ಕೊಡಿಯಾಲ-ಬೊಬ್ಬೆಕೇರಿ ರಸ್ತೆ ದುರಸ್ತಿಗಾಗಿ ಧರಣಿ
ತಹಶೀಲ್ದಾರ್ ಭೇಟಿ: ತಿಂಗಳೊಳಗೆ ಕ್ರಮದ ಭರವಸೆ
Team Udayavani, Jun 25, 2019, 5:00 AM IST
ಬೆಳ್ಳಾರೆ: ದರ್ಖಾಸ್ತುನಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಕೊಡಿಯಾಲ, ಬಾಳಿಲ ಮತ್ತು ಮುರುಳ್ಯ ವ್ಯಾಪ್ತಿಗೆ ಒಳಪಟ್ಟ ಕೊಡಿಯಾಲ-ಬೊಬ್ಬೆಕೇರಿ ರಸ್ತೆ ತೀರಾ ಹದೆಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದು, ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಬೇಕು ಹಾಗೂ ಪ್ರತಿಭಟನ ಸ್ಥಳಕ್ಕೆ ಶಾಸಕರು ಬಂದು ಭರವಸೆ ನೀಡಬೇಕೆಂದು ಅಂಬೇಡ್ಕರ್ ತತ್ವ ರಕ್ಷಣ ವೇದಿಕೆ ಹಾಗೂ ಗ್ರಾಮಸ್ಥರು ಪಂಜಿಗಾರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಗ್ಗೆ ಪಂಜಿಗಾರು ಜಂಕ್ಷನ್ ಬಳಿ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಮಾಜಿ ಅಧ್ಯಕ್ಷ ವಿಟ್ಟಲ ರೈ ಪೋಲಾಜೆ ಪ್ರತಿಭಟನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಧರಣಿ ಕುಳಿತ ಪ್ರತಿಭಟನಕಾರರು, ಶಾಸಕ ಅಂಗಾರ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ದುರಸ್ತಿಗೆ ಆಗ್ರಹಿಸಿದರು. ಶಾಸಕರು ಸ್ಥಳಕ್ಕೆ ಬಂದು ಭರವಸೆ ನೀಡುವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಅಂಬೇಡ್ಕರ್ ತತ್ವ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಮಾತನಾಡಿ, ಶಾಸಕರು ರಸ್ತೆ ದುರಸ್ತಿಗೆ ಸಂಬಂಧಿಸಿ ಯಾವುದೇ ಮನವಿ ನೀಡಿದರೂ ಸ್ಪಂದಿಸಿಲ್ಲ. ಅವರ ಸುಳ್ಳು ಭರವಸೆಗಳು ನಮಗೆ ಬೇಕಾಗಿಲ್ಲ. ಸ್ಥಳಕ್ಕೆ ಬಂದು ಲಿಖೀತ ಭರವಸೆ ನೀಡಿದಲ್ಲಿ ಮಾತ್ರ ಪ್ರತಿಭಟನೆ ಹಿಂದಕ್ಕೆ ಪಡೆಯುತ್ತೇವೆ. ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಆದರೂ ಶಾಸಕರು ಕೆ.ಡಿ.ಪಿ. ಸಭೆಯಲ್ಲಿ ಪ್ರತಿಭಟನೆಯ ವಿರುದ್ಧ ಮಾತನಾಡಿದ್ದಾರೆ. ರಸ್ತೆ ಅಭಿವೃದ್ಧಿ ಸಾಧ್ಯವಾಗದಿದ್ದಲ್ಲಿ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ, ರಸ್ತೆಯಲ್ಲಿ ಜನರು ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಬೊಬ್ಬೆಕೇರಿ ರಸ್ತೆಗೆ ಬಂದ ಅನುದಾನವನ್ನು ಶಾಸಕರು ಕೊಡಿಯಾಲ ರಸ್ತೆಗೆ ಹಾಕಿದ್ದಾರೆ. ಮುರುಳ್ಯ ಸಂಪರ್ಕಿಸುವ ಮುಖ್ಯ ರಸ್ತೆಗೆ ಅನುದಾನ ನೀಡದೆ ಶಾಸಕರು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಬಾಳಿಲ ಕಿಸಾನ್ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ನ್ಯಾಯವಾದಿ ಪ್ರದೀಪ್, ಅಂಬೇಡ್ಕರ್ ತತ್ವ ರಕ್ಷಣ ವೇದಿಕೆಯ ಕೆ.ಕೆ. ನಾೖಕ್, ಸುಂದರ ಪಾಟಾಜೆ ಮಾತನಾಡಿದರು. ಬೊಬ್ಬೆಕೇರಿ,ಬಾಳಿಲ, ಮುರುಳ್ಯ ಭಾಗದ ಗ್ರಾಮಸ್ಥರು, ಅಂಬೇಡ್ಕರ್ ತತ್ವ ರಕ್ಷಣ ವೇದಿಕೆಯ ಸದಸ್ಯರು ಭಾಗವಹಿಸಿದರು.
ಉಪ ತಹಶೀಲ್ದಾರ್, ಎಂಜಿನಿಯರ್ ಭೇಟಿ
ಪ್ರತಿಭಟನ ಸ್ಥಳಕ್ಕೆ ಉಪ ತಹಶೀಲ್ದಾರ್ ದೀಪಕ್, ಜಿ.ಪಂ ಎಂಜಿನಿಯರಿಂಗ್ ಇಲಾಖೆಯ ಎಚ್.ಎಸ್. ಹುಕ್ಕೇರಿ, ಮಣಿಕಂಠ ಭೇಟಿ ನೀಡಿ, ದುರಸ್ತಿಯ ಭರವಸೆ ನೀಡಿದರು. ಇದನ್ನು ಒಪ್ಪದ ಪ್ರತಿಭಟನಕಾರರು, ಶಾಸಕರು ಸ್ಥಳಕ್ಕೆ ಬರಲೇ ಬೇಕೆಂದು ಪಟ್ಟು ಹಿಡಿದರು.
ರಸ್ತೆಯ ಗುಂಡಿ ಮುಚ್ಚಿ ದುರಸ್ತಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ತಹಶೀಲ್ದಾರರು ಭರವಸೆ ನೀಡಿದರು. ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ನಡೆಸುವುದಾಗಿ ಲಿಖೀತವಾಗಿ ಬರೆದು ಕೊಡಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಅಧಿಕಾರಿಗಳು ಇದಕ್ಕೆ ಒಪ್ಪದೆ ಸ್ಥಳದಿಂದ ತೆರಳಿದರು.
ಬಂದೋಬಸ್ತ್
ಪ್ರತಿಭಟನ ಸ್ಥಳದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಶಿವಾನಂದ ಮೊದಲಗಂಡಿ, ಸುಳ್ಯ ಸಬ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್, ಬೆಳ್ಳಾರೆ ಠಾಣಾ ಪ್ರೊಬೆಷನರಿ ಪಿಎಸ್‌ಐ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಬೆಳ್ಳಾರೆ ಠಾಣೆಯ ಪೊಲೀಸ್ ಸಿಬಂದಿ ಬಂದೋಬಸ್ತ್ ಒದಗಿಸಿದರು.
ತಹಶೀಲ್ದಾರ್ ಭೇಟಿ, ಪ್ರತಿಭಟನೆ ಹಿಂದಕ್ಕೆ
ಮಧ್ಯಾಹ್ನದವೆರೆಗೂ ಪ್ರತಿಭಟನೆ ಮುಂದುವರಿದಿತ್ತು. ತಹಶೀಲ್ದಾರ್ ಕುಂಞಿ ಅಹಮ್ಮದ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಒಂದು ತಿಂಗಳೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.