ತ್ಯಾಜ್ಯ ನಿರ್ವಹಣೆ ಹೊಣೆ ಹೊತ್ತ ಮಹಿಳಾ ಸಾರಥಿ
ಸ್ವಚ್ಛ ಮಡಂತ್ಯಾರು ಗ್ರಾಮಕ್ಕಾಗಿ ಸಂಜೀವಿನಿ ದುಡಿಮೆ
Team Udayavani, Aug 5, 2022, 9:44 AM IST
ಬೆಳ್ತಂಗಡಿ: ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂಬ ಮಾತಿಗೆ ಉತ್ತಮ ನಿದರ್ಶನ ಮಡಂತ್ಯಾರು ಗ್ರಾಮ ಪಂಚಾಯತ್‌ನಲ್ಲಿ ಕಾಣ ಸಿಗುತ್ತದೆ. ಗ್ರಾಮವನ್ನು ತ್ಯಾಜ್ಯ ಮುಕ್ತವಾಗಿಸಬೇಕೆಂಬ ಉದ್ದೇಶದಿಂದ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ನಿರ್ವಹಣೆ ಜವಾಬ್ದಾರಿ ನೀಡಿರುವುದಲ್ಲದೆ ತ್ಯಾಜ್ಯ ಸಂಗ್ರಹ ವಾಹನವನ್ನೂ ಮಹಿಳಾ ಸಾರಥಿಗಳೇ ಮುನ್ನಡೆಸುತ್ತಿರುವುದನ್ನು ಕಂಡು ಗ್ರಾಮವೇ ಜಾಗೃತವಾಗಿದೆ.
ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕೃತ ಮಡಂತ್ಯಾರು ಗ್ರಾ.ಪಂ. ಸರಕಾರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಲೂಕಿಗೆ ಮಾದರಿ ಎನಿಸಿದೆ. ಪ್ರಸಕ್ತ ಅಮೃತ ಗ್ರಾಮ ಪಂಚಾಯತ್‌ಗೂ ಆಯ್ಕೆಯಾಗಿರುವ ಗ್ರಾಮವೀಗ ತ್ಯಾಜ್ಯ ನಿರ್ವಹಣೆಯೆಡೆಗೆ ಬಹುದೊಡ್ಡ ಹೆಜ್ಜೆ ಇರಿಸಿದೆ. ಇದಕ್ಕಾಗಿ ನೇಮಿಸಿದ್ದು ಮಹಿಳಾ ಶಕ್ತಿಗಳನ್ನು. ಮಡಂತ್ಯಾರು ತ್ಯಾಜ್ಯ ಸಂಸ್ಕರಣ ಘಟಕವನ್ನು ಸ್ಥಾಪಿಸಿ ಮನೆಯಿಂದಲೇ ಹಸಿ ಕಸ ಒಣಕಸ ವಿಂಗಡಿಸುವ ಸಲುವಾಗಿ ಮಡಂತ್ಯಾರು ನೇಸರ ಸಂಜೀವಿನಿ ಒಕ್ಕೂಟಕ್ಕೆ ಜವಾಬ್ದಾರಿ ನೀಡಲಾಗಿದೆ.
ಮಹಿಳಾ ಸಾರಥಿ
ತ್ಯಾಜ್ಯ ಸಂಸ್ಕರಣಕ್ಕೂ ಮುನ್ನ ಪ್ರತೀ ಮನೆ, ಅಂಗಡಿಯಿಂದ ತ್ಯಾಜ್ಯಾ ಸಂಗ್ರಹಿಸುವ ಕೆಲಸವಾಗಬೇಕು. ಇದಕ್ಕೆ ವಾಹನವನ್ನು ನೀಡಲಾ ಗಿದ್ದು, ಇದರ ಚಾಲಕ, ನಿರ್ವಾಹಕರೂ ಮಹಿಳೆಯರೇ ಎಂಬುದು ವಿಶೇಷ. ಕುಕ್ಕಳ ಗ್ರಾಮದ ಬಸವನಗುಡಿ ನಿವಾಸಿ ರಾಜೇಶ್ವರಿ ಬಿ. ಚಾಲಕಿಯಾದರೆ ಈಕೆಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಶಕುಂತಳಾ.
ವಿವಾಹಿತೆಯಾಗಿರುವ ರಾಜೇಶ್ವರಿ ಕುಟುಂಬ ನಿರ್ವಹಣೆಗೆ ಬದುಕು ಆಯ್ದು ಕೊಂಡಿದ್ದು ಚಾಲನಾ ಕೌಶಲವನ್ನು. ವಾಹನ ಚಾಲನೆಯಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ಅವರಿದ್ದ ಪೂಂಜಾಲಕಟ್ಟೆ ಸಂಜೀವಿನಿ ಒಕ್ಕೂಟವು ತ್ಯಾಜ್ಯ ಸಂಗ್ರಹ ವಾಹನದ ಚಾಲಕರನ್ನಾಗಿ ಇವರನ್ನೇ ಆಯ್ಕೆ ಮಾಡಿತು. ಅವರ ಪತಿ ವೆಲ್ಡಿಂಗ್ ವೃತ್ತಿ ನಡೆಸುತ್ತಿದ್ದು, ರಾಜೇಶ್ವರಿ ಪುಟ್ಟ ಅಂಗಡಿ ಹೊಂದಿದ್ದಾರೆ. ವಾರದ ಎರಡು ದಿನ ಮಂಗಳವಾರ ಹಾಗೂ ಶನಿವಾರ ಬೆಳಗ್ಗೆ 8ರಿಂದ ಸಂಜೆ 4ಗಂಟೆಯವರೆಗೆ ಕುಕ್ಕಳ, ಪಾರೆಂಕಿ, ಸಾಲ್ಮರ, ಬಂಗೇರಕಟ್ಟೆ, ಮಡಂತ್ಯಾರು, ಮೂಡಾಯೂರು, ಕುಕ್ಕಳಬೆಟ್ಟು ಬಸವನಗುಡಿ ವ್ಯಾಪ್ತಿಯಿಂದ ತ್ಯಾಜ್ಯ ಸಂಗ್ರಹಿಸುವ ಜಾವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಸಮಾಜಮುಖೀ ಕಾರ್ಯ
ರಾಜೇಶ್ವರಿ ಹತ್ತನೇ ತರಗತಿವರೆಗೆ ಶಿಕ್ಷಣ ಪಡೆದಿದ್ದು, ಜೀವನ ಭದ್ರತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ಸಾಲ ಪಡೆದು ಮನೆ ಸಮೀಪ ಪುಟ್ಟ ಅಂಗಡಿ ಹೊಂದಿದ್ದಾರೆ. ಕೇವಲ ದುಡಿಮೆಯೇ ಜೀವನ ಅಂದುಕೊಳ್ಳದೇ ಸ್ವತ್ಛ ಗ್ರಾಮದ ಕಲ್ಪನೆಯೊಂದಿಗೆ ಪ್ರತೀ ವಾರ ಗ್ರಾಮದ ಸ್ವತ್ಛತೆಗೆ ಗ್ರಾ.ಪಂ. ಜತೆ ಕೈಜೋಡಿಸಿದ್ದಾರೆ. ಶ್ರೀ ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಸದಸ್ಯೆಯಾಗಿದ್ದುಕೊಂಡು ಬಡವರಿಗೆ ಮನೆ ನಿರ್ಮಾಣ, ಶಾಲೆ ಕಟ್ಟಡ ದುರಸ್ತಿಯಂತಹಾ ಸಮಾಜಮುಖೀ ಸೇವೆಗೈಯುತ್ತಿದ್ದಾರೆ. ಮುಂದೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಟೋ ಖರೀದಿಗೆ ಸಾಲ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ.
ಅರಿವು ಮೂಡಿದೆ: ಆರಂಭದಲ್ಲಿ ತ್ಯಾಜ್ಯ ಸಂಗ್ರಹಣೆಗೆ ತೆರಳುವಾಗ ಮುಜುಗರ ಅನ್ನಿಸುತ್ತಿತ್ತು. ಬಳಿಕ ಎಲ್ಲರೂ ನಮ್ಮ ಕೆಲಸವನ್ನು ಪ್ರಶಂಸಿಸತೊಡಗಿದರು. ಇದೀಗ ಹೆಮ್ಮೆ ಅನಿಸುತ್ತಿದೆ. ಆರಂಭದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರು. ಈಗ ಜನಕ್ಕೆ ಶಿಸ್ತಿನ ಅರಿವಾಗಿದೆ. ತ್ಯಾಜ್ಯ ಮುಕ್ತ ಗ್ರಾಮವಾಗಿಸುವುದು ನಮ್ಮ ಸಂಕಲ್ಪ. ಜತೆಗೆ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂದುವರಿಯಬೇಕು ಎಂಬುದು ನನ್ನ ಆಶಯ. –ರಾಜೇಶ್ವರಿ ಬಿ., ತ್ಯಾಜ್ಯ ಸಂಗ್ರಹ ವಾಹನದ ಚಾಲಕಿ, ಮಡಂತ್ಯಾರು.
ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸ್ಥಳ ಗುರುತು: ಮಡಂತ್ಯಾರು ಗ್ರಾಮದ ಹಾರಬೆ ಶ್ರೀರಾಮನಗರದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಮಹಿಳೆಯರ ಜೀವನ ಭದ್ರತೆಗಾಗಿ ಘಟಕದ ನಿರ್ವಹಣೆಯನ್ನು ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ನೀಡಿದ್ದೇವೆ. ಆರಂಭದಲ್ಲಿ ತ್ಯಾಜ್ಯ ವಾಹನಕ್ಕೆ ಚಾಲಕರಾಗಿ ರಾಜೇಶ್ವರಿ ಆಯ್ಕೆಯಾಗಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. –ಶಶಿಪ್ರಭಾ, ಅಧ್ಯಕ್ಷರು, ವಾ ಮಡಂತ್ಯಾರು ಗ್ರಾ.ಪಂ.
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.