ಕುಸಿಯುತ್ತಿರುವ ಧರೆಯಿಂದ ಕಟ್ಟಡಕ್ಕೆ ಆಪತ್ತು
ಕೊಂಬೆಟ್ಟು ಸರಕಾರಿ ಪ್ರೌಢಶಾಲೆ, ಪ.ಪೂ. ಕಾಲೇಜು
Team Udayavani, Jun 27, 2023, 3:17 PM IST
ಪುತ್ತೂರು: ತಾಲೂಕಿನಲ್ಲೇ ಗರಿಷ್ಠ ವಿದ್ಯಾರ್ಥಿಗಳಿರುವ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ, ಪ.ಪೂ. ಕಾಲೇಜು ಕಟ್ಟಡಕ್ಕೆ ಅಂಟಿಕೊಂಡಿರುವ ಮೈದಾನದ ಧರೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ವಿದ್ಯಾರ್ಥಿಗಳ ಸುರಕ್ಷೆಗೆ ಆತಂಕ ಮೂಡಿಸಿದೆ.
ಕಳೆದ ಕೆಲವು ವರ್ಷಗಳಿಂದ ಕುಸಿತ ಉಂಟಾಗುತ್ತಿದೆ. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸರಕಾರಿ ವಿದ್ಯಾಸಂಸ್ಥೆ ಇದಾಗಿದ್ದರೂ ಇಲ್ಲಿನ ಗಂಭೀರ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಗಳು ನಿರ್ಲಕ್ಷ್ಯದ ಧೋರಣೆ ತಳೆದಿದ್ದು ಪೋಷಕರು ಮಕ್ಕಳ ಸುರಕ್ಷೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೈದಾನಕ್ಕೆ ದಾರಿ
ಆರಂಭದಲ್ಲಿ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಅಧೀನದಲ್ಲಿದ್ದ ಪ್ರಸ್ತುತ ಯುವಜನ ಸೇವಾ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಕ್ರೀಡಾಂಗಣದ ಉತ್ತರ ದಿಕ್ಕಿನಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಮತ್ತು ಪ್ರೌಢಶಾಲೆ ಇದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಈ ಕ್ರೀಡಾಂಣಗವೇ ಅಭ್ಯಾಸದ ನೆಲೆ. ಎಲ್ಲ ವಿದ್ಯಾರ್ಥಿಗಳೂ ಧರೆಯ ಹಾದಿಯಲ್ಲೇ ಮೈದಾನ ಸೇರುತ್ತಾರೆ. ಕೊಂಬೆಟ್ಟು ಗುಡ್ಡದ ಮೇಲ್ಭಾಗ ದಲ್ಲಿ ಶಾಲಾ ಕಟ್ಟಡವಿದ್ದರೆ, ಕೆಳಭಾಗ ದಲ್ಲಿ ಮೈದಾನವಿದೆ. ಧರೆಯ ನಡುವಿನ ದುರ್ಗಮ ಹಾದಿಯೇ ಇವೆರಡರ ಸಂಪರ್ಕ ಕೊಂಡಿಯಾಗಿದ್ದು ಇದೇ ಧರೆ. ಅದು ಅಪಾಯದ ಸ್ಥಿತಿಯಲ್ಲಿದೆ.
ಅವೈಜ್ಞಾನಿಕ ಕಾಮಗಾರಿ
ಈ ಹಿಂದೆ ಮೈದಾನದ ವಿಸ್ತರಣೆಯ ಹೇಳಿಕೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ಮಳೆಗಾಲದಲ್ಲಿ ಧರೆ ಕುಸಿಯಲು ಕಾರಣ ಅನ್ನುವ ಆರೋಪ ವ್ಯಕ್ತವಾಗಿದೆ. ಶಾಲಾ ಆವರಣದ ಮೇಲ್ಭಾಗ ದಿಂದ ಮಳೆ ನೀರು ಮೈದಾನಕ್ಕೆ ಹರಿದು ಕಣಿ ಸೃಷ್ಟಿಯಾಗಿದ್ದು ಅದನ್ನೇ ಮೈದಾನಕ್ಕೆ ಇಳಿಯಲು, ಏರಲು ದಾರಿಯಾಗಿ ಬಳಸಲಾಗುತ್ತಿದೆ. ಮೈದಾನದ ಮೇಲ್ಭಾಗ ದಲ್ಲಿ ಪ.ಪೂ.ಕಾಲೇಜು ಕಟ್ಟಡ ಇದ್ದು ಅಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಪ್ರಸ್ತುತ ಮಣ್ಣು ಶಿಥಿಲಗೊಂಡು ವರ್ಷಂಪ್ರತಿ ಧರೆ ಕುಸಿಯುವ ಜತೆಗೆ ಈ ಬಾರಿ ತಡೆಗೋ ಡೆಯೇ ಬಿದ್ದಿದೆ. ಪರಿಸ್ಥಿತಿ ಇದೇ ತೆರನಾಗಿ ಸಾಗಿದರೆ ಕಟ್ಟಡವು ಧರೆಗುರುಳುವ ಎಲ್ಲ ಸಾಧ್ಯತೆ ಇದೆ ಅನ್ನುತ್ತಿದೆ ಚಿತ್ರಣ.
ಶತಮಾನ ಶಾಲೆಯ ಹಿರಿಮೆ
1916ರ ಮೊದಲು ಈ ಭಾಗದ ಜನತೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಪಟ್ಟಣಗಳನ್ನು ಆಶ್ರಯಿಸಿದ್ದ ಸಂದರ್ಭದಲ್ಲಿ ಪುತ್ತೂರು ವಿದ್ಯಾವರ್ಧಕ ಸಂಘವು ಸ್ಥಾಪಿಸಿದ ಶಾಲೆ ಇದು.
ಪೇಟೆಯ ಬಾಡಿಗೆ ಕಟ್ಟಡದಲ್ಲಿ ಜನ್ಮ ತಾಳಿ 1918-19ರಲ್ಲಿ ಕೊಂಬೆಟ್ಟು ಗುಡ್ಡದ ಮೇಲಿನ ಕಟ್ಟಡಕ್ಕೆ ಇದು ಸ್ಥಳಾಂತರಗೊಂಡಿತ್ತು. ಆರಂಭದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ 1921 -22ರಲ್ಲಿ ದ.ಕ. ಜಿಲ್ಲಾ ಬೋರ್ಡಿಗೆ ಹಸ್ತಾಂತರವಾಗಿ ಪುತ್ತೂರು ಬೋರ್ಡ್ ಹೈಸ್ಕೂಲ್ ಎಂದು ಪರಿವರ್ತನೆಗೊಂಡಿತು. 1964-65ರಲ್ಲಿ 11ನೇ ತರಗತಿ ಆರಂಭ ವಾದಾಗ ಹೈಯರ್ ಸೆಕೆಂಡರಿ ಹಾಗೂ 1972ರಲ್ಲಿ 12ನೇ ತರಗತಿ ಆರಂಭ ವಾದಾಗ ಜೂನಿಯರ್ ಕಾಲೇಜು ಆಗಿ ಪರಿವರ್ತ ನೆಗೊಂಡಿತು. 1975ರಲ್ಲಿ ಸರಕಾರಕ್ಕೆ ವಹಿಸಿಕೊಡುವ ತನಕ ಬೋರ್ಡಿನ ಅಧೀನದಲ್ಲೇ ಇದ್ದ ಹಿನ್ನೆಲೆಯಲ್ಲಿ ಬೋರ್ಡ್ ಹೈಸ್ಕೂಲ್ ಹೆಸರಿನಲ್ಲೇ ಈ ಶಾಲೆ ಪ್ರಖ್ಯಾತವಾಯಿತು.
ಬರೆಯ ನಡುವಿನ ದಾರಿಯಲ್ಲಿ ವಿದ್ಯಾ ರ್ಥಿಗಳು ಮೈದಾನಕ್ಕೆ ಇಳಿಯುವುದು ಸುರಕ್ಷಿತವಲ್ಲ. ಇಲ್ಲಿ ಸಂಚರಿಸದಂತೆ ಯುವಜನ ಇಲಾಖೆಯು ಶಾಲಾ ಗಮನಕ್ಕೆ ತಂದಿದೆ. ಕಟ್ಟಡ ಬಳಿಯಿಂದ ಸಂಪರ್ಕ ರಸ್ತೆಗೆ ಸಂಚಾರವನ್ನು ಶಾಲಾ ವತಿಯಿಂದ ನಿರ್ಬಂಧಿಸಲಾಗಿದೆ. ಆದರೆ ಮಕ್ಕಳು ಇಳಿಯದಂತೆ ತಡೆಯಬಹುದು. ಧರೆ ಸನಿಹದಲ್ಲಿರುವ ಕಟ್ಟಡ ಕುಸಿಯದಂತೆ ತಡೆಯಲು ಸಾಧ್ಯವಿಲ್ಲ. ಧರೆ ಕುಸಿಯದಂತೆ ತಡೆಗೋಡೆ ಸಹಿತ ಮೈದಾನದ ವಿವಿಧ ಕಾಮಗಾರಿಗೆ 2 ಕೋ.ರೂ. ಕ್ರಿಯಾಯೋಜನೆ ತಯಾರಿಸಿ ನಿರ್ಮಿತಿ ಕೇಂದ್ರಕ್ಕೆ ಕಳುಹಿಸಿ ಮೂರು ವರ್ಷ ಕಳೆದರೂ ಸ್ಪಂದನೆ ಸಿಕ್ಕಿಲ್ಲ.
ಕುಸಿತ ಆರಂಭ
ಮಳೆಗಾಲ ಇನ್ನೂ ಬಿರುಸು ಪಡೆದಿಲ್ಲ. ಸಣ್ಣ ಮಳೆಗೆ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎದುರಿನ ಆವರಣ ಗೋಡೆ ಕುಸಿತಗೊಂಡಿದೆ. ಶಾಲಾ ಮೈದಾನದ ಬಳಿ ಧರೆಗೆ ಮೇಲಿಂದ ನಿರ್ಮಿಸಲಾದ ಆವರಣ ಗೋಡೆ ಇದಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಸುರಕ್ಷಾ ಬೇಲಿ ಅಳವಡಿಸಿ ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಆದರೆ ಈ ಸ್ಥಳದಲ್ಲಿ ಇನ್ನಷ್ಟು ಕುಸಿತ ಉಂಟಾಗುವ ಸಾಧ್ಯತೆ ಕಂಡು ಬಂದಿದೆ.
ಅವೈಜ್ಞಾನಿಕ ಕೆಲಸದಿಂದ ಕಟ್ಟಡಕ್ಕೆ ಆಪತ್ತು
ಧರೆ ಕುಸಿತಕ್ಕೆ ಮುಖ್ಯ ಕಾರಣ ಈ ಹಿಂದೆ ಮೈದಾನ ವಿಸ್ತರಣೆ ನೆಪದಲ್ಲಿ ಮಾಡಲಾದ ಕಾಮಗಾರಿ. ಅದರ ಪರಿಣಾಮ ಸರಕಾರಿ ಪ.ಪೂ.ಕಟ್ಟಡಕ್ಕೆ ಅಪಾಯ ಉಂಟಾಗಿದೆ. ಸದ್ಯಕ್ಕೆ ಸುರಕ್ಷಾ ಬೇಲಿ ಅಳವಡಿಸಲಾಗಿದೆ. ಆದರೆ ತಡೆಗೋಡೆ ನಿರ್ಮಿಸದೆ ಇದ್ದರೆ ಅನಾಹುತ ಉಂಟಾಗುವ ಭೀತಿ ಇದೆ. ವರ್ಷಗಳ ಹಿಂದೆಯೇ ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದರೂ ಇನ್ನೂ ಬಂದಿಲ್ಲ.
-ಪಿ.ಜಿ.ಜಗನ್ನಿವಾಸ ರಾವ್, ಸ್ಥಳೀಯ ನಗರಸಭಾ ಸದಸ್ಯ,ಹಾಗೂ ಪ್ರೌಢ ಮತ್ತು ಕಾಲೇಜು ಸಮಿತಿ ಕಾರ್ಯಾಧ್ಯಕ್ಷ
ಪ್ರಮುಖ ಕ್ರೀಡಾಂಗಣ
ತಾಲೂಕು ಕ್ರೀಡಾಂಗಣವಾಗಿರುವ ಕಾರಣ ತಾಲೂಕು ಮಟ್ಟದ ಕ್ರೀಡಾ ಕೂಟಗಳು, ನಾನಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಕ್ರೀಡಾ ಕೂಟಗಳು, ತಾಲೂಕು ಮಟ್ಟದ ಗಣರಾಜ್ಯೋತ್ಸವ ಇತ್ಯಾದಿಗಳು ಇಲ್ಲೇ ನಡೆಯುತ್ತವೆ. ದಕ್ಷಿಣ ದಿಕ್ಕಿನಲ್ಲಿ ಮಹಾಲಿಂಗೇಶ್ವರ ಐಟಿಐ ಸಂಸ್ಥೆ, ಪಶ್ಚಿಮ ದಿಕ್ಕಿನಲ್ಲಿ ವಿದ್ಯಾರ್ಥಿ ನಿಲಯ, ನೈರುತ್ಯ ದಿಕ್ಕಿನಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇದೇ ಮೈದಾನ ಆಸರೆ. ಹೀಗಾಗಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮೈದಾನದಲ್ಲಿ ಅಭ್ಯಾಸಕ್ಕೆ ಬರುತ್ತಾರೆ. ಅಸುರಕ್ಷೆಯ ಧರೆಯಿಂದ ಈ ಕ್ರೀಡಾಂಗಣವೀಗ ಅಪಾಯಕಾರಿ ಎನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.