![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 11, 2019, 5:00 AM IST
ಬಡಗನ್ನೂರು: ಶೇಕಮಲೆ- ದರ್ಭೆತ್ತಡ್ಕ ಸಮೀಪ ರಸ್ತೆ ನಿರ್ಮಾಣದ ವೇಳೆ ಇಲಾಖೆ ನಿರ್ಮಿಸಿದ ಆವರಣ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿಯಲ್ಲಿದೆ. ಮೂರು ವರ್ಷಗಳಿಂದ ಮನೆ ಮಂದಿ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಆವರಣ ಗೋಡೆ ತೆರವು ಮಾಡಿ ಅಥವಾ ಹೊಸ ಆವರಣ ಗೋಡೆಯನ್ನು ನಿರ್ಮಾಣ ಮಾಡಿ ಎಂದು ಎರಡು ವರ್ಷಗಳಿಂದ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮನೆ ಮಾಲಕರು ಪುತ್ತೂರು ಸಹಾಯಕ ಆಯುಕ್ತರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಡಿ ಭಾಗದಲ್ಲಿ ಕುಸಿತ
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಕಮಲೆಯಿಂದ ದರ್ಬೆತ್ತಡ್ಕಕ್ಕೆ ತೆರಳುವ ರಸ್ತೆಯ ಪ್ರವೇಶದ ಬಳಿ ನಾಲ್ಕು ವರ್ಷಗಳ ಹಿಂದೆ ಈ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಗೋಡೆ ನಿರ್ಮಾಣ ಸಂದರ್ಭದಲ್ಲಿ ವೈಜ್ಞಾನಿ ಕವಾಗಿ ಕಾಮಗಾರಿ ನಿರ್ವಹಿಸದಿರುವ ಹಿನ್ನೆಲೆಯಲ್ಲಿ ಅಡಿ ಭಾಗದಲ್ಲಿ ಕುಸಿತ ಉಂಟಾಗಿದೆ. ಧರೆಯ ಬದಿಯಲ್ಲಿರುವ ಕಾರಣ ಆವರಣ ಗೋಡೆ ಮನೆಯ ಮೇಲೆ ಬೀಳುವ ಸಾಧ್ಯತೆ ಇದೆ. ಮನೆಯ ಒಂದು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಇನ್ನೊಂದು ಭಾಗದಲ್ಲಿ ಶೇಕಮಲೆ- ದರ್ಭೆತ್ತಡ್ಕ ಜಿ.ಪಂ. ರಸ್ತೆ ಇದೆ. ಜಿ.ಪಂ. ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭ ರಸ್ತೆಯು ಮನೆಯ ಅಂಚಿನ ವರೆಗೂ ಬಂದಿದ್ದು, ಅರ್ಧ ಭಾಗದಲ್ಲಿ ಮಾತ್ರ ಆವರಣ ಗೋಡೆ ನಿರ್ಮಾಣ ಮಾಡಲಾಗಿದೆ. ಉಳಿದ ಭಾಗದಲ್ಲಿ ಇನ್ನೂ ಸುಮಾರು 30 ಮೀ. ಉದ್ದಕ್ಕೆ ಹಾಗೆಯೇ ಬಿಡಲಾಗಿದೆ.
ಅಂಗಳಕ್ಕೆ ಬಿದ್ದಿತ್ತು ಜೀಪು
ಎರಡು ವರ್ಷಗಳ ಹಿಂದೆ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಬಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದರು. ಈ ಘಟನೆ ನಡೆದ ಬಳಿಕವೂ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಹಲವು ಘಟನೆಗಳು
ಕಾಮಗಾರಿ ನಡೆಸುವ ವೇಳೆ ಆಗುವ ಎಡವಟ್ಟಿನಿಂದಾಗಿ ಕೌಡಿಚ್ಚಾರ್ ಮಡ್ಯಂಗಳ ರಸ್ತೆ ಬದಿಯಲ್ಲಿದ್ದ ಕೆರೆಯನ್ನು ಮುಚ್ಚದೇ ಇರುವ ಕಾರಣ ಕಾರು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಮಂಗಳೂರಿನಲ್ಲಿ ಮನೆ ಮೇಲೆ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಗುತ್ತಿಗಾರಿನ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಎರಡು ದಿನಗಳ ಹಿಂದಷ್ಟೇ ನಡೆದಿದೆ. ಕಳೆದ ವರ್ಷ ಪುತ್ತೂರಿನಲ್ಲಿ ಇಂತಹದೇ ಆವರಣ ಗೋಡೆ ಕುಸಿದು ಪ್ರಾಣಹಾನಿ ಸಂಭವಿಸಿತ್ತು. ಇಂತಹ ಘಟನೆಗಳಿಂದ ಎಚ್ಚೆತ್ತು, ಹೊಸ ಆವರಣ ಗೋಡೆಯನ್ನು ಶೀಘ್ರದಲ್ಲೇ ಹಾಗೂ ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪರಿಶೀಲಿಸುತ್ತೇನೆ
ಅಪಾಯಕಾರಿ ಸ್ಥಿತಿಯಲ್ಲಿರುವ ಆವರಣ ಗೋಡೆಯನ್ನು ಪರಿಶೀಲನೆ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ಈ ಆವರಣ ಗೋಡೆಯನ್ನು ತೆರವು ಮಾಡಿ ಹೊಸದಾಗಿ ನಿರ್ಮಿಸುವ ಕುರಿತಾಗಿ ಪರಿಶೀಲನೆ ಮಾಡುತ್ತೇನೆ.
You seem to have an Ad Blocker on.
To continue reading, please turn it off or whitelist Udayavani.