ಜೋಡು ಕಾವಲು: ಸಂಪರ್ಕ ಸೇತುವೆಯ ಬೇಡಿಕೆ
ಸೇತುವೆ ನಿರ್ಮಾಣವಾದರೆ ಹಲವು ಗ್ರಾಮದ ಜನರಿಗೆ ಅನುಕೂಲ
Team Udayavani, May 14, 2019, 5:14 AM IST
ಓದುಗರೂ ತಮ್ಮೂರಿನ ಗಂಭೀರ ಸಾರ್ವಜನಿಕ ಸಮಸ್ಯೆಯನ್ನು ನಮ್ಮಲ್ಲಿ ಹೇಳಿಕೊಳ್ಳಬಹುದು. ಸಮಸ್ಯೆಯ ಚಿತ್ರ – ಮಾಹಿತಿಯನ್ನು ನಮ್ಮ ವಾಟ್ಸ್ ಆ್ಯಪ್ ಸಂಖ್ಯೆ 9108051452ಗೆ ಕಳುಹಿಸಿದರೆ, ಉದಯವಾಣಿ ‘ಸುದಿನ’ ವರದಿಗಾರರು ಸ್ಥಳಕ್ಕೆ ಭೇಟಿ ನೀಡುವರು. ವಿಶೇಷ ವರದಿ ಮೂಲಕ ಸಮಸ್ಯೆಯನ್ನು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. ‘ನಮ್ಮೂರ ಅಭಿವೃದ್ಧಿ ನಮ್ಮ ಜವಾಬ್ದಾರಿ’ ಎನ್ನುವ ಪರಿಕಲ್ಪನೆಯ ಈ ಸರಣಿಯಲ್ಲಿ ನೀವೂ ಪಾಲ್ಗೊಳ್ಳಿ.
ಸವಣೂರು: ಸೇತುವೆಯಿದ್ದರೆ ಸುತ್ತು ಬಳಸಿ ತೆರಳುವದು ತಪ್ಪುತ್ತದೆ. ಇದಕ್ಕಾಗಿ ಸವಣೂರು-ಕುಮಾರಮಂಗಲ ಶಾಲಾ ಬಳಿಯ ರಸ್ತೆಯ ಮೂಲಕ ತಿಂಗಳಾಡಿ, ತೆಗ್ಗು ಮೊದಲಾದ ಭಾಗಗಳನ್ನು ಸಂಪರ್ಕಿಸಲು ಪುಣ್ಚಪ್ಪಾಡಿ ಗ್ರಾಮದ ಜೋಡು ಕಾವಲು ಎನ್ನುವಲ್ಲಿ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಬೇಡಿಕೆಯನ್ನು ಈ ಭಾಗದ ಜನರು ವ್ಯಕ್ತಪಡಿಸಿದ್ದಾರೆ.
ಏಕೆ ಈ ಬೇಡಿಕೆ?
ಅತೀ ಹೆಚ್ಚು ಹಿಂದುಳಿದ ವರ್ಗದವರು ಇರುವ ಗ್ರಾಮವಾದ ಪುಣ್ಚಪ್ಪಾಡಿಯಿಂದ ತಿಂಗಳಾಡಿ, ತೆಗ್ಗು, ಕೆದಂಬಾಡಿ ಗ್ರಾಮಗಳನ್ನು ಸಂಪರ್ಕಿಸಲು ಜೋಡುಕಾವಲಿನಲ್ಲಿ ಸೇತುವೆ ನಿರ್ಮಾಣವಾದರೆ ಸುಲಭವಾಗಲಿದೆ. ಈ ಭಾಗದ ಜನರು ಈಗ ಮೇಲಿನ ಪ್ರದೇಶವನ್ನು ಸಂಪರ್ಕಿಸಬೇಕಾದರೆ ಕುಮಾರಮಂಗಲದಿಂದ ಮಾಡಾವು ಮೂಲಕ ಅಥವಾ ಕುಮಾರಮಂಗಲ-ಸವಣೂರು-ಸರ್ವೆ-ಕೂಡುರಸ್ತೆ ಮೂಲಕ ಸಾಗಿ ಹೋಗಬೇಕಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಭಾಗದ ಜನತೆಗೆ ಸುಲಭವಾಗಲಿದೆ.
ಜತೆಗೆ ತಿಂಗಳಾಡಿ, ತೆಗ್ಗು, ಕೆದಂಬಾಡಿ ಗ್ರಾಮದವರಿಗೆ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಸೌತಡ್ಕ ಮೊದಲಾದೆಡೆ ಹೋಗಬೇಕಾದರೆ ಪುತ್ತೂರಿಗೆ ತೆರಳಿ ಹೋಗಬೇಕಿದೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಕುಮಾರಮಂಗಲ – ಸವಣೂರು ಮಾರ್ಗವಾಗಿ ಶಾಂತಿಮೊಗರು ಸೇತುವೆ ಮೂಲಕ ತೆರಳಿದರೆ ಸಮಯ ಹಾಗೂ ವೆಚ್ಚವೂ ಕಡಿಮೆಯಾಗಲಿದೆ.
ರಸ್ತೆ ಅಭಿವೃದ್ದಿಯಾಗಬೇಕು
ಜೋಡುಕಾವಲಿಗೆ ಸಂಪರ್ಕಿಸುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತಿಂಗಳಾಡಿ-ತೆಗ್ಗು ರಸ್ತೆ ಅಭಿವೃದ್ಧಿಯಾಗಿದೆ. ಸುಳ್ಯ ಕ್ಷೇತ್ರ ವ್ಯಾಪ್ತಿಯ ಸವಣೂರು-ಕುಮಾರಮಂಗಲ-ಜೋಡುಕಾವಲು ರಸ್ತೆ ಅಭಿವೃದ್ದಿಯಾಗಬೇಕಿದೆ.
ಸೇತುವೆ ಶೀಘ್ರ ಆಗಲಿ
ಪುಣ್ಚಪ್ಪಾಡಿ ಗ್ರಾಮ ಹಾಗೂ ಕೆಯ್ಯೂರು, ತಿಂಗಳಾಡಿ ಭಾಗವನ್ನು ಒಂದು ಮಾಡುವ ಸಲುವಾಗಿ ಜೋಡುಕಾವಲಿನಲ್ಲಿ ಸೇತುವೆ ನಿರ್ಮಾಣವಾದರೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಸ್ಥಳೀಯ ನಿವಾಸಿ ಪ್ರಮೋದ್ ರೈ ಹೇಳಿದ್ದಾರೆ.
ಮನವಿ ಸಲ್ಲಿಸಲಾಗಿದೆ
ಪುಣ್ಚಪ್ಪಾಡಿ ಗ್ರಾಮದ ಜೋಡುಕಾವಲು ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣದ ಕುರಿತು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಗ್ರಾ.ಪಂ.ನಲ್ಲೂ ನಿರ್ಣಯ ಕೈಗೊಂಡು ಸಂಬಂಧಿಸಿದವರಿಗೆ ಬರೆಯಲಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲವಾಗಲಿದೆ.
– ಗಿರಿಶಂಕರ ಸುಲಾಯ, ಹಿರಿಯ ಸದಸ್ಯರು, ಗ್ರಾ.ಪಂ. ಸವಣೂರು
ಪ್ರವೀಣ್ ಚೆನ್ನಾವರ