ಡೆಂಗ್ಯೂ ಇಳಿಮುಖವಾದರೂ ಕಾಡುತ್ತಿರುವ ಜ್ವರ ಬಾಧೆ
ವ್ಯಾಪಕವಾಗಿ ಹರಡಿದೆ ಶೀತ ಜ್ವರ, ಅಲ್ಲಲ್ಲಿ ವರದಿಯಾಗುತ್ತಿದೆ ಟೈಫಾಯ್ಡ
Team Udayavani, Jul 25, 2019, 5:00 AM IST
ಕಡಬ: ಮೂರು ತಿಂಗಳಿನಿಂದ ಕಡಬದ ಕೋಡಿಂಬಾಳ ಪರಿಸರದಲ್ಲಿ ಜನರನ್ನು ಕಂಗಾಲಾಗಿಸಿದ್ದ ಡೆಂಗ್ಯೂ ಜ್ವರದ ಬಾಧೆ ಕೊಂಚ ಮಟ್ಟಿಗೆ ಇಳಿಮುಖವಾಗಿದೆ. ಈಗ ಶೀತ ಜ್ವರ ಎಲ್ಲೆಡೆ ಕಂಡುಬರುತ್ತಿದ್ದು, ಕಡಬ ಸಮುದಾಯ ಆಸ್ಪತ್ರೆಯ ಎಲ್ಲ ಹಾಸಿಗೆಗಳು ಜ್ವರಪೀಡಿತರಿಂದಾಗಿ ಭರ್ತಿಯಾಗಿವೆ. ಜ್ವರದಿಂದ ಬಳಲುತ್ತಿರುವ ಹೊರ ರೋಗಿಗಳೂ ಚಿಕಿತ್ಸೆಗಾಗಿ ದೊಡ್ಡಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಕೋಡಿಂಬಾಳ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ್ದ ಡೆಂಗ್ಯೂ ಕೊನೆಗೂ ನಿಯಂತ್ರಣಕ್ಕೆ ಬಂದಿದೆ. ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ ಸುಮಾರು 50 ಮನೆಗಳಲ್ಲಿ ಬಹುತೇಕ ಎಲ್ಲರೂ ಡೆಂಗ್ಯೂ ಜ್ವರದ ಬಾಧೆಗೆ ಒಳಗಾಗಿ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿತ್ತು. ಕಳೆದ ತಿಂಗಳು ಜ್ವರ ಪೀಡಿತರ ಪೈಕಿ ಕೋಡಿಂಬಾಳದ ಕುಕ್ಕೆರೆಬೆಟ್ಟು ವೀಣಾ ನಾೖಕ್ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಸಾವಿಗೀಡಾಗುವ ಮೂಲಕ ಭೀತಿಯ ವಾತಾ ವರಣ ಸೃಷ್ಟಿಯಾಗಿತ್ತು. ಕಡಬ ಸಮುದಾಯ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಇಳಿಮುಖವಾಗದಿದ್ದರೂ ಕೆಲ ದಿನಗಳಿಂದ ಡೆಂಗ್ಯೂ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಮನೆ ಮನೆ ಭೇಟಿ
ಡೆಂಗ್ಯೂ ಜ್ವರದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯವರು ಕೊಡಿಂಬಾಳ ಗ್ರಾಮದ ಎಲ್ಲ ಮನೆಗಳಿಗೆ ತೆರಳಿ ಪರಿಸರದಲ್ಲಿ ಸ್ವತ್ಛತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ಮುಂಜಾಗರೂಕತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲಲ್ಲಿ ಫಾಗಿಂಗ್ ಕಾರ್ಯವೂ ನಡೆಸುತ್ತಿದ್ದಾರೆ. ಕೋಡಿಂಬಾಳ ಮಾತ್ರವಲ್ಲದೇ ಕಡಬ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಈ ಕೆಲಸ ನಡೆಯುತ್ತಿದೆ. ಆರೋಗ್ಯ ಇಲಾಖಾಧಿಕಾರಿಗಳ ಮಾರ್ಗದರ್ಶನದಲ್ಲಿ 25 ಆಶಾ ಕಾರ್ಯಕರ್ತೆಯರು, 8 ಮಂದಿ ಆರೋಗ್ಯ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಲಾರ್ವಾ ಸರ್ವೆ, ಕರಪತ್ರ ವಿತರಣೆ, ಫಾಗಿಂಗ್ ಕಾರ್ಯ ನಡೆಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ಮನೆ ಮನೆ ಭೇಟಿ ಮಾಡಿ ಅಲ್ಲಿ ಮನೆಯ ಸುತ್ತಮುತ್ತ ನೀರು ಶೇಖರಣೆ ಆಗದಂತೆ ಮತ್ತು ಸೊಳ್ಳೆಗಳಿಂದ ಆದಷ್ಟು ರಕ್ಷಣೆ ಪಡೆಯುವ ಬಗ್ಗೆ ಜಾಗೃತಿ, ಅನಾರೋಗ್ಯ ಕಂಡುಬಂದರೆ ಕೂಡಲೇ ಆರೋಗ್ಯ ಕೇಂದ್ರಕ್ಕೆ ಬರುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತಿದ್ದಾರೆ.
ಸೊಳ್ಳೆ ನಿಯಂತ್ರಣ; ಜನರ ಅಸಹಕಾರ
ಡೆಂಗ್ಯೂ ಜ್ವರ ವ್ಯಾಪಕವಾಗಿ ಬಾಧಿಸಿದ್ದರೂ ಸೊಳ್ಳೆ ನಿಯಂತ್ರಣದ ಕುರಿತು ಸಾರ್ವಜನಿಕರಿಂದ ಯಾವುದೇ ರೀತಿಯ ಸಹಕಾರ ದೊರೆಯುತ್ತಿಲ್ಲ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆರೋಗ್ಯ ಇಲಾಖೆಯ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆಗಳ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಪತ್ತೆಹಚ್ಚಿ ಸೊಳ್ಳೆಯ ಲಾರ್ವಾಗಳನ್ನು ನಿರ್ಮೂಲನೆ ಮಾಡುವ ಕಾರ್ಯವನ್ನು ಮಾಡುವ ವೇಳೆ ಮನೆಯವರಿಂದಲೇ ಪ್ರತಿರೋಧ ಎದುರಾಗುತ್ತಿದೆ. ಮನೆ ಯವರು ಸಂಗ್ರಹಿಸಿಟ್ಟ ನೀರಿನ ತೊಟ್ಟಿಗಳಲ್ಲಿನ ಲಾರ್ವಾಗಳನ್ನು ಪತ್ತೆ ಮಾಡಿ ತೊಟ್ಟಿಯಲ್ಲಿನ ನೀರನ್ನು ಖಾಲಿ ಮಾಡುವಂತೆ ಸೂಚಿಸಿದರೆ ಮನೆಯವರು ನಮ್ಮ ಮೇಲೆಯೇ ಜಗಳ ಕಾಯುತ್ತಾರೆ ಎನ್ನುವುದು ಆರೋಗ್ಯ ಕಾರ್ಯಕರ್ತರ ಅಳಲು.
ಬಹುತೇಕ ನಿಯಂತ್ರಣ
ಕಡಬ ಪರಿಸರದಲ್ಲಿ ಡೆಂಗ್ಯೂ ಜ್ವರ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ವೈರಲ್ ಜ್ವರ ಹಾಗೂ ಮಳೆಗಾಲದಲ್ಲಿ ಸಹಜವಾಗಿ ಬರುವ ಶೀತ ಜ್ವರ ಪೀಡಿತರು ಚಿಕಿತ್ಸೆಗೆ ಬರುತ್ತಿದ್ದಾರೆ. ಅಲ್ಲಲ್ಲಿ ಟೈಫಾಯ್ಡ ಜ್ವರವೂ ಕಂಡುಬರುತ್ತಿದೆ. ಜ್ವರ ಪೀಡಿತರು ಕುದಿಸಿ ಆರಿಸಿದ ನೀರನ್ನು ಕುಡಿಯುವುದರೊಂದಿಗೆ ಬಿಸಿಯಾದ ಆಹಾರವನ್ನೇ ಸ್ವೀಕರಿಸಬೇಕು. ಜ್ವರ ಉಲ್ಬಣಗೊಳ್ಳಲು ಅವಕಾಶ ನೀಡದೇ ಚಿಕಿತ್ಸೆ ಪಡೆಯಬೇಕು.
– ಡಾ| ತ್ರಿಮೂರ್ತಿ , ವೈದ್ಯಾಧಿಕಾರಿ, ಕಡಬ ಸಮುದಾಯ ಆರೋಗ್ಯ ಕೇಂದ್ರ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.