![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 3, 2020, 9:36 AM IST
ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಬಿ.ಸಿ.ರೋಡಿನವರಾದ ಇವರ ಕಳೆದ ಕೆಲವು ಸಮಯಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ತಮ್ಮ ಜೀವಿತದ ಬಹು ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದಿದ್ದರೂ , ಇವರು ಮೂಲತಃ ಬಂಟ್ವಾಳ ತಾಲೂಕಿನ ಬಿಸಿರೋಡಿನವರು. ಕಲಿತದ್ದು 7ನೇ ತರಗತಿವರೆಗೆ. ಆದರೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು… ಹೀಗೆ ಪಂಚಭಾಷೆ ಬಲ್ಲವರು.
ವಿದ್ಯಾರ್ಥಿ ದೆಸೆಯಿಂದಲೇ ಬಾವುಟ ಹಿಡಿಯುವುದು, ಜೈಕಾರ ಕೂಗುವುದು, ಕರಪತ್ರ ಹಂಚುವುದು ಮೊದಲಾದ ಹುಡುಗಾಟಿಕೆಗಳಿಂದ ಕ್ರಾಂತಿಕಾರಿಯೆಂದು ಗುರುತಿಸಿಕೊಂಡಿದ್ದ ಇವರು 1942ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
1923 ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ ಶ್ಯಾಮರಾಯ ಆಚಾರ್ಯರು ಎಂ.ಡಿ.ಶ್ಯಾಮರಾವ್ ಎಂದೇ ಪ್ರಸಿದ್ಧರು. ಬಂಟ್ವಾಳ ಮಂಗಳೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದ ಇವರ ಮನೆಯ ಮುಂದೆ ಹಾದು ಹೋಗುತ್ತಿದ್ದ ಸ್ವಾತಂತ್ರ್ಯ ಚಳುವಳಿಗಾರರ ಸಾಲುಸಾಲು ಹಾಗೂ ಪೊಲೀಸರ ಮಾರ್ಚ್ ಫಾಸ್ಟ್ ಸಣ್ಣ ವಯಸ್ಸಿನ ಶ್ರೀ ಶಾಮರಾಯರಿಗೆ ಪ್ರೇರಣೆಯಾದವು.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ಯುವತಿ
ಹುಡುಗಾಟಿಕೆಯಲ್ಲಿ ತನ್ನದೇ ಸ್ನೇಹಿತರ ಗುಂಪು ಕಟ್ಟಿ ತಂದೆಯವರಿಗೆ ಗೊತ್ತಾಗದಂತೆ, ಚಳುವಳಿಗಳ ಸಮಯದಲ್ಲಿ, ಬ್ರಿಟೀಷರ ದೂರವಾಣಿ ಲೈನ್ ಗಳನ್ನು ಕಟ್ ಮಾಡುವುದರಿಂದ ಶುರುವಾಗಿದ್ದು, ಮುಂದೆ ಚಳುವಳಿಗಾರರಿಗೆ ಗುಪ್ತ ವಾಗಿ ಮಾಹಿತಿ ತಲುಪಿಸುವ ಸಂವಾಹಕನ ಕೆಲಸವನ್ನೂ ಮಾಡಿದವರು. ಚಳುವಳಿಗಾರರಿಗೆ ಪೊಲೀಸರ, ಸೈನ್ಯದ ಬರುವಿಕೆಯ ಸೂಚನೆ ಕೊಡುವುದು, ಸೇತುವೆಗಳ ಕಲ್ಲು ತೆಗೆದು ಗರ್ನಲ್ ಗಳನ್ನು ಇಟ್ಟು ಸಿಡಿಸುವುದು, ಮುಂತಾದ ಹುಡುಗಾಟಿಕೆಯ ಅಳಿಲು ಸೇವೆಯನ್ನು ದೇಶಪ್ರೇಮ ದಿಂದಲೇ ಮಾಡಿದರು.
ಈ ಹುಡುಗನ ದೇಶಪ್ರೇಮ ಊರು ತುಂಬಾ ಹರಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯ್ತು. ತಂದೆಯ ಗಮನಕ್ಕೆ ಬಂದಾಗ ಊರು ಬಿಟ್ಟು, 3, 4 ದಿನ ನಡೆದು ಹೋಗಿ ಸೇರಿದ್ದು ಕರ್ಮ ಭೂಮಿ ಶಿವಮೊಗ್ಗೆಗೆ. ಬಳಿಕ ತಮ್ಮ ಹೆಸರನ್ನು ಶ್ಯಾಮ ರಾವ್ ಎಂದು ಹೇಳಿಕೊಂಡು, ತಂದೆಯವರಿಂದ ದೂರ ಉಳಿದ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಅಡೆತಡೆಯಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಅಂದಿನ ಕಾಂಗ್ರೇಸ್ ಸೇವಾದಳಕ್ಕೆ ಸೇರಿಕೊಂಡು ಗುಪ್ತವಾಗಿ ವಿವಿಧೆಡೆ ನಡೆಯುವ ಚಳುವಳಿಗಳ ಆಯೋಜನೆಗಳಲ್ಲಿ ಸಹಾಯ ಮಾಡುವುದು, ಸಂದೇಶಗಳನ್ನು ರವಾನಿಸುವುದು, ಹೀಗೆ ಯುವಕನಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಯದಲ್ಲಿ ಅನೇಕ ಮಹನೀಯರ ಒಡನಾಟ ಇವರಿಗೆ ದೊರಕಿತು. ಗೋಪಾಲ ಗೌಡರು, ರವಳಪ್ಪ, ದೊರೆಸ್ವಾಮಿ ಅಯ್ಯಂಗಾರ್, ಪೊನ್ನಮ್ಮ, ಎಂ.ಪಿ. ಈಶ್ವರಪ್ಪ, ಲಾಯರ್ ಸಿದ್ದಯ್ಯ, ನಾಗಪ್ಪ ಶೆಟ್ಟಿ, ಖಾದಿ ಶಂಕರಪ್ಪ ಮುಂತಾದವರ ಒಡನಾಟ ಬೆಳೆಯಿತು.
1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ2 ತಿಂಗಳ ಜೈಲು ಶಿಕ್ಷೆ ಗೆ ಒಳಗಾದರು. ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡ ಇವರು, ಗಾಂಧೀಜಿ ಯವರು ಹಾಕಿಕ್ಕೊಟ್ಟ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಸ್ವಂತವಾಗಿ ಹಿಂದಿ ಕಲಿತು, ಹಿಂದಿಯನ್ನು ದೇಶದ ಸಂಪರ್ಕ ಭಾಷೆ ಮಾಡುವ ಗಾಂಧೀಜಿಯವರ ಕನಸಿನಂತೆ, ಶಿವಮೊಗ್ಗದ ಗಾಂಧಿ ಮಂದಿರದಲ್ಲಿ ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೇ ಹಿಂದಿ ಪಾಠ ಮಾಡಿದರು. ಇವರ ಶಿಷ್ಯರಲ್ಲಿ ಅನೇಕರು ಮುಂದೆ ಶಿವಮೊಗ್ಗದ ಹಿಂದಿ ಶಿಕ್ಷಕರಾಗಿ, ವಿದ್ವಾಂಸರಾಗಿ ಹೋಗಿರುವುದು ವಿಶೇಷ. ಈಗಿನ ಗಾಂಧಿ ಮಂದಿರಕ್ಕೆ ಇವರೇ ನಾಮಕರಣ ಮಾಡಿದ್ದು, ಮುಂದೆ ಅದುವೇ ಚಾಲನೆಯಲ್ಲಿ ಉಳಿದದ್ದು ವಿಶೇಷ.
1960 ರಲ್ಲಿ ರಾಜೀವಿಯವರನ್ನು ಮದುವೆಯಾದ ನಂತರ ಜೀವನೋಪಾಯಕ್ಕಾಗಿ ಮಾಡಿದ್ದು, ಟೈಪ್ ರೈಟರ್ ರಿಪೇರಿ, ಮೆಡಿಕಲ್ ಉಪಕರಣ ರಿಪೇರಿಗಳನ್ನು. ಆ ಸಮಯದಲ್ಲಿ ಬಾಂಬೆ ಮತ್ತು ಬೆಂಗಳೂರಿನಿಂದ ತಂತ್ರಜ್ಞರು ಬರ ಬೇಕಾಗಿದ್ದ ಸಂಧರ್ಭದಲ್ಲಿ, ಅವರ ಕೆಲಸಗಳನ್ನು ಸ್ವತಃ ಕಲಿತು, ಸೇವಾ ಮನೋಭಾವದಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾದರು. ಬೆರಳಚ್ಚು ಯಂತ್ರ, ಹೊಲಿಗೆ ಯಂತ್ರ, ಕಲ್ಲಚ್ಚು, ಆಟೋ ಮೀಟರ್, ಸೂಕ್ಷ್ಮ ದರ್ಶಕ, ದೂರದರ್ಶಕ ಮೊದಲಾದ ಸೂಕ್ಷ್ಮ ಯಂತ್ರಗಳನ್ನು ದುರಸ್ತಿ ಮಾಡುವ ಇವರು ಸಣ್ಣ ಇಂಜಿನಿಯರ್ ಆಗಿದ್ದಾರೆ. ಆಸ್ಪತ್ರೆಗಳಲ್ಲಿನ ಆರೋಗ್ಯ ಸಂಬಂಧಿ ಹಳೇ ಯಂತ್ರಗಳ ರಿಪೇರಿಗಾಗಿ ಶಿವಮೊಗ್ಗದ ಕೆಲ ವೈದ್ಯರು ಇತ್ತೀಚಿನವರೆಗೂ ಇವರ ನೆರವು ಪಡೆಯುತ್ತಿದ್ದರು.
ಅಂಬರ ಚರಕದಲ್ಲಿ ನೂಲು ತೆಗೆಯುವುದರಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ಮನೆ ಮನೆಗೆ ತೆರಳಿ ಚರಕದಿಂದ ಇವರು ನೂಲು ತೆಗೆಯುವ ತರಬೇತಿ ನೀಡಿದ್ದಾರೆ. ಚಿನ್ನದ ಕೆಲಸದಲ್ಲೂ ವಿಶೇಷ ಪ್ರಾವಿಣ್ಯತೆ ಹೊಂದಿದ್ದ ಇವರು ಹೋರಾಟದ ಆ ದಿನಗಳಲ್ಲಿ ರಾತ್ರಿ ಹೊತ್ತು ತನ್ನ ಅಣ್ಣ ಪುಟ್ಟಣ್ಣ ಆಚಾರ್ ರೊಂದಿಗೆ ಚಿನ್ನದ ಕೆಲಸ ಮಾಡಿಕೊಂಡಿದ್ದರು.
ಇವರ ದೇಶ ಪ್ರೇಮಿ ಬದುಕನ್ನು ಗೌರವಿಸಿ ಈಗಾಗಲೇ ನಾಡಿನ ಹಲವಾರು ಸಂಘ ಸಂಸ್ಥೆಗಳು ಶ್ಯಾಮ್ ರಾವ್ ರವರನ್ನು ಗೌರವಿಸಿದೆ. ಶಿವಮೊಗ್ಗದ ಕಾಳಿಕಾ ಪರಮೇಶ್ವರಿ ಸೊಸೈಟಿಯ ಪ್ರಾರಂಭದ ಕಮಿಟಿ ಸದಸ್ಯ, ಹಾಗೂ ಶಿವಮೊಗ್ಗದಲ್ಲಿ ಸತ್ಯ ಸಾಯಿ ಮಂದಿರ ಹುಟ್ಟು ಹಾಕಿದವರಲ್ಲಿ ಒಬ್ಬರಾದ ಇವರು, ಲೋಕಾ ಸಮಸ್ತಾ ಸುಖಿನೋ ಭವಂತು ಎನ್ನುವ ವಾಕ್ಯವನ್ನು ತಮ್ಮ ಮಂತ್ರವನ್ನಾಗಿಸಿ, ಸೇವೆ ಸಲ್ಲಿಸಿದ ಮಹನೀಯರು.
ತಮ್ಮ ಆರು ಜನ ಮಕ್ಕಳೊಂದಿಗೆ, ಅಣ್ಣನ ಹಾಗೂ ಇತರ ದೂರದ ಊರಿನ ಅನೇಕ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ಆಶ್ರಯದಾತರಾಗಿ ಮಾದರಿ ಬದುಕನ್ನು ಕಟ್ಟಿಕೊಂಡವರು.
ಎಂತೆಂಥಾ ಕಷ್ಟದ ಸನ್ನಿವೇಶಗಳ ನಡುವೆಯೂ ಸ್ವಾಭಿಮಾನಿಯಾಗಿ ಮಾದರಿ ಜೀವನ ನಡೆಸಿ ಇಂದು ಇಹಲೋಕ ಅಗಲಿದ್ದಾರೆ. ಮೃತರು ಪತ್ನಿ ರಾಜೀವಿ, ಪುತ್ರ ಸತೀಶ್ ಹಾಗೂ ಐದು ಮಂದಿ ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಬ ಳಗವನ್ನು ಅಗಲಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.