ಶಾಲೆ ಅಂಗಳದಲ್ಲಿ ವಿದ್ಯಾರ್ಥಿಗಳೇ ಬೆಳೆದ ಭತ್ತದ ಪೈರು ಕಟಾವು
ಕೊಯ್ಲು ಮಾಡಿ ಭತ್ತದ ಕಾಳು ಬೇರ್ಪಡಿಸಿ ಸಂತಸಪಟ್ಟ ಬಾಳಿಲ ಶಾಲೆಯ ವಿದ್ಯಾರ್ಥಿಗಳು
Team Udayavani, Nov 17, 2019, 4:57 AM IST
ಬೆಳ್ಳಾರೆ: ಗ್ರಾಮೀಣ ಪ್ರದೇಶದಿಂದ ದೂರ ಸರಿಯುತ್ತಿರುವ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ವಿಶೇಷ ಪ್ರಯತ್ನವೊಂದು ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಶಾಲೆಯ ಅಂಗಳದಲ್ಲಿ ತಾವೇ ನಾಟಿ ಮಾಡಿದ ಭತ್ತದ ಗದ್ದೆಯಲ್ಲಿ ಮಕ್ಕಳು ಕೊಯ್ಲು ಮಾಡಿ ಸಂಭ್ರಮಿಸಿದ್ದಾರೆ.
ಭತ್ತ ಕೊಯ್ಲು ಮಾಡಲು ಗದ್ದೆಗಿಳಿದ ವಿದ್ಯಾರ್ಥಿಗಳ ಉತ್ಸಾಹ ಕಂಡು ಹೆತ್ತವರೂ ಉತ್ಸಾಹದೊಂದಿಗೆ ಕೊಯ್ಲು ಹಾಡಿನೊಂದಿಗೆ ಮಕ್ಕಳ ಜತೆಯಾದರು. ಶಾಲೆಯ ಅಂಗಳದಲ್ಲೇ ವಿದ್ಯಾರ್ಥಿಗಳು ಭತ್ತವನ್ನು ಬೇರ್ಪಡಿಸಿದರು.
ಕೃಷಿಯೇ ಖುಷಿ
ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜತೆಗೆ ಕೃಷಿ ಪಾಠವನ್ನೂ ಕಲಿಸಿ, ಕೃಷಿಯತ್ತ ಒಲವು ಮೂಡಿಸಬೇಕೆನ್ನುವುದು ಇಲ್ಲಿನ ಎಸ್‌ಡಿಎಂಸಿ, ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಿರ್ಣಯಕ್ಕೆ ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ. ಪಾಠದ ಜತೆಗೆ ಇಲ್ಲಿನ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಖುಷಿಯಿಂದ ಭಾಗವಹಿಸುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಭತ್ತ ಬೇಸಾಯ ಮಾಡುತ್ತಿದ್ದಾರೆ. ಗದ್ದೆಯನ್ನು ಉತ್ತು, ಬಿತ್ತಿ, ನೇಜಿಗೆ ನೀರು, ಗೊಬ್ಬರ ಉಣಿಸಿ ಅವು ತೆನೆ ಅರಳಿಸುವುದನ್ನು ಕಂಡು ಸಂಭ್ರಮಿಸುತ್ತಾರೆ. ಹಿರಿಯರೊಂದಿಗೆ ಸೇರಿ ಕೊಯ್ಲು ಮಾಡಿ, ಭತ್ತ ಬೇರ್ಪಡಿಸುತ್ತಾರೆ.
ಇಲ್ಲಿನ ಗದ್ದೆ ಬೇಸಾಯವನ್ನು ಕಂಡ ಕೆಲವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲೂ ಸಣ್ಣ ಗದ್ದೆಯ ರೀತಿಯಲ್ಲಿ ಭೂಮಿ ಹದ ಮಾಡಿ, ಭತ್ತ ನಾಟಿ ಮಾಡಿ ಭತ್ತ ಬೆಳೆಯುವ ಮೂಲಕ ಕೃಷಿ ಪ್ರೀತಿ ತೋರಿಸಿದ್ದಾರೆ.
ಆಟ-ಪಾಠ-ಊಟ
ಶಾಲೆಯ ಆಟಕ್ಕೆ ಯೋಗ್ಯವಲ್ಲದ ಮೂರು ಸೆಂಟ್ಸ್ ಜಾಗದಲ್ಲಿ ಗದ್ದೆ ಬೇಸಾಯ ನಡೆದಿದೆ. ಗದ್ದೆ ಉಳುಮೆಯಾಗಿ ನೇಜಿ ನಾಟಿಗೆ ಮೊದಲು ಇಲ್ಲಿನ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಕೆಸರು ಗದ್ದೆ ಆಟವಾಡಿ ಖುಷಿ ಪಟ್ಟಿದ್ದರು. ಗದ್ದೆಯಲ್ಲಿ ಮಕ್ಕಳಿಗೆ ನೇಗಿಲ ಯೋಗಿಯ ಪಾಠವಾದ ಬಳಿಕ ಗದ್ದೆ ನಾಟಿಯ ಮಾಹಿತಿ ಪಡೆದು ಭವಿಷ್ಯದ ಊಟಕ್ಕೆ ಸಿದ್ಧತೆ ಮಾಡಿದರು. ಹದ ಮಾಡಿದ ಗದ್ದೆಯಲ್ಲಿ ತಾವೇ ಹಿರಿಯರ ಜತೆ ಸೇರಿ ನಾಟಿ ಮಾಡಿದರು. ನಾಟಿ ಮಾಡಿದ ಭತ್ತದ ಆರೈಕೆ ಮಾಡಿ ಈಗ ಕೊಯ್ಲು ಮಾಡಿದ್ದಾರೆ. ಹೊಸ ಅಕ್ಕಿ ಊಟದ ತಯಾರಿಗೂ ವಿದ್ಯಾರ್ಥಿಗಳೇ ಬಾಣಸಿಗರಾಗಿ ಸಹಕರಿಸಿದ್ದು ವಿಶೇಷ. ಶಿಕ್ಷಕರು ಹಾಗೂ ಬಿಸಿಯೂಟ ಅಡುಗೆಯವರ ಮಾರ್ಗದರ್ಶನ, ಸಹಕಾರದೊಂದಿಗೆ ವಿದ್ಯಾರ್ಥಿಗಳೇ ಹೊಸ ಅಕ್ಕಿ ಊಟವನ್ನು ತಯಾರಿಸಿ ನೆರೆದವರಿಗೆ ಉಣಬಡಿಸಿದರು.
ಭತ್ತ, ತರಕಾರಿ ಕೃಷಿ
ಬಾಳಿಲದ ವಿದ್ಯಾಬೋಧಿನೀ ಶಾಲೆಯ ಗದ್ದೆಯಲ್ಲಿ ಒಂದು ಮುಡಿಯಿಂದ ಒಂದು ಕ್ವಿಂಟಾಲ್ ಅಕ್ಕಿ, ಸೌತೆಕಾಯಿ, ಅಲಸಂಡೆ, ಬೆಂಡೆ, ಬಸಳೆ ಇತ್ಯಾದಿ ತರಕಾರಿಗಳನ್ನು ಬೆಳೆಯಲಾಗುತ್ತದೆ. ವಿದ್ಯಾರ್ಥಿಗಳೇ ಇಲ್ಲಿನ ತರಕಾರಿ ತೋಟದ ಆರೈಕೆ ಮಾಡುತ್ತಾರೆ. ತರಗತಿಯ ಬಿಡುವಿನಲ್ಲಿ ಹಾಗೂ ರಜಾ ದಿನಗಳಲ್ಲಿ ಕೃಷಿ ಚಟುವಟಿಕೆಯ ಕಾರ್ಯ ನಿರ್ವಹಿಸುತ್ತಾರೆ.
ಖುಷಿ ಕೊಟ್ಟಿದೆ
ಆಟದ ಜತೆಗೆ ಕೃಷಿ ಪಾಠ ಪಡೆಯುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಇಲ್ಲಿನ ಕೃಷಿ ಚಟುವಟಿಕೆಗಳು ನಮ್ಮ ಜೀವನ ಪಾಠವಾಗಿದೆ. ಕೃಷಿ ಸಂಸ್ಕೃತಿ ಯನ್ನು ನಮ್ಮ ಮನೆಯಲ್ಲೂ ಮುಂದುವರಿಸುತ್ತೇವೆ. ಹಕ್ಕಿಗಳಿಗೂ ಆಹಾರವಾಗಿ ಉಳಿದ ಭತ್ತವನ್ನು ಕೊಯ್ಲು ಮಾಡಿ ಸಂಭ್ರಮಿಸಿದ್ದೇ ಖುಷಿ.
- ಜೀವನ್, ಶಾಲಾ ವಿದ್ಯಾರ್ಥಿ ನಾಯಕ
ಜೀವನ ಪಾಠ
ಆಟ, ಪಾಠ ಊಟದ ಜತೆಗೆ ಒಂದಷ್ಟು ಜೀವನ ಪಾಠ ನೀಡಿ ಎಳವೆಯಲ್ಲಿಯೇ ಮಕ್ಕಳಿಗೆ ಭತ್ತ ಬೇಸಾಯದ ಒಲವು ಮೂಡಿಸುವ ಉದ್ದೇಶ ನಮ್ಮದು. ಚಿಕ್ಕ ಮಗುವೂ ಭತ್ತವನ್ನು ಕುತೂಹಲದಿಂದ ವೀಕ್ಷಿಸಿ ಊಟದ ಅನ್ನ ಹೇಗೆ ಆಗುತ್ತದೆ ಎನ್ನುವುದನ್ನು ಕೇಳಿ ತಿಳಿದುಕೊಳ್ಳುವುದನ್ನು ನೋಡಿದಾಗ ನಮ್ಮ ಶ್ರಮ ಸಾರ್ಥಕ ಎನಿಸುತ್ತದೆ.
– ಜಾಹ್ನವಿ ಕಾಂಚೋಡು, ಎಸ್‌ಡಿಎಂಸಿ ಅಧ್ಯಕ್ಷೆ
ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.