ಅಂಗವಿಕಲ ಮಕ್ಕಳಿಗೆ ಅವಕಾಶ ನಿರಾಕರಣೆ ಸಲ್ಲ
Team Udayavani, Jun 23, 2018, 2:31 PM IST
ಪುತ್ತೂರು: ಅಂಗವಿಕಲ ವಿದ್ಯಾರ್ಥಿಗಳಿಗೆ ಶಾಲೆಯ ಮಹಡಿಯಲ್ಲಿ ತರಗತಿ ನಡೆಸುವ, ಕೆಲವು ಶಾಲೆಗಳಲ್ಲಿ ಇಂತಹ ಮಕ್ಕಳನ್ನು ಸೇರಿಸಿಕೊಳ್ಳಲು ನಿರಾಕರಿಸುವ ವಿಚಾರಗಳು ಬೆಳಕಿಗೆ ಬಂದಿವೆ ಎನ್ನುವ ವಿಚಾರ ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ನೇತೃತ್ವದಲ್ಲಿ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ತಾ| ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆ ನಡೆಯಿತು. ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಬಾಲ್ಯ ವಿವಾಹ ತಡೆ ಕಾಯಿದೆ, ಮಕ್ಕಳ ಕಳ್ಳಸಾಗಾಟ, ಅಂಗವಿಕಲರ ಅಭಿವೃದ್ಧಿ, ಸ್ತ್ರಿ ಶಕ್ತಿ ಸೊಸೈಟಿ ಮೊದಲಾದ ಸಮಿತಿಗಳ ಸಭೆ ಪದನಿಮಿತ್ತ ಅಧ್ಯಕ್ಷ ತಹಶೀಲ್ದಾರ್ ಅನಂತ ಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿವಪ್ಪ ರಾಥೋಡ್ ಅವರು ಮೇಲಿನ ವಿಷಯ ಪ್ರಸಾವಿಸಿ, ಅಂಗವಿಕಲರಿಗೆ ಶಾಲಾ ಕಟ್ಟಡದ ಕೆಳ ಮಹಡಿಯಲ್ಲಿ ಕಲಿಕೆಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಪ್ರತಿನಿಧಿ ವಜೀರ್, ಇಂತಹ ಸಮಸ್ಯೆ ಇರುವ ಶಾಲೆಗಳಿಗೆ ಭೇಟಿ ನೀಡಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಮಾತನಾಡಿ, ಇಲಾಖೆಯ ಸಂಬಂಧಪಟ್ಟ ಅಧಿಕಾರಿಯನ್ನು ಕಳುಹಿಸಿ ಪರಿಶೀಲಿಸಿದ ಬಳಿಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಧಿಕೃತ ನೋಂದಣಿ
ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಬೇಕು. ಅವುಗಳ ಮೂಲ ಸೌಕರ್ಯ ನೋಡಿಕೊಂಡು ನೋಂದಣಿ ಮಾಡಿ ಕೊಳ್ಳಲಾಗುತ್ತದೆ. ನೋಂದಣಿಯಾಗದ ಸಂಸ್ಥೆಗಳು ತತ್‌ಕ್ಷಣ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಲು ಸೂಚಿಸಲಾಯಿತು. ಮಕ್ಕಳ ಹಕ್ಕುಗಳ ರಕ್ಷಣಾ ಜಿಲ್ಲಾ ಸಮಿತಿ ಪ್ರತಿನಿಧಿ ವಜೀರ್ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ 4 ನೋಂದಣಿಯಾದ ಸಂಸ್ಥೆಗಳಿವೆ. ಇನ್ನೂ ಒಂದು ಸಂಸ್ಥೆ ನೋಂದಣಿಯಾಗಲು ಬಾಕಿ ಇದೆ ಎಂದರು.
ಪುತ್ತೂರು ತಾ|ನಲ್ಲಿ 41 ಗ್ರಾ.ಪಂ. ಗಳಿದ್ದು, ಇವುಗಳಲ್ಲಿ 6 ಗ್ರಾ.ಪಂ.ಗಳಲ್ಲಿ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಿಲ್ಲ ಎಂದು ತಾ| ಅಧಿಕಾರಿ ನವೀನ್ ಹೇಳಿದರು. ಎಂಡೋ ಪೀಡಿತ ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿವೇತನ ಬಂದಿಲ್ಲ ಎಂದು ಶಿವಪ್ಪ ರಾಥೋಡ್ ಹೇಳಿದರು.
ಮದುವೆ ಪ್ರಸ್ತಾವವೂ ಮಾಡಬಾರದು!
18 ವರ್ಷ ತುಂಬುವ ಮೊದಲು ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು ಎಂಬ ಕಾನೂನಿದೆ. ಕೇವಲ ಮದುವೆ ಮಾಡುವುದಕ್ಕೆ ಮಾತ್ರ ಈ ನಿರ್ಬಂಧ ಸೀಮಿತವಲ್ಲ. 18 ವರ್ಷ ತುಂಬುವ ಮೊದಲು ಮದುವೆಯ ಪ್ರಸ್ತಾವವನ್ನೂ ಹುಡುಗಿ ಮುಂದೆ ಮಾಡಬಾರದು ಎಂದು ಸಮಿತಿಗಳ ಪದ ನಿಮಿತ್ತ ಕಾರ್ಯದರ್ಶಿ, ತಾ| ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ತಿಳಿಸಿದರು.
18 ವರ್ಷ ತುಂಬುವ ಮೊದಲು ಹೆಣ್ಮಕ್ಕಳಿಗೆ ಮದುವೆ ಮಾಡಬಾರದು ಎಂಬ ಕಾನೂನು ಗೊತ್ತಿದ್ದರೂ, ಕೆಲವು ಪ್ರಸಂಗಗಳಲ್ಲಿ 18 ವರ್ಷ ತುಂಬುವ ಮೊದಲೇ ಮದುವೆ ಸಂಬಂಧ ಹುಡುಕಿ, ನಿಶ್ಚಿತಾರ್ಥ ಮಾಡುತ್ತಾರೆ. ಇಂಥ ಕೆಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಕಾನೂನು ಪ್ರಕಾರ ಇದು ತಪ್ಪು. ನಾವು ಈಗ ಮದುವೆ ಮಾಡುವುದಿಲ್ಲ. ಗಂಡು ಹುಡುಕಿ ಸಂಬಂಧ ಕುದುರಿಸಿಡುತ್ತೇವೆ ಎಂದು ಹೇಳುತ್ತಾರೆ. ಇಂತಹುಗಳಿಗೆ ನಾವು ಅವಕಾಶ ಕೊಟ್ಟಿಲ್ಲ ಎಂದು ಶಾಂತಿ ಹೆಗಡೆ ಹೇಳಿದರು. ಬಾಲ್ಯ ವಿವಾಹಗಳು ನಡೆಯದಂತೆ ಅಧಿಕಾರಿಗಳು ಜವಾಬ್ದಾರಿಯನ್ನು ಹೊರಬೇಕು ಎಂದು ವಿನಂತಿಸಿದರು.
ಗಾಂಜಾ ಪ್ರಕರಣ ಹೆಚ್ಚಳ
ತಾಲೂಕಿನಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಮಾರಾಟ, ಬಳಕೆ ಕುರಿತು ಝೋಹರಾ ನಿಸಾರ್ ಆತಂಕ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ಕುರಿತು ಮಾಹಿತಿ ಕೊಟ್ಟರೆ ನಾವು ಕ್ರಮ ಕೈಗೊಳ್ಳಬಹುದು. ಸಾರ್ವಜನಿಕ ವಲಯದಿಂದ ಮಾಹಿತಿ ಕಡಿಮೆ ಬರುತ್ತಿದೆ ಎಂದು ಎಎಸ್‌ಐ ತಿಮ್ಮಯ್ಯ ಹೇಳಿದರು. ಕಾಲೇಜು ಕ್ಯಾಂಪಸ್‌ಗಳ ಮೇಲೆ ನಿಗಾ ಇಡಿ ಎಂದು ಪೊಲೀಸರನ್ನು ಸಭೆ ಆಗ್ರಹಿಸಿತು. ಕಾಲೇಜಿನವರು ಮಾಹಿತಿ ನೀಡದ ಕ್ಯಾಂಪಸ್‌ಗೆ ಪೊಲೀಸರು ಹೋಗುವುದು ಕಷ್ಟ ಎಂಬ ಉತ್ತರ ಬಂತು. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಬಹುದಲ್ಲವೇ ಎಂದು ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಸಲಹೆ ನೀಡಿದರು.
ಸಾರ್ವಜನಿಕರೂ ಸಹಕರಿಸಿ
ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗೆಳತಿ ಚಿಕಿತ್ಸಾ ಘಟಕ ಕೆಲಸ ಮಾಡುತ್ತಿದೆ. ಮಹಿಳಾ ದೌರ್ಜನ್ಯ, ಆ್ಯಸಿಡ್ ದಾಳಿ, ಅತ್ಯಾಚಾರ ಮುಂತಾದ ಪ್ರಕರಣಗಳ ಸಂತ್ರಸ್ತ ಮಹಿಳೆ ಇಲ್ಲಿ ದಾಖಲಾದರೆ ಗೆಳತಿ ಘಟಕವು ಅವರ ಕೌನ್ಸಿಲಿಂಗ್ ನಡೆಸುತ್ತಿದೆ. ಸಾಂತ್ವನ ಕೇಂದ್ರದ ಒಬ್ಬರು ಸಮಾಲೋಚಕಿ ಅಲ್ಲಿ ನಿರಂತರ ಭೇಟಿ ನೀಡುತ್ತಿರುತ್ತಾರೆ ಎಂದು ಸಾಂತ್ವನದ ದೀಪಾ ಮಾಹಿತಿ ನೀಡಿದರು.
ಮಕ್ಕಳ ಮಾರಾಟ ಆಗುತ್ತಿರುವ ಕುರಿತು ವದಂತಿ ಹರಡಿದ ಕಾರಣ ಇತ್ತೀಚೆಗೆ ಎಲ್ಲ ಶಾಲೆಗಳಿಂದ ಪೊಲೀಸ್ ಇಲಾಖೆ ಮಾಹಿತಿ ಕಲೆ ಹಾಕಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಮಾರಾಟ ತಡೆ ವಿಚಾರದಲ್ಲಿ ಎಲ್ಲ ಇಲಾಖೆಗಳು ಮತ್ತು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ತಾ. ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಹೇಳಿದರು.
ಭೇಟಿ ಪಡಾವೊ ಭೇಟಿ ಬಚಾವೋ ಯೋಜನೆಗೆ ಇನ್ನೂ ಅನುದಾನ ತಾ| ಮಟ್ಟಕ್ಕೆ ಬಂದಿಲ್ಲ. ಕೇವಲ ಸಮಿತಿ ರಚಿಸಲು ಸೂಚನೆ ಬಂದಿದ್ದು, ರಚನೆ ಮಾಡಲಾಗಿದೆ. ತಾಲೂಕಿನಲ್ಲಿ 800 ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿದ್ದು, 11 ಸಾವಿರ ಸದಸ್ಯೆಯರಿದ್ದಾರೆ. ಸದಸ್ಯೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ, ಮಾರಾಟ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಲಾಯಿತು.
ತಾಲೂಕು ಸಿಡಿಪಿಒ ಇಲಾಖೆಗೆ ಸ್ವಂತ ಕಟ್ಟಡಕ್ಕಾಗಿ 10 ಸೆಂಟ್ಸ್ ಜಾಗದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿದ್ದು, ಚುನಾವಣೆ ಬಂದ ಕಾರಣ ತಡವಾಗಿದೆ. ಈಗ ಕಡತ ಸಹಾಯಕ ಕಮಿಷನರ್ ಅವರ ಕಚೇರಿಯಲ್ಲಿದೆ ಎಂದು ಶಾಂತಿ ಟಿ. ಹೆಗ್ಡೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಶಿರಾಡಿ ಭೇಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅನಂತ ಶಂಕರ್ ಅವರು ಅರ್ಧದಿಂದ ಸಭೆಯ ನೇತೃತ್ವವನ್ನು ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಅವರಿಗೆ ಒಪ್ಪಿಸಿ ನಿರ್ಗಮಿಸಿದರು. ತಾ. ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾ.ಪಂ. ನ ಶಿವಪ್ರಕಾಶ್ ಉಪಸ್ಥಿತರಿದ್ದರು.
ಆಧಾರ್‌ಗೆ ಸಮಸ್ಯೆ
ಓಡಾಡಲು ಸಾಧ್ಯವಾಗದ ಅಂಗವಿಕಲ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಸಮಸ್ಯೆಯಾಗಿದೆ ಎಂದು ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಹೇಳಿದರು. ಇಂತಹ ಮಕ್ಕಳ ಮನೆಗೆ ಆಧಾರ್ ಕಿಟ್‌ಗಳನ್ನು ಸಿಬಂದಿ ಜತೆ ಕಳುಹಿಸಿ ಕೊಡಲಾಗಿದೆ. ಕೆಲವು ಮಕ್ಕಳು ಹಾಸಿಗೆಯಲ್ಲೇ ಮಲಗಿದ್ದ ಸಂದರ್ಭ ನೋಂದಣಿ ಮತ್ತು ಬೆರಳಚ್ಚು ಪಡೆಯಲು ಕಷ್ಟವಾಗುತ್ತಿದೆ. ಈ ಕುರಿತು ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಮುಂದುವರಿಯಲಾಗುತ್ತದೆ ಎಂದು ತಹಶೀಲ್ದಾರ್ ಅನಂತ ಶಂಕರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.