![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 24, 2019, 12:53 AM IST
ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರ ಮಹಾ ಪ್ರಸಾದ ಮೂಲಮೃತ್ತಿಕೆಯನ್ನು (ಹುತ್ತದ ಮಣ್ಣು) ಕಾರ್ತಿಕ ಬಹುಳ ಏಕಾದಶಿಯ ಶನಿವಾರ ತೆಗೆಯಲಾಯಿತು.
ದೇಗುಲದ ಪ್ರಧಾನ ಅರ್ಚಕರು ಶನಿವಾರ ಬೆಳಗ್ಗೆ ಗರ್ಭಗುಡಿಯಿಂದ ಮೂಲಮೃತ್ತಿಕೆಯನ್ನು ತೆಗೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು. ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯಿಂದ ತೆಗೆಯುವ ಈ ಮೃತ್ತಿಕೆ ಅತ್ಯಂತ ಪವಿತ್ರ ಮಹಾಪ್ರಸಾದ ಎಂಬ ನಂಬಿಕೆ ಕ್ಷೇತ್ರದ ಭಕ್ತರದು.
ಒಂದು ಬಾರಿ ಮಾತ್ರ
ಮೂಲಮೃತ್ತಿಕೆಯನ್ನು ವರ್ಷದಲ್ಲಿ ಒಮ್ಮೆ ಮಾತ್ರ ತೆಗೆಯಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧವೆಂಬ ನಂಬಿಕೆಯಿದೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ ವ್ಯಾ ಧಿಗಳ ನಿವಾರಣೆಗೂ ಭಕ್ತರು ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವ ಮೂಲಕ ಭಕ್ತರು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಮೂಲಮೃತ್ತಿಕೆ ತೆಗೆಯುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಭಕ್ತರಿಗೆ ವಿಳಂಬವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಚಂಪಾಷಷ್ಠಿ ಪ್ರಯುಕ್ತ ಸಾರ್ವಜನಿಕರಿಂದ ಹಸುರು ಕಾಣಿಕೆಯನ್ನು ರವಿವಾರದಿಂದ ಡಿ. 9ರ ತನಕ ಸ್ವೀಕರಿಸಲಾಗುತ್ತದೆ. ಹೊರೆಕಾಣಿಕೆಯನ್ನು ದೇಗುಲದ ಗೋಪುರ ಮುಂಭಾಗದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರ ತನಕ ಸ್ವೀಕರಿಸಲಾಗುತ್ತದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಜಾತ್ರೆ ಆರಂಭ
ಕಾರ್ತಿಕ ಬಹುಳ ದ್ವಾದಶಿಯಂದು ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೆ ಆರಂಭವಾಗುವುದು. ಇದರೊಂದಿಗೆ ಪಾವನ ಕ್ಷೇತ್ರದಲ್ಲಿ ಜಾತ್ರೆ ಆರಂಭವಾಗಲಿದೆ.
You seem to have an Ad Blocker on.
To continue reading, please turn it off or whitelist Udayavani.