ನಿಡ್ಪಳ್ಳಿ: ಆಗುತ್ತಿರುವ ಕಾಮಗಾರಿ ಬೇಗ ಮುಗಿಯಲಿ
ಸೋಲಾರ್ ಇಂಧನದ ಗ್ರಾಮಕ್ಕೆ ಅಭಿವೃದ್ಧಿಯ ಬಲವೂ ಸಿಗಲಿ
Team Udayavani, Aug 1, 2022, 10:10 AM IST
ಬೆಟ್ಟಂಪಾಡಿ: ಪಾಣಾಜೆ ಗ್ರಾಮ ಪಂಚಾಯತ್‌ನಿಂದ 2015ರಲ್ಲಿ ವಿಭಜನೆಗೊಂಡ ನಿಡ್ಪಳ್ಳಿ ಬರೀ ಗ್ರಾಮವಾಗಿ ಉಳಿಯಲಿಲ್ಲ. ಗ್ರಾಮ ಪಂಚಾಯತ್ ಆಯಿತು.
ಜೈನ ಅರಸರ ಕಾಲದಲ್ಲಿ ಈ ಪ್ರದೇಶವು ಸಂಪದ್ಭರಿತವಾಗಿತ್ತು. ಅನ್ಯರು ಆಕ್ರಮಣ ಎಸಗಿದ ಸಂದರ್ಭದಲ್ಲಿ ಜನರು ತಮ್ಮ ಹಣ, ಸಂಪತ್ತನ್ನು ಬಾವಿ, ಕೆರೆಗಳಲ್ಲಿ ಅಡಗಿಸಿದರು. ನಿಧಿಯಿರುವ ಹಳ್ಳಿ ಆದ ಕಾರಣ ನಿಡ್ಪಳ್ಳಿ ಎನ್ನುವ ಹೆಸರು ಎನ್ನಲಾಗುತ್ತದೆ.
ಕೌಡಿಚ್ಚಾರು-ರೆಂಜ ಲೋಕೋ ಪಯೋಗಿ ರಸ್ತೆಯ ರೆಂಜದಿಂದ ಸ್ವಲ್ಪ ದೂರದಲ್ಲಿ ಪಂಚಾಯತ್ ಕಚೇರಿ ಇದೆ. 9 ಮಂದಿ ಚುನಾಯಿತ ಸದಸ್ಯರಿದ್ದಾರೆ. ಮೂರು ವಾರ್ಡ್ ಗಳಿವೆ. 1129.1 ಹೆಕ್ಟೇರ್ ವಿಸ್ತೀರ್ಣ. 263.5 ಹೆಕ್ಟೇರ್ ಅರಣ್ಯಭಾಗವಿದ್ದು, ಗೋಮಾಳವೂ ಇದೆ. ಒಟ್ಟು 3257 ಜನಸಂಖ್ಯೆ. ಅಡಿಕೆ, ತೆಂಗು,ರಬ್ಬರ್ ಇಲ್ಲಿನ ಮುಖ್ಯ ಆರ್ಥಿಕ ಬೆಳೆ. ಕರಿಮೆಣಸು, ಬಾಳೆ,ತರಕಾರಿ ಉಪಬೆಳೆ. ಕನ್ನಡ, ತುಳು ವ್ಯವಹಾರಿಕ ಭಾಷೆಗಳು. ಮೂರು ಪ್ರಾಥಮಿಕ ಶಾಲೆ, 1 ಪ್ರೌಢಶಾಲೆ ಇದೆ.
ಇವೆಲ್ಲ ಆಗಲಿ
ಪ್ರಸ್ತುತ ಗ್ರಾ.ಪಂ. ಕಚೇರಿಯ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 3 ಕಿ. ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಒಂದು ಕಿ. ವ್ಯಾಟ್ ಗ್ರಾ.ಪಂ. ಬಳಸಿದರೆ, ಉಳಿದದ್ದನ್ನು ಮೆಸ್ಕಾಂಗೆ ನೀಡಲು ಯೋಜನೆ ರೂಪಿಸಿದೆ. ಕಚೇರಿಯ ಎಲ್ಲ ಉಪಕರಣಗಳು ಸೋಲಾರ್ ಪವರ್ ನಿಂದ ನಡೆಯುವುದು ವಿಶೇಷ.
ನರೇಗಾ ಯೋಜನೆಯಲ್ಲಿ ಚೂರಿಪದವು ಹಿ.ಪ್ರಾ. ಶಾಲೆ, ಸರಕಾರಿ ಪ್ರೌಢಶಾಲೆಗೆ ಆವರಣಗೋಡೆ ರಚನೆ, ಶೌಚಾಲಯ, ಕಿಂಡಿ ಅಣೆಕಟ್ಟುಗಳ ರಚನೆಯಾಗಿದೆ. ರಸ್ತೆ ಕಾಮಗಾರಿಗಳೂ ನಡೆದಿವೆ. ತ್ಯಾಜ್ಯ ವಿಲೇವಾರಿ ವಾಹನವನ್ನು ಖರೀದಿಸಲಾಗಿದೆ. ವಿವಿಧ ಅನುದಾನದಲ್ಲಿ ಕಚ್ಚಾ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ.
ಏಳು ವರ್ಷದ ಹಿಂದೆ ರಚನೆಯಾದ ಗ್ರಾ.ಪಂ. ಕಚೇರಿಯು ಸಮು ದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ 20 ಲಕ್ಷ ರೂ. ಅನುದಾನದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣವಾಗುತ್ತಿದೆ. ಜತೆಗೆ ಹತ್ತಿರದಲ್ಲೇ 18ಲಕ್ಷ ರೂ. ವೆಚ್ಚದಲ್ಲಿ ಬಾಪೂಜಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ ಕೈಗೊಳ್ಳಲಾಗಿದೆ.
ಎಂಪೆಕಲ್ಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 1.30 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಕಿಂಡಿ ಅಣೆಕಟ್ಟು ರಚನೆಯಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ಮುಚ್ಚಲಾಗಿತ್ತು. ಈಗ ಕಾಮಗಾರಿ ಮುಗಿದಿದ್ದು ದ್ವಿಚಕ್ರ ಸವಾರರು ಸಂಚರಿಸುತ್ತಿದ್ದಾರೆ. ಇಕ್ಕೆಲಗಳಲ್ಲಿ ಯಾವುದೇ ಆಧಾರ ಇಲ್ಲದೆ ಇರುವುದರಿಂದ ವಾಹನ ಕೆಟ್ಟು ಹೋದರೆ ಅಥವಾ ನಿಯಂತ್ರಣ ತಪ್ಪಿದರೆ ಅನಾಹುತ ಸಂಭವಿಸಬಹುದು. ಇದಕ್ಕೆ ಎಚ್ಚರ ವಹಿಸಬೇಕಿದೆ.
ಕಾಮಗಾರಿ ನಡೆಯುವ ಹತ್ತಿರದ ಕಚ್ಚಾ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಪ್ರದೇಶದಲ್ಲಿ ಖಾಸಗಿಯವರ ಜಮೀನು ಮಳೆಗೆ ಕೊಚ್ಚಿ ಹೋಗಿದೆ. ತಡೆಗೋಡೆಯೂ ರಚನೆಯಾಗಬೇಕಿದೆ. ಲೋಕೋಪಯೋಗಿ ರಸ್ತೆಯ ಕೂಟೇಲು ಎಂಬಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸುತ್ತಿದೆ. ಹಾಗಾಗಿ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಳೆದುಕೊಂಡು ನಿಡ³ಳ್ಳಿ ದ್ವೀಪದಂತೆ ಆಗಿದೆ. ಕಳೆದ ತಿಂಗಳಲ್ಲಿ ಸೇತುವೆ ಕೆಳಗಡೆ ನೀರು ಸರಾಗವಾಗಿ ಹರಿಯಲಾಗದೇ ಸುತ್ತಲಿನ ಕೂಟೇಲು ಪರಿಸರ ಎರಡು ಬಾರಿ ಮುಳುಗಡೆಯಾಗಿ ಗ್ರಾಮಸ್ಥರಿಗೆ ತೊಂದರೆಯಾಯಿತು. ಇದಕ್ಕೆ ಪರಿಹಾರ ಹುಡುಕಬೇಕಿದೆ.
ಮಾಯಿಲ ಕೋಟೆಯ ಎಸ್‌ಸಿ ಕಾಲನಿಯಲ್ಲಿ ಕೈಗೆ ಎಟಕುವ ಎತ್ತರದಲ್ಲಿ ವಿದ್ಯುತ್ ಲೈನ್ ಹಾದುಹೋಗಿದೆ. ಮೆಸ್ಕಾಂ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸಬೇಕಿದೆ. ಜನತಾ ಕಾಲನಿಯಲ್ಲಿ ಅಪಾ ಯಕಾರಿ ಮರವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಬೇಕಾಗಿದೆ. ಗ್ರಾಮದ ವಿಜಯ ನಗರ, ತಂಬುತ್ತಡ್ಕ, ನುಳಿಯಾಲು, ಸೇರ್ಕಳ ಕೊಡಿ, ಕೊರಂಗಿಲದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ಜಾರಿಗೊಳಿಸಿದ್ದು, ಕುಕ್ಕುಪುಣಿ, ಶಾಂತಾದುರ್ಗಾ ದೇವಸ್ಥಾನ ಪಡುಮಲೆ, ಹನುಮಗಿರಿಯಲ್ಲೂ ಸಡಕ್ ಯೋಜನೆ ಜಾರಿಗೊಂಡಿದೆ. ಕೋನಡ್ಕ ಎಂಬಲ್ಲಿ ಕಿಂಡಿ ಅಣೆಕಟ್ಟು ಹಾಗೂ ವಿವಿಧೆಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲು 90 ಲಕ್ಷ ರೂ. ಅನುದಾನ ದೊರೆಯಬೇಕಿದೆ.
ನೀರಿನಲ್ಲೇ ವಾಹನಗಳನ್ನು ಚಾಲನೆ ಮಾಡಬೇಕಿದೆ
ನಿಡ್ಪಳ್ಳಿಯಿಂದ ದೇವಸ್ಥಾನಕ್ಕೆ ಹೋಗುವ ಕಾಲುದಾರಿಯನ್ನು ಸೇತುವೆ ಕಾಮಗಾರಿಗಾಗಿ ಮುಚ್ಚಲಾಗಿದೆ. ದೇವಸ್ಯದಲ್ಲಿ ನೀರಿನಲ್ಲೇ ವಾಹನಗಳನ್ನು ಚಾಲನೆ ಮಾಡಬೇಕಿದೆ. ಭಾರೀ ಮಳೆ ಸುರಿದರಂತೂ ಗ್ರಾಮ ದ್ವೀಪದಂತಾಗುತ್ತದೆ. ಗ್ರಾಮಕರಣಿಕರ ಕಚೇರಿಯೂ ಬಾಡಿಗೆ ಕಟ್ಟಡದಲ್ಲಿದ್ದು, ನೂತನ ಗ್ರಾಮ ಪಂಚಾಯತ್ ಪಕ್ಕದಲ್ಲೇ ಅನುದಾನ ಪಡೆದು ನಿರ್ಮಿಸಿದರೆ ಅನುಕೂಲವಾಗಲಿದೆ.
ಕಾಮಗಾರಿ ನಡೆಯುತ್ತಿದೆ: ಪಂಚಾಯತ್ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ತ್ಯಾಜ್ಯ ಘಟಕಕ್ಕೆ ಜಾಗ ಕಾಯ್ದಿರಿಸಲಾಗಿದೆ.ರಸ್ತೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಲು ಶಾಸಕರ, ಸಂಸದರ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. –ಗೀತಾ ಡಿ., ಅಧ್ಯಕ್ಷರು, ನಿಡ್ಪಳ್ಳಿ ಗ್ರಾ.ಪಂ
ಸುತ್ತು ಬಳಸಿ ಬರಬೇಕಿದೆ: ಸೇತುವೆ, ಕಿಂಡಿ ಅಣೆಕಟ್ಟು ಮುಂತಾದ ಕಾರ್ಯ ನಡೆಯುತ್ತಿದೆ. 3 ತಿಂಗಳಿಂದ ಗ್ರಾಮಕ್ಕೆ ಸುತ್ತು ಬಳಸಿ ಬರುವಂತಾಗಿರುವುದು ಸಮಸ್ಯೆಯೊಡ್ಡಿದೆ. ಜನಪ್ರತಿನಿಧಿಗಳು,ಅಧಿಕಾರಿಗಳು ಕಾಮಗಾರಿ ಆರಂಭಿಸುವಾಗ ಗ್ರಾಮಸ್ಥರ ವಿಶ್ವಾಸ ತೆಗೆದುಕೊಳ್ಳಬೇಕು.ಇಲ್ಲವಾದರೆ ಕಾಮಗಾರಿಯನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕು. – ನಾಸೀರ್, ಸ್ಥಳೀಯ ನಿವಾಸಿ
-ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.