ಕುದ್ಮಾರು:3 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
Team Udayavani, Nov 15, 2018, 3:28 PM IST
ಬೆಳಂದೂರು: ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕುದ್ಮಾರು ಗ್ರಾಮದಲ್ಲಿ ಕ್ರೀಡಾ ಇಲಾಖೆಗೆ ಮಂಜೂರಾದ 2.50 ಎಕ್ರೆ ಜಾಗವನ್ನು ಸ್ಕಂದಶ್ರೀ ಯುವಕ ಮಂಡಲವು ಕ್ರೀಡಾಂಗಣವಾಗಿ ಮಾರ್ಪಡಿಸಿದೆ. ದರ್ಬೆ-ಸುಬ್ರಹ್ಮಣ್ಯ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಶಾಂತಿಮೊಗರು ದ್ವಾರದ ಬಳಿ ಕ್ರೀಡಾಂಗಣ ನಿರ್ಮಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿ ಗ್ರಾಮದಲ್ಲೂ ಕ್ರೀಡಾಂಗಣ ರಚನೆಗೆ ಸ್ಕಂದಶ್ರೀ ಯುವಕ ಮಂಡಲದ ಕಾರ್ಯ ಪ್ರೇರಣೆ ನೀಡಿದೆ.
ಕ್ರೀಡಾಂಗಣದ ಬೇಡಿಕೆ
ಕುದ್ಮಾರಿಗೆ ಒಂದು ಕ್ರೀಡಾಂಗಣದ ಅಗತ್ಯ ಇದೆ ಎಂಬುದನ್ನು ಮನಗಂಡ ಸ್ಕಂದಶ್ರೀ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು, ಮೂರು ವರ್ಷಗಳ ಹಿಂದೆ ಕುದ್ಮಾರು ಗ್ರಾಮದ ಸರ್ವೇ ನಂ. 170/1ರ ಸರಕಾರಿ ಜಾಗವನ್ನು ಕ್ರೀಡಾಂಗಣ ಉದ್ದೇಶ ಕ್ಕಾಗಿ ಕಾಯ್ದಿರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು. ಸತತ ಪ್ರಯತ್ನದ ಫಲ ಎಂಬಂತೆ ಕಂದಾಯ ಇಲಾಖೆ 2.50 ಎಕ್ರೆ ಜಾಗವನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಮಂಜೂರು ಮಾಡಿತು.
3 ಲಕ್ಷ ರೂ. ವೆಚ್ಚ
ಎರಡೂವರೆ ಎಕ್ರೆ ಜಾಗ ಕ್ರೀಡಾ ಇಲಾಖೆಗೆ ಮಂಜೂರಾದ ಬಳಿಕ, ಜಾಗ ಸಮತಟ್ಟುಗೊಳಿಸಲು ಯುವಕ ಮಂಡಲದ ಸದಸ್ಯರು ತೀರ್ಮಾನಿಸಿದರು. ಬಹುತೇಕ ಸದಸ್ಯರು ತಲಾ 5 ಸಾವಿರ ರೂ. ನೀಡಿ ಸಹಕರಿಸಿದರು. ದಾನಿಗಳಿಂದಲೂ ನೆರವು ಸಂಗ್ರಹಿಸಿ, ಜಾಗ ಸಮತಟ್ಟುಗೊಳಿಸಲಾಯಿತು.
ಮನವಿ
ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆ ಯುವಕ ಮಂಡಲಕ್ಕಿದ್ದು, ಅನುದಾನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಎಸ್. ಅಂಗಾರ, ಜಿ.ಪಂ. ಸದಸ್ಯರಾದ ಪ್ರಮೀಳಾ ಜನಾರ್ದನ ಹಾಗೂ ಕ್ರೀಡಾ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಒಂದು ಕಡೆ ಕುಮಾರಧಾರಾ ನದಿ, ಮತ್ತೊಂದು ಕಡೆ ದಟ್ಟ ಅರಣ್ಯದಿಂದ ಆವೃತ್ತವಾಗಿರುವ ಕುದ್ಮಾರು ಒಂದು ಪುಟ್ಟ ಊರು. ಇಲ್ಲಿನ ಅದೆಷ್ಟೋ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಕುದ್ಮಾರಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾದರೆ ಇಲ್ಲಿನ ಯುವ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ, ಅವಕಾಶ ಒದಗಿಬರಲಿದೆ ಎನ್ನುತ್ತಾರೆ ಯಶೋಧರ ಹಾಗೂ ಶಿವಾನಂದ ಕೆಡೆಂಜಿಕಟ್ಟ.
ಶ್ಲಾಘನೀಯ ಕಾರ್ಯ
ಕುದ್ಮಾರಿನಲ್ಲಿ ಕ್ರೀಡಾಂಗಣಕ್ಕಾಗಿ ಸಹಾಯಕ ಆಯುಕ್ತರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಾಗ ಮಂಜೂರು ಮಾಡಿದ್ದಾರೆ. ಆರ್ಥಿಕ ಕ್ರೋಡೀಕರಣ ಮಾಡಿ ಜಾಗವನ್ನು ಸಮತಟ್ಟುಗೊಳಿಸುವಲ್ಲಿ ಕಾರ್ಯೋ ನ್ಮುಖವಾದ ಸ್ಕಂದಶ್ರೀ ಯುವಕ ಮಂಡಲದ ಕಾರ್ಯ ಶ್ಲಾಘನೀಯ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂತಹ ಕ್ರೀಡಾಂಗಣ ನಿರ್ಮಾಣವಾಗಿ ಕ್ರೀಡಾ ಪ್ರತಿಭೆಗಳು ಬೆಳೆಯುವಂತಾಗಲಿ.
– ಮಾಮಚ್ಚನ್ ಎಂ.
ಸಹಾಯಕ ಯುವಸಬಲೀಕರಣ ಹಾಗೂ ಕ್ರೀಡಾಧಿಕಾರಿ, ಪುತ್ತೂರು
ಸಹಕಾರ ಅನನ್ಯ
ಮೂರು ವಾರಗಳಿಂದ ನಿರಂತರವಾಗಿ ಹಿಟಾಚಿ ಹಾಗೂ ಜೆಸಿಬಿ ಮೂಲಕ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. 3 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆವರಣ ಗೋಡೆ, ರಂಗಮಂದಿರ ನಿರ್ಮಾಣದೊಂದಿಗೆ ಸುಸಜ್ಜಿತ ಕ್ರೀಡಾಂಗಣವಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರೆಲ್ಲರಿಗೂ ಮನವಿ ಮಾಡಿಕೊಳ್ಳಲಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕ್ರೀಡಾಂಗಣಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
– ದೇವರಾಜ್ ನೂಜಿ
ಅಧ್ಯಕ್ಷರು, ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.