ಉತ್ತಮ ಮಳೆ: ಉಕ್ಕಿ ಹರಿಯುತ್ತಿವೆ ನದಿಗಳು
Team Udayavani, Jun 10, 2018, 3:16 PM IST
ಬೆಳ್ತಂಗಡಿ : ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗಿನಿಂದ ತಾಲೂಕಿನಲ್ಲಿ ಉತ್ತಮ ಮಳೆಯಾದ ಕಾರಣ ನದಿಗಳು, ತೊರೆಗಳು ತುಂಬಿ ಹರಿಯುತ್ತಿವೆ. ಆದರೆ ಸಮರ್ಪಕವಾಗಿ ಚರಂಡಿ ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ನೀರು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
ತುಂಬಿ ಹರಿಯುತ್ತಿದೆ ನದಿ
ತಾಲೂಕಿನಲ್ಲಿ ಹರಿಯುತ್ತಿರುವ ಸೋಮಾವತಿ ಹಾಗೂ ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿವೆ. ನೇತ್ರಾವತಿ ನದಿ ತೀರ ಪ್ರದೇಶವಾದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ಉತ್ತಮ ಮಳೆಯಾಗಿದೆ. ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹರಿಯುತ್ತಿಲ್ಲ ನೀರು
ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಚರಂಡಿ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದರಿಂದ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ ಎಂಬಂತಾಗಿದೆ. ತಾಲೂಕಿನ ಹಲವೆಡೆ ರಸ್ತೆ ಬದಿ ನೀರು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ಸ್ಥಳೀಯಾಡಳಿತಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಲ್ಲಿ ಸ್ಪಲ್ಪ ಮಟ್ಟಿನ ಸಮಸ್ಯೆ ನಿವಾರಿಸಬಹುದು. ತಾಲೂಕಿನ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ ನೀರು ಹರಿಯುವುದು ಸಾಮಾನ್ಯ ಎಂಬಂತಾಗಿದೆ. ಕುವೆಟ್ಟು ಗ್ರಾಮದ ಸಬರಬೈಲು ಶಾಲೆ ಬಳಿ ನೀರು ತುಂಬಿ ಹರಿದ ಪರಿಣಾಮ ಚಾಲಕರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.
ತಡೆಗೋಡೆ ಕುಸಿತ
ಲಾೖಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಎಸ್.ಸಿ. ಕಾಲನಿಗೆ ಹಾದು ಹೋಗುವ ರಸ್ತೆಯಲ್ಲಿ ತಡೆಗೋಡೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ರಾತ್ರಿ ವೇಳೆ ಕುಸಿದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಚರಂಡಿ ಮೇಲೆ ತಡೆಗೋಡೆ ನಿರ್ಮಿಸಿರುವುದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಡಾಜೆ ಬಳಿ ಮರವೊಂದು ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ತೆರವುಗೊಳಿಸಲಾಗಿದೆ. ತಾಲೂಕಿನಲ್ಲಿ ನಿರಂತರ ಮಳೆಯಾಗಿರುವುದರಿಂದ
ಕೃಷಿಕರು ಖುಷಿಯಾಗಿದ್ದು, ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಪಾದಚಾರಿ ಸಮಸ್ಯೆ
ಮಳೆ ಬಂದಾಗ ಮುಖ್ಯ ರಸ್ತೆಗಳಲ್ಲಿ ನಡೆದುಕೊಂಡು ಹೋಗಲಾರದ ಪರಿಸ್ಥಿತಿ ಉಂಟಾಗಿದೆ. ಬೆಳ್ತಂಗಡಿ ಸೋಮಾವತಿ ನದಿಗೆ ನಿರ್ಮಿಸಿರುವ ಸೇತುವೆಯಲ್ಲಿ ನಡೆಯುವುದು ಕಷ್ಟಕರವಾಗಿದೆ. ಜತೆಗೆ ಸೇತುವೆ ಬಳಿ ನೀರು ನಿಂತಿರುವುದು, ವಾಹನ ಬಂದಾಗ ಎತ್ತ ಹೋಗುವುದು ಎಂಬ ಗೊಂದಲ ಮೂಡುತ್ತಿದೆ. ಇನ್ನು ಉಜಿರೆಯ ಕೆಲವು ಪ್ರದೇಶಗಳಲ್ಲೂ ನಡೆದಾಡಲು ಕಷ್ಟಕರವಾದ ವಾತಾವರಣ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.