‘ವಾಹನ ಚಾಲಕರ ಸೇವಾ ಮನೋಭಾವ ಅಭಿನಂದನಾರ್ಹ’
Team Udayavani, Aug 5, 2018, 4:09 PM IST
ಉಪ್ಪಿನಂಗಡಿ : ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ ಚಾಲಕರು ಕಾಯಕವನ್ನು ಸೇವಾ ಮನೋಭಾವದಡಿ ನಿರ್ವಹಿಸುತ್ತಿರುವುದು ಸಂತಸದ ವಿಚಾರ. ರಸ್ತೆ ಸುರಕ್ಷತಾ ನಿಯಮಾವಳಿಗಳ ಸಮರ್ಪಕ ಪಾಲನೆಯೊಂದಿಗೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಇಲ್ಲಿನ ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಉಪ್ಪಿನಂಗಡಿ ಶಾಲಾ ಮಕ್ಕಳ ವಾಹನಗಳ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ ಚಾಲಕರ ಹಾಗೂ ಹೆತ್ತವರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮೂರು-ನಾಲ್ಕು ವರ್ಷದ ಎಳೆಯ ಮಕ್ಕಳಿಂದ ಹಿಡಿದು ಪ್ರೌಢ ವಿದ್ಯಾರ್ಥಿಗಳನ್ನು ಕರೆ ತರುವ ಮತ್ತು ಹಿಂದಕ್ಕೆ ಕರೆದೊಯ್ಯುವ ವಾಹನ ಚಾಲಕರ ತಾಳ್ಮೆ, ಸಹನೆ ಶ್ಲಾಘನೀಯವಾಗಿದೆ. ಆದಾಗ್ಯೂ ಒಂದಿಬ್ಬರು ಚಾಲಕರ ತಪ್ಪು ನಡೆಯಿಂದಾಗಿ ಇಡೀ ಚಾಲಕ ಸಮೂಹಕ್ಕೆ ಕೆಟ್ಟ ಹೆಸರು ಮೂಡುತ್ತಿದೆ. ಜಾಗೃತಿ ಸಮಾವೇಶದಂತಹ ಕಾರ್ಯಕ್ರಮಗಳಿಂದ ನಿಯಮ ಮೀರಿ ನಡೆವ ಚಾಲಕರನ್ನು ಸರಿದಾರಿಗೆ ತರಲು ಸಹಕಾರಿಯಾಗುತ್ತದೆ ಎಂದರು.
ಸುರಕ್ಷಾ ನಿಯಮ ಪಾಲಿಸಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಮಾತನಾಡಿ, ದೇವರ ಅಮೂಲ್ಯ ರತ್ನಗಳನ್ನು ತಾವು ಕರೆಯೊಯ್ಯುವ ಕಾಯಕದಲ್ಲಿ ತೊಡಗಿದ್ದೇವೆ ಎಂಬ ಅರಿವು ಚಾಲಕರಲ್ಲಿ ಇರಬೇಕು. ಚಾಲನೆಯ ವೇಳೆ ಮೊಬೈಲ್ ಸಂಭಾಷಣೆ, ರಣವೇಗದ ಚಾಲನೆ, ಸುರಕ್ಷಾ ನಿಯಮಗಳ ಕಡೆಗಣಿಸುವಿಕೆ, ವಾಹನಗಳ ಸುಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಇದೆಲ್ಲವೂ ಅನಾಹುತಗಳಿಗೆ ಕಾರಣವಾಗುತ್ತದೆ. ತಮ್ಮ ವಾಹನದಲ್ಲಿರುವ ಮಕ್ಕಳು ನಮ್ಮ ಮಕ್ಕಳೆಂಬ ಭಾವನೆಯಿಂದ ವಾಹನ ಚಲಾಯಿಸಿದರೆ ಸಮಸ್ಯೆ ಮೂಡದು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್, ಸಕಾಲಕ್ಕೆ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಹೆತ್ತವರು ವಹಿಸುವುದರೊಂದಿಗೆ ಚಾಲಕರ ಬಗ್ಗೆಯೂ ನಿಗಾ ಇರಿಸುವ ಕೆಲಸವಾಗಬೇಕು. ರಾ.ಹೆ. 75ರಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಬೆಳಗ್ಗೆ ಹಾಗೂ ಸಾಯಂಕಾಲ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚರ್ಚ್ ಶಾಲಾ ಹತ್ತಿರ ಪೊಲೀಸ್ ಸಿಬಂದಿ ನೇಮಿಸಬೇಕು ಎಂದು ಮನವಿ ಸಲ್ಲಿಸಿದರು.
ಉಪ್ಪಿನಂಗಡಿ ಶ್ರೀರಾಮ ವಿದ್ಯಾಲಯದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯಂತ ಪುರೋಳಿ, ಸಾಮಾಜಿಕ ಮುಂದಾಳು ಕೈಲಾರ್ ರಾಜಗೋಪಾಲ ಭಟ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉದ್ಯಮಿ ಯು. ರಾಮ, ಎನ್. ಉಮೇಶ್ ಶೆಣೈ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ದಯಾನಂದ ವಂದಿಸಿದರು. ಮೋಹನ್ ಪಕಳ ಪ್ರಸ್ತಾವಿಸಿ, ನಿರೂಪಿಸಿದರು.
ದಾಖಲೆ ಅಗತ್ಯ
ಪುತ್ತೂರು ಟ್ರಾಫಿಕ್ ಠಾಣಾ ಎಸ್‌ಐ ನಾರಾಯಣ ರೈ ಮಾತನಾಡಿ, ವಾಹನಗಳ ದಾಖಲೆ ಸಮರ್ಪಕವಾಗಿರಬೇಕು, ವಿಮಾ ಕಂತು ಕಾಲಕಾಲಕ್ಕೆ ಪಾವತಿಸಿರಬೇಕು, ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು, ವಾಹನಗಳ ಸುಸ್ಥಿತಿಯನ್ನು ಖಾತರಿಪಡಿಸುತ್ತಿರಬೇಕು, ಸುರಕ್ಷಾ ನೆಲೆಯಲ್ಲಿ ವಾಹನಗಳ ವೇಗದ ಮಿತಿಯನ್ನು ಪಾಲಿಸಬೇಕೆಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.