ಚರಂಡಿ ಇಲ್ಲದೆ ಮಳೆ ನೀರಿಗೆ ಕೊಚ್ಚಿಹೋದ ಡಾಮರು ರಸ್ತೆ
Team Udayavani, Jul 14, 2019, 5:00 AM IST
ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರುಮಲೆ-ಕೌಡಿಚ್ಚಾರು ರಸ್ತೆ ದುರಸ್ತಿ ಹಾಗೂ ಡಾಮರು ಕಾಮಗಾರಿ 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಆದರೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆಯೇ ಹರಿದು ಒಂದೇ ತಿಂಗಳಲ್ಲಿ ಡಾಮರು ಕಿತ್ತು ಹೋಗಿದೆ ಎಂದು ಗ್ರಾಮಸಭೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ದೇವಿನಗರದ ಅಂಬೇಡ್ಕರ್ ಭವನದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್‌ನ ಪ್ರಸ್ತುತ ಸಾಲಿನ ಪ್ರಥಮ ಗ್ರಾಮಸಭೆ ಆಯೋಜಿಸಲಾಗಿತ್ತು. ಮಾರ್ಗದರ್ಶಿ ಅಧಿಕಾರಿಯಾಗಿ ಡಾ| ಪ್ರಕಾಶ್ ಭಾಗವಹಿಸಿದ್ದರು. ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ. ನೇತೃತ್ವ ವಹಿಸಿದ್ದರು.
ಗುತ್ತಿಗೆದಾರರು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮಳೆಯ ನೀರು ರಸ್ತೆಯಲ್ಲಿಯೆ ಹರಿದು ಡಾಮರು ಕಿತ್ತು ಹೋಗಿದೆ. ರಸ್ತೆಯನ್ನು ಯೋಗೀಶ್ ಪೂಜಾರಿ ನಿರ್ವಹಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು. ಉತ್ತರಿಸಿದ ಜಿ.ಪಂ. ಸಹಾಯಕ ಎಂಜಿನಿಯರ್ ಶ್ರುತಿ, ಈ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥ ಜಯಂತ ಪೂಜಾರಿ ಕೆಂಗುಡೇಲು, ಮುಂದಿನ ಗ್ರಾಮಸಭೆಯೊಳಗೆ ಸರಿಪಡಿಸಿ ಎಂದರು.
ಮೊಬೈಲ್ ಕೊಡಬೇಡಿ
ಸ್ಮಾರ್ಟ್ ಫೋನ್ ಬಳಕೆಯಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ಗಳನ್ನು ಕೊಡಬೇಡಿ. ಅಪರಿಚಿತರು ಯಾರೇ ಕಂಡುಬಂದರೂ ಮಾಹಿತಿ ನೀಡಿ ಎಂದು ಕೆಯ್ಯೂರು ಬೀಟ್ ಪೊಲೀಸ್ ಅಧಿಕಾರಿ ವಿನಯಕುಮಾರ್ ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಗೆ ಪತ್ರ: ತೀರ್ಮಾನ
ಕುಂಬ್ರ, ಬೆಳ್ಳಾರೆ ಮುಖ್ಯ ರಸ್ತೆಯಲ್ಲಿಯೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಎಂದು ದಂಬೆಕಾನ ಸದಾಶಿವ ರೈ ಹೇಳಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಪತ್ರ ಬರೆಯುವುದೆಂದು ನಿರ್ಣಯಿಸಲಾಯಿತು.
ಕುಂಬ್ರ ಜೆ.ಇ.ಗೆ ಅಭಿನಂದನೆ
ಕಣಿಯಾರು ಕಾಲನಿಯ 21 ಮನೆಗಳಿಗೆ ಮತ್ತು ಅರಿಕ್ಕಿಲದ 31 ಮನೆಗಳಿಗೆ ಪ್ರತ್ಯೇಕ ಟಿ.ಸಿ. ಒದಗಿಸಿ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ಕುಂಬ್ರ ಜೆಇ ನಿತ್ಯಾನಂದ ತೆಂಡೂಲ್ಕರ್ ಅವರಿಗೆ ಗ್ರಾ.ಪಂ. ಸದಸ್ಯರಾದ ಕಿಟ್ಟ ಅಜಿಲ ಕಣಿಯಾರು, ಹನೀಪ್ ಕೆ.ಎಂ. ಅಭಿನಂದನೆ ಸಲ್ಲಿಸಿದರು.
ಅಪಾಯಕಾರಿ ಮರ ತೆರವುಗೊಳಿಸಿ
ಕೆಯ್ಯೂರು ಗ್ರಾಮದ ಬೊಳಿಕಲ ಪರಿಸರದಲ್ಲಿ ವಿದ್ಯುತ್ ತಂತಿಗಳಿಗೆ ತಾಗಿ ಕೊಂಡು ಹಲವು ಮರ ಗಳಿವೆ. ಅವುಗಳನ್ನು ಶೀಘ್ರ ಕಡಿಯುವಂತೆ ಶೇಖರ್ ಬೊಳಿಕಲ ಅವರು ಪ್ರಸ್ತಾವಿಸಿದರು. ಕೆಯ್ಯೂರು ದೇವಿನಗರ ದ್ವಾರದ ಸಮೀಪ ಅಳವ ಡಿಸಲಾದ ಹಂಪ್ ಗಮನಿಸದೆ ಕೆಲವು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ಹೀಗಾಗಿ ಅದನ್ನು ತೆಗೆದು ಚಿಕ್ಕ ಹಂಪ್ ಅಳವಡಿಸಬೇಕು ಎಂದು ಜಯಂತ ಪೂಜಾರಿ ಹೇಳಿದರು.
ಪ್ಲಾಟಿಂಗ್ ಆಗ್ತಾ ಇಲ್ಲ
ಕೆಲವು ತಿಂಗಳಿಂದ ಜಾಗದ ಪ್ಲಾಟಿಂಗ್ ಆಗ್ತಾ ಇಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ. ಪ್ಲಾಟಿಂಗ್ ಆಗದೆ ಕನ್ವರ್ಷನ್ ಮಾಡಲು ಆಗುವುದಿಲ್ಲ ಎಂದು ಸುಬ್ರಹ್ಮಣ್ಯ ಮಠ ಬೊಳಿಕಲ ಹೇಳಿದರು. ಪಂಚಾಯತ್ ದಾರಿಗಳನ್ನು ಗುರುತು ಮಾಡಿ ಎಂದು ಕೃಷ್ಣಪ್ಪ ಪೂಜಾರಿ ಕಣಿಯಾರೋಡಿ ಆಗ್ರಹಿಸಿದರು. ಈ ಬಗ್ಗೆ ಸರ್ವೆ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಕೆಯ್ಯೂರು, ಸದಸ್ಯರಾದ ಮೋಹನ್ ರೈ ಬೇರಿಕೆ, ಅಬ್ದುಲ್ ಖಾದರ್ ಮೇರ್ಲ, ಕಿಟ್ಟ ಅಜಿಲ ಕಣಿಯಾರು, ಹನೀಫ್ ಕೆ.ಎಂ., ಸುಮಿತ್ರಾ ಪಲ್ಲತ್ತಡ್ಕ, ರಾಧಿಕಾ ಮಾಡಾವು, ಲಾವಣ್ಯಾ ರೈ, ವಿಮಲಾ ದೇರ್ಲ, ಗೀತಾ ಕಣಿಯಾರು, ಪದ್ಮಾವತಿ ಪಳ್ಳತ್ತಡ್ಕ, ಅಮಿತಾ ಎಚ್.ರೈ ಉಪಸ್ಥಿತರಿದ್ದರು. ಗ್ರಾ.ಪಂ. ಸಿಬಂದಿ ಶಿವ ಪ್ರಸಾದ್ ವರದಿ ಮಂಡಿಸಿ, ಸುಬ್ರಹ್ಮಣ್ಯ ಕೆ.ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಸುರೇಂದ್ರ ರೈ ಇಳಾಂತಜೆ ವಂದಿಸಿದರು. ಗ್ರಾ.ಪಂ. ಸಿಬಂದಿ ರಾಕೇಶ್ ಬೊಳಿಕಲ, ದರ್ಮಣ್ಣ, ಜ್ಯೋತಿ, ಮಾಲತಿ ಮತ್ತಿತರರು ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.