BJP ಪ್ರತಿಪಾದಿಸುವ ಹಿಂದುತ್ವಕ್ಕಿಂತ ಮಿಗಿಲಾದ ಹಿಂದುತ್ವ ಬೇರೆಲ್ಲೂ ಇಲ್ಲ
Team Udayavani, Apr 28, 2023, 11:10 AM IST
ಪುತ್ತೂರು: ರಾಷ್ಟ್ರೀಯ ವಿಚಾರಧಾರೆಗಳೊಂದಿಗೆ ಬಿಜೆಪಿ ಪಕ್ಷವು ಪ್ರತಿಪಾದಿಸುತ್ತಿರುವ ಹಿಂದುತ್ವಕ್ಕಿಂತ ಮಿಗಿಲಾದ ಹಿಂದುತ್ವ ಬೇರೆಲ್ಲೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಗುರುವಾರ ಆಗಮಿಸಿ ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿದರು.
ಬಿಜೆಪಿ ಹಿಂದುತ್ವದ ಪಕ್ಷ. ಈ ಪಕ್ಷದ ಹಿಂದುತ್ವ ಸರ್ವ ಶ್ರೇಷ್ಠವಾದುದು. ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನಾಯಕರು ಅನುಸರಿಸುತ್ತಿರುವುದು ನಿಜವಾದ ಹಿಂದುತ್ವ. ಆದರೆ ಅಧಿಕಾರದ ಆಸೆಗೋಸ್ಕರ ಹಿಂದುತ್ವದ ಹೆಸರಿನಲ್ಲಿ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವವರದ್ದು ಸ್ವಾರ್ಥದ ಹಿಂದುತ್ವ. ಮೋದಿ, ಶಾ ಹಿಂದುತ್ವದಿಂದ ದೇಶಕ್ಕೆ, ಹಿಂದೂ ಸಮಾಜಕ್ಕೆ ಒಳಿತಾದರೆ, ಪಕ್ಷೇತರರ ಹಿಂದುತ್ವ ಅವರ ಸ್ವ ಉದ್ಧಾರಕ್ಕಾಗಿ ಮಾತ್ರವಾಗಿದೆ. ಮತದಾರರು ಈ ವ್ಯತ್ಯಾಸವನ್ನು ಅರಿತು ಉತ್ತರ ನೀಡುವಷ್ಟು ಪ್ರಬುದ್ಧತೆ ಹೊಂದಿದ್ದಾರೆ ಎಂದು ಡಾ| ಭಟ್ ಹೇಳಿದರು.
ಬಿಜೆಪಿಯ ನಿಜವಾದ ಹಿಂದುತ್ವ ಏನೂ ಅನ್ನುವುದಕ್ಕೆ ಪ್ರವೀಣ್ ನೆಟ್ಟಾರು ಹತ್ಯೆಯ ಅನಂತರ ಪಕ್ಷ ನಡೆದುಕೊಂಡ ರೀತಿಯೇ ಉದಾಹರಣೆ. ಕಾರ್ಯಕರ್ತನ ಹತ್ಯೆ ಮಾಡಿದ ಹಂತಕರನ್ನು ಬಂಧಿಸಲಾಗಿದೆ. ಪ್ರವೀಣ್ ಅವರ ಕನಸಿನಂತೆ ಬಿಜೆಪಿ ಪಕ್ಷ, ಹಿಂದೂ ಸಮಾಜವು ಆ ಕುಟುಂಬಕ್ಕೆ ಆಧಾರವಾಗಿ ನಿಂತಿದೆ. ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡಲಾಗಿದೆ. ಇದು ಬಿಜೆಪಿಯ ನೈಜ ಹಿಂದುತ್ವಕ್ಕೆ ಉದಾಹರಣೆ ಎಂದರು.
ಜಗತ್ತೇ ಬಿಜೆಪಿಯನ್ನು ಹಿಂದುತ್ವ ವಾದಿ ಪಕ್ಷ ಎಂದು ಕರೆದಿದೆ. ಅಂತಹ ಪಕ್ಷದ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗೆ ಹಿಂದುತ್ವ ಎಂತಹದು ಅನ್ನುವುದನ್ನು ಮತದಾರರೇ ಚುನಾವಣೆಯಲ್ಲಿ ತೋರಿಸಿಕೊಡುತ್ತಾರೆ. ಅವರ ಬಗ್ಗೆ ಮಾಹಿತಿ ತಿಳಿಯದೆ ಕಾರ್ಯಕರ್ತರು ಅವರ ಹಿಂದೆ ಓಡಾಡುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಈ ವಿಚಾರ ತಿಳಿಯಲಿದೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ಪಕ್ಷೇತರರಿಂದ ಏನನ್ನು ನಿರೀಕ್ಷಿಸುವುದು ಬೇಡ
ಪಕ್ಷೇತರವಾಗಿ ನಿಂತ ವ್ಯಕ್ತಿಗೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅಂತಹವರಿಂದ ಏನ್ನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರನ್ನು ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಬಿಜೆಪಿ ಪಕ್ಷಕ್ಕೆ ಮತ ನೀಡಿ. ಬಿಜೆಪಿ ಪಕ್ಷವನ್ನು ಬೆಂಬಲಿಸಿದರೆ ಜನರ ನಿರೀಕ್ಷೆ ಈಡೇರಲು ಸಾಧ್ಯವಿದೆ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.