ನಿರ್ಲಕ್ಷ್ಯಕ್ಕೊಳಗಾದ ಕಿರಿಯಾಡಿ ದೇಗುಲ ರಸ್ತೆ
Team Udayavani, Nov 13, 2021, 3:20 AM IST
ಬೆಳ್ತಂಗಡಿ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮಹದಾಸೆಯ ನಡುವೆ ಇತ್ತ ಪಟ್ಟಣಕ್ಕೆ ಹೊಂದಿಕೊಂಡಿರುವ ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಉಜಿರೆ ಗ್ರಾ.ಪಂ. ವ್ಯಾಪ್ತಿಯ ಕಾಶಿಬೆಟ್ಟುವಿನಿಂದ ಕಿರಿಯಾಡಿ ದೇವಸ್ಥಾನವರೆಗಿನ ರಸ್ತೆ ಅಯೋಮಯವಾಗಿದೆ.
ಕಾಶಿಬೆಟ್ಟುವಿನಿಂದ ಭೀಮಗುಡ್ಡೆಯಾಗಿ ಕಿರಿಯಾಡಿ ದೇವಸ್ಥಾನ ಹಾಗೂ ಉಜಿರೆ ಹಾಗೂ ಬೆಳಾಲು ಸಾಗಲು ತೀರ ಹತ್ತಿರ ರಸ್ತೆಯಾಗಿದೆ. ಆದರೆ 3 ಕಿ.ಮೀ. ಒಳ ರಸ್ತೆ ಹೊಂಡಗುಂಡಿಗಳಿಂದ ಅವಾಂತರ ಸೃಷ್ಟಿಸಿದೆ. ಇಲ್ಲಿನ ವಾರ್ಡ್ ಸಂಖ್ಯೆ 8ರಲ್ಲಿ 100ರಿಂದ 200 ಮನೆಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ತೀರ ಇಕ್ಕಟ್ಟಾದ ರಸ್ತೆಗೆ ಸದ್ಯ ಡಾಮರೇ ಆಗಿಲ್ಲ. ಕಳೆದ ವರ್ಷ ಸಡಕ್ ಯೋಜನೆಯಡಿ ರಸ್ತೆ ವಿಸ್ತರಣೆ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ. ಇದರಿಂದ ರಸ್ತೆಯಲ್ಲಿ ವಾಹನ ಬಾಡಿಗೆಗೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ರಸ್ತೆಯಾಗಿ ಕೊಯ್ಯೂರು, ಬೆಳಾಲು, ಉಜಿರೆ ಸಂಪರ್ಕ ರಸ್ತೆ ಯಾಗಿ ದ್ದರಿಂದ ತೀರ ಅನುಕೂಲವಾಗಿದೆ. ಹೈನುಗಾರರು ಅಗತ್ಯಕ್ಕೆ ನಡೆದೇ ಸಾಗು ವಂತಾಗಿದೆ. ಶಾಲಾ ಮಕ್ಕಳ ವಾಹನ ಈ ರಸ್ತೆಯಾಗಿ ಸಂಚರಿಸಲು ಹಿಂದೆಮುಂದೆ ನೋಡುವಂತಾಗಿದೆ. ಹತ್ತಾರು ವರ್ಷಗಳ ಹಿಂದೆ ಡಾಮರು ಕಂಡ ಈ ರಸ್ತೆ ಪ್ರಸಕ್ತ ಜಲ್ಲಿ ಎದ್ದು ಬಂದಿದೆ.
ಅನುದಾನ ಇಲ್ಲ:
ಇದೇ ರಸ್ತೆಯಾಗಿ ಸಾಗುವಾಗ 800 ವರ್ಷಗಳ ಇತಿಹಾಸ ಪ್ರಸಿದ್ಧ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನವಿದೆ. ಜಾತ್ರೆ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಿಸಿ ವರ್ಷಗಳಿಂದಲೂ ನಿತ್ಯಪೂಜಾ ಅನುಷ್ಠಾನ ನಡೆಯುತ್ತಾ ಬಂದಿರುವ ದೇವಸ್ಥಾನವಾಗಿದೆ. ಆದರೆ ದೇವಸ್ಥಾನಕ್ಕೆ ಭೀಮಗುಡ್ಡೆಯಿಂದ 500 ಮೀ. ದೂರವಿರುವ ರಸ್ತೆಗೆ 100 ಮೀ. ಕಾಂಕ್ರಿಟ್ ರಸ್ತೆ ಹೊರತು ಪಡಿಸಿ ಉಳಿದ ರಸ್ತೆ ಹೊಂಡುಗುಂಡಿಯಿಂದ ಕೂಡಿದೆ. ಅಭಿವೃದ್ಧಿ ವಿಚಾರವಾಗಿ ದೇವಸ್ಥಾನದ ಆಡಳಿತ ಸಮಿತಿ ಸಹಿತ ಊರಿನ ಮಂದಿ ಮನವಿ ಸಲ್ಲಿಸಿದರೂ ಅನುದಾನ ಇಲ್ಲ ಎಂಬುದನ್ನೆ ನೆಪವಾಗಿಸಿ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡದೆ ನಿರ್ಲಕ್ಷéವಹಿಸುತ್ತಾ ಬರಲಾಗಿದೆ.
ಅಪಾಯಕಾರಿ ಕೆರೆ:
ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಎಡಬದಿ ಪಂಚಾಯತ್ ರಸ್ತೆ ಅಂಚಿನಲ್ಲಿ ಖಾಸಗಿ ಜಮೀನಿಗೆ ಸೇರಿದ 30 ಅಡಿ ಉದ್ದ 30 ಅಡಿ ಆಳದ ಕೆರೆಯಿದೆ. ಕೆರೆ ಅಂಚಿನಲ್ಲಿ ತಡೆಗೋಡೆ ಇಲ್ಲದೆ ಅಪಾಯ ಆಹ್ವಾನಿ ಸುತ್ತಿದೆ. ಕಾಂಕ್ರೀಟ್ ರಸ್ತೆ ಅಂಚಿನಲ್ಲೆ ಕೆರೆ ಇರುವುದರಿಂದ ವಾಹನ ಸವಾರರು ಆಯ ತಪ್ಪಿದರೆ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ. ಸಾರ್ವಜನಿಕರು ಉಜಿರೆ ಗ್ರಾ.ಪಂ., ವಾರ್ಡ್ ಸದಸ್ಯರ ಗಮನಕ್ಕೂ ತಂದಿದ್ದು ಅಪಾಯಕ್ಕೂ ಮುನ್ನ ಎಚ್ಚೆತ್ತಕೊಳ್ಳಬೇಕಿದೆ.
ಕಾಶಿಬೆಟ್ಟುವಿನಿಂದ ಭೀಮಗುಡ್ಡೆಯಾಗಿ ಸಂಪರ್ಕಿಸುವ ರಸ್ತೆ ಹಾಗೂ ಕಿರಿಯಾಡಿ ದೇವಸ್ಥಾನ ಅಭಿವೃದ್ಧಿ ವಿಚಾರವಾಗಿ ಈಗಾಗಲೇ ಅನುದಾನಕ್ಕೆ ಮನವಿ ಮಾಡಲಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸುವ ಕುರಿತು ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಮಂಡಳಿಯೊಂದಿಗೆ ಚರ್ಚಿಸಲಾಗುವುದು.-ಶಶಿಕಲಾ, ವಾರ್ಡ್ ಸದಸ್ಯೆ
-ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.