ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್!
ಜ. 23ರಂದು ಆರಂಭ; ಎರಡು ವರ್ಷಗಳಿಂದ ನಡೆದಿತ್ತು ಕಾಮಗಾರಿ
Team Udayavani, Jan 21, 2020, 4:19 AM IST
ಸುಳ್ಯ: ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಜ. 23ರ ಅನಂತರ ಮಿತ ದರದಲ್ಲಿ ಊಟ – ಉಪಾಹಾರದ ಭಾಗ್ಯ ಜನರಿಗೆ ದೊರಕಲಿದೆ. ಕಳೆದ ಎರಡು ವರ್ಷದ ಹಿಂದೆ ತಾಲೂಕು ಕಚೇರಿಯ ಮಿನಿ ವಿಧಾನಸೌಧದ ಬಳಿ 5 ಸೆಂಟ್ಸ್ ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಕೆಲವು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡು ಉದ್ಘಾಟನೆಗೆ ಕಾಯುತ್ತಿದ್ದ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ.
ಹಲವು ತೊಡಕು
2017ರ ಎಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ನೆಲ ಸಮತಟ್ಟು ಆಗಿ, ಅಡಿಪಾಯ ಕಾಮಗಾರಿ ಪೂರ್ಣಗೊಂಡ ವೇಳೆ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗಿತ್ತು. ಹಾಗಾಗಿ ನಾಲ್ಕು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಹೊಸ ಸರಕಾರ ಅಧಿಕಾರಕ್ಕೆ ಬಂದು ಈ ಹಿಂದಿನ ಯೋಜನೆ ಮುಂದುವರಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸಿತ್ತು. ಬಳಿಕ ಕಾಮಗಾರಿ ಮರು ಆರಂಭಗೊಂಡು ನಾಲ್ಕು ತಿಂಗಳ ಹಿಂದೆ ಮುಕ್ತಾಯವಾಗಿತ್ತು. ಇಂದಿರಾ ಕ್ಯಾಂಟೀನ್ ಕಟ್ಟಡದ ಉದ್ಘಾಟನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕ ನಿಗದಿಪಡಿಸಲು ಕಾಯಲಾಗಿತ್ತು.
10 ರೂ.ಗೆ ಊಟ
ಇಂದಿರಾ ಕ್ಯಾಂಟೀನ್‌ನಲ್ಲಿ 10 ರೂ.ಗೆ ಊಟ, 5 ರೂ.ಗೆ ತಿಂಡಿ ನೀಡಲಾಗುತ್ತದೆ. ಸುತ್ತೋಲೆಯಲ್ಲಿ ಇರುವ ಮೆನು ಪ್ರಕಾರ, ಬೆಳಗ್ಗೆ ಉಪಾಹಾರವಾಗಿ ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ, ಉಪ್ಪಿಟ್ಟು, ಖಾರ ಪೊಂಗಲ್ (ವಾರದಲ್ಲಿ ಒಂದರಂತೆ) ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾರು, ಉಪ್ಪಿನಕಾಯಿ, ಹಪ್ಪಳ, ರವಿವಾರ ಬಿಸಿ ಬೇಳೆ ಬಾತ್, ತರಕಾರಿ, ಅನ್ನ, ಪುಳಿಯೋಗರೆ (ಪ್ರತಿ ವಾರದಲ್ಲಿ ಒಂದು ದಿನ). ಇಲ್ಲಿಗೆ ಕೇಂದ್ರೀಕೃತ ಅಡುಗೆ ಮನೆ ಮೂಲಕ ಆಹಾರ ಪೂರೈಸಬೇಕಿದೆ. ಈ ಮಾದರಿಯಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕ್ಯಾಂಟೀನ್ ಆರಂಭಗೊಂಡಿದೆ. ಊಟ ಹಾಗೂ ಉಪಾಹಾರ ವಿತರಣೆ ನಡೆಯುತ್ತಿದೆ.
ಸ್ಥಳೀಯಾಡಳಿತದ ಪಾತ್ರ
ಕ್ಯಾಂಟೀನ್ ನಿರ್ಮಿಸಲು ಸ್ಥಳ, ಕುಡಿಯುವ ನೀರು, ತ್ಯಾಜ್ಯ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ, ನಿರ್ವಹಣೆ ಹೊಣೆ ಸ್ಥಳೀಯಾಡಳಿತದ್ದು. ಕ್ಯಾಂಟೀನ್ ಸ್ಥಾಪನೆಗೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಸ್ಥಳ ಒದಗಿಸಿದೆ. ಇನ್ನುಳಿದ ಕಟ್ಟಡ ನಿರ್ಮಾಣ, ಆಹಾರ ಪೂರೈಕೆಗೆ ರಾಜ್ಯಮಟ್ಟದಲ್ಲೇ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಅದರ ಜವಾಬ್ದಾರಿ ವಹಿಸಲಿದೆ.
32 ಲಕ್ಷ ರೂ. ವೆಚ್ಚ
ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 32 ಲಕ್ಷ ರೂ. ವೆಚ್ಚ ತಗಲುತ್ತದೆ ಅನ್ನುವುದು ಸರಕಾರದ ಅಂದಾಜು.
ರೆಡಿಮೇಡ್ ಕಟ್ಟಡ
ತಳಪಾಯ ಕಾಮಗಾರಿಯೊಂದನ್ನು ಹೊರತುಪಡಿಸಿ ಗೋಡೆ, ಛಾವಣಿ ಎಲ್ಲವೂ ರೆಡಿಮೇಡ್ ಮಾದರಿಯದ್ದು. ಹೊರಭಾಗದಿಂದ ಪರಿಕರ ತರಲಾಗಿದೆ. ಕ್ರೇನ್ ಸಹಾಯದಿಂದ ರೆಡಿಮೇಡ್ ಗೋಡೆಗಳನ್ನು ಜೋಡಿಸಲಾಗಿದೆ. ಸಿಮೆಂಟ್, ಕಬ್ಬಿಣ ಮಿಶ್ರಿತ ಪಿಲ್ಲರ್, ಗೋಡೆಗಳಿಗೆ ಆಧಾರ ಕಂಬ ಇವೆ. ಛಾವಣಿ ಕೆಲಸ, ಆವರಣ ಗೋಡೆ ಸಹಿತ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
“ಉದಯವಾಣಿ’ ಸುದಿನ ವರದಿ
ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬದ ಬಗ್ಗೆ “ಉದಯವಾಣಿ ಸುದಿನ ಹಲವು ಬಾರಿ ಬೆಳಕು ಚೆಲ್ಲಿ ಜನಪ್ರತಿನಿಧಿಗಳ, ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿತ್ತು. ಇದೀಗ ಬಹು ನಿರೀಕ್ಷಿತ ಯೋಜನೆ ಉದ್ಘಾಟನೆಗೆ ಅಣಿಯಾಗಿದೆ.
ಸಚಿವರಿಂದ ಲೋಕಾರ್ಪಣೆ
ಇಂದಿರಾ ಕ್ಯಾಂಟೀನ್ ಅನ್ನು ಜ. 23ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಅದಾದ ಬಳಿಕ ಮಿತ ದರದಲ್ಲಿ ಜನರಿಗೆ ಊಟ-ಉಪಾಹಾರದ ಸೇವೆ ದೊರೆಯಲಿದೆ.
– ಎಸ್. ಅಂಗಾರ , ಶಾಸಕರು, ಸುಳ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.