ಕೋಡಿಂಬಾಳ: ಶಿಕ್ಷಕರ ಪ್ರತಿಭಟನೆ ವಿರೋಧಿಸಿ ಧರಣಿ
ಕಪ್ಪು ಪಟ್ಟಿ ಧರಿಸಿ ಓಂತ್ರಡ್ಕ ಶಾಲೆ ಜಗಲಿಯಲ್ಲಿ ಕುಳಿತ ಶಿಕ್ಷಕ ದಿಲೀಪ್ ಕುಮಾರ್
Team Udayavani, Jul 10, 2019, 5:00 AM IST
ಕಡಬ: ರಾಜ್ಯ ಸರಕಾರದ ನೀತಿಯ ವಿರುದ್ಧ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿ ಮಂಗಳೂರಿನಲ್ಲಿ ಶಿಕ್ಷಕರು ಪ್ರತಿಭಟನೆ ಮಾಡಿದರೆ, ಇತ್ತ ಕಡಬದ ಕೋಡಿಂಬಾಳದ ಓಂತ್ರಡ್ಕ ಸರಕಾರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರೊಬ್ಬರು ಅದನ್ನು ವಿರೋಧಿಸಿ ಶಾಲಾ ಜಗಲಿಯಲ್ಲಿ ಏಕಾಂಗಿಯಾಗಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ, ಪದವೀಧರ ಶಿಕ್ಷಕರ ಸಮಸ್ಯೆ ಮತ್ತು ಶಿಕ್ಷಕರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಶಾಲೆಗಳಿಗೆ ಸಾಮೂಹಿಕವಾಗಿ ರಜೆ ಹಾಕಿ ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಅದನ್ನು ವಿರೋಧಿಸಿ ಹಾಗೂ ತಮ್ಮ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಓಂತ್ರಡ್ಕ ಸರಕಾರಿ ಶಾಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ, ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಕುಮಾರ್ ಎಸ್. ಅವರು ಶಾಲೆಗೆ ರಜೆ ಹಾಕದೆ ಕಪ್ಪು ಪಟ್ಟಿ ಧರಿಸಿ ಶಾಲಾ ಜಗಲಿಯಲ್ಲಿ ಕುಳಿತು ದಿನವಿಡೀ ಏಕಾಂಗಿ ಪ್ರತಿಭಟನೆ ನಡೆಸಿದರು.
ಶಾಲಾ ಪ್ರಾಥಮಿಕ ಶಿಕ್ಷಕರು ಪ್ರತಿಭಟನೆಗೆ ತೆರಳಿರುವುದರಿಂದ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ತಮ್ಮ ವೃಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರತಿಭಟನೆಯ ಹಕ್ಕೊತ್ತಾಯಲ್ಲಿ ಯಾವುದೇ ಅಂಶಗಳನ್ನು ಸೇರಿಸದಿರುವ ಬಗ್ಗೆ ಆಕ್ರೋಶ ವ್ತಕ್ತಪಡಿಸಿ ತಮ್ಮದೇ ಶೈಲಿಯಲ್ಲಿ ದಿಲೀಪ್‌ಕುಮಾರ್ ಅವರು ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015ರಿಂದ ಹೊಸದಾಗಿ ನೇಮಕವಾದ ಪದವೀಧರ ಪ್ರಾಥಮಿಕ ಶಿಕ್ಷಕರು ನೇಮಕವಾಗಿ 3 ವರ್ಷ ಕಳೆದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವೃಂದವು ಆರ್.ಟಿ.ಇ. ಕಾಯಿದೆ ಮತ್ತು ಎನ್.ಸಿ.ಟಿ.ಇ. ಅಧಿಸೂಚನೆಯ ಪ್ರಕಾರ 6ರಿಂದ 8ನೇ ತರಗತಿವರೆಗೆ ಬೋಧಿಸಲು ಟಿ.ಇ.ಟಿ. ಅರ್ಹತೆ ಪಡೆದ ಶಿಕ್ಷಕರಾಗಿರುತ್ತಾರೆ. ಇದೊಂದು ಪ್ರತ್ಯೇಕ ವೃಂದವಾಗಿರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ನಮ್ಮೆಲ್ಲರನ್ನು ಕೆಂಗಣ್ಣಿನಿಂದ ನೋಡುತ್ತಿದೆ ಎಂದು ಅವರು ಆರೋಪಿಸಿದರು.
ನಾವು ಇಲಾಖೆ ಮತ್ತು ನಿಯಮದ ಮೂಲಕ ನೇಮಕಾತಿ ಹೊಂದಿದ್ದೇವೆ. ಈ ವೃಂದದ ಶಿಕ್ಷಕರ ಪದವೀಧರ ಪ್ರಾಥಮಿಕ ಶಿಕ್ಷಕರು ಎಂಬ ಪದನಾಮ ಇನ್ನೂ ವೇತನದ ತಂತ್ರಾಂಶದಲ್ಲಿ ಅಳವಡಿಕೆಯಾಗಿಲ್ಲ. ಈ ಬಗ್ಗೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಈ ವೃಂದದ ಶಿಕ್ಷಕರು ಡಿ.ಇ.ಡಿ./ಬಿ.ಇ.ಡಿ., ಪದವಿಯ ಜೊತೆ ಟಿ.ಇ.ಟಿ. ಅರ್ಹತೆ ಪಡೆದಿದ್ದರೂ ಮತ್ತು ಪ್ರಥಮ ದರ್ಜೆಯ ನೌಕರರ ಅರ್ಹತೆಗಿಂತ ಹೆಚ್ಚಿನ ಅರ್ಹತೆ ಹೊಂದಿದ್ದರೂ ಪ್ರಥಮ ದರ್ಜೆ ನೌಕರರ ವೇತನವನ್ನು ನಿಗದಿಪಡಿಸಿ ಈ ವೃಂದದ ಶಿಕ್ಷಕರಿಗೆ ವೇತನದ ವಿಷಯದಲ್ಲಿ ಆನ್ಯಾಯವಾಗಿದೆ. ಇನ್ನೂ ಈ ವೃಂದದ ಶಿಕ್ಷಕರಿಗೆ ಮುಂದೆ ಭಡ್ತಿ ಹೊಂದಲು ಇರುವ ಅವಕಾಶಗಳ ಬಗ್ಗೆ ಇಲಾಖೆಯಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದರು.
ವರ್ಗಾವಣೆಯಲ್ಲಿ ಈ ವೃಂದದ ಶಿಕ್ಷಕರ ಪ್ರತ್ಯೇಕ ಜೇಷ್ಠತೆ ಪಟ್ಟಿಯನ್ನು ತಯಾರಿಸದೆ ಪ್ರಾಥಮಿಕ ಶಿಕ್ಷಕರ ಜೊತೆ ಸೇರಿಸಿರುವುದರಿಂದ ಇವರಿಗೆ ವರ್ಗಾವಣೆಯೂ ಕನಸಿನ ಮಾತಾಗಿಯೇ ಉಳಿದಿದೆ. ಈ ವೃಂದದ ಪ್ರತ್ಯೇಕ ಸಂಘವಿದೆ. ಆ ಮೂಲಕ ಯಾವುದೇ ಮನವಿ ಸಲ್ಲಿಸಿದ್ದಲ್ಲಿ ನಿಮ್ಮ ಸಂಘಕ್ಕೆ ಮಾನ್ಯತೆ ಇಲ್ಲ ಎಂಬ ಉತ್ತರ ಹೇಳಿ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಲ್ಲದೆ ಕಳೆದ ಡಿಸೆಂಬರ್ ನಲ್ಲಿ ನೇಮಕಾತಿಯಾದ ಪದವೀಧರ ಶಿಕ್ಷಕರಿಗೆ ಇನ್ನೂ ವೇತನ ಪಾವತಿಯಾಗಿಲ್ಲ . ಇದಕ್ಕೆ ಕ್ರಮಕೈಗೊಳ್ಳಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸಂಬಂಧಪಟ್ಟವರು ಸ್ಪಂದಿಸಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕರಿಬೇಕೆಂದು ಆಗ್ರಹಿಸಿದ್ದಾರೆ.
ಮಂಗಳೂರಿನ ಪ್ರತಿಭಟನೆಯನ್ನು ಕುಟ್ರಾಪ್ಪಾಡಿ ಪ್ರಾಥಮಿಕ ಶಾಲಾ ಶಿಕ್ಷಕ ತೀರ್ಥೇಶ್ ಪಡೆಜ್ಜಾರ್ ಅವರೂ ವಿರೋಧಿಸಿದ್ದಾರೆ. ಸರಕಾರ ಶಿಕ್ಷಕರಿಗೆ ಉತ್ತಮ ವೇತನ ನೀಡುತ್ತಿದೆ. ಶಿಕ್ಷಕಕರ ಸಂಘದವರು ಶಾಲೆಗಳನ್ನು ಮುಚ್ಚಿ ಅನಗತ್ಯ ಹೋರಾಟ ನಡೆಸಿ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ಸರಕಾರಿ ಶಾಲೆಗಳಿದ್ದರೆ ಮಾತ್ರ ನಮಗೆ ಕೆಲಸ ಎನ್ನುವುದನ್ನು ಮನಗಂಡು ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರು ಶ್ರಮಿಸಬೇಕೇ ಹೊರತು ಅನಗತ್ಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಗತ್ಯ ಹೋರಾಟ ಸಲ್ಲದು
ಮಂಗಳೂರಿನ ಪ್ರತಿಭಟನೆಯನ್ನು ಕುಟ್ರಾಪ್ಪಾಡಿ ಪ್ರಾಥಮಿಕ ಶಾಲಾ ಶಿಕ್ಷಕ ತೀರ್ಥೇಶ್ ಪಡೆಜ್ಜಾರ್ ಅವರೂ ವಿರೋಧಿಸಿದ್ದಾರೆ. ಸರಕಾರ ಶಿಕ್ಷಕರಿಗೆ ಉತ್ತಮ ವೇತನ ನೀಡುತ್ತಿದೆ. ಶಿಕ್ಷಕಕರ ಸಂಘದವರು ಶಾಲೆಗಳನ್ನು ಮುಚ್ಚಿ ಅನಗತ್ಯ ಹೋರಾಟ ನಡೆಸಿ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ಸರಕಾರಿ ಶಾಲೆಗಳಿದ್ದರೆ ಮಾತ್ರ ನಮಗೆ ಕೆಲಸ ಎನ್ನುವುದನ್ನು ಮನಗಂಡು ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರು ಶ್ರಮಿಸಬೇಕೇ ಹೊರತು ಅನಗತ್ಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.