ಅಂಗಳಕ್ಕೆ ಬಂದ ಕಾಡಾನೆಯಿಂದ ದಾಂಧಲೆ
Team Udayavani, Aug 5, 2019, 4:55 AM IST
ಸುಬ್ರಹ್ಮಣ್ಯ: ಯೇನೆಕಲ್ಲು ಪರಿಸರದಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಮಂಗಳವಾರ ರಾತ್ರಿ ಕುರ್ಕಿಲ್ ಅಮೈ ಕುಶಾಲಪ್ಪ ಗೌಡ ಅವರ ಮನೆ ಅಂಗಳಕ್ಕೆ ಬಂದ ಆನೆ ಅಡಿಕೆ ಒಣಗಿಸಲು ಹಾಕಿದ ಸೋಲಾರ್ ಟಾರ್ಪಲ್ ಅನ್ನು ನಾಶ ಮಾಡಿದೆ. ಜಗುಲಿ ತನಕವೂ ಬಂದಿದೆ. ತೋಟಕ್ಕೂ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಫಸಲು ನಾಶಪಡಿಸಿದೆ.
ಆನೆಯು ಕೃಷಿಕರ ತೋಟದಲ್ಲಿದ್ದ ಎರಡು ಬ್ರಹತ್ ಗಾತ್ರದ ಹಲಸಿನ ಮರವನ್ನು ಬುಡ ಸಮೇತ ಕಿತ್ತು ಹಾಕಿದೆ. ನಂತರ ಮನೆ ಅಂಗಳಕ್ಕೆ ಬಂದಿದೆ. ಆನೆಯು ಅಂಗಳದಲ್ಲಿ ಅಡಿಕೆ ಒಣಗಿಸಲು ಹಾಕಿದ ಸೋಲಾರ್ ಟಾರ್ಪಲನ್ನು ಹರಿದು ಹಾಕಿ ಪುಡಿಗೈದಿದೆ. ಮನೆ ಜಗಲಿ ತನಕ ಬಂದು ಜಗಲಿಯಲ್ಲಿಟ್ಟಿದ್ದ ಅಲ್ಯೂಮಿನಿಯಂ ಏಣಿಯನ್ನು ತುಂಡರಿಸಿದೆ. ಇನ್ನಿತರ ಸೊತ್ತುಗಳಿಗೂ ಹಾನಿ ಮಾಡಿದೆ. ಅಂಗಳದ ಬದಿಯಲ್ಲಿದ್ದ ಬಾಳೆಗಿಡ, ತೆಂಗಿನ ಗಿಡ ಇತ್ಯಾದಿಗಳನ್ನು ಮೆಟ್ಟಿ ತಿಂದು ಪುಡಿಗೈದು ನಾಶಪಡಿಸಿದೆ. ಸುಮಾರು 50,000 ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮನೆಮಂದಿ ಇರಲಿಲ್ಲ
ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದರು. ಇದೇ ವೇಳೆ ಆನೆ ಮನೆ ಅಂಗಳಕ್ಕೆ ಬಂದಿದ್ದರಿಂದ ಮನೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಆನೆಯು ಬಳಿಕ ಪಕ್ಕದ ಕಾಡಿಗೆ ತೆರಳಿದ್ದು ರಸ್ತೆ ಬದಿಯಿರುವ ಬೈನೆ ಮರವನ್ನು ಬೀಳಿಸಿದೆ. ಅದು ವಿದ್ಯುತ್ ತಂತಿಯ ಮೇಲೆ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರು ಆನೆ ದಾಳಿಯ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.