ಮಾಹಿತಿ ಮರೆಮಾಚಿದ ಶಂಕಿತ ಕೋವಿಡ್ ಬಾಧಿತ
ಪುತ್ತೂರು ಆಸ್ಪತ್ರೆಯಿಂದ ಪಲಾಯನ?; ವೆನ್ಲಾಕ್ ಗೆ ದಾಖಲು
Team Udayavani, Mar 19, 2020, 6:37 AM IST
ರೋಗಿಯ ಸಾಗಾಟಕ್ಕೆ ಆ್ಯಂಬುಲೆನ್ಸ್
ಪುತ್ತೂರು: ದುಬಾೖಯಿಂದ ಆಗಮಿಸಿದ ವಿಟ್ಲ ಕಂಬಳಬೆಟ್ಟಿನ ಜ್ವರ ಪೀಡಿತನೊಬ್ಬ ನೈಜ ಹೆಸರು ಹಾಗೂ ಮಾಹಿತಿಯನ್ನು ಮರೆಮಾಚಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಗೊಂದಲ, ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಮಾ. 7ರಂದು ಮನೆಗೆ ಮರಳಿದ್ದ ಆತ ಮಂಗಳವಾರ ರಾತ್ರಿ ಜ್ವರ ಬಾಧಿತನಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ನೋಂದಣಿ ಸಂದರ್ಭ ದುಬಾೖಯಿಂದ ಮರಳಿ ರುವ ವಿಚಾರವನ್ನಾಗಲೀ ನೈಜ ಹೆಸರು, ವಿಳಾಸವನ್ನಾಗಲೀ ನೀಡದೆ ಜ್ವರ ಬರುತ್ತಿದೆ, ಶೀತವಾಗಿದೆ ಎಂದಷ್ಟೇ ಹೇಳಿದ್ದ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಈತನ ಕುರಿತು ಅನುಮಾನಗೊಂಡ ವೈದ್ಯರು ಮನೆಗೆ ಕರೆ ಮಾಡಿದಾಗ ಆತ ದುಬಾೖಯಿಂದ ಮರಳಿರುವ ವಿಚಾರ ತಿಳಿಯಿತು. ತತ್‌ಕ್ಷಣ ಅವರು ಪುತ್ತೂರು ಸಹಾಯಕ ಕಮಿಷನರ್‌ಗೆ ಮಾಹಿತಿ ನೀಡಿದ್ದು, ಅವರು ಆತನನ್ನು ಮಂಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆತ ದಾಖಲಾಗಿದ್ದ ಖಾಸಗಿ ಆಸ್ಪತ್ರೆಗೆ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು.
ನಾಪತ್ತೆ ?
ರೋಗಿಯನ್ನು ಮಂಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಷ್ಟರಲ್ಲಿ ಡಿಸ್ಚಾರ್ಜ್ ಪ್ರಕ್ರಿಯೆ ಪೂರ್ಣಗೊಳಿಸಿದ ರೋಗಿಯು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ. ಬಳಿಕ ಆಸ್ಪತ್ರೆಯ ಸಿಸಿ ಕೆಮರಾದಲ್ಲಿ ಪರಿಶೀಲಿಸಿದಾಗ ಮನೆಯವರು ಕರೆದೊಯ್ದಿರುವುದು ಪತ್ತೆಯಾಗಿದೆ.
ಸುಖಾಂತ್ಯ
ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮನೆಯವರು ವಿಟ್ಲ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿರುವ ಮಾಹಿತಿ ಲಭಿಸಿತು. ರೋಗಿಯು ಪುತ್ತೂರಿನಿಂದ ಬಂದಿರುವುದಾಗಿ ಅಲ್ಲಿ ಮಾಹಿತಿ ನೀಡಿದ್ದಾನೆ. ಈ ನಡುವೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಕೊರೊನಾ ಶಂಕಿತ ರೋಗಿ ಪರಾರಿಯಾಗಿದ್ದಾನೆ ಎಂಬ ವಿಚಾರ ನಗರದಾದ್ಯಂತ ಹರಡಿ ಒಂದಷ್ಟು ಆತಂಕ ಸೃಷ್ಟಿಯಾಯಿತು.
ರೋಗಿ ಮೇಲೆ ನಿಗಾ
ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಜ್ವರ-ಶೀತದಿಂದ ಬಳಲುತ್ತಿದ್ದಾರೆ. ವಿದೇಶದಿಂದ ಬಂದವರಾದರೂ ಮಾಹಿತಿ ಸಂಗ್ರಹದ ವೇಳೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಮಂಗಳೂರಿನ ವೆನ್ಲಾಕ್ ಗೆ ದಾಖಲಿಸಲಾಗಿದೆ. ಆತನ ವಿಚಾರದಲ್ಲಿ ವಿಶೇಷ ನಿಗಾ ವಹಿಸಲಾಗಿದೆ.
– ಡಾ| ಯತೀಶ್ ಉಳ್ಳಾಲ್, ಸಹಾಯಕ ಕಮಿಷನರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.