![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 2, 2019, 11:36 AM IST
ಸುಳ್ಯ ಮೇ 1: ಬೌದ್ಧಿಕ ಬೆಳವಣಿಗೆ ಸಹಜವಾಗಿರದಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಬದುಕು ಗೆದ್ದಿದ್ದ ಗುತ್ತಿಗಾರು ಗ್ರಾಮದ ಕಮಿಲ ಅಭಿಷ್ ಈಗ ಎಸೆಸೆಲ್ಸಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದಾನೆ.
ಹುಟ್ಟಿನಿಂದಲೇ ಬುದ್ಧಿಮಾಂದ್ಯನಾಗಿದ್ದ ಅಭಿಷ್ ಅವೆಲ್ಲವನ್ನೂ ಎದುರಿಸಿ ಈಗ ಎಸೆಸೆಲ್ಸಿ ಪರೀಕ್ಷೆ ಉತ್ತೀರ್ಣನಾಗಿ ಪಿಯುಸಿಗೆ ಕಾಲಿಡುವ ಸಂಭ್ರಮದಲ್ಲಿ ದ್ದಾನೆ. ಗುತ್ತಿಗಾರು ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಯಾಗಿದ್ದು, ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದು ಶೇ. 65 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾನೆ.
ವಿಶೇಷ ವಿನಾಯಿತಿ
ವಿಶೇಷ ವಿದ್ಯಾರ್ಥಿ ಆಗಿರುವ ಕಾರಣ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ವತಿಯಿಂದ ಅನುಕೂಲಕರ ಮಾನದಂಡ ನಿಗದಿಪಡಿಸಲಾಗಿತ್ತು. ದ್ವಿತೀಯ, ತೃತೀಯ ಭಾಷಾ ಪರೀಕ್ಷೆಗೆ ವಿನಾಯಿತಿ ನೀಡಿ ಉಳಿದ ನಾಲ್ಕು ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈತ ಪ್ರಶ್ನೆ ಗಮನಿಸಿ ಉತ್ತರ ಹೇಳುತ್ತಿದ್ದ. ಇದನ್ನು ಅಕ್ಷರ ರೂಪಕ್ಕಿಳಿಸಲು ಸಹಾಯಕನನ್ನು ಒದಗಿಸಲಾಗಿತ್ತು. ಒಟ್ಟು 425 ಅಂಕಗಳ ಪೈಕಿ ಈತ 278 ಅಂಕ ಗಳಿಸಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.
ಹುಟ್ಟಿನಿಂದಲೇ ಮಾತು ಮತ್ತು ಬುದ್ಧಿಮಟ್ಟದಲ್ಲಿ ಎಲ್ಲರಂತೆ ಇರದ ಈ ಬಾಲಕನ ಬದುಕಿಗೆ ಸ್ಫೂರ್ತಿ ತುಂಬಿದ್ದು ತಂದೆ ರವೀಂದ್ರ ಮತ್ತು ತಾಯಿ ಲತಾ. ಮನೆಯಿಂದ ಪ್ರತಿದಿನ ನಾಲ್ಕು ಕಿ.ಮೀ. ದೂರದ ಗುತ್ತಿಗಾರು ಹೈಸ್ಕೂಲಿಗೆ ಬೆಳಗ್ಗೆ ತಂದೆ ಕರೆದುಕೊಂಡು ಬಂದರೆ, ಸಂಜೆ ತಾಯಿ ಮನೆಗೆ ಕರೆದೊಯ್ಯುತ್ತಿದ್ದರು. ಶಾಲೆಯಲ್ಲಿ ಈತನ ಅಭ್ಯಾಸಕ್ಕೆ ಪೂರಕವಾಗಿ ಶಿಕ್ಷಕರು ವಿಶೇಷ ನಿಗಾ ಇರಿಸಿ ಅಭ್ಯಾಸ ಮಾಡಿಸಿದ್ದರು. ಮನೆಯಲ್ಲಿ ನಾನು ಆತನಿಗೆ ಹೇಳಿ ಕೊಡುತ್ತಿದ್ದೆ ಎನ್ನುತ್ತಾರೆ ತಾಯಿ ಗೀತಾ.
ಕೃಷಿಕ ದಂಪತಿಯ ಏಕೈಕ ಪುತ್ರನಾಗಿರುವ ಅಭಿಷ್ 1ರಿಂದ 3ನೇ ತರಗತಿ ತನಕ ಬ್ಲೆಸ್ಡ್ ಕುರಿಯಾಕೋಸ್ ಶಾಲೆ, 4, 5ನೇ ತರಗತಿಗಳನ್ನು ಕಮಿಲ ಶಾಲೆ, 6, 7ನೇ ತರಗತಿಗಳನ್ನು ಗುತ್ತಿಗಾರು ಪ್ರಾಥಮಿಕ ಶಾಲೆ ಹಾಗೂ 8ರಿಂದ 10ನೇ ತರಗತಿ ತನಕ ಗುತ್ತಿಗಾರು ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದಾನೆ. ಮುಂದೆ ಗುತ್ತಿಗಾರು ಸರಕಾರಿ ಪ.ಪೂ. ಕಾಲೇಜಿಗೆ ಕಲಾ ವಿಭಾಗಕ್ಕೆ ಸೇರಿಸುತ್ತೇನೆ ಎನ್ನುತ್ತಾರೆ ತಾಯಿ ಗೀತಾ.
You seem to have an Ad Blocker on.
To continue reading, please turn it off or whitelist Udayavani.