ಪಯಸ್ವಿನಿ ಉಳಿಸಲು ಜನರಲ್ಲೇ ಅರಿವು ಮೂಡಲಿ
Team Udayavani, Jan 23, 2020, 12:18 AM IST
ಸಾಂದರ್ಭಿಕ ಚಿತ್ರ
ಸುಳ್ಯ ತಾಲೂಕಿನ ಜೀವನದಿ “ಪಯಸ್ವಿನಿ’ಯ ಒಡಲು ಮಲಿನವಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 87 ಕಿ.ಮೀ. ಹರಿಯುವ ನದಿ ತನ್ನೊಡಲಿನಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಸಂಕಟಪಡುತ್ತಿದೆ. ಈ ನದಿಯನ್ನು ಶುದ್ಧ ರೂಪದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದಯವಾಣಿ ಸುದಿನ ಕಾಳಜಿ ಇದು. ಓದುಗರೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಬರೆದು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ಆಯ್ದ ಅಭಿಪ್ರಾಯಗಳನ್ನು ಸುದಿನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸ್‌ಆ್ಯಪ್ ಸಂಖ್ಯೆ: 9108051452
ಕೊಡಗಿನ ತಾಳತ್ ಮನೆಯಲ್ಲಿ ಹುಟ್ಟಿ ಸುಮಾರು 87 ಕಿ.ಮೀ. ದೂರಕ್ಕೆ ಹರಿಯುವ ಪಯಸ್ವಿನಿ ನದಿ ಸುಳ್ಯ ತಾಲೂಕಿನ ಜೀವ ನದಿ. ಇದು ಸುಳ್ಯ ತಾಲೂಕಿನಲ್ಲಿ ಹರಿಯುವ ಏಕೈಕ ಪ್ರಮುಖ ನದಿ ಎಂದರೂ ತಪ್ಪಿಲ್ಲ. ಸುಳ್ಯ ನಗರದ ಎಲ್ಲ ಆಗು ಹೋಗುಗಳಲ್ಲಿ ಪಯಸ್ವಿನಿ ನದಿ ಪ್ರಮುಖ ಪಾತ್ರವನ್ನು ವಹಿಸಿದೆ. ಅದೂ ಅಲ್ಲದೆ ಹಲವಾರು ಜಲಚರಗಳಿಗೆ, ಪ್ರಾಣಿ – ಪಕ್ಷಿಗಳಿಗೆ ಇದು ಜೀವನಾಧಾರವಾಗಿದೆ.
ಪಯಸ್ವಿನಿ ನದಿ ಇಲ್ಲದ ಸುಳ್ಯ ನಗರವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕುಡಿಯುವ ನೀರಿನಿಂದ ಹಿಡಿದು ಹೊಟೇಲ್ ಉದ್ಯಮ. ಕಾರ್ಖಾನೆ, ಶಾಲಾ ಕಾಲೇಜು, ಆಸ್ಪತ್ರೆ ಎಲ್ಲದಕ್ಕೂ ಪಯಸ್ವಿನಿ ನೀರೇ ಆಧಾರವಾಗಿದೆ. ಅದರೆ ಜನರಿಗೆ ಪಯಸ್ವಿನಿ ನದಿಯ ಮಹತ್ವ ಅರಿವಾಗುವ ಹೊತ್ತಿಗೆ ಎಪ್ರಿಲ್, ಮೇ ತಿಂಗಳು ಬಂದಿರುತ್ತದೆ. ಆ ಸಮಯದಲ್ಲಿ ನೀರಿಗಾಗಿ ಪರಡಾಡುವ ಸ್ಥಿತಿ ಒದಗಿ, ಕೃಷಿ ತೋಟ ಒಣಗಲು ಆರಂಭಿಸಿರುತ್ತದೆ. ಸುಳ್ಯ ನಗರದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿ, ಕಟ್ಟಡ ನಿರ್ಮಾಣ ಇನ್ನಿತರ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಪರಿಸ್ಥಿತಿ ಬಂದಿರುತ್ತದೆ. ಆಗ ನೀರಿನ ಆವಶ್ಯಕತೆಯ ಬಗ್ಗೆ, ನೀರಿನ ಉಳಿವಿನ ಬಗ್ಗೆ ಅರಿವು ಮೂಡುತ್ತದೆ. ಮಳೆ ಬಂದಾಗ ಮತ್ತೆ ಮರೆತುಹೋಗುತ್ತದೆ.
ಜನ ಈ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಪ್ರತೀ ವರ್ಷ ನವೆಂಬರ್ ತಿಂಗಳಿಂದಲೇ ನೀರಿನ ಮಿತ ಬಳಕೆ ಆರಂಭಿಸಿದರೆ ಸೂಕ್ತ. ಅದರಲ್ಲೂ ಕೃಷಿ ತೋಟದಲ್ಲಿ ಸುಖಾಸುಮ್ಮನೆ ನೀರನ್ನು ಪಂಪ್ ಮಾಡುವ ಬದಲು ಅಗತ್ಯವಿದ್ದಷ್ಟೇ ನೀರನ್ನು ತೋಟಗಳಿಗೆ ಹಾಯಿಸಿದರೆ ಒಳಿತು. ಹಲವಾರು ಸಮಾಜಮುಖೀ ಕಾರ್ಯಗಳ ಮುಖಾಂತರ ಪಯಸ್ವಿನಿ ನದಿಯನ್ನು ಮಾಲಿನ್ಯದಿಂದ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು, ಶಾಲೆಗಳು, ಪತ್ರಿಕೆಗಳು ಕೈ ಜೋಡಿಸಿರುವುದು ಶಾಘನೀಯ. ಜನರಿಗೆ ನದಿಯ ಸ್ವತ್ಛತೆಯ ಬಗ್ಗೆ ಅರಿವು ಮೂಡಬೇಕು. ಈ ಮೂಲಕ ನಮ್ಮ ಸುಳ್ಯದ ಜೀವನದಿ, ಜೀವನಾಡಿ ಪಯಸ್ವಿನಿ ನದಿಯೂ ಮುಂದಿನ ಪೀಳಿಗೆಯವರಿಗೆ ಸ್ವತ್ಛ ನದಿಯಾಗಿ ಉಳಿಯುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.
ಮಾಡಬೇಕಾದ ಕಾರ್ಯ
ಸುಳ್ಯದ ಕಡೆಗೆ ಹರಿಯುವ ಪಯಸ್ವಿನಿಯ ತೀರಗಳು ಆರಂಭದಲ್ಲಿ ಸ್ವತ್ಛಂದವಾಗಿಯೇ ಇರುತ್ತದೆ. ಕಲ್ಲುಗುಂಡಿಯಿಂದ ಮುಂದೆ ಪಯಸ್ವಿನಿಯ ಗೋಳು ಪ್ರಾರಂಭವಾಗುತ್ತದೆ. ನದಿಯ ದಡಗಳಲ್ಲಿ ತ್ಯಾಜ್ಯಗಳು ಕಾಣಿ ಸುತ್ತವೆ. ಇಂತಹ ತ್ಯಾಜ್ಯಗಳು ಸ್ವತ್ಛವಾಗಬೇಕು.
ನದಿ ಕಸದ ತೊಟ್ಟಿಯಲ್ಲ. ಅಲ್ಲಿ ಕಸ ಕಡ್ಡಿಗಳನ್ನು ಬಿಸಾಡುವುದು ತಪ್ಪು ಎಂಬ ಭಾವನೆ ಜನರಲ್ಲಿ ಮೂಡಬೇಕು.
ಮಡಿಕೇರಿ- ಮಂಗಳೂರು ರಸ್ತೆಗಳಲ್ಲಿ ಹೋಗುವ ವಾಹನ ಚಾಲಕರು, ಪ್ರವಾಸಿಗರು ನದಿಯ ಬದಿಯಲ್ಲಿ ಅಡಿಗೆ ಮಾಡಿ, ತಟ್ಟೆ, ಉಳಿದ ಆಹಾರಗಳನ್ನು ಎಸೆದು ಹೋಗುತ್ತಾರೆ. ಕೆಲವೊಬ್ಬರು ನಿತ್ಯ ಕರ್ಮಗಳಿಗೂ ನದಿಯನ್ನೇ ಆಶ್ರಯಿಸಿ ಗಲೀಜು ಮಾಡುತ್ತಾರೆ. ಇಂಥವರ ಮೇಲೆ ಕಠಿನ ಕ್ರಮ
ಕೈಗೊಳ್ಳಬೇಕು.
ನದಿಯ ಬದಿಗಳಲ್ಲಿ ನಡೆಯುವ ಅನಧಿಕೃತ ಮರಳು ಸಾಗಣೆ ನಿಷೇಧಿಸಬೇಕು.
ಪಯಸ್ವಿನಿಯ ಇಕ್ಕೆಲಗಳಲ್ಲಿ ಇರುವ ಮರಗಳನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುವುದು ಒಳ್ಳೆಯದು. ಇದರಿಂದ ಪಯಸ್ವಿನಿಯಲ್ಲಿ ಕೆನ್ನೀರು ಹರಿಯುವುದನ್ನು ಬಹುತೇಕ ತಡೆಯಬಹುದು.. ಇಲ್ಲದಿದ್ದರೆ ಸಾಧಾರಣ ಮಳೆಯಾದ ಮರುದಿನ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.
ಮೀನು ಹಿಡಿಯಲು ನದಿಗೆ ಬಲೆ ಹಾಕುವವರ, ಸ್ಫೋಟಕಗಳನ್ನು ಬಳಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಲಚರಗಳಿಗೂ ತೊಂದರೆ.
ಸುಳ್ಯ ನಗರ ಹಾಗೂ ಇತರ ಚರಂಡಿ ಹಾಗೂ ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಇನ್ನೂ ತುಂಬಾ ಸುಧಾರಣೆ ಆಗಬೇಕಿದೆ.
ಕೃಷಿ ತೋಟಗಳಿಗೆ ಮಿತವಾಗಿ ನೀರಿನ ಬಳಕೆ ಮಾಡುವುದು ಅತಿ ಮುಖ್ಯ ಕೆಲಸ.
ದಯಾನಂದ ಅಂಜಿಕ್ಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.