ಸೀಲ್‌ಡೌನ್ ಭೀತಿಯಲ್ಲಿ ಕೋಡಿಂಬಾಳ ಗ್ರಾಮ
Team Udayavani, Jul 2, 2021, 4:50 AM IST
ಕಡಬ: ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ನಿಯಂತ್ರಣದತ್ತ ಸಾಗುತ್ತಿದ್ದರೂ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಕೆಲವು ದಿನಗಳಿಂದ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ. ಪಂ.ನ ವ್ಯಾಪ್ತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ಪೈಕಿ ಕೋಡಿಂಬಾಳ ದಲ್ಲಿ ಸೋಂಕು ಹೆಚ್ಚುತ್ತಿದ್ದು, ಗ್ರಾಮದ ಜನತೆ ಸೀಲ್‌ಡೌನ್ ಭೀತಿ ಎದುರಿಸುತ್ತಿದ್ದಾರೆ.
ಜು. 1ರ ವರದಿಯಂತೆ ಕಡಬ ಪ. ಪಂ. ವ್ಯಾಪ್ತಿಯಲ್ಲಿ 64 ಸಕ್ರಿಯ ಪ್ರಕ ರಣಗಳಿವೆ. ಆ ಪೈಕಿ ಕೋಡಿಂಬಾಳ ಗ್ರಾಮದ ವ್ಯಾಪ್ತಿಯಲ್ಲಿಯೇ 48 ಸಕ್ರಿಯ ಪ್ರಕರಣ ಗಳಿದ್ದು, ಜಿಲ್ಲಾಧಿಕಾರಿ ಆದೇಶದ ಪ್ರಕಾರ ಸೋಂಕಿತರ ಸಂಖ್ಯೆ 50 ದಾಟಿದರೆ ಗ್ರಾಮವನ್ನು ಸೀಲ್‌ಡೌನ್ ಮಾಡುವ ಪ್ರಮೇಯ ಎದುರಾಗಬಹುದು. 64 ಸಕ್ರಿಯ ಪ್ರಕರಣಗಳ ಪೈಕಿ 60 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ, 4 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಂಬಾಳ ಗ್ರಾಮದ ಉಂಡಿಲ, ಪನ್ಯ ಹಾಗೂ ಕೋಡಿಂಬಾಳ ಪೇಟೆಯಲ್ಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದು, ನಿರ್ದಿಷ್ಟ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸ ಲಾಗಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಗ್ರಾಮದ ಕೆಲವು ಮನೆಯ ಎಲ್ಲ ಸದಸ್ಯರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖ ಲಾಗದೆ ಮನೆ ಗಳಲ್ಲಿಯೇ ಚಿಕಿತ್ಸೆ ಪಡೆಯು ತ್ತಿರುವುದು ಸೋಂಕು ಹೆಚ್ಚಳಕೆ ಕಾರಣ ಎನ್ನಲಾಗಿದೆ. ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿ, ಶೌಚಾಲಯ ಇಲ್ಲದವರೂ ಮನೆ ಯಲ್ಲಿಯೇ ಉಳಿಯುತ್ತಿರುವುದು ಸೋಂಕು ಹರಡಲು ಕಾರಣವಾಗುತ್ತಿದೆ.
ಶ್ರಮಿಸುತ್ತಿರುವ ಕಾರ್ಯಪಡೆ:
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು, ಆರೋಗ್ಯ ಸಿಬಂದಿ, ಆಶಾ ಕಾರ್ಯಕರ್ತೆಯರು, ಪ.ಪಂ.ನ ಕೋವಿಡ್ ಕಾರ್ಯಪಡೆ ಸದಸ್ಯರು ಶ್ರಮಿಸುತ್ತಿದ್ದಾರೆ. ಪ್ರತಿ ದಿನ ಎಂಬಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಹೊಸ ಸೋಂಕಿತರು ಪತ್ತೆಯಾಗುವುದರೊಂದಿಗೆ ಹಳೆಯ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 50 ದಾಟಿದರೂ ತಹಶೀಲ್ದಾರರು, ಸ್ಥಳೀಯ ಕೋವಿಡ್ ಕಾರ್ಯಪಡೆ ಹಾಗೂ ವೈದ್ಯಾಧಿಕಾರಿಗಳ ಅಭಿಪ್ರಾಯ ಪಡೆದುಕೊಂಡು ಸೋಂಕನ್ನು ನಿಯಂತ್ರಿಸಲು ಅಗತ್ಯ ಎಂದಾದರೆ ಮಾತ್ರ ಸೀಲ್‌ಡೌನ್‌ಗೆ ಕ್ರಮ ಕೈಗೊಳ್ಳಲಾಗುವುದು. –ಡಾ| ದೀಪಕ್ ರೈ, ತಾ| ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.