‘ಡಾ| ಹೆಗ್ಗಡೆಯವರಿಂದ ವಿಶ್ವಶಾಂತಿ ಸಂದೇಶ ಪ್ರಸಾರ’
Team Udayavani, Mar 11, 2019, 6:07 AM IST
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ, ಮಹಾ ಮಸ್ತಕಾಭಿಷೇಕ ಹಮ್ಮಿಕೊಳ್ಳುವ ಮೂಲಕ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ವಿಶ್ವಶಾಂತಿ, ಲೋಕಕಲ್ಯಾಣ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಆದಿತ್ಯ ಸಾಗರ್ ಮುನಿಮಹಾರಾಜ್ ನುಡಿದರು.
ಧರ್ಮಸ್ಥಳದ ರತ್ನಗಿರಿಯಲ್ಲಿ ರವಿವಾರ ತಮಿಳುನಾಡು ಜೈನ ಸಮಾಜದ ವತಿಯಿಂದ ಅರಿ ಹಂತಗಿರಿಯ ಧವಳಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ನಡೆದ ಬಾಹುಬಲಿ ಮಹಾ ಮಸ್ತಕಾಭಿಷೇಕದಲ್ಲಿ ಅವರು ಮಂಗಲ ಪ್ರವಚನ ನೀಡಿದರು.
ಭಗವಾನ್ ಬಾಹುಬಲಿ ಸಾಧು- ಸಂತರಿಗೆ ಸಹನೆ, ತಾಳ್ಮೆಯ ಸಂದೇಶ ನೀಡಿದರೆ, ಶ್ರಾವಕರಿಗೆ -ಶ್ರಾವಕಿಯರಿಗೆ ಸೇವೆ ಮಾಡಬೇಕೆಂಬ ಸಂದೇಶ ನೀಡುತ್ತಾರೆ. ಮಸ್ತಕಾಭಿಷೇಕ ಮಾಡುವುದರಿಂದ ಹಾಗೂ ನೋಡುವುದರಿಂದ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟಾಗುತ್ತದೆ. ಮನಸ್ಸು ಪವಿತ್ರವಾಗುತ್ತದೆ ಎಂದರು.
ಬಹುಮುಖಿ ಸಮಾಜ ಸೇವೆ
ತಮಿಳುನಾಡು ಅರಿಹಂತಗಿರಿಯ ಧವಳಕೀರ್ತಿ ಸ್ವಾಮೀಜಿ ಮಾತನಾಡಿ, ತಮಿಳುನಾಡಿನಲ್ಲಿರುವ ಸುಮಾರು 500 ಬಸದಿಗಳ ಜೀರ್ಣೋದ್ಧಾರಕ್ಕೆ ಹೆಗ್ಗಡೆಯವರು ನೆರವು ನೀಡಿದ್ದು, ಶೇ. 95ರಷ್ಟು ಕೆಲಸ ಪೂರ್ಣ ಗೊಂಡಿದೆ. ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆ ಜಗತ್ತಿಗೇ ಮಾದರಿ ಎಂದು ಶ್ಲಾಘಿಸಿದರು.
ಅರಿಹಂತಗಿರಿ ಮಠದ ವತಿಯಿಂದ ಸ್ವಾಮೀಜಿಯವರು ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು, ಹೇಮಾವತಿ ವೀರೇಂದ್ರ ಹೆಗ್ಗಡೆ , ಡಿ. ಹರ್ಷೇನ್ದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇನ್ದ್ರ ಕುಮಾರ್ ಅವರನ್ನು ಸಮ್ಮಾನಿಸಿದರು.
ಉಜ್ಜಂತ ಸಾಗರ್ ಮುನಿ ಮಹಾರಾಜರು ತಾಮ್ರ ಪತ್ರದಲ್ಲಿ ಬರೆದ ಒಂದು ಸಾವಿರ ವರ್ಷ ಪುರಾತನವಾದ ತತ್ಪಾರ್ಥ ಸೂತ್ರದ ಗ್ರಂಥವನ್ನು ಹೆಗ್ಗಡೆಯವರಿಗೆ ಸಮರ್ಪಣೆ ಮಾಡಿದರು. ಸಹಜಸಾಗರ್ ಮುನಿಮಹಾರಾಜರು, ಸೋಂದಾ ಮಠದ ಭಟ್ಟಾಕಲಂಕ ಸ್ವಾಮೀಜಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.