ಕುಕ್ಕೆಯ ಹಲವೆಡೆ ಜಲಾವೃತ; ಅಂತಾರಾಜ್ಯ ಹೆದ್ದಾರಿ ಬಂದ್
ಕುಮಾರಧಾರಾ ಸಹಿತ ಹಲವು ನದಿಗಳಲ್ಲಿ ನೀರಿನ ಮಟ್ಟ ಭಾರೀ ಹೆಚ್ಚಳ
Team Udayavani, Jul 11, 2022, 1:13 AM IST
ಸುಬ್ರಹ್ಮಣ್ಯ: ಘಟ್ಟ ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ಮತ್ತು ಉಪನದಿ ದರ್ಪಣತೀರ್ಥ ಉಕ್ಕಿಹರಿಯುತ್ತಿವೆ.
ಘಟನೆಯಲ್ಲಿ ಸುಬ್ರಹ್ಮಣ್ಯ-ಪಂಜ-ನಿಂತಿಕಲ್-ಕಾಣಿಯೂರು- ಪುತ್ತೂರು- ಮಂಜೇಶ್ವರ ಸಂಪರ್ಕಿಸುವ ದರ್ಪಣತೀರ್ಥ ಸೇತುವೆಯು ಮುಂಜಾನೆ ಮುಳುಗಡೆಗೊಂಡಿದ್ದು, ಅಂತಾರಾಜ್ಯ ರಸ್ತೆ ಸಂಪರ್ಕವು ಸಂಪೂರ್ಣ ಬಂದ್ ಆಯಿತು.
ವಾರದಿಂದ ಸ್ನಾನಘಟ್ಟ ಮುಳುಗಡೆ
ಕುಮಾರಧಾರಾ ಸ್ನಾನಘಟ್ಟವು ಕಳೆದ ಒಂದು ವಾರದಿಂದ ಸಂಪೂರ್ಣ ಮುಳುಗಡೆಯಾಗಿಯೇ ಇದೆ. ದೇವರ ಜಳಕದ ಕಟ್ಟೆ ಸಂಪೂರ್ಣ ಮುಳುಗಡೆಯಾಗಿದ್ದು, ಶೌಚಾಲಯ, ಬಟ್ಟೆ ಬದಲಾಯಿಸುವ, ಲಗೇಜ್ ಕೊಠಡಿಗಳು ಜಲಾವೃತ್ತಗೊಂಡಿವೆ. ಸ್ನಾನಘಟ್ಟದಿಂದ ಸುಮಾರು 100 ಮೀ. ದೂರದಷ್ಟು ನದಿನೀರು ವ್ಯಾಪಿಸಿದೆ.
ದರ್ಪಣತೀರ್ಥ ತುಂಬಿ ಹರಿದ ಕಾರಣ ಕುಕ್ಕೆಸುಬ್ರಹ್ಮಣ್ಯ-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಸೇತುವೆ ಮುಳುಗಡೆಗೊಂಡಿತು. ಪಕ್ಕದ ಕೃಷಿ ತೋಟಗಳು ಮುಳುಗಡೆಯಾಗಿವೆ. 2 ಮನೆಗಳು ಜಲಾವೃತಗೊಂಡಿದ್ದವು. ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಮುಂತಾದ ಕಡೆಗಳ ಮನೆಗಳಿಗೆ ಜಲದಿಗ್ಬಂಧನವಾಯಿತು.
ಭಕ್ತರ ಸಂಖ್ಯೆ ವಿರಳ
ಭಾರೀ ಮಳೆ, ಪ್ರವಾಹದ ಕಾರಣ ಮತ್ತು ರವಿವಾರ ಏಕಾದಶಿ ಬಂದುದರಿಂದ ಪ್ರತೀ ವಾರಾಂತ್ಯ ಜನರಿಂದ ತುಂಬಿರುತ್ತಿದ್ದ ಕುಕ್ಕೆ ಕ್ಷೇತ್ರದಲ್ಲಿ ಈ ವಾರ ಭಕ್ತರ ಸಂಖ್ಯೆ ವಿರಳವಾಗಿತ್ತು.
ಹಲವು ಸೇತುವೆಗಳು ಮುಳುಗಡೆ
ಸುಳ್ಯ: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜ ಹೊಳೆ ಸೇತುವೆ ಮುಳುಗಡೆಗೊಂಡು ಸಂಚಾರಕ್ಕೆ ಅಡಚಣೆಯಾಯಿತು. ಬೊಳ್ಮಲೆಯಲ್ಲಿ ರಾಜ್ಯ ಹೆದ್ದಾರಿಗೆ ನೀರು ನುಗ್ಗಿದ್ದು ಸಂಪರ್ಕ ಕಡಿತಗೊಂಡಿತು.
ಪಂಜ-ಕಡಬ ರಸ್ತೆಯ ಪುಳಿಕುಕ್ಕುವಿನಲ್ಲಿ ಹೆದ್ದಾರಿಗೆ ಕುಮಾರಧಾರಾ ನದಿ ನೀರು ನುಗ್ಗಿ ಸಂಚಾರ ಸ್ಥಗಿತವಾಯಿತು. ಐನೆಕಿದು-ಹರಿಹರ ಪಳ್ಳತ್ತಡ್ಕದ ಗುಂಡಡ್ಕ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯದ ಕುಮಾರಧಾರಾ ಬಳಿಯ ಪಂಜ ರಸ್ತೆಯ ದರ್ಪಣ ತೀರ್ಥ ಹೊಳೆಗೆ ನಿರ್ಮಿಸಲಾದ ಸೇತುವೆ ನೆರೆ ನೀರಿಗೆ ಮುಳುಗಡೆಯಾಯಿತು. ಆಲೆಟ್ಟಿ ಗ್ರಾಮದ ಕುಕ್ಕುಂಬಳದಲ್ಲಿನ ಸೇತುವೆ ಮುಳುಗಡೆಯಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.