ಈಡೇರದ ಸೇತುವೆ ಕನಸು: ಅಡಿಕೆ ಪಾಲವೇ ಗತಿ!
Team Udayavani, Jun 25, 2019, 5:00 AM IST
ಸುಳ್ಯ: ಹೊಳೆ ದಾಟಲು ಸೇತುವೆ ನಿರ್ಮಿಸಿ ಅಡಿಕೆ ಪಾಲದ ನಡಿಗೆಗೆ ಮುಕ್ತಿ ನೀಡಿ ಎಂಬ ಜನರ 25 ವರ್ಷಗಳ ಕೂಗು ಅಕ್ಷರಶಃ ಹೊಳೆ ಪಾಲಾಗಿದೆ! ಅರಂತೋಡು- ಪಿಂಡಿಮನೆ- ಮಿತ್ತಡ್ಕ ರಸ್ತೆಯ ಅರಮನೆಗಾಯ ಬಳಿ 25ಕ್ಕೂ ಅಧಿಕ ವರ್ಷಗಳಿಂದ ಅಡಿಕೆ ಪಾಲ ಹಾಸಿರುವ ಬಿರುಕು ಬಿಟ್ಟಿರುವ ತೂಗುಸೇತುವೆಯಲ್ಲಿ ನೂರಾರು ಮಂದಿ ಜೀವ ಕೈಯಲ್ಲಿ ಹಿಡಿದು ಹೊಳೆ ದಾಟುತ್ತಿದ್ದರೂ ಆಡಳಿತ ವ್ಯವಸ್ಥೆ ಸ್ಪಂದಿಸುವ ಪ್ರಯತ್ನವನ್ನೇ ಮಾಡಿಲ್ಲ.
ಬಿರುಕುಬಿಟ್ಟ ತೂಗುಸೇತುವೆ
ಅರಂತೋಡು ಗ್ರಾ.ಪಂ. ವ್ಯಾಪ್ತಿಯ ತೂಗು ಸೇತುವೆ ನಿರ್ಮಾಣಗೊಂಡು ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಇಲ್ಲಿ ಅಡಿಕೆ ಮರ ಹಾಸಿ, ಕಬ್ಬಿಣ ರಾಡ್ ಅಳವಡಿಸಿ ಹೊಳೆ ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತದೆ. ಬೇಸಗೆಯಲ್ಲಿ ಹೊಳೆಯೇ ರಸ್ತೆಯಾದರೆ, ಮಳೆಗಾಲದಲ್ಲಿ ಪಾದಚಾರಿ ನಡಿಗೆಗೆ ತೂಗು ಸೇತುವೆಯೇ ಆಧಾರ. ಪ್ರತಿ ಬಾರಿ ಅಡಿಕೆ ಪಾಲ ಗೆದ್ದಲು ಹಿಡಿದಾಗ ಸ್ಥಳೀಯರೇ ಸೇರಿ ಮತ್ತೆ ಜೋಡಿಸುತ್ತಾರೆ. ಈ ಬಾರಿ ಸ್ಥಳೀಯ ಗ್ರಾ.ಪಂ. ನಿರ್ವಹಣ ವೆಚ್ಚವನ್ನು ನೀಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಮೂರು ವರ್ಷಗಳ ಹಿಂದೆ ಜೋಡಣೆ ಸಂದರ್ಭ ಮೂವರು ಆಯತಪ್ಪಿ ಹೊಳೆಗೆ ಬಿದ್ದು, ಕೂದಳಲೆ ಅಂತರದಿಂದ ಪಾರಾಗಿದ್ದರು. ಈಗ ತೂಗು ಸೇತುವೆಯ ಎರಡು ದಿಕ್ಕಿನಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದು, ಕಳಚಿಕೊಳ್ಳುವ ಸ್ಥಿತಿಗೆ ತಲುಪಿವೆ. ಈ ಮಳೆಗಾಲದ ಸಂದರ್ಭ ಹೊಳೆ ದಾಟುವುದು ಕೂಡ ಅಪಾಯಕಾರಿ. ಆದರೆ ಸುತ್ತಾಟದ ಹೊರೆ ತಪ್ಪಿಸಲು ಜೀವ ಕೈಯಲ್ಲಿ ಹಿಡಿದು ಜನರು ಹೊಳೆ ದಾಟುತ್ತಾರೆ.
14 ಕಿ.ಮೀ. ಸುತ್ತಾಡಬೇಕು
ಅರಂತೋಡು ಮತ್ತು ಮರ್ಕಂಜ ವ್ಯಾಪ್ತಿಯ ಗ್ರಾಮವನ್ನು ಈ ತೂಗುಸೇತುವೆ ಬೆಸೆಯುತ್ತದೆ. ಪಿಂಡಿಮನೆ, ಮಾಟೆಕಾಯ, ಅಡ್ತಲೆ, ಬಳ್ಳಕಾನ, ಕುಧ್ಕುಳಿ, ಮಿತಡ್ಕ, ಚಿಮಾಡು ಮೊದಲಾದ ಪ್ರದೇಶಗಳ 100ಕ್ಕೂ ಅಧಿಕ ಮನೆಗಳಿಗೆ ಹತ್ತಿರದ ದಾರಿ ಇದಾಗಿದೆ. ಮಿತ್ತಡ್ಕ ಎಸ್‌ಸಿ ಕಾಲನಿ, ತೇರ್ಥಮಜಲಿನಲ್ಲಿ ಪ್ರೌಢಶಾಲೆ, ಮಿತ್ತಡ್ಕ, ಅಡ್ತಲೆಯಲ್ಲಿ ಪ್ರಾಥಮಿಕ ಶಾಲೆಗೆ ತೆರಳುವ ಮಕ್ಕಳು ಈ ತೂಗುಸೇತುವೆ ಮೂಲಕ ದಾಟಬೇಕು. ಹೊಸ ಸೇತುವೆ ನಿರ್ಮಾಣಗೊಂಡರೆ ಸಂಚಾರದ ದೂರ 6 ಕಿ.ಮೀ. ಆಗುತ್ತದೆ. ಈಗ ಗೋಳಿಯಡ್ಕ-ಮಿತ್ತಡ್ಕ ಮೂಲಕ 14 ಕಿ.ಮೀ. ಸುತ್ತು ಬಳಸಿ ಹೋಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಗ್ರಾ.ಪಂ.ಗೆ ಬರಲು ಹೊಳೆ ದಾಟಬೇಕು!
ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕೆಲ ಕುಟುಂಬಗಳು ಮಿತ್ತಡ್ಕ ಪ್ರದೇಶದಲ್ಲಿವೆ. ಇಲ್ಲಿನವರು ಗ್ರಾ.ಪಂ., ಪಡಿತರ ಸೌಲಭ್ಯಕ್ಕೆ ಅರಂತೋಡಿಗೆ ಬರಬೇಕು. ಮರ್ಕಂಜ ವ್ಯಾಪ್ತಿಗೆ ಸೇರಿದ ಮಿತ್ತಡ್ಕದಲ್ಲಿ ಪಡಿತರ ಅಂಗಡಿ ಇದೆ. ಅಲ್ಲಿಗೆ ಚಿಮಾಡು ಪ್ರದೇಶದ ನಿವಾಸಿಗಳು ಹೋಗಿ ಪಡಿತರ ಸಾಮಗ್ರಿ ತರಬೇಕು. ಈ ಎರಡು ಪ್ರದೇಶದವರು ಹೊಳೆ ದಾಟಿಯೇ ಹೋಗಬೇಕು. ಇಲ್ಲದಿದ್ದರೆ, ಸುತ್ತಾಟದ ರಸ್ತೆ ಕ್ರಮಿಸಬೇಕು. ಹಾಗಾಗಿ ಇಲ್ಲಿ 100 ರೂ. ಸಾಮಗ್ರಿ ಪಡೆದುಕೊಳ್ಳಲು, 200 ರೂ.ಗಲಿಗೂ ಮಿಕ್ಕಿ ಖರ್ಚು ಮಾಡಬೇಕು ಎನ್ನುತ್ತಾರೆ ಸ್ಥಳೀಯರು.
ಸೇತುವೆ ಬೇಡಿಕೆಗೆ ಬೆಳ್ಳಿ ಹಬ್ಬ!
ಸೇತುವೆ ಬೇಕು ಎಂಬ ಬೇಡಿಕೆಗೆ 25 ವರ್ಷಗಳು ಕಳೆದಿವೆ. ಐದು ವರ್ಷಗಳ ಹಿಂದೆ ಜಿ.ಪಂ. ಎಂಜಿನಿಯರ್ ಸೇತುವೆ ಬೇಡಿಕೆ ಇರುವ ಸ್ಥಳ ಪರಿಶೀಲಿಸಿ, ಹೊಸ ಸೇತುವೆ ನಿರ್ಮಾಣದ ಕುರಿತು ಭರವಸೆ ನೀಡಿದ್ದರು. ಭರವಸೆ ನೀಡಿದ ಅಧಿಕಾರಿ ಮರಳಿ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು. 2011ರಲ್ಲಿ ಶಾಶ್ವತ ಸೇತುವೆ ನಿರ್ಮಿಸಿ ಎಂದು ಅರಂತೋಡು ಗ್ರಾ.ಪಂ. ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೂ ಸ್ಪಂದನೆ ಸಿಕ್ಕಿಲ್ಲ.
ಪ್ರಸ್ತಾವನೆ ಸಲ್ಲಿಸಲಾಗಿದೆ
ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಜಿ.ಪಂ. ಎಂಜಿನಿಯರಿಂಗ್ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿದೆ. ಅನುದಾನ ಮಂಜೂರುಗೊಳ್ಳಬೇಕಿದೆ. ಅಲ್ಲಿ ವೆಂಟೆಡ್ ಡ್ಯಾಂ ಸಹಿತ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, 75 ಲಕ್ಷ ರೂ. ಅನುದಾನದ ಅಗತ್ಯವಿದೆ.
– ಹನುಮಂತರಾಯಪ್ಪ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸುಳ್ಯ
ತೂಗುಸೇತುವೆ ಶಿಥಿಲ
ಹಲವು ವರ್ಷಗಳಿಂದ ತೂಗು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಪಿಂಡಿಮನೆ- ಅರಮನೆಗಾಯ- ಮಿತ್ತಡ್ಕ ಸಂಪರ್ಕ ರಸ್ತೆ ಕೂಡ ತೀರಾ ಹದಗೆಟ್ಟಿದೆ. 6 ಕಿ.ಮೀ. ದೂರವನ್ನು 14 ಕಿ.ಮೀ. ಸುತ್ತಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ.
– ತೇಜಕುಮಾರ್ ಎಂ.ಕೆ. ,ಅರಮನೆಗಾಯ ನಿವಾಸಿ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.