ಅಸಮರ್ಪಕ ಮರಳು ನೀತಿ ಪ್ರತಿಭಟನೆ, ಮೆರವಣಿಗೆ
Team Udayavani, Nov 17, 2018, 3:01 PM IST
ಪುತ್ತೂರು: ಜಿಲ್ಲೆಯಲ್ಲಿ ಅಸಮರ್ಪಕ ಮರಳು ನೀತಿಯಿಂದ ಪ್ರತಿಯೊಬ್ಬರೂ ಸಂಕಷ್ಟಪಡುವಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನೀತಿಯ ವಿರುದ್ಧ ನ. 19ರಂದು ಮಂಗಳೂರಿನಲ್ಲಿ ಲಾರಿ ಮಾಲಕರು ಮತ್ತು ಮರಳು ವ್ಯಾಪಾರಸ್ಥರ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಲಾರಿ ಚಾಲಕ -ಮಾಲಕರ ಸಂಘದ ಅಧ್ಯಕ್ಷ ರಾಜರತ್ನಂ ಎಚ್ಚರಿಸಿದರು.
ಶುಕ್ರವಾರ ಪುತ್ತೂರಿನಲ್ಲಿ ತಾಲೂಕು ಲಾರಿ ಚಾಲಕ -ಮಾಲಕರ ಮತ್ತು ಮರಳು ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ನಡೆದ ಮೆರವಣಿಗೆ ಮತ್ತು ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ಮರಳಿನ ಕೊರತೆಯಿಂದ ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತವಾಗಿವೆ. ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ, ಲಾರಿ ಮಾಲಕರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷವು ಪ್ರತಿಭಟನೆ ಮಾಡಿ ಮರಳಿನ ಪರ್ಮಿಟ್ ಪಡೆಯಬೇಕಾದ ಪ್ರಮೇಯ ಎದುರಾಗಿದೆ ಎಂದು ಅವರು ಆರೋಪಿಸಿದರು.
ಸಾಲ ಮನ್ನಾ ಮಾಡಿ
ಕಟ್ಟಡ ಕಾರ್ಮಿಕರು, ಟಿಪ್ಪರ್ ವಾಹನಗಳ ಚಾಲಕರು ಹಾಗೂ ಮಾಲಕರು ಮರಳು ಇಲ್ಲದೆ ಬಹಳ ತೊಂದರೆಗೆ ಒಳಗಾಗಿದ್ದಾರೆ. ಟಿಪ್ಪರ್ ವಾಹನಗಳಿಗೆ ಬಾಡಿಗೆ ಇಲ್ಲದೆ ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದರು.
ವಾಹನಗಳು ಮುಟ್ಟುಗೋಲು ಹಾಕಲ್ಪಟ್ಟು ಅದರ ಮಾಲಕರು ಆತ್ಮಹತ್ಯೆ ಮಾಡಿಸಿಕೊಳ್ಳುವ ಪರಿಸ್ಥಿತಿಗೆ ಒಳಗಾಗಿದ್ದಾರೆ. ರೈತರಿಗೆ ಸಾಲ ಮನ್ನ ಮಾಡಿದ ಹಾಗೆ ಟಿಪ್ಪರ್ ಲಾರಿ ಮಾಲಕರಿಗೂ ಸಾಲ ಮನ್ನಾ ಮಾಡಿ ಎಂದು ರಾಜರತ್ನಂ ಒತ್ತಾಯಿಸಿದರು.
ಸಂಘದ ತಾ| ಅಧ್ಯಕ್ಷ ಗಿರೀಶ್ ಪಡ್ಡಾಯೂರು ಮಾತನಾಡಿ, ತಪ್ಪು ಮರಳು ನೀತಿಯನ್ನು ಅನುಸರಿಸುವ ಮೂಲಕ ಜಿಲ್ಲಾಡಳಿತ ಲಾರಿ ಮಾಲಕರ, ಚಾಲಕರು, ಕಟ್ಟಡ ಕಾರ್ಮಿಕರ, ಕಟ್ಟಡ ನಿರ್ಮಾಣ ಎಂಜಿನಿಯರ್ ಮತ್ತು ಗುತ್ತಿಗೆದಾರರ ಬದುಕನ್ನು ಕಸಿದಿದೆ. ರಸ್ತೆ ತೆರಿಗೆ, ಡಿಸಿಲ್ ತೆರಿಗೆ, ಟೋಲ್ ತೆರಿಗೆಗಳನ್ನು ಸರಕಾರಕ್ಕೆ ಪಾವತಿ ಮಾಡಿದ್ದರೂ ಟಿಪ್ಪರ್ ಲಾರಿ ಚಾಲಕ ಮತ್ತು ಮಾಲಕರಿಗೆ ಸರಕಾರ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಹೇಳಿದರು.
ಎಂಜಿನಿಯರ್‌ಗಳಾದ ರಾಘವೇಂದ್ರ ಭಟ್, ಶಂಕರ ಭಟ್, ಸಂತೋಷ್ ಶೆಟ್ಟಿ, ರಮೇಶ್, ಕಿಶೋರ್, ವಸಂತ ಭಟ್, ಸಿವಿಲ್ ಗುತ್ತಿಗೆದಾರರಾದ ಸೂರಜ್ ನಾಯರ್, ನಾಗೇಂದ್ರ ಬಾಳಿಗ, ಜಾಕಿರ್ ಹುಸೇನ್, ಭರತ್ ಕೆ., ನಿತಿನ್, ಸಿರಾಜ್, ನವೀನ್ ಆಳ್ವ, ದಿನೇಶ್ ಅಡ್ವಾರ್, ಕಟ್ಟಡ ಕಾರ್ಮಿಕರು, ಮರಳು ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಭರತ್ ರೈ ಪಾಲ್ತಾಡಿ ಸ್ವಾಗತಿಸಿ, ಸಿರಾಜ್ ವಂದಿಸಿದರು.
ಮೆರವಣಿಗೆ
ನಗರದ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಟಿಪ್ಪರ್ ಲಾರಿಗಳೊಂದಿಗೆ ಪ್ರತಿಭಟನಕಾರರು ಮೆರವಣಿಗೆಯಲ್ಲಿ ಬಂದರು. ಪ್ರತಿಭಟನೆಯ ಬಳಿಕ ದ.ಕ. ಜಿಲ್ಲಾಧಿಕಾರಿಯವರಿಗೆ ಪುತ್ತೂರು ಸಹಾಯಕ ಕಮಿಷನರ್ ಮೂಲಕ ಮನವಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.