ್ಳಲಿದೆ.
ಹಾಸ್ಟೆಲ್ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಬೊಂಡಾಲದಲ್ಲಿ ಒಂದು ಎಕರೆ ಪ್ರದೇಶವನ್ನು ಮೀಸಲಿರಿಸಲಾಗಿದ್ದು, ಬಿ.ಸಿ.ರೋಡ್‌ಗೆ ಮಂಜೂರುಗೊಂಡು ಪ್ರಸ್ತುತ ಪಾಣೆಮಂಗಳೂರಿನಲ್ಲಿ ಕಾರ್ಯಾ ಚರಿಸುತ್ತಿರುವ ದೇವರಾಜ ಅರಸು ಮೆಟ್ರಿಕ್ ಅನಂತರದ ಬಾಲಕಿಯರ ಹಾಸ್ಟೆಲ್‌ಗೆ ಇಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ.
ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. ಪ್ರಸ್ತುತ ಹಾಸ್ಟೆಲ್ ಕಟ್ಟಡ ನಿರ್ಮಾಣಗೊಳ್ಳುವ ಸ್ಥಳವು ಗುಡ್ಡ ಪ್ರದೇಶದಂತೆ ಗೋಚರಿಸಿದರೂ, ಜನವಸತಿ ಪ್ರದೇಶವಾದ ಕಾರಣ ವಿದ್ಯಾರ್ಥಿಗಳಿಗೆ ಸೂಕ್ತ ಸ್ಥಳ ಎಂದು ಅಧಿಕಾರಿಗಳು ಅಭಿಪ್ರಾಯಿಸುತ್ತಾರೆ.
ಕಟ್ಟಡ ನಿರ್ಮಾಣದ ಬಳಿಕ ತೀರ್ಮಾನ
ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ಗೆ ಪಾಣೆಮಂಗಳೂರಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಂಡಿದ್ದು, ಪ್ರಸ್ತುತ ಈ ಕಟ್ಟಡದಲ್ಲಿ ಮೆಟ್ರಿಕ್ ಅನಂತರದ ಬಾಲಕಿಯರ ಹಾಸ್ಟೆಲ್ ನಡೆಯುತ್ತಿತ್ತು. ಹಿಂದೆ ಪಾಣೆಮಂಗಳೂರಿನ ಬಾಡಿಗೆ ಕಟ್ಟಡ ಹೆಣ್ಣು ಮಕ್ಕಳಿಗೆ ಸೂಕ್ತ ಇರಲಿಲ್ಲ ಎಂಬ ಕಾರಣಕ್ಕೆ ಅದನ್ನು ಬಾಲಕರ ಹಾಸ್ಟೆಲ್‌ನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಂದರೆ ಕಟ್ಟಡ ಬಾಲಕರ ಹಾಸ್ಟೆಲ್‌ಗೆ ನಿರ್ಮಾಣಗೊಂಡರೂ ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಸೂಕ್ತ ವ್ಯವಸ್ಥೆ ಇಲ್ಲದಿದ್ದಾಗ ಅದನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೂಚನೆ ಇರುವುದರಿಂದ ಹೀಗೆ ಹಾಸ್ಟೆಲ್ ಕಟ್ಟಡ ಬದಲಿಸಲಾಗಿತ್ತು.
ಹೀಗಾಗಿ ಬಾಲಕರ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಮುಂ ದಿನ ದಿನಗಳಲ್ಲಿ ಬೊಂಡಾಲದಲ್ಲಿ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಯಾವ ಹಾಸ್ಟೆಲನ್ನು ಬೊಂಡಾಲಕ್ಕೆ ಸ್ಥಳಾಂತರ ಮಾಡಬಹುದು ಎಂಬು ದನ್ನು ತೀರ್ಮಾನಿಸಿ ನಿರ್ಧಾರ ತೆಗೆದು ಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜಿ ಪ್ಲಸ್ ವನ್ ಕಟ್ಟಡಕ್ಕೆ ಆದ್ಯತೆ
ಬಾಲಕಿಯರ ಹಾಸ್ಟೆಲ್ ಕಟ್ಟಡಕ್ಕಾಗಿ 3 ಕೋ.ರೂ.ಗಳಲ್ಲಿ ಪ್ರಸ್ತುತ 2 ಕೋ.ರೂ.ಮಂಜೂರಾಗಿ ಕಟ್ಟಡ ನಿರ್ಮಾಣ ಗೊಳ್ಳಲಿದೆ. ಸದ್ಯಕ್ಕೆ ಕಟ್ಟಡದ ತಳ ಅಂತಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದು, ಆದರೆ ಸ್ಥಳಾವಕಾಶದ ದೃಷ್ಟಿಯಿಂದ ಇಲಾಖೆಯು ಒಂದು ಅಂತಸ್ತಿನ ಕಟ್ಟಡ(ಜಿ ಪ್ಲಸ್ ವನ್) ನಿರ್ಮಿಸುವಂತೆ ಇಲಾಖೆಯು ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಿದೆ.
ಅಂದರೆ ಅಲ್ಲಿ ಒಂದು ಎಕರೆ ಪ್ರದೇಶ ಮಾತ್ರ ಲಭ್ಯವಿರುವುದರಿಂದ ಕಡಿಮೆ ಸ್ಥಳದಲ್ಲಿ ಒಂದು ಹಾಸ್ಟೆಲ್ ನಿರ್ಮಾಣಗೊಂಡರೆ, ಉಳಿದ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೂಂದು ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗುತ್ತದೆ ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ.
ಒಟ್ಟು 7500 ಚ.ಅಡಿ ವಿಸ್ತೀರ್ಣ
ಪ್ರಸ್ತುತ ಪಾಣೆಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಾಲಕಿಯರ ಹಾಸ್ಟೆಲ್‌ಗೆ 2 ಕೋ.ರೂ.ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, 7500 ಚ.ಅಡಿ ವಿಸ್ತೀರ್ಣದ ಕಟ್ಟಡ ಇದಾಗಿರುತ್ತದೆ. ಈ ಹಿಂದೆ ಬಾಲಕಿಯರ ಹಾಸ್ಟೆಲ್ ಬಾಲಕರ ಹಾಸ್ಟೆಲ್‌ನ ಸ್ವಂತ ಕಟ್ಟಡದಲ್ಲಿದ್ದು, ಬಾಲಕರ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು.
-ಬಿಂದಿಯಾ ನಾಯಕ್ ತಾ| ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.