ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ ಸೇರಿ ಕಡಬದಲ್ಲಿ ಪೊಲೀಸ್ ವೃತ್ತ ಕಚೇರಿಗೆ ಬೇಡಿಕೆ
ಕಾನೂನು ಸುವ್ಯವಸ್ಥೆಯ ಉತ್ತಮ ನಿರ್ವಹಣೆ, ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆ
Team Udayavani, Sep 17, 2020, 4:35 AM IST
ಕಡಬ ಪೊಲೀಸ್ ಠಾಣೆ
ಕಡಬ: ಕಾನೂನು ಸುವ್ಯವಸ್ಥೆ ಉತ್ತಮ ವಾಗಿ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ಪೂರಕವಾಗಿ ರಾಜ್ಯದ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದಂತೆಯೇ ನೂತನ ತಾಲೂಕು ಕೇಂದ್ರ ಕಡಬದಲ್ಲಿ ಕಡಬ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಗಳನ್ನು ಸೇರಿಸಿಕೊಂಡು ಪೊಲೀಸ್ ವೃತ್ತ ಕಚೇರಿ ಆರಂಭಿಸಬೇಕೆನ್ನುವ ಬೇಡಿಕೆ ಮುನ್ನೆಲೆಗೆ ಬಂದಿದೆ.
ದ.ಕ. ಜಿಲ್ಲೆಯ ವಿಟ್ಲ ಹಾಗೂ ಬಂಟ್ವಾಳ ನಗರ ಠಾಣೆ ಸಹಿತ ರಾಜ್ಯದ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಜ್ಞಾಪನಪತ್ರ ಕಳುಹಿಸಲಾಗಿದೆ. ಮೇಲ್ದರ್ಜೆಗೇರಿಸಲು ಆಯ್ಕೆಯಾಗಿರುವ ಪೊಲೀಸ್ ಠಾಣೆಗಳಲ್ಲಿ ಸದ್ಯ ಸಬ್ ಇನ್‌ಸ್ಪೆಕ್ಟರ್‌ಗಳು ಠಾಣಾಧಿಕಾರಿಗಳಾಗಿದ್ದು, ಮುಂದೆ ಇನ್‌ಸ್ಪೆಕ್ಟರ್‌ಗಳು ಠಾಣಾಧಿಕಾರಿಗಳಾಗಿ ನೇಮಕಗೊಳ್ಳಲಿದ್ದಾರೆ.
ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಕಡಬದಲ್ಲಿ ಹೊಸದಾಗಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಆರಂಭಿಸುವ ಮಾತುಗಳು ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆ. ಸುಳ್ಯ ಪೊಲೀಸ್ ಠಾಣೆಯನ್ನು ಇನ್‌ಸ್ಪೆಕ್ಟರ್ ಸುಪರ್ದಿಗೆ ಮೇಲ್ದರ್ಜೆಗೇರಿಸಿ ಪುತ್ತೂರು ಗ್ರಾಮಾಂತರ ವೃತ್ತದ ವ್ಯಾಪ್ತಿಯಲ್ಲಿರುವ ಕಡಬ, ಸುಳ್ಯ ವೃತ್ತದ ವ್ಯಾಪ್ತಿಗೆ ಸೇರಿದ ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಠಾಣೆಗಳನ್ನು ಸೇರಿಸಿ ಕಡಬ ವೃತ್ತದ ರಚನೆಯಾಗಲಿದೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೀಗ ಜಿಲ್ಲೆಯ ವಿಟ್ಲ ಹಾಗೂ ಬಂಟ್ವಾಳ ನಗರ ಠಾಣೆ ಮಾತ್ರ ಮೇಲ್ದರ್ಜೆಗೇರುವ ಠಾಣೆಗಳ ಪಟ್ಟಿಯಲ್ಲಿದ್ದು, ಸುಳ್ಯ ಠಾಣೆಯ ಹೆಸರಿಲ್ಲ.
ನೆಲ್ಯಾಡಿಯಲ್ಲಿ ಪೊಲೀಸ್ ಠಾಣೆಗೆ ಬೇಡಿಕೆ
ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಡಬ ತಾಲೂಕಿಗೆ ಸೇರಿರುವ ಪ್ರಮುಖ ಪಟ್ಟಣ ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭಿಸಬೇಕೆನ್ನುವ ಬೇಡಿಕೆ ಸರಕಾರದ ಮುಂದಿದೆ. ಈಗಾಗಲೇ ಉಪ್ಪಿನಂಗಡಿ ಠಾಣೆಯ ಹೊರಠಾಣೆ ನೆಲ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪರಿಸರದ ಜನರು ಠಾಣೆಯ ಹೆಚ್ಚಿನ ಕೆಲಸಗಳಿಗೆ ದೂರದ ಉಪ್ಪಿನಂಗಡಿಗೆ ಹೋಗಬೇಕಾದ ಅನಿವಾರ್ಯ ಇದೆ. ಶಾಸಕ ಅಂಗಾರ ಅವರ ಜತೆಗೆ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಬೇಟಿಯಾಗಿ ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಠಾಣೆ ಆರಂಭಿಸಬೇಕೆನ್ನುವ ಬೇಡಿಕೆ ಮಂಡಿಸಲಾಗಿದೆ. ಅದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ನೆಲ್ಯಾಡಿಯ ಸಾಮಾಜಿಕ ಮುಂದಾಳು ಬಾಲಕೃಷ್ಣ ಬಾಣಜಾಲು ತಿಳಿಸಿದ್ದಾರೆ.
ಪ್ರತ್ಯೇಕ ವೃತ್ತ ಕಚೇರಿ ಅಗತ್ಯ
ಪುತ್ತೂರು ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಪುತ್ತೂರು ಗ್ರಾಮಾಂತರ (ಸಂಪ್ಯ) ಠಾಣೆಯನ್ನು ಹೊರತುಪಡಿಸಿದರೆ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ಠಾಣೆ ಅಂದರೆ ಕಡಬ ಪೊಲೀಸ್ ಠಾಣೆ. ಪ್ರಸ್ತುತ 19 ಗ್ರಾಮಗಳ ವ್ಯಾಪ್ತಿ ಹೊಂದಿರುವ ಕಡಬ ಠಾಣೆಯ ಹೆಸರಿನಲ್ಲಿ ಕಡಬ ಪೇಟೆಯ ಹೃದಯಭಾಗದಲ್ಲಿ 2.5 ಎಕ್ರೆ ಜಮೀನು ಇದೆ. ಸುಳ್ಯ ಠಾಣೆಯನ್ನು ಮೇಲ್ದರ್ಜೆಗೇರಿಸಿ ಕಡಬ ಠಾಣೆ ವ್ಯಾಪ್ತಿಯ 19 ಗ್ರಾಮ, ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ 15 ಗ್ರಾಮ ಹಾಗೂ ಬೆಳ್ಳಾರೆ ಠಾಣೆ ವ್ಯಾಪ್ತಿಯ 21 ಗ್ರಾಮಗಳು ಸೇರಿ ಒಟ್ಟು 55 ಗ್ರಾಮಗಳ ವ್ಯಾಪ್ತಿಯ ವೃತ್ತ ಕಚೇರಿಯನ್ನು ಹೊಸದಾಗಿ ರಚನೆ ಮಾಡಿದರೆ ಕಾನೂನು ಸುವ್ಯವಸ್ಥೆ ಉತ್ತಮ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ ಎನ್ನುವ ಬೇಡಿಕೆಯನ್ನು ಈಗಾಗಲೇ ಸರಕಾರದ ಮುಂದಿಡಲಾಗಿದೆ ಎನ್ನುತ್ತಾರೆ ಸುಳ್ಯ ಶಾಸಕ ಎಸ್. ಅಂಗಾರ.
ಸರಕಾರಕ್ಕೆ ವರದಿ
ಮುಂದಿನ ದಿನಗಳಲ್ಲಿ ಸುಳ್ಯ ಪೊಲೀಸ್ ಠಾಣೆ ಮೇಲ್ದರ್ಜೆಗೇರಿದರೆ ಕಡಬ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಠಾಣೆಗಳನ್ನು ಸೇರಿಸಿ ಕಡಬ ಪೊಲೀಸ್ ವೃತ್ತ ರಚನೆಯಾಗುವ ಸಾಧ್ಯತೆಗಳಿವೆ. ಈ ಹಿಂದೆ ಈ ಕುರಿತು ಸರಕಾರಕ್ಕೆ ವರದಿ ಕಳುಹಿಸಲಾಗಿತ್ತು.
-ಬಿ.ಎಂ. ಲಕ್ಷ್ಮೀಪ್ರಸಾದ್ ದ.ಕ. ಎಸ್‌ಪಿ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.