ಶಾಲೆ ಮುಚ್ಚಲು ಸರಕಾರದ ನೀತಿ ಕಾರಣ
ಕಡಬ ತಾ| ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾರಾಯಣ ಭಟ್
Team Udayavani, Feb 29, 2020, 4:26 AM IST
ರಾಮಕುಂಜ: ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ತಾ.ಪಂ. ಸದಸ್ಯೆ ಜಯಂತಿ ಆರ್. ಗೌಡ ಚಾಲನೆ ನೀಡಿದರು.
ರಾಮಕುಂಜ (ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆ): ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕವಾಗದೆ ಮುಚ್ಚುವ ಭೀತಿ ಎದುರಾಗಿದೆ. ಹಳ್ಳಿಯ ಕನ್ನಡ ಶಾಲೆಗಳಿಗೆ ಸೌಲಭ್ಯಗಳಿಲ್ಲದೆ ಮಕ್ಕಳೇ ಬರುತ್ತಿಲ್ಲ. ಅವೂ ಬಾಗಿಲು ಮುಚ್ಚುವ ಆತಂಕದಲ್ಲಿವೆ. ಈ ಸ್ಥಿತಿಗೆ ಸರಕಾರದ ನೀತಿಗಳೇ ಕಾರಣ. ಮಕ್ಕಳಿಲ್ಲದೆ ಶಿಕ್ಷಕರಿಲ್ಲ, ಶಿಕ್ಷಕರಿಲ್ಲದೆ ಮಕ್ಕಳಿಲ್ಲ ಎನ್ನುವ ಸತ್ಯವನ್ನು ಸರಕಾರ ಹಾಗೂ ಸಮಾಜ ಅರ್ಥ ಮಾಡಿಕೊಂಡು ಕನ್ನಡ ಶಾಲೆಗಳನ್ನು ಉಳಿಸಬೇಕು ಎಂದು ಕಡಬ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಟಿ. ನಾರಾಯಣ ಭಟ್ ಮನವಿ ಮಾಡಿದರು.
ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಮಕುಂಜ ಶತಮಾನ ಕಂಡ ವಿದ್ಯಾಸಂಸ್ಥೆಗಳಿರುವ ಊರು. ವಿದ್ವಾಂಸರ ನೆಲ. ಪೇಜಾವರ ಶ್ರೀ ವಿಶ್ವೇಶತೀರ್ಥರು ರಾಮಕುಂಜಕ್ಕೆ ನೀಡಿದ ಶೈಕ್ಷಣಿಕ ಕೊಡುಗೆ ದೊಡ್ಡ ಸಂಪತ್ತು. ಅವರಿಗೆ ಸಮರ್ಪಿತವಾಗಿರುವ ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನನ್ನ ಪಾಲಿಗೆ ಸಿಕ್ಕಿದ ದೊಡ್ಡ ಗೌರವ ಎಂದು ಹೇಳಿದರು.
ಗಟ್ಟಿ ಬೇರಿನ ಭಾಷೆ
ಕನ್ನಡ ಭಾಷೆ ಗಟ್ಟಿ ಬೇರುಗಳನ್ನು ಬಿಟ್ಟಿದೆ. ಆದರೆ, ಭಾಷಾ ಶುದ್ಧಿ, ಶೈಲಿ ಕವಲು ಹಾದಿಯಲ್ಲಿದೆ. ಯಕ್ಷಗಾನ ಕರಾವಳಿಯ ಜನರಲ್ಲಿ ಮೌಲ್ಯಗಳನ್ನು ತುಂಬಿದೆ. ತಾಳಮದ್ದಳೆಯನ್ನು ಜನಸಾಮಾನ್ಯರತ್ತ ಒಯ್ಯಬಲ್ಲ ಸಾಹಸ ನಡೆದಲ್ಲಿ ಮುಂದಿನ ತಲೆಮಾರು ನೈತಿಕತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ನಾರಾಯಣ ಭಟ್ ಹೇಳಿದರು.
ಕಲಿಕಾ ಮಾಧ್ಯಮ ಯಾವುದೇ ಇರಲಿ, ಕನ್ನಡ ಮರೆಯಲು ಸಾಧ್ಯವಿಲ್ಲ. ಯಶಸ್ಸು ಪಡೆಯಲು ಇಂಗ್ಲಿಷ್ ಒಂದೇ ಸಾಲದು. ಸ್ಥಳೀಯ ಭಾಷೆಯ ಮೇಲೂ ಹಿಡಿತ ವಿರಬೇಕು. ಮಕ್ಕಳು ಸುಲಲಿತವಾಗಿ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿದ್ದಾರೆ. ಭಾಷಾ ಸಿದ್ಧಿ ನಮಗೆ ವರವಾಗಲಿ. ಪ್ರತಿ ಮನೆಯಲ್ಲೂ ಪುಟ್ಟ ಗ್ರಂಥಾಲಯವಿರಲಿ ಎಂದು ಆಶಿಸಿದರು.
ಮುಖಪುಟ ಬರೆದ ಬಿಇಒ!
ಶಾಲೆಯಲ್ಲಿ ಅದ್ಭುತ ಕಲ್ಪನೆಗಳು ಸಾಕಾರಗೊಂಡಿವೆ. ಅವುಗಳನ್ನು ನೀವೇಕೆ ಕೃತಿ ರೂಪದಲ್ಲಿ ಇಳಿಸಬಾರದು ಎಂದು ಚೆನ್ನೈಯ ಶಿಕ್ಷಣ ಪ್ರೇಮಿ ಜಗದೀಶ ಅಡಪ ಪ್ರಶ್ನಿಸಿದರು. ವಿ.ಬಿ. ಅರ್ತಿಕಜೆಯವರೂ ಪ್ರೋತ್ಸಾಹ ನೀಡಿದ್ದರಿಂದ “ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ಕೃತಿ ಹೊರಬಂತು. ಈ ಪುಸ್ತಕದ ಸುಮಾರು 25 ಸಾವಿರ ಪ್ರತಿಗಳು ಮಾರಾಟವಾದವು. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರೇ ಅದಕ್ಕೆ ಮುಖಪುಟ ರಚಿಸಿದ್ದರು. “ನಮ್ಮ ಮಕ್ಕಳಿಗೇನು ಕಲಿಸ್ಬೇಕು’ ಕೃತಿಯ ಸುಮಾರು 40 ಸಾವಿರ ಪ್ರತಿಗಳು ಓದುಗರ ಕೈ ಸೇರಿವೆ. ಉಪನಯನ, ಮದುವೆ, ಶಾಲಾ- ಕಾಲೇಜುಗಳ ಕಾರ್ಯ ಕ್ರಮಗಳಲ್ಲಿ ಪುಸ್ತಕಗಳ ಕೊಡುಗೆ ನೀಡುವ ಪದ್ಧತಿ ಬೆಳೆಯಬೇಕು. ಈ ಮೂಲಕ ಸಾಹಿತ್ಯ ಸಮ್ಮೇಳನಗಳ ಆಶಯ ಈಡೇರಬೇಕು ಎಂದು ಹೇಳಿದರು.
ಇಂದು ಪುಸ್ತಕ ಓದುವವರಿಲ್ಲ ಎಂಬ ಟೀಕೆ ಇದೆ. ಐಸ್‌ಕ್ರೀಂ ಗಾಡಿಯ ಹತ್ತಿರ ಹೋದಂತೆ ಪುಸ್ತಕದ ಅಂಗಡಿಗೆ ಯಾರೂ ಹೋಗಲಾರರು. ಇದನ್ನರಿತ ಪುತ್ತೂರು ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಂಕೀರಿ, ಜನರ ಬಳಿಗೇ ಪುಸ್ತಕಗಳನ್ನು ಹೊತ್ತು ಮಾರುವ ಸಂಚಾರಿ ಪುಸ್ತಕ ಪರಿಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಅವರು ಸಾಹಿತಿ ಅಲ್ಲದಿದ್ದರೂ ಸಾಹಿತ್ಯ ಪರಿಚಾರಕರು. ಈ ಪರಿಸರದ ಲೇಖಕರ ಕೃತಿಗಳನ್ನು ವಿನ್ಯಾಸ ಮಾಡಿ ಕೊಡುವ ಜಯಲಕ್ಷ್ಮೀ ಅವರ ಸೇವೆಯೂ ಅನನ್ಯ ಎಂದು ಶ್ಲಾಘಿಸಿದರು.
ಸಮಾಜವನ್ನು ಸದೃಢವಾಗಿ ಕಟ್ಟಬೇಕಿದ್ದರೆ ವೈದ್ಯ, ಎಂಜಿನಿಯರ್, ಧಾರ್ಮಿಕ ನೇತಾರ, ಚಾಲಕ, ಪ್ಲಂಬರ್, ಕೃಷಿಕ, ಕೂಲಿಕಾರ್ಮಿಕ ಹೀಗೆ ಎಲ್ಲ ವರ್ಗದ ಜನರಿರಬೇಕು. ಸಾಹಿತ್ಯದಲ್ಲೂ ವಿದ್ವತೂ³ರ್ಣ ಕೃತಿಗಳ ಜತೆಗೆ ಜನಸಾಮಾನ್ಯರು ಓದುವಂತಹ ಪುಸ್ತಕಗಳೂ ಬೇಕು. ಎಲ್ಲೆಲ್ಲೂ ಸ್ಟಾರ್ ಹೊಟೇಲ್‌ಗಳೇ ತುಂಬಿದ್ದರೆ ಸಾಮಾನ್ಯರ ಗತಿಯೇನು?ಎಂದು ಪ್ರಶ್ನಿಸಿದರು.
ಭಾವನಾತ್ಮಕ ನಂಟು
ಪುತ್ತೂರಿನ ಸಾಹಿತ್ಯ ಎಂದರೆ ನೆನಪಾಗುವುದು ಬಾಲವನ ಹಾಗೂ ಡಾ| ಶಿವರಾಮ ಕಾರಂತರು. ಪುತ್ತೂರಿನ ಅವಿಭಾಜ್ಯ ಅಂಗದಂತಿದ್ದ ಕಡಬ ಪುತ್ತೂರಿನಿಂದ ಕಂದಾಯ ಕ್ಷೇತ್ರದ ದೃಷ್ಟಿಯಿಂದ ಬೇರ್ಪಟ್ಟಿರಬಹುದು. ಆದರೆ ಪುತ್ತೂರಿನ ಭಾವನಾತ್ಮಕ ನಂಟು ಬಿಡಲು ಸಾಧ್ಯವಿಲ್ಲ. ಕಡಬ ತಾಲೂಕಿನ ಆಶಾಕಿರಣ ಸುಬ್ರಹ್ಮಣ್ಯ ಕ್ಷೇತ್ರದ ಸೇರ್ಪಡೆ. ಶಾಂತಿ ಮೊಗರು ಸೇತುವೆ ಸವಣೂರು, ಕಾಣಿ ಯೂರನ್ನು ಹತ್ತಿರಕ್ಕೆ ತಂದಿದೆ ಎಂದು ಟಿ. ನಾರಾಯಣ ಭಟ್ ಹೇಳಿದರು.
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.