ಮಾ. 20ರಂದು ರಸ್ತೆ ತಡೆದು ಪ್ರತಿಭಟನೆಗೆ ನಿರ್ಧಾರ
Team Udayavani, Mar 15, 2020, 4:36 AM IST
ಬೆಳಂದೂರು: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕುದ್ಮಾರು- ಶಾಂತಿಮೊಗರು-ಆಲಂಕಾರು ಸಂಪರ್ಕ ರಸ್ತೆಯ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದ್ದಲ್ಲದೆ, ನಿಧಾನಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸದೇ ಇದ್ದರೆ ಮಾ. 20ರಂದು ಕುದ್ಮಾರು ಜಂಕ್ಷನ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಶಾಂತಿಮೊಗರು ದೇವಸ್ಥಾನದಲ್ಲಿ 18 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ಎ. 3ರಿಂದ 8ರ ವರೆಗೆ ನಡೆಯಲಿದೆ. ಕಾಮಗಾರಿ ಆರಂಭದಲ್ಲೇ ಎಂಜಿನಿಯರ್, ಗುತ್ತಿಗೆದಾರರಿಗೆ ವಿಷಯ ತಿಳಿಸಲಾಗಿದೆ. ಆದರೆ ನಿಧಾನಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ಧೂಳು ತಿನ್ನುವಂತಾಗಿದೆ. ಈ ರಸ್ತೆಯಲ್ಲಿ ಸರಕಾರಿ ಬಸ್ ಸಹಿತ ಹಲವು ವಾಹನಗಳು ಸಂಚರಿಸುತ್ತಿವೆ. ರಸ್ತೆಯಿಂದ ಬರುವ ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದರು.
ಶಾಂತಿಮೊಗರು ಸೇತುವೆ ನಿರ್ಮಾಣ ಸಂದರ್ಭ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಡಾಮರು ಮಾಡಿಕೊಡುವ ಕುರಿತು ಮಾತುಕತೆ ನಡೆಸಲಾಗಿತ್ತು. ಇಲಾಖಾಧಿಕಾರಿಗಳೂ ಮೌಖೀಕ ಭರವಸೆ ನೀಡಿದ್ದರು. ಆದರೆ ಈವರೆಗೂ ಡಾಮರು ಹಾಕಿಸಿಲ್ಲ. ಈ ಕುರಿತಂತೆ 2016ರಲ್ಲಿ ಹಾಗೂ ಈ ಬಾರಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ನಾಗೇಶ್ ಕೆಡೆಂಜಿ ಮಾತನಾಡಿ, ಕುದ್ಮಾರು ಜಂಕ್ಷನ್‌ನಲ್ಲಿ ಶಾಂತಿಮೊಗರು ಭಾಗದಿಂದ ಹೋಗುವ ರಸ್ತೆ ಎತ್ತರವಾಗಿದೆ. ಕಾಣಿಯೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಗ್ಗಿನಲ್ಲಿದ್ದು, ಅಪಘಾತವಾಗುವ ಸಾಧ್ಯತೆ ಇದೆ. ಈ ಕುರಿತು ಗಮನ ಸೆಳೆದಿದ್ದರೂ ಯಾವುದೇ ಬದಲಾವಣೆಗೆ ಮುಂದಾಗಿಲ್ಲ. ರಸ್ತೆ ಪಕ್ಕದಲ್ಲೇ ಎರಡು ಮನೆಗಳಿದ್ದು, ವಿಸ್ತರಣೆ ಸಂದರ್ಭ ಹಾಕಿದ ಮಣ್ಣು ಮನೆಯ ಅಂಗಳಕ್ಕೆ ಬಿದ್ದಿದೆ. ನಿವಾಸಿಗಳು ನಿತ್ಯ ಧೂಳಿನಲ್ಲೇ ಸ್ನಾನ ಮಾಡುವಂತಾಗಿದೆ. ಮುಂದೆ ವಾಹನಗಳು ಅಂಗಳಕ್ಕೆ ಉರುಳಿದರೂ ಅಚ್ಚರಿ ಇಲ್ಲ ಎಂದರು.
ದ್ವಿಚಕ್ರ ವಾಹನ ಸವಾರರು ಹಾಗೂ ಕಾಲ್ನಡಿಗೆಯಲ್ಲಿ ಸಾಗುವವರ ಕಷ್ಟ ಹೇಳತೀರದು. ಚಕ್ರಗಳ ಅರ್ಧ ಭಾಗ ಧೂಳಿನಲ್ಲಿ ಹೂತು ಹೋಗುತ್ತಿದೆ. ಗುಂಡಿಗಳೂ ಇವೆ. ಈ ರಸ್ತೆಯಲ್ಲಿ ಸಂಚರಿಸುವವರ ಪಾಡೂ ಹೇಳತೀರದು. ಕಾಮಗಾರಿ ಆರಂಭಿಸಿ ಈಗ ರಸ್ತೆ ಅಭಿವೃದ್ಧಿಗೆ ಏಕೆ ಮೀನ-ಮೇಷ ಎಣಿಸಲಾಗುತ್ತಿದೆ ಎಂಬುದು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ಪ್ರಶ್ನಿಸಿದರು.
ರಸ್ತೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿಯಾಗದಿದ್ದರೆ, ಸಂಕಷ್ಟ ಸ್ಥಿತಿಯಲ್ಲಿರುವ ಎರಡು ಮನೆಯವರ ಸಮಸ್ಯೆಗೆ ಸ್ಪಂದಿಸದಿದ್ದರೆ ಹಾಗೂ ಭರವಸೆ ನೀಡಿದಂತೆ ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ಮುಂದಾಗದಿದ್ದರೆ ಮಾ. 20ರಂದು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸುವ ಕುರಿತು ನಿರ್ಧರಿಸಲಾಯಿತು.
ಸಭೆಯಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಬರೆಪ್ಪಾಡಿ, ಕೋಶಾಧಿಕಾರಿ ಯಶೋಧರ ಕೆಡೆಂಜಿಕಟ್ಟ, ಲೋಕನಾಥ ವಜ್ರಗಿರಿ, ವಿಟuಲ ಗೌಡ, ಜಿತಾಕ್ಷಿ ಜಿ., ಸೀತಾರಾಮ, ಲೋಹಿತಾಕ್ಷ, ಪದ್ಮನಾಭ ಕೆರೆನಾರು, ಹರ್ಷಿತ್ ಕೂರ, ಪುನೀತ್, ಸಂತೋಷ್, ಶಿವಪ್ರಸಾದ್, ಚಿದಾನಂದ ಕೆರೆನಾರು, ಯತೀಶ್ ನಡುಮನೆ, ಶಿವಪ್ರಸಾದ್ ಹೊಸೊಕ್ಲು, ಸೌಮ್ಯಾಮತ್ತು ಸ್ಕಂದಶ್ರೀ ಯುವಕ ಮಂಡಲ, ಕುದ್ಮಾರು ಮಹಿಳಾ ಮಂಡಲ, ರೆಡ್ ಬಾಯ್ಸ ಕುದ್ಮಾರು, ಸ್ನೇಹಿತರ ಬಳಗ ಕುದ್ಮಾರು, ಝಾನ್ಸಿ ಯುವತಿ ಮಂಡಲ, ಗಣೇಶೋತ್ಸವ ಸಮಿತಿ, ನವೋದಯ ಸ್ವಸಹಾಯ ಸಂಘ ಕುದ್ಮಾರು, ಸಾಧನಾ, ಚೇತನಾ, ಭಾಗ್ಯಶ್ರೀ ಸ್ತ್ರೀಶಕ್ತಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಬ್ರಹ್ಮಣ್ಯೇಶ್ವರ ಭಜನ ಮಂಡಳಿ, ನಗರ ಭಜನ ಸಮಿತಿ, ವರಮಹಾಲಕ್ಷ್ಮೀ ಪೂಜಾ ಸಮಿತಿ, ತಿರಂಗಾ ವಾರಿಯರ್ ,ಯುವಶಕ್ತಿ ಕೆಲೆಂಬಿರಿ, ವೀರಾಂಜನೇಯ ಗೆಳೆಯರ ಬಳಗ ಪಲ್ಲತ್ತಾರು, ವೀರಕೇಸರಿ ಕಾಪೆಜಾಲು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.