ಕುವೆಟ್ಟು: ಪ್ರಗತಿಯ ಹಾಡಿಗೆ ಕೋರಸ್ ಬೇಕು; ಎರಡು ಪ್ರಮುಖ ಪೇಟೆಗಳಿಗೂ ಒಂದೊಂದು ಶಾಪ
Team Udayavani, Jul 26, 2022, 10:07 AM IST
ಬೆಳ್ತಂಗಡಿ: ಮಂಗಳೂರು-ಚಿಕ್ಕ ಮಗಳೂರು ಸಹಿತ ಬೆಂಗಳೂರಿಗೆ ಸಂಪರ್ಕ ಬೆಸೆಯುವ ರಾಷ್ಟ್ರೀಯ ಹೆದ್ದಾರಿಯನ್ನೆ ಹೊದ್ದು ಮಲಗಿದಂತಿರುವ ಕುವೆಟ್ಟು ಗ್ರಾಮ. ಅಭಿವೃದ್ಧಿಯ ಅವಕಾಶಗಳಿಗೆ ಕೊರತೆ ಇಲ್ಲ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಬಹುಜನರಿಗೆ ತಿಳಿದಿರುವುದೇ ಗುರುವಾಯನ ಕೆರೆಯಿಂದ. ಕುವೆಟ್ಟು ಗ್ರಾ.ಪಂ. ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮಗಳು ಸೇರಿವೆ. ಕುವೆಟ್ಟು ಗ್ರಾಮ ಸುಮಾರು 2149.49 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ.
ಈ ಗ್ರಾಮದ ಅಂದವೇ ಗುರುವಾಯನ ಕೆರೆ. ಈ ಕೆರೆ ಅಭಿವೃದ್ಧಿಯಾದರೆ ಇಡೀ ಗ್ರಾಮಕ್ಕೆ ಹೊಸ ಕಳೆ ಬರಲಿದೆ. ಪ್ರವಾಸೋದ್ಯಮ ಬೆಳೆದು ಗ್ರಾ.ಪಂ. ನ ಆರ್ಥಿಕ ಶಕ್ತಿಯೂ ಬಲಗೊಳ್ಳಲಿದೆ. ಗ್ರಾಮಕ್ಕೂ ಅಭಿವೃದ್ಧಿಯ ನೀರು ಹರಿದು ಬರಲಿದೆ.
ಆದರೆ ಇದರ ಶಾಪವೊಂದು ಪರಿಹಾರವಾಗಬೇಕು. ಅದೇನೆಂದರೆ ಎರಡು ಪ್ರಮುಖ ಪೇಟೆಗಳಿಗಿರುವ ಟ್ರಾಫಿಕ್ ಜಾಮ್ ಮಾತ್ತು ಕೃತಕ ನೆರೆಯೆಂಬ ಸಮಸ್ಯೆಗಳು.
ಗುರುವಾಯನಕೆರೆ ಪೇಟೆ ಅಭಿವೃದ್ಧಿಗೆ ಟ್ರಾಫಿಕ್‌ನ ಅಸಮರ್ಪಕ ನಿರ್ವಹಣೆಯೇ ಅಡ್ಡಿಯಾಗಿದ್ದರೆ, ಮದ್ದಡ್ಕ ಪೇಟೆಗೆ ಕೃತಕ ನೆರೆಯೇ ಮಗ್ಗುಲಮುಳ್ಳು. ಕುವೆಟ್ಟು ಗ್ರಾಮದ ಬಹುಮುಖ್ಯ ಪೇಟೆಯಾದ ಗುರುವಾಯನಕೆರೆಯಾಗಿ ವೇಣೂರು-ಮೂಡುಬಿದಿರೆ, ಕಾರ್ಕಳ ರಸ್ತೆ ಹಾಗೂ ಉಪ್ಪಿನಂಗಡಿ ರಸ್ತೆ, ಅತ್ತ ಚಿಕ್ಕಮಗಳೂರು ಮಂಗಳೂರು ರಸ್ತೆಯಾಗಿ ಬರುವ ಎಲ್ಲ ವಾಹನಗಳು ಸಾಗುತ್ತವೆ. ಈ ಜಂಕ್ಷನ್ ಮೂರು ಸಂಗಮ ಸ್ಥಾನ. ಸಹಜವಾಗಿ ಜನದಟ್ಟಣೆ ಹೆಚ್ಚು.
ಇದನ್ನು ಸಮರ್ಪಕವಾಗಿ ನಿಯಂತ್ರಿಸುವುದು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಷ್ಟೇ ಇರುವ ಶಾಶ್ವತ ಪರಿಹಾರ. ಪೇಟೆಯ ಸುತ್ತಮುತ್ತ ಖಾಸಗಿ ಕಾರ್ಯಕ್ರಮವಿದ್ದರೆ, ಟ್ರಾಫಿಕ್ ಜಾಮ್ ಖಡಾಖಂಡಿತ. ಕೆಲವೊಮ್ಮೆ ಗಂಟೆಗಟ್ಟಲೆ ವಾಹನಗಳು ಚಲಿಸದ ಸ್ಥಿತಿಯೂ ಇದೆ. ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಶಿಲಾನ್ಯಾಸಗೊಂಡಿದೆ. ಹೆದ್ದಾರಿ ಕಾಮಗಾರಿ ಕಾರ್ಯಗತಗೊಳಿಸುವಾಗ ಟ್ರಾಫಿಕ್ ದಟ್ಟಣೆ ಕರಗಿಸುವ ಬಗ್ಗೆಯೂ ಆಲೋಚಿಸಬೇಕು. ಇದರ ಮಧ್ಯೆಯೇ ರಸ್ತೆ ಅಗಲಗೊಳಿಸಲು ಕೆಲವರ ವಿರೋಧವೂ ವ್ಯಕ್ತವಾಗುತ್ತಿದೆ. ಆದರೆ ಇಷ್ಟು ಟ್ರಾಫಿಕ್ ಸಮಸ್ಯೆ ಎದುರಾದರೂ ಅಗಲ ಮಾಡಲು ಮತ್ತೂಂದೆಡೆ ಅಪಸ್ವರಗಳೂ ಕೇಳಿಬರುತ್ತಿವೆ. ಈ ಬಗ್ಗೆ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಗಮನಹರಿಸಿ, ಅಹವಾಲಿಗೂ ಓಗೊಟ್ಟು ಅಭಿವೃದ್ಧಿಯ ಕ್ರಮಗಳಿಗೆ ಮುಂದಾಗಬೇಕು.
ಹೀಗೆಯೇ ಮದ್ದಡ್ಕ ಪೇಟೆಯು ಪ್ರತಿ ಮಳೆಗೆ ಕೃತಕ ನೆರೆಯ ಸಮಸ್ಯೆಗೆ ಗುರಿಯಾಗುತ್ತದೆ. ಮಳೆನೀರು ಸರಾಗವಾಗಿ ಹರಿದುಹೋಗಲು ಚರಂಡಿಗಳಿಲ್ಲ. ಇದಕ್ಕೂ ಸೂಕ್ತ ಪರಿಹಾರ ಕ್ರಮಗಳನ್ನು ಅನುಸರಿಸಬೇಕಿದೆ.
ಗುರುವಾಯನಕೆರೆ ಪ್ರೌಢಶಾಲೆಗೆ ಆಟದ ಮೈದಾನ ಸೌಲಭ್ಯ ಕಲ್ಪಿಸಬೇಕಿದೆ. ಸದ್ಯ 3 ಸಹಕಾರಿ ಸಂಘಗಳು, ಒಂದು ರಾಷ್ಟ್ರೀಕೃತ ಬ್ಯಾಂಕ್ ಇದೆ. ಆದರೆ ಪೇಟೆಯಲ್ಲಿ ಮತ್ತೂಂದು ರಾಷ್ಟ್ರೀಕತ ಬ್ಯಾಂಕ್ ನಿರ್ಮಾಣಕ್ಕೆ ಬೇಡಿಕೆಯಿದೆ.
ಹಿಂದೆ ಬಂಗಾಡಿ ಅರಸರ ಆಳ್ವಿಕೆಯಲ್ಲಿದ್ದ ಪಾಳೆಗಾರನಾಗಿದ್ದ ಗುರುವಯ್ಯ ಅವರು ಗದ್ದೆ ಕೃಷಿಗೆ ನೀರಿಗಾಗಿ ಕೆರೆ ಸ್ಥಾಪಿಸಿದ್ದರಂತೆ. ಅದೇ ಗುರುವಾಯನಕೆರೆ ಎಂದು ಪ್ರಸಿದ್ಧಿಯಾಯಿತಂತೆ. ಸುಮಾರು 14.7 ಎಕ್ರೆ ವಿಸ್ತೀರ್ಣವುಳ್ಳ ಕೆರೆಯನ್ನು ಏತನೀರಾವರಿ ಯೋಜನೆಯಡಿ ಬೋಟಿಂಗ್, ವಾಕಿಂಗ್ ಟ್ರ್ಯಾಕ್ ಸಹಿತ ಸಂಪೂರ್ಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದೇ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ (ಕಾರ್ಕಳ ರಸ್ತೆ) ದ್ವಿಪಥ ರಸ್ತೆ ನಿರ್ಮಾಣಗೊಂಡರೆ ಕುವೆಟ್ಟು ಗ್ರಾಮ ಬೆಳೆಯಲಿದೆ. ಗ್ರಾಮದಲ್ಲಿ 4 ಎಕ್ರೆ ವಿಸ್ತಾರಸಲ್ಲಿ ಸುಣ್ಣದಕೆರೆ ಇದ್ದು ಅದರ ಅಭಿವೃದ್ಧಿಗೂ ಆದ್ಯತೆ ನೀಡಬೇಕಿದೆ.
ಘನತ್ಯಾಜ್ಯ ಘಟಕವಿಲ್ಲ
ಕುವೆಟ್ಟು ಗ್ರಾಮದಲ್ಲಿ 7000 ಕ್ಕೂ ಮಿಕ್ಕಿ ಜನಸಂಖ್ಯೆಯಿದೆ. ಆದರೆ ಘನತ್ಯಾಜ್ಯ ವಿಲೇವಾರಿ ಘಟಕವಿಲ್ಲ. ಈಗಿರುವ ತ್ಯಾಜ್ಯ ಸಂಗ್ರಹ ಸ್ಥಳವು ಕೆರೆ ತಡೆಗೋಡೆಯಲ್ಲೇ ಇದೆ. ಊರಿನ ತ್ಯಾಜ್ಯದ ಮಲಿನ ನೀರು ನೇರ ಕೆರೆಗೆ ಸೇರುತ್ತಿದೆ. ಪರಿಣಾಮ ಸಾವಿರಾರು ಜಲಚರಗಳಿಗೆ ಆಪತ್ತು ಉಂಟಾಗುತ್ತಿದೆ. ಕಳೆದ ಬಾರಿ ತ್ಯಾಜ್ಯ ನೀರು ಕೆರೆ ಸೇರಿ ಸಾವಿರಾರು ಮೀನುಗಳು ಸತ್ತಿದ್ದವು. ಇದನ್ನು ಅರಿತು ಗ್ರಾ.ಪಂ. ತ್ಯಾಜ್ಯ ಘಟಕ ನಿರ್ಮಾಣಕ್ಕೆ ಪಣತೊಟ್ಟಿದೆ.
ಗ್ರಾಮದಲ್ಲಿ 1760ಕ್ಕೂ ಅಧಿಕ ಕುಟುಂಬಗಳಿವೆ. ಇಷ್ಟು ದೊಡ್ಡ ಗ್ರಾಮಕ್ಕೆ ರುದ್ರಭೂಮಿಯಿಲ್ಲ. ಅವಿಭಕ್ತ ಕುಟುಂಬಗಳು ವಿಭಕ್ತವಾಗುತ್ತಲೆ ವಂಶಪಾರಂಪರೆಯಾಗಿ ಬಂದ ಭೂಮಿಗಳು ಪರಿವರ್ತನೆ ಆಗುತ್ತ ಮನೆ ನಿರ್ಮಾಣಕ್ಕಷ್ಟೆ ಸೀಮಿತವಾಗಿದೆ. ಇನ್ನು ಮೃತಪಟ್ಟ ದೇಹಗಳ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಇದೂ ಸಹ ಈಡೇರಲೇಬೇಕಾದ ಬೇಡಿಕೆ.
ಪ್ರಮುಖವಾಗಿ ಕುವೆಟ್ಟುವಿನಿಂದ ಮಚ್ಚಿನ ಸಂಪರ್ಕದ ನೇರಳಕಟ್ಟೆಯಿಂದ ಪೊಯ್ಯೋಟ್ಟು ವರೆಗಿನ 10 ಕಿ.ಮೀ.ರಸ್ತೆ ತೀರಾ ಹದಗೆಟ್ಟಿದೆ. ಕುವೆಟ್ಟು ಗ್ರಾಮದ ಕಿನ್ನಿಗೋಳಿಯಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿ ಸಂಪರ್ಕ ರಸ್ತೆ ಅಭಿವೃದ್ಧಿಗೊಳ್ಳಬೇಕಿದೆ. ಇದೇ ರಸ್ತೆಯ ದೇರಮಾರು ಸಮೀಪದ ಗದ್ದೆಗೆ ಮಣ್ಣು ಹೇರಿ ರಸ್ತೆ ನಿರ್ಮಿಸಿದ್ದರಿಂದ ಕುಸಿತ ಭೀತಿ ಎದುರಾಗಿದೆ. ಪಿಲಿಚಾಮುಂಡಿಕಲ್ಲು ಪೊಟ್ಟುಕೆರೆ ಶಕ್ತಿ ನಗರ ಸಂಪರ್ಕ ರಸ್ತೆ 2 ಕಿ.ಮೀ. ರಸ್ತೆ ಅಭಿವೃದ್ಧಿಯಾದಲ್ಲಿ ಗುರುವಾಯನಕೆರೆ ಪೇಟೆ ಸಂಚಾರ ದಟ್ಟಣೆಯಾದರೂ ಕಾರ್ಕಳ ಕಡೆಯಿಂದ ಬರುವವರೂ ಮಂಗಳೂರು ರಸ್ತೆಗೆ ನೇರ ಸಂಪರ್ಕ ಪಡೆಯಲು ಅನುಕೂಲವಾಗಲಿದೆ. ಇವುಗಳಿಗೆ ಆದ್ಯತೆ ನೀಡಬೇಕಿದೆ.
ಕುಟುಂಬದ ಹೆಸರು?
ಕುವೆಟ್ಟು ಗ್ರಾಮದ ಮೂಲ ಹೆಸರು ಹೇಗೆ ಬಂತೆಂಬುದರ ಬಗ್ಗೆ ಯಾರಲ್ಲೂ ಸ್ಪಷ್ಟ ಚಿತ್ರಣವಿಲ್ಲ. ಆದರೆ ಇಲ್ಲಿನ ದಿ| ಜಿನ್ನಪ್ಪ ಸಾಲ್ಯಾನ್ ಮನೆತನದ ಗುತ್ತಿನ ಮನೆಗೆ ಕುವೆಟ್ಟು ಎಂದು ಹೆಸರು. ಅದೇ ಹೆಸರು ಗ್ರಾಮಕ್ಕೂ ಮುಂದುವರಿದಿದೆ ಎಂಬುದು ಬಲ್ಲವರ ಉಲ್ಲೇಖ. ಇದೇ ಗ್ರಾಮದ ಕೇದೆ ಮನೆತನದ ಕೆ.ಚಿದಾನಂದ ಬಂಗೇರ, ಕೆ.ವಸಂತ ಬಂಗೇರ, ಕೆ.ಪ್ರಭಾಕರ ಬಂಗೇರ ಒಂದೇ ಮನೆಯ ಮೂವರು ಶಾಸಕರಾಗಿ ಸೇವೆ ಸಲ್ಲಿಸಿರುವುದೂ ವಿಶೇಷ.
ಪ್ರವಾಸೋದ್ಯಮಕ್ಕೆ ಒತ್ತು: ಗ್ರಾ.ಪಂ. ಮಟ್ಟದಿಂದ ಶಾಸಕರ ಅನುದಾನದಿಂದ ಹಂತ ಹಂತವಾಗಿ ಗ್ರಾಮಸ್ಥರ ಹಾಗೂ ಗ್ರಾಮದ ಬೇಡಿಕೆ ಈಡೇರಿಸಲಾಗುತ್ತಿದೆ. ಪ್ರಮುಖವಾಗಿ ಘನತ್ಯಾಜ್ಯ ಘಟಕ, ರುದ್ರಭೂಮಿ ನಿರ್ಮಾಣಕ್ಕೆ ಆಧ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಅನುದಾನ ಇರಿಸಿದಂತೆ ಗುರುವಾಯನ ಕೆರೆ ಸಮಗ್ರ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. –ಆಶಾಲತಾ, ಅಧ್ಯಕ್ಷರು, ಕುವೆಟ್ಟು ಗ್ರಾ.ಪಂ.
ಟ್ರಾಫಿಕ್ ಜಾಮ್ ಸಮಸ್ಯೆ: ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ, ಇರುವ ಕ್ಲಿನಿಕ್‌ಗಳನ್ನೆ ಜನ ಅವಲಂಬಿಸಿದ್ದಾರೆ. ಅಗತ್ಯಕ್ಕೆ ಜನ ಪಡಂಗಡಿ ಪ್ರಾ.ಆರೋಗ್ಯ ಕೇಂದ್ರವನ್ನೇ ಅನುಸರಿಸಿದ್ದಾರೆ. ಆಟೋ ಪಾರ್ಕಿಂಗ್ ಅವ್ಯವಸ್ಥೆ ಕಾಡಿದೆ, ವಿದ್ಯಾರ್ಥಿಗಳು, ಉದ್ಯೋಗಸ್ಥರು ಬಸ್ ನಿಲ್ದಾಣವಿಲ್ಲದೆ ರಸ್ತೆಯಲ್ಲೆ ನಿಲ್ಲಬೇಕು. ಬಸ್‌ಗಳು ರಸ್ತೆಯಲ್ಲೇ ನಿಲುಗಡೆ ಮಾಡುವುದರಿಂದ ಗುರುವಾಯನಕೆರೆ ಪೇಟೆಗೆ ಟ್ರಾಫಿಕ್ ಜಾಮ್ ಸಮಸ್ಯೆ ತಪ್ಪುತ್ತಿಲ್ಲ. -ಡಾ| ವೇಣುಗೋಪಾಲ್ ಶರ್ಮಾ ಸ್ಥಳೀಯರು
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.