ಕೊಕ್ಕಡ ಕೋರಿ ಜಾತ್ರೆ ಸಂಪನ್ನ : ಹರಕೆಯ ರೂಪದಲ್ಲಿ ಗದ್ದೆಗಿಳಿದ ಜಾನುವಾರು
Team Udayavani, Dec 17, 2021, 3:20 AM IST
ಬೆಳ್ತಂಗಡಿ: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಕೋರಿ ಜಾತ್ರೆಯು ಸಂಭ್ರಮದಿಂದ ಸಮಾಪನಗೊಂಡಿತು.
ಸಂಪ್ರದಾಯದ ಪ್ರಕಾರ ನೀಲೇಶ್ವರ ಎಡಮನೆ ದಾಮೋದರ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ದೇವಸ್ಥಾನದಲ್ಲಿ ಆರಂಭಗೊಂಡ ಧನುಪೂಜೆಯ ಅನಂತರ ಬೆಳಗ್ಗೆ ದೇವರ ಗದ್ದೆಯಲ್ಲಿ ಹರಕೆ ಹೊತ್ತ ಭಕ್ತರು ಸೊಪ್ಪನ್ನು ಗದ್ದೆಗೆ ಹಾಕುವ ಮೂಲಕ ಸಂಭ್ರಮಿಸಿದರು.
ಬಳಿಕ ದೇವಾಲಯದಲ್ಲಿ ಗಣಪತಿ ಹೋಮ, ಏಕಾದಶರುದ್ರ ಮಧ್ಯಾಹ್ನ ಮಹಾಪೂಜೆ ಬಳಿಕ ಸಂಪ್ರದಾಯದಂತೆ ದೇವರ ಗದ್ದೆಗೆ ಕಂಬಳದ ರೀತಿಯಲ್ಲಿ ಜಾನುವಾರುಗಳನ್ನು ಇಳಿಸಲಾಯಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದ ರೈತರು ತಮ್ಮ ಜಾನುವಾರಗಳನ್ನು ಈ ಗದ್ದೆಗೆ ಹರಕೆಯ ರೂಪದಲ್ಲಿ ಇಳಿಸಿದರು.
ಕೊಕ್ಕಡ ಕೋರಿ ಇತಿಹಾಸ:
ಕೊಕ್ಕಡ ಕೋರಿ ಜಾತ್ರೆಯು ಮಣ್ಣು ಹಾಗೂ ಮನುಷ್ಯನ ಕೃಷಿ ಕಾಯಕಕ್ಕಿರುವ ನಂಟನ್ನು ಬಿಂಬಿಸುತ್ತದೆ. ದೇವರ ಗದ್ದೆಯನ್ನು ಮೊದಲು ಉಳುಮೆ ಮಾಡಿ ಹದ ಮಾಡಿಕೊಳ್ಳಲಾಗುತ್ತದೆ. ಹಿಂದಿನ ಕಾಲದಿಂದ ಜಾತ್ರೆಗೆ ಒಂದು ತಿಂಗಳ ಮೊದಲು ಕೊಕ್ಕಡ ಸೀಮೆಗೊಳಪಟ್ಟ ಪ್ರತಿ ಗ್ರಾಮಗಳ ಮನೆಮನೆಗೂ ಕೋರಿ ಜಾತ್ರೆಗೆ ಕೊರಗ ಭೂತದ ವೇಷ ತೊಟ್ಟು ಆಹ್ವಾನಿಸುವ ಸಂಪ್ರದಾಯ ಇದೆ. ಕೊರಗ ವೇಷದ ಜತೆಗೆ ಡೋಲು ಬಾರಿಸಿಕೊಂಡು ಬೇರೆಯೇ ಒಂದು ತಂಡ ಊರಿಡೀ ತಿರುಗುತ್ತದೆ. ಕೊರಗ ದೈವಕ್ಕೂ ಕೃಷಿ ಹಾಗೂ ಜಾನುವಾರು ಸಂಬಂಧಿ ಹರಕೆ ಹೇಳಿ ತೀರಿಸಿಕೊಳ್ಳುವ ಪದ್ಧತಿ ಇಲ್ಲಿದೆ.
ಜಾತ್ರೆಯ ಹಿಂದಿನ ದಿನ ಸಾಯಂಕಾಲ ಕಂಬಳದ ಗದ್ದೆಗೆ ಹಾಲು ಹಾಕಿ ಗದ್ದೆಯ ಸುತ್ತ ದೀಪ ಹಚ್ಚಿ ಅಲಂಕರಿಸುತ್ತಾರೆ. ಮರುದಿನ ಬೆಳಗ್ಗೆ ಗುತ್ತಿನ ಮನೆಯಿಂದ ಅಲಂಕರಿಸಿದ ಹೋರಿ ಹಾಗೂ ಕೋಣಗಳ ಜತೆಗೆ ಪ್ರತಿ ಊರಿನಿಂದ ಹರಕೆ ಹೇಳಿ ಬಂದ ಜಾನುವಾರುಗಳನ್ನು ದೇವಸ್ಥಾನಕ್ಕೆ ಕರೆ ತಂದು ಅನಂತರ ದೇವರ ಗದ್ದೆಗೆ ವಾದ್ಯ ಘೋಷದೊಂದಿಗೆ ಕರೆದೊಯ್ಯಲಾಗುತ್ತದೆ. ಗುತ್ತಿನ ಹೋರಿಗಳನ್ನು ಮೊದಲು ಇಳಿಸಿ ಬಳಿಕ ಇತರ ಜಾನುವಾರುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿಸಲಾಗುತ್ತದೆ. ಅನಾರೋಗ್ಯದ ಕಾರಣದಿಂದ ಹರಕೆ ಹೇಳಿಕೊಂಡ ಮಂದಿ ಸೊಪ್ಪಿನ ಕಟ್ಟನ್ನು ತಲೆಯಲ್ಲಿ ಹೊತ್ತು ಒಂದು ಸುತ್ತು ಬಂದು ಸೊಪ್ಪನ್ನು ಗದ್ದೆಗೆ ಹಾಕಿ ಗದ್ದೆಯ ನೀರನ್ನು ತೀರ್ಥವಾಗಿ ಸೇವಿಸಿ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ. ಇದಕ್ಕೆಂದು ದೂರದೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಸಂಜೆ ದೇಗುದಲ್ಲಿ ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರ ಬಲಿ ಸೇವೆ ನಡೆಸಿ, ದೇವರ ಗದ್ದೆಗೆ ಭಕ್ತರ ಮೆರವಣಿಗೆಯೊಂದಿಗೆ ದೇವರು ಕೋರಿ ಗದ್ದೆಯ ಮಜಲಿನಲ್ಲಿರುವ ಕಟ್ಟೆಯಲ್ಲಿ ರಾರಾಜಿಸಿದರು. ರಾತ್ರಿ ಅನ್ನದಾನ ಸೇವೆ ನಡೆದು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.
ಪವಿತ್ರಪಾಣಿ ಎ.ರಾಧಕೃಷ್ಣ ಎಡಪಡಿತ್ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಸಿಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಜೆ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಅನ್ನದಾನ ಸೇವಕರ್ತರಾದ ಬಸವರಾಜ್ ಬೆಂಗಳೂರು, ವಿಶ್ವನಾಥ್ ಕೊಲ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.