ಶಿಖರ ಶ್ರೇಣಿಗೇರಲು ಬೇಕಿದೆ ಸೂಕ್ತ ಪರಿಹಾರದ ಏಣಿ
Team Udayavani, Dec 17, 2022, 11:03 AM IST
ಬೆಳ್ತಂಗಡಿ: ಒಂದೆಡೆ ಪಶ್ಚಿಮಘಟ್ಟದ ತಪ್ಪಲು. ಮತ್ತೂಂದೆಡೆ ಜಿಲ್ಲೆಯ ಪವಿತ್ರ ನದಿ ನೇತ್ರಾವತಿ ಹರಿಯುವ ಹಚ್ಚಹಸುರ ಕೃಷಿ ಭರಿತ ಊರು ಮಲವಂತಿಗೆ ಗ್ರಾಮ. ಸಮಸ್ಯೆಗಳ ಬೆಟ್ಟವನ್ನು ಪರಿಹಾರದಂತಹ ಏಣಿ ಇಟ್ಟು ಏರುವಂತ ತವಕ ಜನಸಾಮಾನ್ಯರದ್ದು. ಅಂತಹ ಮಲವಂತಿಗೆ ಗ್ರಾಮದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ| ರವಿ ಕುಮಾರ್ ಅವರು ಡಿ. 17ರಂದು ಜಿಲ್ಲಾ ಮಟ್ಟದ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಈ ಹಿಂದೆ ತಾಲೂಕಿನ ಶಿಶಿಲ ಗ್ರಾಮದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮೊದಲ ಗ್ರಾಮ ವಾಸ್ತವ್ಯ ಹೂಡಿದ್ದರು. ಇದೀಗ ತಾಲೂಕಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ 2ನೇ ಗ್ರಾಮ ವಾಸ್ತವ್ಯ ಇದಾಗಿದೆ. ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಬೇಡಿಕೆಗಳಿವೆ. ಅರಣ್ಯದಂಚಿನ ಊರಿನಲ್ಲಿ ಕೃಷಿ ಪ್ರಧಾನ ಭೂಮಿಗೆ ಆನೆ ಸಹಿತ ಕಾಡು ಪ್ರಾಣಿಗಳ ಉಪಟಳ ಒಂದೆಡೆಯಾದರೆ, ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಂದು ಕೃಷಿ ಜರ್ಝರಿತವಾಗುತ್ತಿದೆ. ಅತ್ತ ಅಕ್ರಮ ಸಕ್ರಮ, 94 ಸಿ, ಸೇರಿದಂತೆ ಅರಣ್ಯದಂಚಿನಲ್ಲಿ ಬರುವ ರಸ್ತೆಗಳಿಗೆ ಕಾಯಕಲ್ಪ ಬೇಕಿದೆ.
ತಾಲೂಕಿನ ಅತ್ಯಂತ ಹಿಂದುಳಿದ ಗ್ರಾಮವಾದ ಮಲವಂತಿಗೆಯಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಕಾಲದಲ್ಲಿ ಮೂಲ ಸೌಕರ್ಯವಿಲ್ಲದೆ ನಲುಗಿತ್ತು. 30 ವರ್ಷಗಳ ಹಿಂದೆ ಉದಯವಾಣಿ ಈ ಊರಿನ ಚಿತ್ರಣವನ್ನು “ಕುಗ್ರಾಮ ಗುರುತಿಸಿ’ ಎಂಬ ಸರಣಿಯಲ್ಲಿ ವರದಿಯಲ್ಲಿ ಬಿತ್ತರಿಸಿತ್ತು. ಅದಾದ ಬಳಿಕ ಸರಕಾರದ ಗಮನಕ್ಕೆ ತಂದು ಸೇತುವೆ, ರಸ್ತೆ ಸಹಿತ ಪ್ರಗತಿಯ ಪಥವೇರಿತ್ತು. ಕೃಷಿ ಮೂಲವಾಗಿದ್ದರಿಂದ ಜನ ಒಂದು ಮಟ್ಟಿಗೆ ತಾವೇ ಬದುಕು ಕಟ್ಟಿಕೊಂಡಿದ್ದಾರೆ. ಸರಕಾರದ ಅಲ್ಪಸ್ವಲ್ಪ ಆಸರೆಗಳು ಬರುತ್ತಾ ಸಾಗುವಾಗಲೆ ಕಳೆದ 2019ರಲ್ಲಿ ನೆರೆಯ ಛಾಯೆ ಮತ್ತೆ ಕುಗ್ರಾಮದ ಪರಿಸ್ಥಿತಿಗೆ ತಳ್ಳಿತ್ತು. ಆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಮಲವಂತಿಗೆ ಆಸುಪಾಸು ಗ್ರಾಮದಲ್ಲೇ ಸುಮಾರು 150ಕ್ಕೂ ಅಧಿಕ ಮನೆಗಳು ಸರಕಾರದಿಂದ ನಿರ್ಮಾಣವಾಗಿದೆ.
ಎಳನೀರು, ಗುತ್ಯಡ್ಕಕ್ಕೆ ಬೇಕಿದೆ ಮುಕ್ತಿ:
ಬೆಳ್ತಂಗಡಿಯಿಂದ 120 ಕಿ.ಮೀ., ಚಿಕ್ಕಮಗಳೂರು ಭಾಗಕ್ಕೆ 10 ಕಿ.ಮೀ. ಎಂಬ ಪರಿಸ್ಥಿತಿ ಎಳನೀರು, ಗುತ್ಯಡ್ಕ ಗ್ರಾಮದ ಜನತೆಯದ್ದು. 100ಕ್ಕೂ ಅಧಿಕ ಕುಟುಂಬಗಳು ಗುಡ್ಡದ ಮಧ್ಯೆ ಜೀವನ ಸಾಗಿಸುತ್ತಿವೆ.
ತಾಲೂಕು ಕಚೇರಿಗೆ ಬರಬೇಕಾದರೆ ಸುತ್ತಿಬಳಸಿ ಬರಬೇಕು. ಇದಕ್ಕಾಗಿ ತಮ್ಮನ್ನು ಚಿಕ್ಕಮಗಳೂರಿಗೆ ಸೇರಿಸಿ ಎಂದು ಕೇಳಿಕೊಂಡರು ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಈ ಭಾಗಕ್ಕೆ ದಿಡುಪೆ ಮೂಲಕ ಸಂಸೆಗೆ ರಸ್ತೆ ಕಾಯಕಲ್ಪ ಬೇಕಿದೆ. 10 ಕಿ.ಮೀ. ವ್ಯಾಪ್ತಿಯ ಎಳನೀರು-ಸಂಸೆ ರಸ್ತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಕಂದಾಯ ಇಲಾಖೆಯ ವ್ಯಾಪ್ತಿಯ 3 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ವ್ಯಾಪ್ತಿಯ ರಸ್ತೆ ಕುರಿತು ಸಮೀಕ್ಷೆಗಳು ನಡೆದಿವೆ. ಈ ರಸ್ತೆ ನಿರ್ಮಾಣ ಈ ಪ್ರದೇಶದ ಬಹುದೊಡ್ಡ ಬೇಡಿಕೆಯಾಗಿದೆ.
ಪ್ರವಾಸೋದ್ಯಮ ಕನಸು ಚಿಗುರುವುದೇ ?:
ಈ ಗ್ರಾಮದಲ್ಲಿ ಬಂಗಾರಪಲ್ಕೆ, ಎಳನೀರು, ಕಡಮ ಗುಂಡಿ ಸೇರಿದಂತೆ ಜನಾಕರ್ಷಕ ಜಲಪಾತಗಳಿವೆ. ಪ್ರವಾಸಿಗರು ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ. ನಿಸರ್ಗದತ್ತ ಜಾಗಕ್ಕೆ ತೆರಳಲು ಅರಣ್ಯ ಇಲಾಖೆಗೆ ಹಣ ಪಾವತಿ ಮಾಡಬೇಕು. ಆದರೆ ಆವಶ್ಯಕ ಸೌಕರ್ಯ ಕಲ್ಪಿಸುತ್ತಿಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಕಷ್ಟು ಅನುದಾನ ಬೇಕಿದೆ. ಇಲ್ಲಿ ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಲೆಕುಡಿಯ ಸಮುದಾಯ ಭವನದ ಸ್ಥಳದ ಕುರಿತ ತಕರಾರು ಇದ್ದು ಇದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ. ಗ್ರಾಮ ವಾಸ್ತವ್ಯದಲ್ಲಿ ಈ ಸಮಸ್ಯೆ ಇತ್ಯರ್ಥವಾಗುವುದು ಬಹು ಮುಖ್ಯವಾಗಿದೆ.
ಊರು ಸೇರಿವೆ ವನ್ಯಜೀವಿಗಳು :
ಮಲವಂತಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಊರು. ಅರಣ್ಯದಲ್ಲಿ ಆಹಾರವಿಲ್ಲ, ಊರಿ ನಲ್ಲಿ ಆಹಾರಕ್ಕೆ ಕೊರತೆಯಿಲ್ಲ, ಹೀಗಾಗಿ ವನ್ಯ ಜೀವಿಗಳು ಕೃಷಿಯನ್ನೇ ಬುಡಮೇಲು ಮಾಡುತ್ತಿವೆ. ಕಾಡಾನೆ, ಹಂದಿ, ನವಿಲು, ಮುಳ್ಳುಹಂದಿ,ಮಂಗಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಈಗೀಗ ಚಿರತೆಯ ದಾಳಿಯೂ ಆಗ ತೊಡಗಿದೆ. ಆನೆ ಕಂದಕ, ಆನೆ ಕಾರಿಡಾರ್ ಶಬ್ದ ಕೇಳಿದ್ದು ಹೊರತಾಗಿ ಯಾವುದೇ ಇಲಾಖೆಯಿಂದ ಅನುಷ್ಠಾನಗೊಂಡಿಲ್ಲ.
ನೇತ್ರಾವತಿ ಒಡಲ ಬಗೆವ ಮರಳು ದಂಧೆ :
ಇಲ್ಲಿನ ನೇತ್ರಾವತಿ ಸೇತುವೆ ತಳಭಾಗದಲ್ಲಿ ರಾತ್ರಿ ಹೊತ್ತು ಮರಳು ದಂಧೆ ನಡೆಯುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ನೇತ್ರಾವತಿ ಒಡಲಲ್ಲಿ ಸಾಧ್ಯವಾದರೆಲ್ಲ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಅನೇಕ ಬಾರಿ ಸಾಬೀತಾದರೂ ಜನ ದಂಧೆಯ ಬೆದರಿಕೆಗೆ ಮೌನ ವಾಗಿದ್ದಾರೆ. ಈ ವಿಚಾರ ಡಿಸಿ ವೇದಿಕೆಯಲ್ಲಿ ಚರ್ಚೆಗೆ ಬರಬಹುದೇ ಎಂಬುದು ಕಾದು ನೋಡಬೇಕಿದೆ.
ಅಡಿಕೆಯನ್ನು ಕೊಳ್ಳೆ ಹೊಡೆದ ಎಲೆಚುಕ್ಕಿ :
ಎಲೆಚುಕ್ಕಿರೋಗ ಮಲವಂತಿಗೆ ಗ್ರಾಮದ ಎಳನೀರು ಭಾಗಕ್ಕೆ ಆವರಿಸಿ 150 ಎಕ್ರೆಯಷ್ಟು ಅಡಿಕೆ ಗಿಡ ನಶಿಸುವ ಹಂತದಲ್ಲಿದೆ. 2019ರಲ್ಲಿ ಆರಂಭವಾದ ಎಲೆ ಚುಕ್ಕಿ ರೋಗ ಪ್ರಸಕ್ತ ಅಲ್ಲಿಂದ ಕೆಳಭಾಗಕ್ಕೆ ಹಬ್ಬಿದೆ. ಇದರ ಸಂಪೂರ್ಣ ನಿರ್ಮೂಲನೆಗೆ ಏನು ಕ್ರಮ ಎಂಬ ಪ್ರಶ್ನೆ ಜಿಲ್ಲಾಧಿಕಾರಿಗೆ ಎದುರಾಗುವುದರಲ್ಲಿ ಅಚ್ಚರಿಯಿಲ್ಲ.
ಅನಧಿಕೃತ ಹೋಂ ಸ್ಟೇಗಳು :
ಇಲ್ಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಕಾರಣ ಅನಧಿಕೃತ ಹೋಂ ಸ್ಟೇ ಗಳು ತಲೆ ಎತ್ತುತ್ತಿವೆ. ಪಂಚಾಯತ್‌ನಿಂದ ಕೇವಲ ಎರಡು ಹೋಂ ಸ್ಟೇಗೆ ಮಾತ್ರ ಅನುಮತಿ ನೀಡಲಾಗಿದ್ದು ಇನ್ನೊಂದು ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕಿದೆ.
- ಕಜಕ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮ ವಾಸ್ತವ್ಯ
- 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ
- ಜಿಲ್ಲಾಧಿಕಾರಿಗಳಿಂದ ವಿವಿಧ ಮಾಸಾಶನ ವಿತರಣೆ
- ಸ್ಥಳೀಯ ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಭೇಟಿ
- ಕೃಷಿ, ಆಹಾರ, ಆರೋಗ್ಯ ಇಲಾಖೆಯಿಂದ ಸ್ಟಾಲ್ (ಮಾಹಿತಿ , ಆರೋಗ್ಯ ತಪಾಸಣೆ)
- ಸಾರ್ವಜನಿಕರ ತೊಂದರೆಗಳಿಗೆ ಸ್ಥಳದಲ್ಲಿ ಪರಿಹಾರ
ಪೂರಕ ಸಿದ್ಧತೆ:
ಜಿಲ್ಲಾಧಿಕಾರಿಗಳು ಮಲವಂತಿಗೆ ಶಾಲೆಯಲ್ಲಿ ಡಿ. 17ರಂದು ಗ್ರಾಮ ವಾಸ್ತವ್ಯ ಹೂಡುವ ಹಿನ್ನೆಲೆ ಇಲಾಖೆಯಿಂದ ಕಡತ ವಿಲೇವಾರಿಗೆ ಪೂರಕ ಸಿದ್ಧತೆ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. –ಪೃಥ್ವಿ ಸಾನಿಕಮ್, ತಹಶೀಲ್ದಾರ್
- ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.