ಪುತ್ತೂರು: ಸಂಪ್ಯದ ಯುವಕನಿಗೆ ಸೋಂಕು
Team Udayavani, Jun 27, 2020, 7:07 AM IST
ಪುತ್ತೂರು: ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಮೂರು ದಿನಗಳ ಹಿಂದೆ ಮನೆಗೆ ಬಂದ ಬಳಿಕ ಶೀತ, ಜ್ವರ ಕಾಣಿಸಿಕೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪ್ಯ ಉದಯಗಿರಿ ನಿವಾಸಿ 24 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದು ಪುತ್ತೂರಿನಲ್ಲಿ ಪಾಸಿಟಿವ್ ಸಂಬಂಧಿಸಿ ಮೂರನೇ ಪ್ರಕರಣವಾಗಿದೆ.
ಬಂದ ದಿನವೇ ಆಸ್ಪತ್ರೆಗೆ ದಾಖಲು
ಲಾಕ್‌ಡೌನ್ ವೇಳೆ ಉದಯಗಿರಿ ಮನೆಯಲ್ಲೇ ಉಳಿದುಕೊಂಡಿದ್ದ ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಅದಾಗಲೇ ಶೀತ, ಜ್ವರ ಬಾಧಿಸಿದ್ದ ಕಾರಣ ಮೂರು ದಿನಗಳ ಹಿಂದೆ ಬೈಕ್‌ನಲ್ಲಿ ಮನೆಗೆ ಬಂದಿದ್ದರು. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಯುವಕನಿಗೆ ಕೋವಿಡ್ ದೃಢಪಟ್ಟ ಕಾರಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮನೆಯಲ್ಲಿ ಅವರ ಅಜ್ಜ, ತಾಯಿ ಮತ್ತು ಸಹೋದರ ಇದ್ದು, ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.