ವಿಟ್ಲ ಹೋಬಳಿಯ ಹೊರೆ ಇಳಿದು ಅಭಿವೃದ್ಧಿಯಾಗಲಿ
Team Udayavani, Dec 8, 2021, 5:46 PM IST
ವಿಟ್ಲ: ವಿಟ್ಲ ಹೋಬಳಿ ತಾಲೂಕು ಆಗಲಿಲ್ಲ. ವಿಟ್ಲ ತಾಲೂಕು ಆಗಬೇಕೆಂಬ ಆಗ್ರಹವೂ ನಾಲ್ಕು ದಶಕಗಳಿಂದ ಕಾಗದ ಪತ್ರಗಳಲ್ಲೇ ಇದೆ. ಈ ನಡುವೆ ವಿಟ್ಲ ವಿಧಾನಸಭೆ ಕ್ಷೇತ್ರ ಮಾಯವಾಯಿತು. ಅದನ್ನು ಇತರ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಹಂಚಲಾಯಿತು. ಬಂಟ್ವಾಳ ತಾಲೂಕಿನ ಕೆಲವು ಭಾಗಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಏರಿಕೊಂಡಿತು. ಮುಖ್ಯವಾಗಿ ವಿಟ್ಲ ಪೇಟೆ, ಅಳಿಕೆ, ಪುಣಚ, ಕೇಪು, ವಿಟ್ಲಮುಟ್ನೂರು, ಪೆರುವಾಯಿ, ಮಾಣಿಲ ಮೊದಲಾದ ಗ್ರಾಮಗಳು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಇಲ್ಲಿನ ರಾಜಕೀಯ ಶಕ್ತಿಗಳು ಚೆಲ್ಲಾಪಿಲ್ಲಿಯಾದವು. ಮತ್ತೂಮ್ಮೆ ಸನ್ನಿವೇಶ ಬದಲಾಯಿತು. ವಿಟ್ಲ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ್ ಆಯಿತು. ಆದರೆ ಉಳಿದ ಗ್ರಾಮಗಳಿಗೆ ಪ್ರಯೋಜನವಾಗಲಿಲ್ಲ. ಪಟ್ಟಣ ಪಂಚಾಯತ್ ಆದ ಪರಿಣಾಮ ನೆರೆ ಗ್ರಾಮಗಳ ಜನತೆ ಕೆಲವೊಂದು ಸೌಲಭ್ಯಗಳಿಂದ ವಂಚಿಸಲ್ಪಟ್ಟರು.
ಬಂಟ್ವಾಳ ತಾಲೂಕಿನ ಮೂರು ಹೋಬಳಿಗಳಲ್ಲಿ ವಿಸ್ತೀರ್ಣ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿ ದೊಡ್ಡದು. ವಿಟ್ಲ ಹೋಬಳಿಯಲ್ಲಿ 23 ಗ್ರಾಮಗಳಿವೆ. ವಿಟ್ಲ ಹೋಬಳಿಯ ಕರೋಪಾಡಿ, ಮಾಣಿಲ ಮೊದಲಾದ ದೂರದ ಹಾಗೂ ಗಡಿಭಾಗದ ನಾಗರಿಕರು 45 ಕಿ.ಮೀ. ದೂರದಲ್ಲಿರುವ ಬಂಟ್ವಾಳದ ತಾಲೂಕು ಕೇಂದ್ರಕ್ಕೆ ಸಾಗುವುದು ವ್ಯಾವಹಾರಿಕವಾಗಿಯೂ ಆರ್ಥಿಕವಾಗಿಯೂ ನಷ್ಟ ದಾಯಕವಾಗಿದೆ. ಶಾಸಕರನ್ನು ಸಂಪರ್ಕಿಸಲು ಪುತ್ತೂರಿಗೂ, ಕಂದಾಯ ಇಲಾಖೆಗೆ ಬಂಟ್ವಾಳಕ್ಕೂ ಅಲೆದಾಡಬೇಕಾಗಿದೆ. ಜನಸಂಖ್ಯೆ ಆಧಾರದಲ್ಲಿ ಕಡಬ, ಮೂಡುಬಿದಿರೆ, ಮೂಲ್ಕಿ ತಾಲೂಕುಗಳಿಂದ ಅಧಿಕ ಜನಸಂಖ್ಯೆ ವಿಟ್ಲ ಹೋಬಳಿಯಲ್ಲಿದೆ. ಆ ಲೆಕ್ಕಾಚಾರದಲ್ಲಿ ವಿಟ್ಲ ಹೋಬಳಿಗೆ ತಾಲೂಕಾಗುವ ಅರ್ಹತೆಯಿದೆ.
ವಿಟ್ಲ ಹೋಬಳಿ ವಿಭಜನೆಯಾದರೆ ಕೊಳ್ನಾಡು ಇನ್ನೊಂದು ಹೋಬಳಿಯಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಸಾಲೆತ್ತೂರು, ಬೋಳಂತೂರು, ವೀರಕಂಬ, ವಿಟ್ಲಪಟ್ನೂರು, ಕನ್ಯಾನ, ಕರೋಪಾಡಿ ಗ್ರಾಮಗಳು ಕೊಳ್ನಾಡು ಹೋಬಳಿಗೆ ಸೇರಲಿವೆ.
ವಿಟ್ಲ ಹೋಬಳಿ ವಿಭಜನೆಯಾದರೆ ಒತ್ತಡ ಕಡಿಮೆಯಾಗಿ ಎಲ್ಲರಿಗೂ ಉತ್ತಮ ಸೇವೆ ಸಿಗಲು ಸಾಧ್ಯ. ಜತೆ ಜತೆಗೆ ಹೋಬಳಿ ಕೇಂದ್ರ ಆಧುನಿಕ ಕಾಲಕ್ಕೆ ತಕ್ಕಂತೆ ಅಭಿವೃದ್ದಿಯೂ ಆಗಬೇಕಿದೆ. ತಾಲೂಕು ಆಗುವ ಕನಸಿನಿಂದ ದೂರಗೊಂಡಿರುವ ವಿಟ್ಲಕ್ಕೆ ಸಮರ್ಪಕ ಹೋಬಳಿ ಕೇಂದ್ರ ಮತ್ತು ಅದಕ್ಕೆ ಬೇಕಾದಮೂಲ ಸೌಕರ್ಯಗಳು ಒದಗಿದರೆ ಜನರಿಗೆ ಕೆಲವು ಸೇವೆಗಳಾದರೂ ಸರಿಯಾಗಿ ಸಿಗುವುದಕ್ಕೆ ಸಾಧ್ಯವಿದೆ.
23 ಗ್ರಾಮಗಳು
ವಿಟ್ಲ ಹೋಬಳಿಯಲ್ಲಿ ಒಟ್ಟು 23 ಗ್ರಾಮಗಳಿವೆ. ಬಿಳಿಯೂರು, ಪೆರ್ನೆ, ಕೆದಿಲ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಕುಳ, ವೀರಕಂಬ, ಬೋಳಂತೂರು, ವಿಟ್ಲಮುಟ್ನೂರು, ಕೇಪು, ಪುಣಚ, ಪೆರುವಾಯಿ, ಮಾಣಿಲ, ಅಳಿಕೆ, ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಟ್ನೂರು, ವಿಟ್ಲಕಸಬಾ ಗ್ರಾಮಗಳು ಒಳಪಟ್ಟಿವೆ.
ನಾಡಕಚೇರಿ ಸ್ಥಿತಿ ಶೋಚನೀಯ
ವಿಟ್ಲ ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯ ಸ್ಥಿತಿ ಶೋಚನೀಯವಾಗಿದೆ. 1986ರಲ್ಲಿ ಸ್ಥಾಪನೆಯಾದ ನಾಡಕಚೇರಿ ಕಟ್ಟಡ ಮುರಿದುಬೀಳುವ ಹಂತದಲ್ಲಿದೆ. ಕಟ್ಟಡದೊಳಗೆ ಪ್ರವೇಶಿಸಿದರೆ ಆಕಾಶ ಕಾಣುತ್ತದೆ. ಕಡತಗಳು, ದಾಖಲೆಗಳು ನೀರುಪಾಲು ಮತ್ತು ಗೆದ್ದಲು ಪಾಲಾಗುವ ಹಂತದಲ್ಲಿದೆ. ಈ ನಾಡಕಚೇರಿ ಕೇಂದ್ರದಲ್ಲಿ ಶೌಚಾಲಯವೂ ಇಲ್ಲ. ರಸ್ತೆಯಿಂದ ಕಚೇರಿಗೆ ಪ್ರವೇಶಿಸಲು ದಾರಿಯಿಲ್ಲ. ಪ್ರವಾಸಿಮಂದಿರದ ದಾರಿಯಲ್ಲಿ ತೆರಳಿ ಕಷ್ಟಪಡಬೇಕು. ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಇಲ್ಲದೆ ಇದ್ದರೆ ದಾಖಲೆಗಳು ಸಿಗುತ್ತವೆ. ಈ ಕಟ್ಟಡದ ಸುತ್ತಲೂ ಕಳೆ ತುಂಬಿಕೊಂಡಿದೆ. ಗೇಟ್ ತುಕ್ಕು ಹಿಡಿದಿದೆ. ಗೋಡೆ, ಆವರಣ ಗೋಡೆ ಶಿಥಿಲಗೊಂಡಿದೆ. ಸುಣ್ಣಬಣ್ಣ ಕಾಣದೇ ಗರಬಡಿದಂತಿದೆ. ಅಷ್ಟೇ ಅಲ್ಲ, ಈ ಜಾಗ ಕೃಷಿ ಇಲಾಖೆಗೆ ಸಂಬಂಧಿಸಿದ್ದು. ಹಿಂದೆ ಗ್ರಾಮ ಚಾವಡಿಯಾಗಿದ್ದ 23 ಸೆಂಟ್ಸ್ ಜಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿಯಿದೆ. ಇದರಲ್ಲಿ ಗ್ರಾಮಕರಣಿಕರ ಕಚೇರಿಯೂ ಇದೆ. ಈ ಕಟ್ಟಡವೂ ಸುಭದ್ರವಾಗಿಲ್ಲ. ಹಳೆಯ ಅಂದಕೆಟ್ಟ ಕಟ್ಟಡವಾಗಿದ್ದು, ಹೋಬಳಿ ಕೇಂದ್ರದ ಈ ಕಚೇರಿಗಳು ನಾಲಾಯಕ್ ಆಗಿವೆ. ಸಬ್ ರಿಜಿಸ್ಟ್ರಾರ್ ಕಚೇರಿಯೂ ಹಳೆಯದು. ಇಲ್ಲೂ ದಾಖಲೆಗಳು ಗೆದ್ದಲು ಹಿಡಿಯುತ್ತಿವೆ.
ಸಂಪೂರ್ಣ ನಿರ್ಲಕ್ಷ್ಯ
ಹೋಬಳಿ ಕೇಂದ್ರದಲ್ಲಿ ಮಿನಿವಿಧಾನಸೌಧ ಆಗಬೇಕೆಂಬ ಕೂಗು ಇದೆ. ತಾ.ಪಂ.ಗೆ ಸಂಬಂಧಿಸಿದ ಜಾಗವೂ ಇದೆ. ಆ ಜಾಗದಲ್ಲಿ ಕಾಡು ಬೆಳೆದಿದೆ. ಯಾರಿಗೂ ಉಪಯೋಗವಿಲ್ಲದ ಈ ಜಾಗವನ್ನು ಸದ್ಬಳಕೆ ಮಾಡಬಹುದೆಂಬ ಅಭಿಪ್ರಾಯ ಹಲವರದ್ದು.
– ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.