ಜನವಸತಿ ಇಲ್ಲದ ಕಡೆಗೆ ನಗರಸಭೆಯಿಂದ ಕಾಂಕ್ರೀಟ್ ರಸ್ತೆಯ ಕೊಡುಗೆ!
Team Udayavani, Sep 18, 2019, 5:00 AM IST
ಜನವಸತಿಯೇ ಇಲ್ಲದ ಪ್ರದೇಶಕ್ಕೆ ನಗರಸಭೆ ವತಿಯಿಂದ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿದೆ.
ನಗರ: ಜನವಸತಿ ಹೆಚ್ಚಾದಂತೆ ನೂರಾರು ಕಡೆಗಳಲ್ಲಿ ರಸ್ತೆ ಮೂಲ ಸೌಕರ್ಯ ಹೆಚ್ಚಿಸುವ ಬೇಡಿಕೆ ಹೆಚ್ಚುತ್ತಿದ್ದರೂ ಅದನ್ನು ಪೂರೈಸಲು ಆಡಳಿತ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಮಾತ್ರ ಸದ್ಯಕ್ಕೆ ಜನವಸತಿಯೇ ಇಲ್ಲದ ಕಡೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಸಾಧ್ಯವಾಗಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.
ನಗರ ವ್ಯಾಪ್ತಿಯ ಸಾಮೆತ್ತಡ್ಕದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಈ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಆ ಭಾಗದಲ್ಲಿ ಯಾವುದೇ ಮನೆಗಳಿಲ್ಲ. ಇಂತಹ ಕಡೆಗೂ ರಸ್ತೆ ನಿರ್ಮಾಣ ಮಾಡಲು ನಗರಸಭೆ ಮುಂದಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಉದ್ಯಮಿಗೆ ವರದಾನ?
ನಗರಸಭಾ ದಾಖಲೆಗಳ ಪ್ರಕಾರ ರಸ್ತೆ ನಿರ್ಮಾಣವಾಗಿರುವ ಬಳಿ ಇರುವ ಈ ಪಾಳು ಭೂಮಿ ಉದ್ಯಮಿಯೊಬ್ಬರಿಗೆ ಸೇರಿದ ಸ್ಥಳವಾಗಿದೆ. ಉದ್ಯಮಿಯ ಮನೆಗೆ ದಾರಿ ಎಂದೇ ದಾಖಲಾಗಿದೆ. ಆದರೆ ಆ ಉದ್ಯಮಿಯ ಮನೆ ಅಲ್ಲಿಂದ ದೂರದ ಪಾಂಗಳಾಯಿ ಎಂಬ ಪ್ರದೇಶದಲ್ಲಿದೆ. ಪೂರ್ವಭಾವಿ ಚಿಂತನೆಯೊಂದಿಗೆ ಇಲ್ಲಿಗೆ ರಸ್ತೆ ವ್ಯವಸ್ಥೆ ಮಾಡಲಾಗಿದೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿದೆ.
ಬೇಡಿಕೆಗೆ ಇಲ್ಲ ಸ್ಪಂದನೆ
ನಗರಸಭಾ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೇಡಿಕೆ ಇದೆ. ಇಂತಹ ಸಮಸ್ಯೆಗಳ ಮಧ್ಯೆ ಜನವಸತಿಯೇ ಇಲ್ಲದ ಪಾಳುಭೂಮಿಗೂ ಸರಕಾರಿ ವ್ಯವಸ್ಥೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯಾಡಳಿತ ಮುಂದಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಸ್ಥಳೀಯವಾಗಿ ಕಲ್ಲಾರೆಯಿಂದ ಸಾಮೆತ್ತಡ್ಕಕ್ಕೆ ಹೋಗುವ ರಸ್ತೆ ದುರಸ್ತಿಗಾಗಿ ಇಲ್ಲಿನ ಜನತೆ ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಈ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ
ಉದ್ಯಮಿಗಳು ಹೇಳಿದ ತತ್‌ಕ್ಷಣ ಅನಗತ್ಯವಾಗಿರುವ ಕಡೆಗಳಿಗೂ ರಸ್ತೆ ನಿರ್ಮಿಸಲು ನಗರಸಭೆಯಲ್ಲಿ ಅನುದಾನವಿದೆ. ಆದರೆ ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸುವುದಿಲ್ಲ. ಇಲ್ಲಿ ಯಾವುದೇ ಮನೆಗಳಿಲ್ಲ. ಆದರೂ ನಗರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಸ್ಥಳೀಯ ವ್ಯಾಪಾರಿಯೋರ್ವರು.
ನಿರ್ಣಯವಾಗಿ ಅನುಮತಿ
ನಗರಸಭೆಯ ಹಿಂದಿನ ಆಡಳಿತದ ಅವಧಿಯಲ್ಲಿ ಕೌನ್ಸಿಲ್ ಮೀಟಿಂಗ್‌ನಲ್ಲಿ ನಿರ್ಣಯಗೊಂಡು ಅನುಮತಿ ಪಡೆದ ಕಾಮಗಾರಿ ಇದಾಗಿದೆ. ಈ ಕಾರಣದಿಂದ ಕಾಮಗಾರಿಯನ್ನು ಬಾಕಿ ಬಿಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಜನವಸತಿಗೆ ಪ್ರಯೋಜನವಾಗುವ ದೃಷ್ಟಿಯನ್ನೂ ಹೊಂದಿರಬಹುದು.
- ರೂಪಾ ಟಿ. ಶೆಟ್ಟಿ, ಪೌರಾಯುಕ್ತರು, ನಗರಸಭೆ ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.