Kadaba: ಇಲ್ಲಿ ಸಿಬಂದಿ ಜತೆ ಗದ್ದುಗೆಯೂ ಖಾಲಿ ಖಾಲಿ!
ಪಟ್ಟಣ ಪಂಚಾಯತ್ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ನಿಗದಿಯಾದರೂ ಸದಸ್ಯರೇ ಇಲ್ಲ
Team Udayavani, Jan 2, 2025, 12:41 PM IST
ಕಡಬ: ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷ ಕಳೆಯಿತು. ಆಡಳಿತ ನಡೆಸಲು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲಾತಿ ಕೂಡ ಪ್ರಕಟಿಸಲಾಗಿದೆ. ಆದರೆ ಅವರ ಆಯ್ಕೆಗೆ ಸದಸ್ಯರೇ ಇಲ್ಲ! ಅಂದರೆ ಪಟ್ಟಣ ಪಂಚಾಯತ್ ರಚನೆಯಾಗಿ ಇಷ್ಟು ಸಮಯ ಕಳೆದರೂ ಜನ ಪ್ರತಿನಿಧಿ ಆಯ್ಕೆಗಾಗಿ ಈ ವರೆಗೆ ಚುನಾವಣೆಯೇ ನಡೆದಿಲ್ಲ. ಚುನಾವಣೆ ನಡೆಸಲು ಇಲ್ಲಿನವರ ಕೂಗು ಅರಣ್ಯರೋದನವಾಗಿದೆ. ಆರಂಭದಿಂದಲೂ ಅಧಿಕಾರಿಗಳ ಪಾರುಪತ್ಯದಲ್ಲೇ ಇರುವ ಇಲ್ಲಿನ ಸಮಸ್ಯೆಗಳನ್ನು ಸದ್ಯ ಕೇಳುವವರೇ ಇಲ್ಲದಂತಾಗಿದೆ.
ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ತಾಲೂಕು ಕೇಂದ್ರವಾಗಿರುವ ಕಡಬ ಪಟ್ಟಣ ಗ್ರಾಮ ಪಂಚಾಯತ್‌ನಿಂದ ಸಹಜವಾಗಿ ಜನಸಂಖ್ಯೆ ಆಧಾರದಲ್ಲಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಹಿಂದೆ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದಲ್ಲಿಯೇ ಪಟ್ಟಣ ಪಂಚಾಯತ್ ಕಾರ್ಯನಿರ್ವಹಿಸುತ್ತಿದ್ದು, ಹಿಂದೆ ಗ್ರಾಮ ಪಂಚಾಯತ್‌ನಲ್ಲಿ ಸಿಬಂದಿಯಾಗಿದ್ದವರೇ ಪಟ್ಟಣ ಪಂಚಾಯತ್ ಸಿಬಂದಿಯಾಗಿದ್ದಾರೆ.
ಗ್ರಾಮ ಪಂಚಾಯತ್ ನಿಂದ ಪಟ್ಟಣ ಪಂಚಾಯತ್ ಗೆ ಮೇಲ್ದರ್ಜೆಗೇರಿದಾಗ ಒಂದೆರಡು ವರ್ಷ ಕಡತಗಳನ್ನು ತಯಾರಿಸಿ ಕಂಪ್ಯೂಟರ್ ಗೆ ಅಪ್‌ಲೋಡ್ ಮಾಡುವುದೆ ಕೆಲಸವಾಯಿತು. ಪ್ರಾರಂಭದಲ್ಲಿ ಪ್ರಭಾರ ಮುಖ್ಯಾಧಿಕಾರಿ ಕಾರ್ಯನಿರ್ವಹಿಸಿದರೆ ಬಳಿಕ ಮುಖ್ಯಾಧಿಕಾರಿಯವರ ಹುದ್ದೆ ಭರ್ತಿ ಮಾಡಲಾಯಿತು. ಆಡಳಿತಾಧಿಕಾರಿಯಾಗಿ ಕಡಬ ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ಧಾರೆ.
40 ಹುದ್ದೆಗಳಲ್ಲಿ 33 ಹುದ್ದೆಗಳು ಖಾಲಿ
ಕಡಬ ಪಟ್ಟಣ ಪಂಚಾಯತ್‌ನಲ್ಲಿ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಹುದ್ದೆ ಮಾತ್ರ ಭರ್ತಿಯಾಗಿದ್ದು, ಉಳಿದ ಹುದ್ದೆಗಳು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 40 ಹುದ್ದೆಗಳಿದ್ದು ಆ ಪೈಕಿ 33 ಹುದ್ದೆಗಳು ಖಾಲಿ ಇದೆ. ಈ ಹಿಂದೆ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಮಂದಿ ಸಿಬ್ಬಂದಿಗಳು ಪಟ್ಟಣ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರನ್ನು ನೇರ ಪಾವತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ಸಿಬಂದಿಯನ್ನು ಹೊರಗುತ್ತಿಗೆಯಾಧಾರಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಇರುವ ಸಿಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ.
ಪ್ರಭಾರ ನೆಲೆಯವರು ಯಾವ ದಿನ ಕಚೇರಿಯಲ್ಲಿ ಲಭ್ಯರಿರುತ್ತಾರೆ ಎನ್ನುವ ಮಾಹಿತಿಯೂ ಸ್ಪಷ್ಟವಿಲ್ಲ. ಅದರಿಂದಾಗಿ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಜನರು ಕೆಲವೊಂದು ಕೆಲಸ ಕಾರ್ಯಗಳಿಗೆ ಪದೇ ಪದೇ ಪಂಚಾಯತ್‌ಗೆ ಅಲೆಯುವಂತಾಗಿದೆ.
ಕೆಲಸಗಳಿಗೆ ಅಲೆದಾಟ: ಜನರ ಆಕ್ರೋಶ
ವ್ಯಾಪಾರ ಪರವಾನಿಗೆಯಿಂದ ಹಿಡಿದು ವಿವಿಧ ಕೆಲಸ ಕಾರ್ಯಗಳಿಗೆ ದಿನ ನಿತ್ಯ ಹಲವಾರು ಗ್ರಾಮಸ್ಥರು ಪಂಚಾಯತ್‌ಗೆ ಭೇಟಿ ನೀಡುತ್ತಿದ್ದು, ಇಲ್ಲಿ ಕೆಲಸಗಳಿಗಾಗಿ ಪದೇ ಪದೇ ಅಲೆದಾಡಬೇಕಿದೆ ಎನ್ನುವುದು ಬಹುತೇಕ ಗ್ರಾಮಸ್ಥರ ಆರೋಪ. ಬಹುತೇಕ ಸಂದರ್ಭಗಳಲ್ಲಿ ಇಲ್ಲಿ ಕೊಟ್ಟ ಅರ್ಜಿಗಳು, ದಾಖಲೆಗಳು ನಾಪತ್ತೆಯಾಗುತ್ತವೆ. ತಿಂಗಳು ಗಟ್ಟಳೆ ಅದನ್ನು ಹುಡುಕಿ ಕೊನೆಗೆ ಹೊಸ ಅರ್ಜಿ, ದಾಖಲೆಗಳನ್ನು ಕೊಡುವ ಅನಿವಾರ್ಯ ಪರಿಸ್ಥಿತಿ ಎದುರಾದ ಹಲವು ಉದಾಹರಣೆಗಳು ಇಲ್ಲಿವೆ.
ಅನುದಾನ ಬಳಕೆ ಅಸಮರ್ಪಕ: ಆರೋಪ
ಪಟ್ಟಣ ಪಂಚಾಯತ್ ನಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿವೆ. ಆದರೆ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎಂಬಂತೆ ಈ ಹಿಂದೆ ಕಡಬಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ನಗರೋತ್ಥಾನ ಯೋಜನೆಯ ಕಾಮಗಾರಿ ಪರಿಶೀಲಿಸಿ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜತೆಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯ. ಆದರೆ ಇಲ್ಲಿ ಕೇವಲ ಅಧಿಕಾರಿಗಳದ್ದೇ ಆಡಳಿತ.
13 ವಾರ್ಡ್‌ಗಳಾಗಿ ವಿಂಗಡನೆ
ಈಗಾಗಲೇ ಕಳಾರ, ಕೋಡಿಬೈಲು, ಪನ್ಯ, ಬೆದ್ರಾಜೆ, ಮಾಲೇಶ್ವರ, ಕಡಬ, ಪಣೆಮಜಲು, ಪಿಜಕಳ, ಮೂರಾಜೆ, ದೊಡ್ಡಕೊಪ್ಪ, ಕೋಡಿಂಬಾಳ, ಮಜ್ಜಾರು, ಪುಳಿಕುಕ್ಕು ಎಂಬ 13 ವಾರ್ಡುಗಳನ್ನಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ಎರಡು ಗ್ರಾಮಗಳಲ್ಲಿ 10500 ಜನಸಂಖ್ಯೆ ಇದೆ.
ತಯಾರಾಗದ ಮತದಾರರ ಪಟ್ಟಿ
ಪಟ್ಟಣ ಪಂಚಾಯತ್ ರಚನೆಯಾಗಿ 4 ವರ್ಷ ಕಳೆದರೂ ಇದರ ವ್ಯಾಪ್ತಿಯ ಮತದಾರರ ಪಟ್ಟಿ ಮಾಡಲು ಸಂಬಂಧಿಸಿದ ಇಲಾಖೆಗೆ ಆಗದಿರುವುದು ಚುನಾವಣೆ ಪ್ರಕ್ರಿಯೆ ವಿಳಂಬಕ್ಕೆ ಒಂದು ಮುಖ್ಯ ಕಾರಣ ಎಂದು ಇದೀಗ ಹೇಳಲಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ನಿಗದಿಯಾದ ಮೀಸಲಾತಿ ರದ್ದಾಗಿದೆ ಎಂಬ ಸುದ್ದಿಯೂ ಈಗ ಹರಿದಾಡಲು ಆರಂಭಿಸಿದೆ.
ಕಡಬ ಪ.ಪಂ.ವ್ಯಾಪ್ತಿಯ ವಾರ್ಡ್ ವಿಂಗಡಣೆ ಇತ್ಯಾದಿ ಕೆಲಸಗಳು ಈಗಾಲೇ ಪೂರ್ತಿಗೊಂಡಿದೆ. ಅಗತ್ಯ ಸಿಬಂದಿ ನೇಮಕ ಮತ್ತು ಶೀಘ್ರ ಇಲ್ಲಿ ಚುನಾವಣೆ ನಡೆಸಿ ಜನರಿಗೆ ಅನುಕೂಲವಾಗುವಂತೆ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳನ್ನು ಆರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರಿಗೆ ಒತ್ತಡ ಹೇರಲಾಗುವುದು.
-ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ
-ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.