ಅರಣ್ಯ ಇಲಾಖೆಯೇ ಮರ ಕಡಿಯಲಿ
ತಾ.ಪಂ. ಸಭೆಯಲ್ಲಿ ತಾ.ಪಂ., ಜಿ.ಪಂ. ಸದಸ್ಯರ ಆಗ್ರಹ
Team Udayavani, Jun 26, 2019, 5:00 AM IST
ಪುತ್ತೂರು: ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ನಿರ್ಮಾಣಕ್ಕೆ 25 ಎಕ್ರೆ ಜಾಗ ಮಂಜೂರಾಗಿದ್ದರೂ ಅರಣ್ಯ ಇಲಾಖೆ ಮರಗಳನ್ನು ತೆರವು ಮಾಡುತ್ತಿಲ್ಲ. ಮುಂದಿನ ತಾ.ಪಂ. ಸಭೆಗೆ ಮೊದಲು ತೆರವು ಮಾಡದಿದ್ದಲ್ಲಿ ಜನತೆಯನ್ನು ಸೇರಿಸಿ ನಾವೇ ಮರಗಳನ್ನು ಕಡಿಯುತ್ತೇವೆ ಎಂದು ಅರಣ್ಯ ಇಲಾಖೆಗೆ ತಾ. ಪಂ. ಹಾಗೂ ಜಿ.ಪಂ. ಸದಸ್ಯರು ಎಚ್ಚರಿಕೆ ನೀಡಿದ ಘಟನೆ ಪುತ್ತೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾ.ಪಂ. ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಾಲನಾ ವರದಿ ಸಂದರ್ಭ ತಾ.ಪಂ. ಸದಸ್ಯೆ ಉಷಾ ಅಂಚನ್, ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ವಿಷಯ ಪ್ರಸ್ತಾವಿಸಿದರು.
ವಿವಿ ಘಟಕ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇಯ ಬಳಿಕ 25 ಎಕ್ರೆ ಸ್ಥಳ ಮಂಜೂರಾಗಿದೆ. ಇದರಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡದ ಕಾರಣ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ. 2 ವರ್ಷಗಳಿಂದ ಮರ ತೆರವು ಮಾಡಲು ಮನವಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ವಿವಿ ಘಟಕ ಕಾಲೇಜಿನಿಂದ ಈ ಭಾಗದ ಎಷ್ಟೋ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಈಗ ವರ್ಷಕ್ಕೆ 2 ಲಕ್ಷ ರೂ. ಬಾಡಿಗೆ ಪಾವತಿಸಿ ಬೇರೆ ಕಟ್ಟಡದಲ್ಲಿ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಅರಣ್ಯ ಇಲಾಖೆ ಮರ ತೆರವು ಮಾಡಲು ವಿಳಂಬ ಮಾಡುತ್ತಿರುವುದರಿಂದ ಕಟ್ಟಡ ನಿರ್ಮಾಣ ತಡವಾಗುತ್ತಿದೆ. ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಬೇಡಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಸ್ಥಳವಾಗಿರುವ ಸರ್ವೇ ನಂಬ್ರ 186/1ರಲ್ಲಿ 25 ಎಕ್ರೆ ಪ್ರದೇಶದ ಪಹಣಿ ಮಂಗಳೂರು ವಿಶ್ವವಿದ್ಯಾಲಯದ ಹೆಸರಲ್ಲಿದ್ದು, ನಕ್ಷೆಯೂ ಆಗಿದೆ. ಆದರೆ ಎರಡು ವರ್ಷಗಳಿಂದ ಅರಣ್ಯ ಇಲಾಖೆ ಉದ್ದೇಶಪೂರ್ವಕ ‘ಮೇಲಧಿಕಾರಿಗಳಿಗೆ ಬರೆಯಲಾಗಿದೆ’ ಎನ್ನುವ ಕುಂಟು ನೆಪ ಹೇಳಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ದೂರಿದರು. ಕೆಲವೇ ದಿನಗಳಲ್ಲಿ ನಡೆಯಲಿರುವ ಜಿ.ಪಂ. ಸಭೆಯಲ್ಲಿ ಅರಣ್ಯ ಇಲಾಖೆಯ ಮೇಲಧಿಕಾರಿಗಳು ಭಾಗವಹಿಸುತ್ತಾರೆ. ಅಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ತಾ.ಪಂ. ಇಒ ಎಸ್. ಜಗದೀಶ್ ಜಿ.ಪಂ. ಸದಸ್ಯರಿಗೆ ಹಾಗೂ ತಾ.ಪಂ. ಅಧ್ಯಕ್ಷರಿಗೆ ಸಲಹೆ ನೀಡಿದರು.
ವರ್ಗಾವಣೆ ರದ್ದು ಮಾಡಿ
ಡೆಂಗ್ಯೂ ಜ್ವರದ ಹಾವಳಿಯಿಂದ ತತ್ತರಿಸುತ್ತಿರುವ ಕಡಬದಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಒಬ್ಬ ವೈದ್ಯರನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.
ಎಂಡೋ ಪೀಡಿತ ಯುವತಿಗೆ ಸರಕಾರದಿಂದ ಹಣ ಬಂದರೂ ಕೈಗೆ ಸಿಗುತ್ತಿಲ್ಲ. ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಕೆ.ಟಿ. ವಲ್ಸಮ್ಮ ಹೇಳಿದರು. ಇಚ್ಲಂಪಾಡಿಯ ಯುವತಿಯೊಬ್ಬರು ಶೇ. 100 ಎಂಡೋ ಪೀಡಿತರಾಗಿದ್ದು, 4 ವರ್ಷಗಳಿಂದ ಸರಕಾರದಿಂದ ವೇತನ ಬರುತ್ತಿದ್ದರೂ ಅದನ್ನು ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಖಾತೆಯಲ್ಲಿ 1.50 ಲಕ್ಷ ರೂ. ಹಣವಿದೆ. ಓಡಾಡಲು ಸಾಧ್ಯವೇ ಇಲ್ಲದ ಇವರಿಗೆ ಹಣ ಪಡೆಯಲು ಅಸಾಧ್ಯವಾಗಿದೆ ಎಂದರು. ಈ ಬಗ್ಗೆ ಕಾನೂನು ಸರಳೀಕರಣಗೊಳಿಸಿ ಫಲಾನುಭವಿಗಳ ಕೈಗೆ ಹಣ ಒದಗಿಸುವ ಹಾಗೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು. ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಜನತೆಗೆ ಸರಿಯಾಗಿ ಮುಟ್ಟುತ್ತಿಲ್ಲ. ಆದೇಶ ನೀಡಿದ 50ಕ್ಕೂ ಹೆಚ್ಚು ಕಡತಗಳು ಬಾಕಿಯಾಗಿವೆ ಎಂದು ಸದಸ್ಯೆ ಆಶಾ ಲಕ್ಷ್ಮಣ ಅವರು ಹೇಳಿದರು.
ಇದರಿಂದ ಕಡಬದ ಜನತೆಗೆ ತೀರಾ ಸಮಸ್ಯೆಯಾಗಿದೆ. ಯಾವ ಮಾನದಂಡದಲ್ಲಿ ಇರುವ ವೈದ್ಯರನ್ನು ವರ್ಗಾವಣೆ ಮಾಡಿದ್ದೀರಿ ಎಂದು ಜಿ.ಪಂ. ಸದಸ್ಯ ಪಿ.ಪಿ. ವರ್ಗಿಸ್, ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಉಷಾ ಅಂಚನ್, ಪಿ.ವೈ. ಕುಸುಮಾ ಅವರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು. ತತ್‌ಕ್ಷಣವೇ ಈ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಸಂಚರಿಸುತ್ತಿಲ್ಲ ಸರಕಾರಿ ಬಸ್
ಒತ್ತಾಯದ ಮೇರೆಗೆ ಒಮ್ಮೆ ಬಸ್ ಆರಂಭಿಸುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಳಿಕ ಅದನ್ನು ನಿಲ್ಲಿಸುತ್ತಾರೆ. ವಿದ್ಯಾರ್ಥಿಗಳಿಗೆ ಪೂರಕವಾಗಿ ಹಾಕಿಸಿಕೊಂಡಿದ್ದ ಪುತ್ತೂರು -ನೆಲ್ಯಾಡಿ ಬಸ್ ಈಗ ಸಂಚರಿಸುತ್ತಿಲ್ಲ ಎಂದು ಸದಸ್ಯೆ ಉಷಾ ಅಂಚನ್ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೆಲ್ಯಾಡಿ ಇಚಿಲಂಪಾಡಿ ಕಡಬ ಭಾಗಗಳ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿಟಿ ಬಸ್ ಸೌಲಭ್ಯ ಒದಗಿಸಲು 5 ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿದ್ದೆ. ಇದೀಗ ಬೆಳಗ್ಗೆ 7.15ರ ನೆಲ್ಯಾಡಿ -ಪುತ್ತೂರು ಬಸ್ಸನ್ನೇ ಬಂದ್ ಮಾಡಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು. ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.
ಅಪೂರ್ಣ ಮಾಹಿತಿ
ಸರ್ವೇ ಇಲಾಖೆ ಅಧಿಕಾರಿ ಅಂಗನವಾಡಿ ಕೇಂದ್ರ, ಕೆರೆಗಳ ಕುರಿತು ಮಾಹಿತಿ ನೀಡುವ ಸಂದರ್ಭ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಆಕ್ಷೇಪಿಸಿ ಇದರಲ್ಲಿ ಕಡಬ ಭಾಗದ ಸರ್ವೆ ನಡೆಸಿರುವ ಕುರಿತು ಮಾಹಿತಿ ಇಲ್ಲ. ಅಳತೆ ಮಾಡಿದ್ದರೆ ಎಲ್ಲಿಯಾದರೂ ಗಡಿ ಗುರುತು ಇದೆಯಾ? ಆಲಂತಾಯ ಕೆರೆ ಅಭಿವೃದ್ಧಿ ಆಗುತ್ತಿದೆ. ಅದರ ಅಳತೆ ಮಾಡಿ ಗಡಿಗುರುತು ಮಾಡಿದ್ದೀರಾ? ಎಂದು ಪ್ರಶ್ನಿಸಿದರು. ಎಲ್ಲ ಭಾಗಗಳ ಸರ್ವೇ ನಡೆಸಲಾಗಿದೆ. ಸರ್ವೆ ಕಾರ್ಯ ನಡೆಸಿದ ಹಣವನ್ನು ಕಂದಾಯ ಇಲಾಖೆ ನೀಡುವುದೋ ಅಥವಾ ಗ್ರಾ.ಪಂ. ಆಡಳಿತಕ್ಕೆ ನೀಡುವುದೋ ಎನ್ನುವ ಕುರಿತು ಗೊಂದಲವಿದೆ ಎಂದರು. ಪೂರ್ಣ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಡಬ ಭಾಗದ ಮಾಹಿತಿಯನ್ನೂ ನೀಡಬೇಕು ಎಂದು ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸೂಚಿಸಿದರು.
ತಪ್ಪು ಮಾಹಿತಿ
ರಸ್ತೆ ಬದಿಯಲ್ಲಿರುವ ಅನಧಿಕೃತ ಅಂಗಡಿಗಳ ತೆರೆವಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಗಡಿ ಗುರುತಿಸಿ ದೃಢಪಡಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಡಬ್ಲ್ಯೂಡಿ ಇಲಾಖೆಯ ಸ.ಕಾ.ನಿ. ಎಂಜಿನಿಯರ್ ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಶಿವರಂಜನ್, ಅಧಿಕಾರಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಾಗಾದರೆ ಈ ಮೊದಲು ನೋಟಿಸ್ ನೀಡಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದರು. ಈಗ ಟಾರ್ಪಾಲು ಹಾಕಿ ಮತ್ತೆ ಕಂಬ ಹಾಕುತ್ತಾರೆ ಎಂದು ಅಧ್ಯಕ್ಷರು ಹೇಳಿದರು. ಹೀಗಾದರೆ ಖಾಸಗಿಯವರಿಗೆ ಬಾಡಿಗೆ ಇಲ್ಲದಾಗುತ್ತದೆ. ನಾವೂ ಗೂಡಂಗಡಿ ಮಾಡುತ್ತೇವೆ ಎಂದು ಸದಸ್ಯ ಗಣೇಶ್ ಕೈಕುರೆ ಹೇಳಿದರು. ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆ ನೋಟಿಸ್ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಒಂದೇ ಭಾಗದ ಚರ್ಚೆ
ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದ ಬಹುತೇಕ ಚರ್ಚೆಗಳು ಕಡಬ ತಾಲೂಕು ವ್ಯಾಪ್ತಿಯದ್ದೇ ಆಗಿತ್ತು. ತಾ.ಪಂ. ಸದಸ್ಯರಾದ ಉಷಾ ಅಂಚನ್, ಫಝಲ್ ಕೊಡಿಂಬಾಳ, ಆಶಾ ಲಕ್ಷ್ಮಣ, ಕೆ.ಟಿ. ವಲ್ಸಮ್ಮ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ ಮಾತ್ರ ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಂಡರು.
ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ನರೇಗಾ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ, ವಂದಿಸಿದರು.
ಕಾನೂನು ಸರಳಗೊಳಿಸಿ
ಎಂಡೋ ಪೀಡಿತ ಯುವತಿಗೆ ಸರಕಾರದಿಂದ ಹಣ ಬಂದರೂ ಕೈಗೆ ಸಿಗುತ್ತಿಲ್ಲ. ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಕೆ.ಟಿ. ವಲ್ಸಮ್ಮ ಹೇಳಿದರು. ಇಚ್ಲಂಪಾಡಿಯ ಯುವತಿಯೊಬ್ಬರು ಶೇ. 100 ಎಂಡೋ ಪೀಡಿತರಾಗಿದ್ದು, 4 ವರ್ಷಗಳಿಂದ ಸರಕಾರದಿಂದ ವೇತನ ಬರುತ್ತಿದ್ದರೂ ಅದನ್ನು ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಅವರ ಖಾತೆಯಲ್ಲಿ 1.50 ಲಕ್ಷ ರೂ. ಹಣವಿದೆ. ಓಡಾಡಲು ಸಾಧ್ಯವೇ ಇಲ್ಲದ ಇವರಿಗೆ ಹಣ ಪಡೆಯಲು ಅಸಾಧ್ಯವಾಗಿದೆ ಎಂದರು. ಈ ಬಗ್ಗೆ ಕಾನೂನು ಸರಳೀಕರಣಗೊಳಿಸಿ ಫಲಾನುಭವಿಗಳ ಕೈಗೆ ಹಣ ಒದಗಿಸುವ ಹಾಗೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು. ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಜನತೆಗೆ ಸರಿಯಾಗಿ ಮುಟ್ಟುತ್ತಿಲ್ಲ. ಆದೇಶ ನೀಡಿದ 50ಕ್ಕೂ ಹೆಚ್ಚು ಕಡತಗಳು ಬಾಕಿಯಾಗಿವೆ ಎಂದು ಸದಸ್ಯೆ ಆಶಾ ಲಕ್ಷ್ಮಣ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.