ಪುತ್ತೂರಿನ ಜೋಡಿ ಕೊಲೆ: ಆರೋಪಿಯ ಬಂಧನ
ಕಳವಿಗೆ ಹೋಗಿ ಸಿಕ್ಕಿಬಿದ್ದು ಕೊಲೆ ಮಾಡಿದ!
Team Udayavani, Nov 21, 2019, 1:59 AM IST
ಪುತ್ತೂರು: ಕುರಿಯ ಗ್ರಾಮದ ಅಜಲಾಡಿ ಹೊಸಮಾರಿನಲ್ಲಿ ಇಬ್ಬರನ್ನು ಕೊಂದು ವೃದ್ಧೆ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಘಟನೆ ಬೆಳಕಿಗೆ ಬಂದ 10 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಬೇಳೂರಿನವನಾಗಿದ್ದು, ಪ್ರಸ್ತುತ ಕುರಿಯದ ಕಟ್ಟತ್ತಾರಿನಲ್ಲಿರುವ ಕರೀಂ ಖಾನ್(29) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ್ದ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು 6 ಸಾ.ರೂ. ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆಯಿಂದ ತಿಳಿದು ಬಂದ ವಿಷಯ
ಮನೆಯವರಿಗೆ ಪರಿಚಿತನಾಗಿದ್ದ ಆರೋಪಿ ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಕಳವಿಗೆಂದು ಮನೆಯ ಹಂಚು ಸರಿಸಿ ಒಳನುಗ್ಗಿದ್ದ. ಆಗ ಮನೆ ಮಂದಿ ಎಚ್ಚರಗೊಂಡರು. ಪರಿಚಿತನಾದ ತಾನು ಸಿಕ್ಕಿ ಬೀಳುವ ಭೀತಿಯಿಂದ ಅಡುಗೆ ಕೋಣೆಯಲ್ಲಿದ್ದ ಕತ್ತಿಯಿಂದ ಶೇಖ್ ಕೊಗ್ಗು ಸಾಹೇಬ್, ಅವರ ಪತ್ನಿ ಖತೀಜಮ್ಮ ಮತ್ತು ಮೊಮ್ಮಗಳು ಸಬೀಹಾ ಭಾನುವಿಗೆ ಮರಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ಕೊಗ್ಗು ಸಾಹೇಬ್ ಮತ್ತು ಸಬೀಹಾ ಸ್ಥಳದಲ್ಲಿಯೇ ಮೃತಪಟ್ಟು, ಖತೀಜಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಹಲ್ಲೆ ಸಂದರ್ಭದ ಕೊಸರಾಟದಿಂದ ಆರೋಪಿಯ ಕೈಗೂ ಗಾಯವಾಗಿತ್ತು.
ಅಲ್ಲಿಂದ ಪರಾರಿಯಾಗಿ ಗಾಯಕ್ಕೆ ಚಿಕಿತ್ಸೆ ಪಡೆಯಲೆಂದು ಪುತ್ತೂರಿಗೆ ಬಂದಿದ್ದ. ಪರೀಕ್ಷಿಸಿದ ವೈದ್ಯರು ಮೂಳೆ ಮುರಿತವಾಗಿದ್ದು, ಒಳರೋಗಿಯಾಗಿ ದಾಖಲಾಗುವಂತೆ ತಿಳಿಸಿದ್ದರು. ಅದಕ್ಕೆ ಒಪ್ಪದ ಆರೋಪಿ, “ಎರಡು ದಿನ ಬಿಟ್ಟು ಬರುತ್ತೇನೆ’ ಎಂದು ಹೇಳಿ ಬ್ಯಾಂಡೇಜ್ ಹಾಕಿಸಿಕೊಂಡು ಬಂದಿದ್ದ.
ಬಳಿಕ ಊರಿನ ಸಮೀಪ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದ. ಅಲ್ಲಿ ಸ್ನೇಹಿತರು ಬ್ಯಾಂಡೇಜ್ ಬಗ್ಗೆ ಪ್ರಶ್ನಿಸಿದ್ದು, “ಅಪರಿಚಿತ ರೌಡಿಗಳು ಅಟ್ಟಿಸಿಕೊಂಡು ಬಂದು ತಲವಾರು ಬೀಸಿದ್ದು, ಆಗ ಕೈಗೆ ತಾಗಿತು’ ಎಂದು ಹೇಳಿದ್ದ. ಕೆಲವರು ಪೊಲೀಸ್ ದೂರು ನೀಡಲು ಹೇಳಿದರೂ ಆತ ಒಪ್ಪಿರಲಿಲ್ಲ.
ಅಪಹರಣದ ಕಥೆ ಹೆಣೆದ!
ಮರುದಿನ ಆತ ತನ್ನನ್ನು ಯಾರೋ ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ಗೆಳೆಯರಲ್ಲಿ ಹೇಳಿದ್ದ. ನ.19ರಂದು ಬೆಳಗ್ಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದ. ಈ ನಡುವೆ ಕೊಲೆ ಕೃತ್ಯ ಬೆಳಕಿಗೆ ಬಂದಿದ್ದು, ಆಗ ಖಲಂದರ್ ಎಂಬವರು ಕರೀಂ ಖಾನ್ ಮೇಲೆ ಹಲ್ಲೆ ಆಗಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದರು. ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕರೀಂ ನನ್ನು ಪೊಲೀಸರು ಖಲಂದರ್ ಸಹಾಯದಿಂದ ವಿಚಾ ರಣೆಗೆ ಒಳಪಡಿಸಿದರು. ಆಗ ಹಲ್ಲೆ ವಿಷಯ ಕಟ್ಟು ಕಥೆ ಎನ್ನುವುದು ತಿಳಿದು, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡ.
ಪ್ರಶಂಸೆ
ಕೃತ್ಯ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿ ಯನ್ನು ಬಂಧಿಸಿದ ಪೊಲೀಸರ ಕಾರ್ಯದಕ್ಷತೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. ದ.ಕ. ಎಸ್‌ಪಿ ಲಕ್ಷ್ಮೀಪ್ರಸಾದ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶ ಕಳುಹಿಸಿದ್ದಾರೆ.
ಪ್ರಕರಣದ ತನಿಖೆಗೆ ಎಸ್ಪಿ ಲಕ್ಷ್ಮೀಪ್ರಸಾದ್, ಎಎಸ್ಪಿ ಡಾ| ವಿಕ್ರಂ ಆಮ್ಟೆ ಮೇಲ್ವಿಚಾರಣೆಯಲ್ಲಿ ಸಿಐ ನಾಗೇಶ್ ಕದ್ರಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಈ ತಂಡವು ಡಿವೈಎಸ್ಪಿ ದಿನಕರ ಶೆಟ್ಟಿ ಉಸ್ತುವಾರಿ ಯಲ್ಲಿ ತನಿಖೆ ನಡೆಸಿತ್ತು. ಜಿಲ್ಲಾ ಪೊಲೀಸರು, ಡಿಸಿಐಬಿ ಪೊಲೀಸರು ಸಹಕಾರ ನೀಡಿದ್ದರು. ಸಂಪ್ಯ ಎಸ್‌ಐ ಸಕ್ತಿವೇಲು, ಪ್ರೊಬೆಷನರಿ ಎಸ್‌ಐಗಳಾದ ಆಂಜನೇಯ, ರಾಜಕುಮಾರ್, ಎಎಸ್‌ಐ ಚಿದಾನಂದ, ಬೀಟ್ ಪೊಲೀಸ್ ಸಿಬಂದಿ ಭೀಮ್‌ಸೇನ್, ಸ್ಕರಿಯ, ರಕ್ಷಿತ್, ಜಯರಾಮ, ಪ್ರವೀಣ್, ಉದಯ ಕುಮಾರ್, ಪ್ರವೀಣ್, ವಸಂತ, ಲಕ್ಷ್ಮೀಶ, ಜಗದೀಶ್, ಮಂಜುನಾಥ, ಕಿರಣ್, ಕೃಷ್ಣಪ್ಪ, ಹರೀಶ, ತಾರಾನಾಥ, ಲಕ್ಷ್ಮಣ, ವಾಸು ನಾಯ್ಕ, ಸೋನ್ಸ್, ರವಿಚಂದ್ರ, ಸುಶೀಲಾ ಮೊದಲಾದವರು ತಂಡದಲ್ಲಿದ್ದರು.
ಗಾಯಾಳು ಚೇತರಿಕೆ
ಗಾಯಗೊಂಡಿರುವ ಖತೀಜಮ್ಮ ಚೇತರಿಸಿಕೊಳ್ಳುತ್ತಿ ದ್ದಾರೆ. ಆದರೆ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಪೊಲೀಸರಿಗೆ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ.
ಆರೋಪಿಗೆ ಚಿಕಿತ್ಸೆ
ಪ್ರಸ್ತುತ ಆರೋಪಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ ಬಿಡುಗಡೆ ಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಚಹಾ ಕುಡಿಸಿ ರಾತ್ರಿ ಕತ್ತು ಸೀಳಿದ!
ಕರೀಂ ಖಾನ್‌ನ ಪತ್ನಿ ಹಾಗೂ ಕೊಗ್ಗು ಸಾಹೇಬ್ ಕುಟುಂಬಸ್ಥರು ಸಂಬಂಧಿಕರಾಗಿದ್ದಾರೆ. ಆರೋಪಿಯು ಆಗಾಗ ಕೊಗ್ಗು ಸಾಹೇಬರ ಮನೆಗೆ ಬಂದು ಹೋಗುತ್ತಿದ್ದ. ಕೊಲೆ ನಡೆದಿದ್ದ ರವಿವಾರ ಬೆಳಗ್ಗೆಯೂ ಆಗಮಿಸಿದ್ದ ಈತ, ಕೊಗ್ಗು ಸಾಹೇಬ್ ಜತೆಯಲ್ಲಿ ಸಮೀಪದ ಅವರ ಪುತ್ರನ ಜಾಗದಲ್ಲಿ ಬೇಲಿ ಅಳವಡಿಸುವ ಕೆಲಸ ಮಾಡಿದ್ದ. ಬಳಿಕ ಕೊಗ್ಗು ಸಾಹೇಬರಿಗೆ ಚಹಾ ಕುಡಿಸಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಸುಳಿವು ನೀಡಿದ ಕಟ್ಟುಕಥೆ
ಕರೀಂ ಕೊಲೆ ಮಾಡಿರಬಹುದು ಎಂಬ ಸಂಶಯ ಯಾರಿಗೂ ಬಂದಿರಲಿಲ್ಲ. ಆತನ ಬಗ್ಗೆ ಇಂಥ ಕೆಟ್ಟ ಭಾವನೆ ಊರಲ್ಲಿರಲಿಲ್ಲ. ಆದರೆ ಗಾಯದ ಬಗ್ಗೆ ಆತನ ಹೇಳಿದ್ದ ಕಟ್ಟುಕಥೆಯೇ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಪ್ರಮುಖ ಸುಳಿವು ನೀಡಿತ್ತು.
ಆರೋಪಿಯನ್ನು ನಿಂದಿಸಿದ್ದರೇ?
ಕೊಲೆಗೆ ಹಣದ ವೈಮನಸ್ಸು ಕಾರಣವಿರಬಹುದು ಎಂಬ ಶಂಕೆ ಆರಂಭದಲ್ಲಿ ಮೂಡಿತ್ತು. ಆದರೆ ಇಲ್ಲಿ ಅಂಥ ಕಾರಣಗಳೇನೂ ಇಲ್ಲ. ಆರೋಪಿಯು ಕೊಗ್ಗು ಸಾಹೇಬರಿಂದ ಕೊಂಡೊಯ್ದ ತೆಂಗಿನ ಕಾಯಿಯ ಬಾಬ್ತು 150 ರೂ. ಬಾಕಿ ಇದ್ದು, ಅದನ್ನು ಸಾಹೇಬರ ಒತ್ತಾಯದ ಮೇರೆಗೆ ಕೊಟ್ಟಿದ್ದ. ಈ ಸಂದರ್ಭ ಕೊಗ್ಗು ಸಾಹೇಬರು “ನೀನು ಈ ಊರಿನವನಲ್ಲ’ ಎಂದು ಕರೀಂಗೆ ನಿಂದಿಸಿದ್ದರು ಎನ್ನಲಾಗುತ್ತಿದೆ. ಏನಿದ್ದರೂ ಈ ಪ್ರಕರಣ ಮತ್ತು ಕೊಲೆಗೆ ಯಾವುದೇ ಸಂಬಂಧ ಇದ್ದಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.