Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ
ಶೂನ್ಯ ಬಡ್ಡಿ ದರ ಸಾಲ ಮಿತಿ ಹೆಚ್ಚಳ ಆದೇಶ ಹೊರಟು 14 ತಿಂಗಳಾದರೂ ಕೃಷಿಕರಿಗಿಲ್ಲ ಸೌಲಭ್ಯ
Team Udayavani, Nov 17, 2024, 6:16 AM IST
ಪುತ್ತೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿಯ ಕೃಷಿ ಸಾಲ ಹಾಗೂ ಶೇ. 3 ಬಡ್ಡಿ ದರದ ಸಾಲ ಮಿತಿ ಹೆಚ್ಚಿಸಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿ 14 ತಿಂಗಳು ಸಮೀಪಿಸಿದ್ದರೂ ಮಿತಿ ಹೆಚ್ಚಳದ ಪ್ರಯೋಜನ ಕೃಷಿಕರಿಗೆ ಸಿಕ್ಕಿಲ್ಲ. ಕೆಲವು ಸೊಸೈಟಿಗಳು ಸಾಲ ನೀಡಬೇಕಾದ ನಿಧಿ ಸರಕಾರದಿಂದ ಬಿಡುಗಡೆಯಾಗುತ್ತದೆ ಎಂಬ ವಿಶ್ವಾಸದಿಂದ ಶೂನ್ಯ ಬಡ್ಡಿ ಹೆಸರಿನಲ್ಲಿ ಹೆಚ್ಚುವರಿ 2 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದ್ದರೂ ನಿಧಿ ಬಾರದೆ ಆ ಮೊತ್ತಕ್ಕೆ ಬಡ್ಡಿ ಕಟ್ಟುವಂತೆ ಕೃಷಿಕರಿಗೆ ಸೂಚನೆ ನೀಡುತ್ತಿವೆ.
ಸರಕಾರದ ಆದೇಶದ ಬಳಿಕ ಪ್ರಾ.ಕೃ.ಪ.ಸ. ಸಂಘಗಳಲ್ಲಿ ಕೃಷಿಕರು ಮಿತಿ ಹೆಚ್ಚಳ ಸಾಲದ ಬಗ್ಗೆ ವಿಚಾರಿಸುತ್ತಿದ್ದರೂ ಬಹು ತೇಕ ಕಡೆ ಇಲ್ಲ ಎನ್ನಲಾಗುತ್ತಿದೆ. ಸರಕಾರ ಆದೇಶ ನೀಡಿದೆ ವಿನಾ ಅನುದಾನ ನೀಡಿಲ್ಲ ಅನ್ನುವ ಉತ್ತರ ಲಭಿಸಿದೆ.
ಬಡ್ಡಿ ಕಟ್ಟಲು ಸೂಚನೆ
ಕೆಲವು ಸೊಸೈಟಿಗಳು ಶೂನ್ಯ ಬಡ್ಡಿ ದರದಲ್ಲಿ ಹೆಚ್ಚುವರಿ 2 ಲಕ್ಷ ರೂ. ಸಾಲ ರೂಪದಲ್ಲಿ ನೀಡಿದ್ದು, ಇದಕ್ಕೆ ತಮ್ಮ ಸ್ವಂತ ನಿಧಿಯನ್ನು ಬಳಸಿಕೊಂಡಿದ್ದವು. ಸಾಲ ಮರುಪಾವತಿಗೆ ಒಂದು ವರ್ಷ ಅವಧಿ ಇದ್ದು, ಅದಕ್ಕಿಂತ ಮೊದಲು ಸಾಲ ನೀಡಲು ಬೇಕಾದ ನಿಧಿ ಸರಕಾರದಿಂದ ಬಿಡುಗಡೆಗೊಳ್ಳಬಹುದು ಎನ್ನುವ ನಂಬಿಕೆಯಿಂದ ಸಾಲ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಈಗ ನಿಧಿ ಬಾರದ ಕಾರಣ ಹೆಚ್ಚುವರಿ ಸಾಲಕ್ಕೆ ಬಡ್ಡಿ ಪಾವತಿ ಮಾಡುವಂತೆ ಆ ಸೊಸೈಟಿಗಳು ಕೃಷಿಕರಿಗೆ ಸೂಚನೆ ನೀಡುತ್ತಿವೆ. ಬಡ್ಡಿ ಕಟ್ಟುವುದಕ್ಕೆ ಕೃಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಶೂನ್ಯ ಬಡ್ಡಿ ಹೆಸರಿನಲ್ಲಿ ಸಾಲ ನೀಡಿ ಬಡ್ಡಿ ವಸೂಲಿ ಸರಿಯಲ್ಲ ಎನ್ನುತ್ತಿದ್ದಾರೆ. ಹೀಗೆ ಸರಕಾರವನ್ನು ನಂಬಿದ ಸೊಸೈಟಿಗಳು, ಸೊಸೈಟಿಗಳ ನೀಡಿದ ಸಾಲ ಶೂನ್ಯ ಬಡ್ಡಿಯದು ಎಂದು ನಂಬಿದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
5 ಲಕ್ಷ ರೂ.ಗಳಿಗೆ ಏರಿಕೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ತನಕ ಸಾಲ ನೀಡಲಾಗುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರ ಸಾಲವನ್ನು 5 ಲಕ್ಷ ರೂ.ಗಳಿಗೆ, ಶೇ. 3 ಬಡ್ಡಿ ದರದ ಸಾಲವನ್ನು 10ರಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸುವ ಭರವಸೆ ನೀಡಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಸರಕಾರ 2023ರ ಸೆ. 9ರಂದು ಈ ಎರಡು ಸಾಲಗಳ ಮಿತಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿತ್ತು.
ಬಾರದ ನಿಧಿ
ಈ ಆದೇಶದಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಂದ ಪ್ರಾ.ಕೃ.ಪ.ಸ. ಸಂಘಗಳಿಗೆ ಸುತ್ತೋಲೆ ರವಾನಿಸಲಾಗಿತ್ತು. ಸರಕಾರದ ಆದೇಶದಂತೆ ಶೂನ್ಯ ಬಡ್ಡಿ ದರ ಮತ್ತು ಶೇ. 3 ಬಡ್ಡಿ ದರದ ಪರಿಷ್ಕೃತ ಸಾಲ ವಿತರಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು. ಇದನ್ನು ನಂಬಿ ನೂರಾರು ಕೃಷಿಕರು ಪದೇ ಪದೆ ಸಾಲದ ಬಗ್ಗೆ ವಿಚಾರಿಸುತ್ತಿದ್ದಾರೆ. ಆದೇಶ ಬಂದು 14 ತಿಂಗಳು ಕಳೆದರೂ ಮಿತಿ ಹೆಚ್ಚಳದ ಸಾಲ ಸಿಕ್ಕಿಲ್ಲ. ಸಾಲ ನೀಡಲುಬೇಕಾದ ನಿಧಿ ಬಿಡುಗಡೆಗೊಳ್ಳದಿರು ವುದು, ಬಡ್ಡಿಯನ್ನು ಶೂನ್ಯಕ್ಕೆ ಇಳಿ ಸಲು ನೀಡಬೇಕಾದ ಶೇಕಡಾವಾರು ಸಹಾಯಧನವೂ ಬಿಡುಗಡೆ ಯಾಗದಿ ರುವುದರಿಂದ ಸಾಲ ನೀಡಲು ಬಹುತೇಕ ಸೊಸೈಟಿಗಳು ನಿರಾಕರಿಸಿವೆ.
ಹಣ ಎಲ್ಲಿಂದ?
ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ ನಬಾರ್ಡ್ ನಿಂದ ಹಣಕಾಸು ಸೌಲಭ್ಯ ನೀಡಲಾ ಗುತ್ತದೆ. ಅಪೆಕ್ಸ್‌ನಿಂದ ಪ್ರತೀ ಡಿಸಿಸಿ ಬ್ಯಾಂಕ್‌ಗಳಿಗೆ ನೀಡಲಾಗುತ್ತಿದೆ. ಅಲ್ಲಿಂದ ಆಯಾ ಪ್ರಾ.ಕೃ.ಪ.ಸ. ಸಂಘ ಗಳಿಗೆ ಸಾಲದ ನಿಧಿ ವರ್ಗಾವಣೆ ಆಗುತ್ತದೆ. ಆದರೆ ನಬಾರ್ಡ್‌ನಿಂದ ಹಣ ಬಂದಿಲ್ಲ. ಪರಿಷ್ಕೃತ ಆದೇಶದ ಪ್ರಕಾರ ಸಾಲ ವಿತರಿಸಬೇಕಾದರೆ ಆಯಾ ಪ್ರಾ.ಕೃ.ಪ.ಸ. ಸಂಘಗಳಿಗೆ ಕೋಟ್ಯಂತರ ರೂ. ಬೇಕು. ಸ್ವಂತ ನಿಧಿ ಬಳಸಿ ಸಾಲ ನೀಡುವ ಸ್ಥಿತಿಯಲ್ಲಿ ಸೊಸೈಟಿಗಳು ಇಲ್ಲ ಎನ್ನುತ್ತಾರೆ ಪುತ್ತೂರಿನ ಕೆಲವು ಸಹಕಾರ ಸಂಸ್ಥೆಯ ಮುಖಂಡರು.
ನಬಾರ್ಡ್‌ನಿಂದ ಮೊತ್ತ ಕಡಿತ
ರಾಜ್ಯ ಸರಕಾರವು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ಪ್ರತೀ ಸಾಲಿನಂತೆ 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25 ಸಾವಿರ ಕೋ.ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. ಇದಕ್ಕೆ 22,902 ಕೋ.ರೂ.ಗಳಷ್ಟಾದರೂ ಬೇಕಾಗಬಹುದು ಎನ್ನಲಾಗಿದೆ. ಒಟ್ಟು ಸಾಲದಲ್ಲಿ 13,742 ಕೋ.ರೂ. ಅಲ್ಪಾವಧಿ ಕೃಷಿ ಸಾಲವನ್ನು ಮಂಜೂರು ಮಾಡುವಂತೆ ಕೋರಿ ನಬಾರ್ಡ್‌ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಏಳು ತಿಂಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಸಂಬಂಧಿಸಿ ಉತ್ತರ ನೀಡಿದ್ದ ನಬಾರ್ಡ್ 13,742 ಕೋ.ರೂ. ಪೈಕಿ 4,580 ಕೋ.ರೂ.ಗಳನ್ನು ಹೆಚ್ಚುವರಿ ಬಡ್ಡಿ ದರದಲ್ಲಿ (ಶೇ. 8) ಸಾಲ ಮಂಜೂರು ಮಾಡಿದೆ. ಡಿಸಿಸಿ ಬ್ಯಾಂಕ್‌ಗಳ ಪರವಾಗಿ ಅಪೆಕ್ಸ್ ಬ್ಯಾಂಕ್‌ಗೆ ರಿಯಾಯಿತಿ ಬಡ್ಡಿ ದರದಲ್ಲಿ (ಶೇ. 4.50) 2,340 ಕೋ.ರೂ. ಹಂಚಿಕೆ ಮಾಡಿದೆ. 6,822 ಕೋ.ರೂ. ಕಡಿಮೆ ಮಂಜೂರು ಮಾಡಿದೆ. ಇದರಿಂದ ಕೃಷಿ ಸಾಲ ನೀಡಲು ಸಂಕಷ್ಟ ಉಂಟಾಗಲಿದೆ. 2024-25ನೇ ಸಾಲಿನಲ್ಲಿ ನಬಾರ್ಡ್ ಹೆಚ್ಚಿನ ಮೊತ್ತದ ಸಾಲ ನೀಡದೆ ಇದ್ದರೆ ಕೆಲವು ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ.
ಶೂನ್ಯ ಬಡ್ಡಿಯ ಕೃಷಿ ಸಾಲದ ಮಿತಿ ಹೆಚ್ಚಿಸಿ ರಾಜ್ಯ ಸರಕಾರವೂ ಸುತ್ತೋಲೆ ಕಳುಹಿಸಿದ್ದರೂ ಅನುದಾನ ಬಂದಿಲ್ಲ. ಈ ಆದೇಶ ಪಾಲನೆಗೆ ಕೋಟ್ಯಂತರ ರೂ. ಆವಶ್ಯಕತೆ ಇದೆ. ಸರಕಾರ ನಿಧಿ ಬಿಡುಗಡೆ ಮಾಡಿದರೆ ಮಾತ್ರ ಸೊಸೈಟಿಗಳು ಸಾಲ ನೀಡಬಹುದಷ್ಟೇ.
ಎಸ್.ಎನ್. ಮನ್ಮಥ ಅಧ್ಯಕ್ಷರು, ಐವರ್ನಾಡು ಪ್ರಾ.ಕೃ.ಪ.ಸ. ಸಂಘ
ನನ್ನ ತಂದೆ ನಮ್ಮೂರಿನ ಪ್ರಾ.ಕೃ.ಪ.ಸ. ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ಪಡೆದಿದ್ದು, 2023ರ ನವೆಂಬರ್‌ನಲ್ಲಿ ಶೂನ್ಯ ಬಡ್ಡಿ ದರದ ಸಾಲ ಮಿತಿ ಹೆಚ್ಚಳದ ಆದೇಶ ಬಂದ ಬಳಿಕ ಡಿಸೆಂಬರ್‌ನಲ್ಲಿ 2 ಲಕ್ಷ ರೂ. ಹೆಚ್ಚುವರಿ ಸಾಲ ಪಡೆದಿದ್ದರು. ಈ ತಿಂಗಳಿನಲ್ಲಿ ನವೀಕರಣದ ವಾಯಿದೆ ಬಂದಿದ್ದು, 3 ಲಕ್ಷ ರೂ.ಗಳಿಗೆ ಮಾತ್ರ ಶೂನ್ಯ ಬಡ್ಡಿದರ ಹಾಗೂ ಹೆಚ್ಚುವರಿಯಾಗಿ ತೆಗೆದುಕೊಂಡ 2 ಲಕ್ಷ ರೂ.ಗಳಿಗೆ ಶೇ. 10.5 ಬಡ್ಡಿದರ ಪಾವತಿಸುವಂತೆ ಸೂಚನೆ ಬಂದಿದೆ. ಸರಕಾರ ಸುತ್ತೋಲೆಯನ್ನು ಅನುಷ್ಠಾನ ಮಾಡದೆ ಇದ್ದರೆ ಹೊರಡಿಸುವುದು ಏಕೆ?
– ರವಿಚಂದ್ರ ದಾಲಾಜೆ, ಕೃಷಿಕ
ಶೂನ್ಯ ಬಡ್ಡಿಯ ಕೃಷಿ ಸಾಲ ಹಾಗೂ ಶೇ. 3 ಬಡ್ಡಿ ದರದ ಸಾಲ ಮಿತಿ ಹೆಚ್ಚಿಸಿ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯಂತೆ ಸೊಸೈಟಿಗಳಲ್ಲಿ ಸಾಲ ನೀಡಲು ಸೂಚನೆ ನೀಡಲಾಗಿತ್ತು. ಆದರೆ ನಬಾರ್ಡ್‌ನಿಂದ ನಿರೀಕ್ಷಿತ ಅನುದಾನ ಲಭ್ಯವಾಗದ ಕಾರಣ ನಿಧಿ ಕೊರತೆ ಉಂಟಾಗಿರುವುದರಿಂದ ಸಾಲ ನೀಡಿರುವ ಪ್ರಮಾಣ ಕಡಿಮೆ ಇರಬಹುದು. ಈಗಾಗಲೇ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚುವರಿ ಸಾಲ ನೀಡಿ, ನಿಧಿ ಬಂದಿಲ್ಲ ಎಂಬ ಕಾರಣದಿಂದ ಆ ಮೊತ್ತಕ್ಕೆ ಬಡ್ಡಿ ವಸೂಲಿ ಮಾಡಲು ಅವಕಾಶ ಇಲ್ಲ. ಹೆಚ್ಚುವರಿ ಸಾಲ ಶೂನ್ಯ ಬಡ್ಡಿ ದರಧ್ದೋ ಅಥವಾ ಬಡ್ಡಿ ಸಹಿತವೋ ಅನ್ನುವ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿಯೇ ಸೊಸೈಟಿಗಳು ಸಾಲ ನೀಡಬೇಕು.
-ಎಚ್.ಎನ್. ರಮೇಶ್ ಉಪ ನಿಬಂಧಕರು, ಸಹಕಾರ ಸಂಘ, ದ.ಕ.
ಕಿರಣ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.