ಕರ್ನಾಟಕ-ಕೇರಳ ರಸ್ತೆ: ಸಂಪರ್ಕ ಕಡಿತಗೊಳ್ಳುವ ಭೀತಿ
ಕರ್ನೂರು ಮಠದಲ್ಲಿ ಅಪಾಯಕಾರಿ ಹೊಂಡ
Team Udayavani, Nov 5, 2019, 3:11 AM IST
ಈಶ್ವರಮಂಗಲ: ಪಳ್ಳತ್ತೂರು ಸೇತುವೆ ನಿರ್ಮಾಣ ಕಾಮಗಾರಿ ಕಾರಣಕ್ಕೆ ಸದ್ಯ ಪಂಚೋಡಿ – ಕರ್ನೂರು – ಗಾಳಿಮುಖ ಜಿಲ್ಲಾ ಪಂಚಾಯತ್ ರಸ್ತೆಯ ಮೂಲಕವೇ ಕೇರಳ ರಾಜ್ಯದ ಸಂಪರ್ಕ ಸಾಧ್ಯವಾಗುತ್ತಿದೆ. ಆದರೆ, ಆ ರಸ್ತೆಯೂ ಅಲ್ಲಲ್ಲಿ ಹದಗೆಟ್ಟಿದ್ದು, ಇಲ್ಲಿನ ಕರ್ನೂರು ಮಠ ಎನ್ನುವಲ್ಲಿ ಅಪಾಯಕಾರಿ ಹೊಂಡ ನಿರ್ಮಾಣವಾಗಿದ್ದು, ಸಂಪರ್ಕ ಕಡಿತದ ಭೀತಿಯೂ ಉಂಟಾಗಿದೆ.
ಕಾವು – ಪಳ್ಳತ್ತೂರು ಲೋಕೋಪಯೋಗಿ ರಸ್ತೆ ಮೂಲಕ ಕಾಸರಗೋಡು ರಸ್ತೆಗೆ ಸಂಪರ್ಕ ಕಲ್ಪಿಸುವ ಪಳ್ಳತ್ತೂರು ಎಂಬಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಒಂದೂವರೆ ವರ್ಷದಿಂದ ನಡೆಯುತ್ತಿದೆ.
ಪರ್ಯಾಯ ಮಾರ್ಗವಾದ ಪಂಚೋಡಿ – ಕರ್ನೂರು – ಗಾಳಿಮುಖ ಜಿಲ್ಲಾ ಪಂಚಾಯತ್ ರಸ್ತೆಯೂ ಕೆಲವು ಕಡೆಗಳಲ್ಲಿ ತೀರಾ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ. ರಸ್ತೆ ಕೆಲವೊಂದು ಕಡೆಗಳಲ್ಲಿ ಅಗಲ ಕಿರಿದಾಗಿದ್ದು, ಘನ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಅಪಾಯದ ಸ್ಥಳ
ಪಂಚೋಡಿ ಕರ್ನೂರು ಗಾಳಿಮುಖ ಜಿ.ಪಂ. ರಸ್ತೆಯಲ್ಲಿ ಪ್ರತಿ ನಿತ್ಯ ನೂರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಕರ್ನೂರು ಮಠ ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಹೊಂಡ ಸೃಷ್ಟಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಬಿರುಕುಬಿಟ್ಟ ಮೋರಿ
ಕರ್ನೂರು ರಸ್ತೆಯಲ್ಲಿ ಕರ್ನೂರು ಮಠ ಎಂಬಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಅಳವಡಿಸಿರುವ ಮೋರಿಯೊಂದು ಬಿರುಕುಬಿಟ್ಟಿದ್ದು, ಮುರಿದು ಬೀಳುವ ಹಂತದಲ್ಲಿದೆ. ಇದೇ ಮೋರಿಯ ಒಂದು ಭಾಗದಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ಈ ಸ್ಥಳವು ವಾಹನ ಸವಾರರು, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಪ್ರತಿ ನಿತ್ಯ ಇಲ್ಲಿನ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಮೋರಿಯ ಒಂದು ಬದಿಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣ ಆಗಿರುವುದರಿಂದ ಪಾದಚಾರಿಗಳು ಜೀವಭಯದಲ್ಲೇ ಸಂಚರಿಸಬೇಕಾಗಿದೆ.
ಕಾದಿದೆ ಅಪಾಯ
ಮೋರಿಯ ತಳಭಾಗ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಘನ ವಾಹನಗಳು ಸಂಚರಿಸುವಾಗ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಮೋರಿಯ ಎರಡೂ ಬದಿಗಳಲ್ಲಿ ಯಾವುದೇ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಹೊಂಡಕ್ಕೆ ಬೀಳುವ ಅಪಾಯವಿದೆ. ಪ್ರತಿನಿತ್ಯ ಶಾಲಾ, ಕಾಲೇಜು ಮಕ್ಕಳು ನಡೆದುಕೊಂಡು ಹೋಗುತ್ತಿದ್ದು, ಆಯ ತಪ್ಪಿ ಹೊಂಡಕ್ಕೆ ಬಿದ್ದರೆ ಪ್ರಾಣಾಪಾಯವೂ ಆದೀತು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಸಾರ್ವಜನಿಕರು ಮನವಿ.
ಜೀವಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ
ಅಪಾಯದ ಸ್ಥಿತಿಯಲ್ಲಿರುವ ಮೋರಿ ಹಾಗೂ ಹೊಂಡದ ಬಗ್ಗೆ ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಅವರು ಎಂಜಿನಿಯರ್ ಗೋವರ್ಧನ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಂಜಿನಿಯರ್, ಕಾಮಗಾರಿ ಬಗ್ಗೆ ಅಂದಾಜು ಪಟ್ಟಿಯನ್ನೂ ತಯಾರಿಸಿದ್ದಾರೆ. ಕಾಮಗಾರಿ ಯಾವಾಗ ಆರಂಭವಾಗುತ್ತದೋ ಕಾದು ನೋಡಬೇಕಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಕೆರೆ ಇರುವ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಅದನ್ನು ಮುಚ್ಚಿಸುವ ಗೋಜಿಗೆ ಅವರು ಹೋಗಿರಲಿಲ್ಲ. ಕೆರೆಯನ್ನು ಮುಚ್ಚಬೇಕಾದರೆ ಅದಕ್ಕೆ ಮುನ್ನ 4 ಜೀವಗಳು ಬಲಿಯಾಗಬೇಕಾಯಿತು. ಕರ್ನೂರು ಮಠದ ಈ ಅಪಾಯಕಾರಿ ಮೋರಿ ಮತ್ತು ಅಪಾಯಕಾರಿ ಹೊಂಡದ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಹೊಂಡ ಮುಚ್ಚಲು, ಮೋರಿ ದುರಸ್ತಿ ಮಾಡಲು ಮುಂದಾಗಿಲ್ಲ.
ಅಪಾಯ ಇದೆ
ಇದು ಜಿಲ್ಲಾ ಪಂಚಾಯತ್ ರಸ್ತೆ. ಕರ್ನೂರು ಮಠ ಎಂಬಲ್ಲಿ ಅಪಾಯಕಾರಿ ಹೊಂಡ ಇದೆ. ಮೋರಿ ಕೂಡ ಬಿರುಕುಬಿಟ್ಟಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ಇದು ತುಂಬಾ ಅಪಾಯಕಾರಿಯಾಗಿದೆ. ಎಂಜಿನಿಯರ್ ಪರಿಶೀಲನೆ ಮಾಡಿ, ಅಂದಾಜು ಪಟ್ಟಿ ಮಾಡಿದ್ದಾರೆ. ಇಲ್ಲಿ ಅಪಾಯ ಇದೆ. ಶೀಘ್ರವಾಗಿ ಮೋರಿ ರಚನೆ, ತಡೆಗೋಡೆ ನಿರ್ಮಾಣವಾಗಬೇಕು.
– ಶ್ರೀರಾಮ್ ಪಕ್ಕಳ, ಉಪಾಧ್ಯಕ್ಷರು, ನೆ.ಮುಟ್ನೂರು ಗ್ರಾ.ಪಂ.
ಅಧಿಕಾರಿಗಳು ಗಮನ ಹರಿಸಲಿ
ಕರ್ನೂರು ಮಠ ಎಂಬಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಪ್ರತಿನಿತ್ಯ ಹಲವು ಮಕ್ಕಳು ಇದೇ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ರಸ್ತೆ ಬದಿಯೇ ಹೊಂಡ ಇರುವುದರಿಂದ ಜನರಿಗೆ ತುಂಬಾ ತೊಂದರೆ ಇದೆ. ಮೋರಿ ಕೂಡ ಬಿರುಕುಬಿಟ್ಟಿದೆ. ವಾಹನ ಸವಾರರಿಗೆ, ಪಾದಚಾರಿಗಳಿಗೆ ಇಲ್ಲಿ ಅಪಾಯ ಇದೆ. ಅಧಿಕಾರಿಗಳು ಕೂಡಲೇ ಗಮನಹರಿಸಬೇಕಾಗಿದೆ.
– ಸಿ.ಕೆ. ಅಬ್ದುಲ್ ಖಾದರ್ ಕರ್ನೂರು, ವಾಹನ ಚಾಲನ ತರಬೇತುದಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.