ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ದಿಲೀಪ್ ವೇದಿಕ್
17ನೇ ವಯಸ್ಸಿಗೆ ಹಲವು ಕೃತಿಗಳು, ಅನೇಕ ಪ್ರಶಸ್ತಿಗಳ ಸರದಾರ
Team Udayavani, May 10, 2019, 6:00 AM IST
ಕಲ್ಲುಗುಡ್ಡೆ: ತನ್ನ 17ನೇ ವಯಸ್ಸಿನಲ್ಲಿಯೇ ಕವಿ, ಕಥೆಗಾರ, ಗಾಯಕ, ವಾಗ್ಮಿಯಾಗಿ, ಕರ್ನಾಟಕ ಹಾಗೂ ಕೇರಳ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುವ ಜತೆಗೆ ಹಲವಾರು ಕೃತಿ, ಕವನಗಳನ್ನು ರಚಿಸಿ, ಸಮ್ಮಾನ, ಬಿರುದು, ಪ್ರಶಸ್ತಿಗಳ ಸರದಾರನಾಗಿದ್ದಾರೆ, ನೂಜಿಬಾಳ್ತಿಲ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಲೀಪ್ ವೇದಿಕ್. ದಿಲೀಪ್ ಅವರೀಗ ಚಲನಚಿತ್ರಗಳಿಗೂ ಸಾಹಿತ್ಯ ಬರೆಯುತ್ತಿದ್ದಾರೆ. ದ.ಕ. ಜಿಲ್ಲಾ ಕವಿ ಬಳಗ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ.
12ನೇ ವಯಸ್ಸಲ್ಲಿ ಸಾಹಿತ್ಯ ಕ್ಷೇತ್ರಕ್ಕೆ
“ಡಿವಿಕೆ’ ಎಂದೇ ಹೆಸರಾಗಿರುವ ದಿಲೀಪ್ ವೇದಿಕ್ ಕಡಬ “ವೇದಿಕ್’ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯುತ್ತಿದ್ದಾರೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ದಿ| ಶಶಿಮಾಧವನ್ ಮಾನಂದ ವಾಡಿ ಹಾಗೂ ವಿಜಯ ಕುಮಾರಿ ಪುದುಪರಂಬಿಲ್ ದಂಪತಿಯ ದ್ವಿತೀಯ ಪುತ್ರ. ಇವರ ಅಣ್ಣ ದೀಪು. ದಿಲೀಪ್ ತನ್ನ ಪ್ರಾಥಮಿಕ ಶಿಕ್ಷಣವನ್ನು ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ರೆಂಜಿಲಾಡಿ ಸಾಂತೋಮ್ ವಿದ್ಯಾ ನಿಕೇತನ್ ಪೇರಡ್ಕದಲ್ಲಿ, ಪ್ರಸ್ತುತ ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಾಣಿಜ್ಯ ವಿಭಾಗ) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿಲೀಪ್ ವೇದಿಕ್ 12ನೇ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿತರಾಗಿದ್ದಾರೆ.
ಭಾರತಾಂಬೆಯ ಮಡಿಲು ಮೊದಲ ಕೃತಿ
ದಿಲೀಪ್ ವೇದಿಕ್ “ಭಾರತಾಂಬೆಯ ಮಡಿಲು’ ಎಂಬ ಚೊಚ್ಚಲ ಕೃತಿಯನ್ನು ರಚಿಸಿದರು. ಮೊದಲಿಗೆ ಸರಳ ಕವಿತೆ ರೂಪದಲ್ಲಿ ಬರೆದಿದ್ದ ಅವರು, ಆ ಬಳಿಕ ಅದನ್ನು ಭಾಮಿನಿ ಷಟ³ದಿಯಲ್ಲಿ ನಿರೂಪಿಸಿದರು. ಅವರ “ಭಾರತಾಂಬೆಯ ಮಡಿಲು’ ಹಾಗೂ “ಪಾಸ್ಟಿಕ್ ಒಡೆಯ’ ಕವನಗಳು ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಮಹಾದೇವ್ ಅವರ “ಕಹಳೆ’ ಸಂಕಲನದಲ್ಲಿ ಪ್ರಕಟವಾಗಿವೆ.
ಕೃತಿ, ಸನ್ಮಾನ, ಪ್ರಶಸ್ತಿಗಳ ಸರದಾರ
ಕನ್ನಡ, ತುಳು ಹಾಗೂ ಮಲೆಯಾಳಂ ಭಾಷೆಯಲ್ಲಿ 800ಕ್ಕೂ ಹೆಚ್ಚು ಲೇಖನ, ಕವಿತೆಗಳನ್ನು ಅವರು ಬರೆದಿದ್ದಾರೆ. 50ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ವೇದಿಕೆ ಏರಿದ್ದಾರೆ. ಈ ಸಾಧನೆಗಾಗಿ ನೇಶನಲ್ ಲಯನ್ಸ್ ಗ್ರೇಡ್ ರಾಷ್ಟ್ರ ಮಟ್ಟದ ಪ್ರಶಸ್ತಿ (2016, ಕಡಬ), ಮೇಘದೂತ ಬಿರುದು (2017, ಸುಳ್ಯ), ಸಾಹಿತ್ಯ ಕಲ್ಪವೃಕ್ಷ ಪ್ರಶಸ್ತಿ (2017, ಮಡಿಕೇರಿ), ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಕರುನಾಡ ಸಾಧಕ ಪ್ರಶಸ್ತಿ (2019, ಬೆಂಗಳೂರು), ಸಾಹಿತ್ಯ ರತ್ನ ಪ್ರಶಸ್ತಿ (2019, ಸುಳ್ಯ) ದಿಲೀಪ್ ಅವರನ್ನು ಅರಸಿಕೊಂಡು ಬಂದಿವೆ.
ಚಿತ್ರ ಸಾಹಿತ್ಯಕ್ಕೂ ಸೈ
ದಿಲೀಪ್ ವೇದಿಕ್ ಚಲನಚಿತ್ರ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. “ಚೆಲುವಿನ ಚಿತ್ತಾರ’ ಕಿರು ಚಿತ್ರಕ್ಕೆ ಟೈಟಲ್ ಸಾಂಗ್ ರಚಿಸಿದ್ದಾರೆ. ಗ್ಲೋಬಲ್ ಟಿವಿಯ ಸ್ಕ್ರಿಪ್ಟ್ ರೈಟಿಂಗ್‌ಗೂ ಆಯ್ಕೆಯಾಗಿದ್ದಾರೆ. ಮಲೆಯಾಳಿ ಟಿವಿ ಚಾನೆಲ್‌ಗಳಿಂದಲೂ ಅವಕಾಶಗಳು ಬಂದಿವೆ. ಆದರೆ, ಕನ್ನಡಕ್ಕೇ ಜಾಸ್ತಿ ಮಹತ್ವ ನೀಡುವುದಾಗಿ ದಿಲೀಪ್ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಧಿಸುವ ಛಲ
ಕಡಬ ಲಯನ್ಸ್ ಕ್ಲಬ್ ನನ್ನ ಸಾಹಿತ್ಯ ಕೃಷಿಯನ್ನು ಗುರುತಿಸಿ ಮೊದಲಿಗೆ ಸಮ್ಮಾನ ಮಾಡಿತು. ಮೊದ ಮೊದಲು ಈ ಕ್ಷೇತ್ರ ಬೇಡ ಎಂದವರೇ ಈಗ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾ ಸಂಸ್ಥೆಯೂ ಉತ್ತೇಜನ ನೀಡುತ್ತಿದೆ. ಸಾಹಿತ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಗುರಿ ಹಾಗೂ ಕನಸಿದೆ
- ದಿಲೀಪ್ ವೇದಿಕ್ ಯುವ ಸಾಹಿತಿ ನೂಜಿಬಾಳ್ತಿಲ
ದಯಾನಂದ ಕಲ್ನಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.