ಅಭಿವೃದ್ಧಿಯ ಕನಸು ಕಾಣುತ್ತಿರುವ ಊರಿನ ಬೇಡಿಕೆ ಹಲವಾರು
ಕರ್ಣ್ವ ಮಹರ್ಷಿ ತಪೋ ಭೂಮಿ ಕಾಣಿಯೂರು
Team Udayavani, Jun 24, 2022, 4:45 PM IST
ಕಾಣಿಯೂರು: ಕಡಬ ತಾಲೂಕಿನ ಈ ಗ್ರಾಮಕ್ಕೆ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮೂಲಮಠ ಕಲಶಪ್ರಾಯ.
ಕಾಣಿಯೂರು ಗ್ರಾ.ಪಂ ಗೆ ಸೇರುವ ಕಾಣಿಯೂರಿಗೆ ತಾಲೂಕು ಕೇಂದ್ರ ಕಡಬ ವಾದರೂ ವ್ಯಾವಹಾರಿಕವಾಗಿ ಪುತ್ತೂರೇ ಕೇಂದ್ರ. ಗ್ರಾಮ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಪೇಟೆಯಲ್ಲಿ ವಾಣಿಜ್ಯ ಮಳಿಗೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು ಇವೆ. ಅಡಿಕೆ ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಊರಿನೊಳಗೆ ಸುತ್ತು ಹಾಕಿದಾಗ ಆಗಬೇಕಾದ ಕೆಲಸಗಳೂ ಬೇಕಾದಷ್ಟಿವೆ ಎಂಬ ಅಭಿಪ್ರಾಯ ಕೇಳಿಬಂದಿತು.
ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲು ಮೇಲ್ದರ್ಜೆಗೇರಬೇಕು- ಇದು ಮೊದಲ ಬೇಡಿಕೆ. ಇದರಿಂದ ಬರೀ ಕಾಣಿಯೂರಿಗಷ್ಟೇ ಲಾಭವಾಗುವುದಿಲ್ಲ. ಚಾರ್ವಾಕ, ದೋಳ್ಪಾಡಿ, ಕುದ್ಮಾರು,ಕಾಯ್ಮಣ, ಕೊಡಿಯಾಲ, ಪೆರುವಾಜೆ, ಬೆಳಂದೂರುಗಳಿಗೂ ಅನುಕೂಲವಾಗಲಿದೆ.
ಪ್ರಸ್ತುತ 2 ಖಾಸಗಿ ಆಸ್ಪತ್ರೆಗಳಿವೆ. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ನುರಿತ ವೈದ್ಯರು, ಹೆರಿಗೆ ತಜ್ಞ ವೈದ್ಯರನ್ನು ನೇಮಿಸಬೇಕು. ಒಳರೋಗಿಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯಾಗಬೇಕೆಂಬುದು ಜನಾಗ್ರಹ. ಆಧುನಿಕ ತಂತ್ರಜ್ಞಾನದ ಲ್ಯಾಬ್ ವ್ಯವಸ್ಥೆಯೂ ಬೇಕು.
ಕಾಣಿಯೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 230ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು,ಕೊಠಡಿ ಕೊರತೆ ಇದೆ. ಈ ಶಾಲೆಗೆ ವ್ಯವಸ್ಥಿತವಾದ ಆಟದ ಮೈದಾನವೂ ಅಗತ್ಯವಿದೆ.
ಇದರ ಜತೆಗೆ ಕಾಣಿಯೂರು ಕೇಂದ್ರ ಭಾಗದ ಅಭಿವೃದ್ಧಿಗೆ ಸ್ಥಳಾವಕಾಶ, ಜಾಗದ ಕೊರತೆ ಇದೆ. ಪೇಟೆಗೆ ವ್ಯವಸ್ಥಿತವಾದ ಚರಂಡಿ ಕಲ್ಪಿಸಬೇಕಿದೆ.
ರೈಲು ನಿಲ್ದಾಣ ಮೇಲ್ದರ್ಜೆ ಅಭಿವೃದ್ಧಿ ಆಗಬೇಕು
ದ.ಕ. ಜಿಲ್ಲೆಯಲ್ಲೇ ರಸ್ತೆ ಮಾರ್ಗಕ್ಕೆ ನಿಕಟವಾದ ರೈಲು ನಿಲ್ದಾಣ ಕಾಣಿಯೂರು. ಇಲ್ಲಿನ ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಬೇಕು ಹಾಗೂ ಎಕ್ಸ್ ಪ್ರಸ್ ರೈಲು ನಿಲುಗಡೆಯಾಗಬೇಕು. ಲೋಕಲ್ ರೈಲು ಬೆಳಗ್ಗೆ ಮತ್ತು ಸಂಜೆ ಸಂಚರಿಸು ವಂತಾಗಬೇಕು. ಈಗಿರುವ ರೈಲು ಓಡಾಟ ಸಮಯ ಪೂರಕವಾಗಿಲ್ಲ ಎಂಬ ಬೇಸರ ಗ್ರಾಮಸ್ಥರದ್ದು.
ಇನ್ನೊಂದು ಸಮಸ್ಯೆಯೆಂದರೆ, ಪೇಟೆಯ ಸನಿಹದಲ್ಲೇ ರೈಲು ಮಾರ್ಗ ಹಾದು ಹೋಗಿದೆ. ಹಾಗಾಗಿ ಬಹುತೇಕ ಜಾಗ ರೈಲ್ವೇ ಇಲಾಖೆಗೆ ಹೊಂದಿಕೊಂಡಿದ್ದು, ಪೇಟೆ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಹುಡುಕಬೇಕು ಎಂಬುದು ಗ್ರಾಮ ಸುತ್ತಾಟದಲ್ಲಿ ವ್ಯಕ್ತವಾದ ಅಭಿಪ್ರಾಯ.
ರುದ್ರಭೂಮಿ ಅಭಿವೃದ್ಧಿಯಾಗಲಿ
ರುದ್ರ ಭೂಮಿಗಾಗಿ ಸ್ಥಳ ನಿಗದಿ ಯಾಗಿದ್ದು, ಅನುದಾನ ದೊರೆತು ಅಭಿವೃದ್ಧಿಯಾಗಬೇಕು. ಸವಣೂರು, ಪುತ್ತೂರು ಬಿಟ್ಟರೆ ಈ ಭಾಗದಲ್ಲಿ ವ್ಯವಸ್ಥಿತ ರುದ್ರಭೂಮಿ ಇಲ್ಲ. ಕಾಣಿಯೂರು ಮಠಕ್ಕೆ ಹೋಗುವ ರಸ್ತೆಯಲ್ಲಿರುವ ಕೊಡಿಯಾಲ, ಕಲ್ಪಡ ಸಂಪರ್ಕ ಸೇತುವೆಯ ಒಂದು ಭಾಗದಲ್ಲಿ ಕುಸಿತವಾಗಿದ್ದು, ಸೇತುವೆ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣವಾಗಬೇಕಿದೆ.
ಕಾಣಿಯೂರು ಗ್ರಾ.ಪಂ.ಗೆ ಸಂಬಂಧಪಟ್ಟಂತೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಶೀಘ್ರ ಕಾಮಗಾರಿ ಮುಗಿಯಲಿದೆ ಎಂಬುದು ಗ್ರಾಮಸ್ಥರ ನಿರೀಕ್ಷೆ.
ಇದಲ್ಲದೇ ಕಾಣಿಯೂರಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಕಚೇರಿಗೆ ಸ್ಥಳ ನಿಗದಿಯಾಗಿದೆ. ಕಚೇರಿ ಕಾರ್ಯಾರಂಭ ಮಾಡಬೇಕಿದೆ. ಒಂದುವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಾಣಿಯೂರಿನಲ್ಲೇ ಸ್ಥಾಪಿಸಿದರೆ ಎಲ್ಲ ಸೇವೆ ಒಂದೇ ಕಡೆ ದೊರೆಯಲಿದೆ ಎಂಬುದು ಜನರ ಅಭಿಪ್ರಾಯ.
ಅನುದಾನದ ಸದ್ಬಳಕೆ: ಗ್ರಾಮದ ಅಭಿವೃದ್ಧಿಗೆ ಸಚಿವರು, ಸಂಸದರು, ಶಾಸಕರ ಮೂಲಕ ಹೆಚ್ಚುವರಿ ಅನುದಾನಗಳನ್ನು ತರಿಸಿ ಸೂಕ್ತವಿದ್ದಲ್ಲಿ ವಿನಿಯೋಗಿಸಲಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. –ಗಣೇಶ್ ಉದನಡ್ಕ, ಉಪಾಧ್ಯಕ್ಷರು, ಕಾಣಿಯೂರು ಗ್ರಾ.ಪಂ.
ಒಂದಷ್ಟು ಬೇಡಿಕೆಗಳಿವೆ: ಗ್ರಾಮದ ರಸ್ತೆ ಸೇರಿದಂತೆ ಹೆಚ್ಚಿನ ಬೇಡಿಕೆಗಳು ಈಡೇರುತ್ತಿವೆ. ಕಾಣಿಯೂರು ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು. ರೈಲು ನಿಲ್ದಾಣ ಅಭಿವೃದ್ಧಿಯಾಗಿ ಪೂರಕವಾದ ಸಮಯದಲ್ಲೆ ರೈಲು ಓಡಾಡುವಂತಾಗಬೇಕು. –ಸುರೇಶ್ ಕಾಣಿಯೂರು, ಸ್ಥಳೀಯರು
–ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.