Koukradi: ಸರಕಾರಿ ಜಮೀನಿನಲ್ಲಿರುವ ಗುಡಿಸಲು ತೆರವಿಗೆ ಆದೇಶ; ದಯಾಮರಣ ಕೋರಿದ ವೃದ್ಧ ದಂಪತಿ!
Team Udayavani, Feb 19, 2024, 7:45 AM IST
ಕಡಬ: ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕೌಕ್ರಾಡಿಯ ವೃದ್ಧ ದಂಪತಿ ತಮಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ!
ರಾಧಮ್ಮ-ಮುತ್ತುಸ್ವಾಮಿ ದಂಪತಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸರಕಾರಿ ಜಾಗದಲ್ಲಿ 6 ವರ್ಷಗಳಿಂದ ವಾಸವಾಗಿದ್ದಾರೆ.ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದಿರುವ ಅವರು 6 ವರ್ಷಗಳ ಹಿಂದೆ ಕೆಲಸಕ್ಕಾಗಿ ಆಗಮಿಸಿ, ಕೌಕ್ರಾಡಿಯಲ್ಲೇ ಕೂಲಿ ಕೆಲಸ ಮಾಡುತ್ತಾ ನೆಲೆಸಿ ತಮ್ಮದೇ ಮನೆ ಬೇಕೆಂಬ ಕನಸು ಕಂಡು ತಾವು ಕೂಡಿಟ್ಟ ಸುಮಾರು 50 ಸಾವಿರ ರೂ.ಗಳನ್ನು ಸ್ಥಳೀಯ ವ್ಯಕ್ತಿಯೊಬ್ಬರಿಗೆ ನೀಡಿ ಅವರ ವಶದಲ್ಲಿದ್ದ ಸರಕಾರಿ ಜಾಗವನ್ನು ತೆಗೆದುಕೊಂಡು ಅಲ್ಲಿ ಗುಡಿಸಲು ನಿರ್ಮಿಸಿ ದನಕರುಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು. 2 ವರ್ಷಗಳ ಹಿಂದೆ ತಾವು ವಾಸ್ತವ್ಯ ಇರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದರು ಎನ್ನಲಾಗಿದೆ.
ಈ ನಡುವೆ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಅವರು ವೃದ್ಧ ದಂಪತಿಯನ್ನು ಒಕ್ಕಲೆಬ್ಬಿಸುವ ಸಲುವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಕಾರಣದಿಂದಾಗಿ ನ್ಯಾಯಾಲಯದ ಆದೇಶದಂತೆ ಅವರ ಗುಡಿಸಲನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ಥಳೀಯ ಗ್ರಾಮಕರಣಿಕರು ಅವರ ಮನೆಗೆ ಬಂದು ಮೌಖೀಕವಾಗಿ ತಿಳಿಸಿ, ಮನೆಯನ್ನು ತೆರವು ಮಾಡುವಂತೆ ನೋಟಿಸ್ ಹಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಮಗಳ ಹೆಸರಿಗೆ ನೋಟಿಸ್
ದಂಪತಿಗೆ ನೀಡಲಾದ ನೋಟಿಸ್ ಈಗಾಗಲೇ ಮದುವೆ ಮಾಡಿಕೊಟ್ಟ ಮಗಳ ಹೆಸರಲ್ಲಿದೆ. ಅವರಿಗೂ ಇವರು ಪ್ರಸ್ತುತ ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ಈ ವೃದ್ಧ ದಂಪತಿಯ ಬಳಿ ಆಧಾರ್, ರೇಷನ್ ಕಾರ್ಡ್, ಮತದಾನದ ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ನೀಡಿರುವ ನೋಟಿಸ್ ಪ್ರಕಾರ ಆ ಜಾಗವನ್ನು ಬಿಟ್ಟು ಅವರು ತೆರಳಬೇಕು ಎಂಬುದಾಗಿಯೂ ತಾಕೀತು ಮಾಡಲಾಗಿದೆ. ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಪಂಚಾಯತ್ ಸೌಲಭ್ಯಗಳು ಈ ಹಿರಿಜೀವಗಳ ಕುಟುಂಬಕ್ಕೆ ಲಭ್ಯವಾಗಿಲ್ಲ. ಅವರಿಗೆ ಬೇರೆ ಯಾವುದೇ ಆಸ್ತಿಗಳಾಗಲೀ, ಆಶ್ರಯವಾಗಲೀ ಇಲ್ಲ ಎನ್ನಲಾಗಿದೆ. ಮನೆಯ ಬಾಗಿಲಿಗೆ ನೊಟೀಸ್ ಹಚ್ಚಿದ ಬಳಿಕ ದಿಕ್ಕು ತೋಚದಂತಾಗಿರುವ ಅವರು ಕಡಬ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದು, ನಮ್ಮನ್ನು ಒಂದಾ ಆ ಸರಕಾರಿ ಜಾಗದಲ್ಲಿ ತಾವು ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಸಾಧ್ಯವಿಲ್ಲ ಎಂದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕು ಎಂದು ಕೋರಿದ್ದಾರೆ.
ನ್ಯಾಯಾಲಯದ ಆದೇಶದಂತೆ ನಾವು ನೊಟೀಸ್ ನೀಡಿದ್ದೇವೆ. ಆದರೆ ವೃದ್ಧ ದಂಪತಿ ನಮ್ಮ ಕಚೇರಿಗೆ ಬಂದು ನಾವು ವಾಸ್ತವ್ಯ ಇರುವ ಮನೆಗೂ ನಮ್ಮ ಮಗಳಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಮದುವೆ ಮಾಡಿಕೊಡಲಾಗಿದೆ. ನಮಗೆ ಬೇರೆ ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಪ್ರಭಾಕರ ಖಜೂರೆ, ಕಡಬ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.