Madanthyar: ಕೊಯ್ಯೂರು ಗ್ರಾಮಾಧಿಕಾರಿ ಕಚೇರಿಯೇ ಶಿಥಿಲ
ಊರಿನ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಎ ಕಚೇರಿ ಕಟ್ಟಡದ ಪಕ್ಕಾಸಿಗೆ ಗೆದ್ದಲು ಹಿಡಿದಿದೆ, ಗೋಡೆ ಪಾಚಿ ಕಟ್ಟಿದೆ!; ಸಿಬಂದಿ, ಕಚೇರಿಗೆ ಬಂದವರಿಗೆ ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲ; ದಾಖಲೆಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ
Team Udayavani, Nov 12, 2024, 12:32 PM IST
ಮಡಂತ್ಯಾರು: ಇಡೀ ಊರಿನ ಸಮಸ್ಯೆಗಳಿಗೆ ಪರಿಹಾರ ನೀಡುವ, ದಾಖಲೆಗಳನ್ನು ಒದಗಿಸುವ, ಆಡಳಿತ ಯಂತ್ರದ ಬಹುಮುಖ್ಯ ಭಾಗವಾಗಿರುವ ಗ್ರಾಮಾಧಿಕಾರಿ ಕಚೇರಿ ಕಟ್ಟಡವೇ ಇವತ್ತೋ ನಾಳೆಯೋ ಎಂಬ ಸ್ಥಿತಿಯಲ್ಲಿದೆ. ಇದು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗ್ರಾಮಾಧಿಕಾರಿ ಕಟ್ಟಡದ ಸ್ಥಿತಿ.
ಈ ಕಟ್ಟಡದ ಸ್ಥಿತಿ ಹೇಗಿದೆ ಎಂದರೆ, ಮಳೆಗಾಲದಲ್ಲಿ ಕಚೇರಿಯ ಒಳಗೆ ಮಳೆ ನೀರು ಸೋರುತ್ತದೆ. ಗೋಡೆಗೆ ನೀರು ಬಸಿದು ಗೋಡೆಗಳು ಪಾಚಿಗಟ್ಟಿವೆ. ಆದರೊಳಗೆ ಇರುವ ಪಕ್ಕಾಸು ಎಂದೋ ಗೆದ್ದಲು ಹಿಡಿದಿದೆ. ಕಟ್ಟಡದ ಅವಶೇಷಗಳು ಗ್ರಾಮಾಧಿಕಾರಿ ಕಚೇರಿ ಸಿಬಂದಿ ಹಾಗೂ ಕಚೇರಿಯ ಅಗತ್ಯ ಕೆಲಸಕ್ಕೆ ಭೇಟಿ ನೀಡುವ ಗ್ರಾಮದ ಜನರ ತಲೆ ಮೇಲೆ ಯಾವಾಗ ಬೇಕಾದರೂ ಬೀಳಬಹುದು ಎಂಬಷ್ಟು ಆತಂಕ ಮೂಡಿಸುತ್ತಿವೆ. ತುರ್ತಾಗಿ ಸ್ಥಳಾಂತರ ಮಾಡದೇ ಇದ್ದರೆ ಕಟ್ಟಡವೇ ಕುಸಿದು ಬಿದ್ದು ಗಂಭೀರ ಅನಾಹುತ ಆಗುವ ಎಲ್ಲ ಸಾಧ್ಯತೆಗಳಿವೆ.
ಅನುದಾನ ತರಲು ವಿಫಲ
ಕಳೆದ ಹತ್ತಾರು ವರ್ಷಗಳಿಂದ ಈ ಕಟ್ಟಡದಲ್ಲೇ ವಿಎ ಕಚೇರಿ ಇದೆ. ಗ್ರಾಮ ಪಂಚಾಯತ್‌ಗಳು ಊರಿನಲ್ಲಿ ಶಾಲಾ ಕಟ್ಟಡ ಶಿಥಿಲವಾದರೆ ತೆರವು ಮಾಡುತ್ತವೆ, ಗುಡ್ಡ ಪ್ರದೇಶದಲ್ಲಿ ಮನೆ ಇದ್ದರೆ ಮಳೆಗಾಲದಲ್ಲಿ ಅಲ್ಲಿ ವಾಸಿಸಬೇಡಿ ಎನ್ನುತ್ತದೆ. ಆದರೆ, ವಿಎ ಕಚೇರಿ ಇಷ್ಟೊಂದು ಶಿಥಿಲವಾಗಿದ್ದರೂ ಪರ್ಯಾಯ ವ್ಯವಸ್ಥೆಯನ್ನು ಮಾಡಿಲ್ಲ. ಮಾತ್ರವಲ್ಲ ಕನಿಷ್ಠ ದುರಸ್ತಿ ಮಾಡುವುದಕ್ಕೂ ಮನಸು ಮಾಡಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಕಟ್ಟಡಕ್ಕೆ ಅನುದಾನ ತರಲು ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ.
ಗೆದ್ದಲು ಹಿಡಿದ ದಾಖಲೆಗಳು
ಈ ಕಟ್ಟಡ ಎಷ್ಟು ಶಿಥಿಲವಾಗಿದೆ ಎಂದರೆ ಹೊರಗಿನಿಂದ ನೋಡಿದರೆ ಆತಂಕವಾಗುತ್ತದೆ. ಆದರೂ ಗ್ರಾಮಾಧಿಕಾರಿ ಮತ್ತು ಸಿಬಂದಿ ಭಯದಿಂದಲೇ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ, ಸಿಬಂದಿ ಹಾಗೂ ಜನರಿಗೆ ಕುಳಿತು ಕೊಳ್ಳಲು ಸರಿಯಾದ ಅಸನದ ವ್ಯವಸ್ಥೆ ಇಲ್ಲ. ಕೊಯ್ಯೂರು ಗ್ರಾಮದಲ್ಲಿ 5ರಿಂದ 6 ಸಾವಿರ ಜನ ಸಂಖ್ಯೆ ಇದೆ. 1500ಕ್ಕೂ ಹೆಚ್ಚಿನ ಕುಟುಂಬಗಳು ಇರುವ ದೊಡ್ಡ ಗ್ರಾಮ ಇದು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಇಲ್ಲವೆ. ಗ್ರಾಮದ ಅಗತ್ಯವಾದ ಕಡತಗಳನ್ನು ಕಬ್ಬಿಣದ ಕಪಾಟುಗಳಲ್ಲಿ ಭದ್ರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅನುಪಯುಕ್ತ ದಾಖಲೆ, ಪತ್ರಗಳ ಬೇರೆ, ಬೇರೆ ಕಟ್ಟುಗಳನ್ನು ನೆಲದ ಮೇಲೆ ಇಡಲಾಗಿದೆ. ಅದು ಗೆದ್ದಲು ಹಿಡಿದು ದಾಖಲೆ ಪತ್ರಗಳು ನೆಲ ಕಚ್ಚಿಕೊಂಡು ಮಣ್ಣಿನಲ್ಲಿ ಗಟ್ಟಿಯಾಗಿದೆ!
ನಮ್ಮಲ್ಲೂ ಅನುದಾನವಿಲ್ಲ
ಕೊಯ್ಯೂರು ಗ್ರಾಮಾಧಿಕಾರಿ ಕಚೇರಿ ಸಂಪೂರ್ಣವಾಗಿ ಶಿಥಿಲವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ಗ್ರಾಮ ಪಂಚಾ ಯತ್ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಒತ್ತಾಯ ಮಾಡಿದ್ದೇವೆ. ನೂತನ ಕಟ್ಟಡದ ನಿರ್ಮಾಣ ಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪಂಚಾಯತ್ ವತಿಯಿಂದ ಪ್ರತಿ ವರ್ಷವೂ ಮನವಿ ಸಲ್ಲಿ ಸುತ್ತ ಬಂದಿದೆ. ನಮ್ಮ ಪಂಚಾಯತ್ ನಲ್ಲಿ ದೊಡ್ಡಮಟ್ಟದ ಅನುದಾನ, ಆರ್ಥಿಕ ವ್ಯವಸ್ಥೆ ಯಿಲ್ಲ. ಅನುದಾನ ಇತಿಮಿತಿಯಲ್ಲಿ ಸಹಕಾರ ಮಾಡಲು ಮಾತ್ರ ಸಾಧ್ಯವಿದೆ.
-ದಯಾಮಣಿ, ಅಧ್ಯಕ್ಷರು, ಕೊಯ್ಯೂರು ಗ್ರಾಪಂ
ಇಲಾಖೆಗೆ ಪತ್ರ ಬರೆದಿದ್ದೇವೆ
ಅನುದಾನ ಬಿಡುಗಡೆ ಸಂಬಂಧ, ಕಟ್ಟಡ ಶಿಥಿಲವಾಗಿ ಬೀಳುವ ಆತಂಕದಲ್ಲಿರುವ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ನ ಬದಲಿ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಉಂಟಾಗಿದೆ. ಆದರೆ ಇಲ್ಲಿ ಸ್ಥಳಾವಕಾಶದ ಕೊರತೆ ಇದೆ.
-ಸಿದ್ದೇಶ್ ಎಚ್., ಗ್ರಾಮಾಧಿಕಾರಿಗಳು, ಕೊಯ್ಯೂರು
ಗ್ರಾಪಂ ಕಟ್ಟಡದಲ್ಲಿ ಕಾರ್ಯಾಚರಣೆ
ಗ್ರಾಮಾಧಿಕಾರಿ ಕಟ್ಟಡದ ಅವ್ಯವಸ್ಥೆಯ ಗಮನಿಸಿದ ಪಂಚಾಯತ್ ಅಧ್ಯಕ್ಷರು,ಸದಸ್ಯರು ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಕಟ್ಟಡಕ್ಕೆ ಸ್ಥಳಾಂತರಿಸಲು 4-5 ವರ್ಷಗಳ ಹಿಂದೆಯೇ ಒತ್ತಾಯ ಮಾಡಿದ್ದರು. ಆದರೆ, ಅಲ್ಲಿ ಜಾಗ ಕಡಿಮೆ ಎಂಬ ಕಾರಣಕ್ಕೆ ಸ್ಥಳಾಂತರ ಆಗಿರಲಿಲ್ಲ. ಕೆಲ ದಿನಗಳಿಂದ ಪಂಚಾಯತ್ ಕಟ್ಟಡದಲ್ಲಿ ಈಗ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮಾಧಿಕಾರಿಗಳ ಈಗಿರುವ ಕಟ್ಟಡಕ್ಕೆ 0.10 ಸೆಂಟ್ಸ್ ಜಾಗವನ್ನು ಕಾದಿರಿಸಲಾಗಿದೆ.
ವಾರಕ್ಕೆ 2 ದಿನವಷ್ಟೇ ಆಧಿಕಾರಿ ಕರ್ತವ್ಯ
ಈ ಗ್ರಾಮಕ್ಕೆ ನಿಯೋಜನೆಗೊಂಡ ಗ್ರಾಮಾಧಿಕಾರಿಗೆ ನೆರಿಯ ಮತ್ತು ಪುದುವೆಟ್ಟು ಗ್ರಾಮದ ಪ್ರಭಾರವೂ ಇದೆ. ಹೀಗಾಗಿ ವಾರಕ್ಕೆ ಎರಡು ದಿನ ಮಾತ್ರ ಅವರು ಇಲ್ಲಿರುತ್ತಾರೆ. ಉಳಿದ ದಿನಗಳಲ್ಲಿ ಸಿಬಂದಿ ಮಾತ್ರ ಇರುತ್ತಾರೆ. ಶಿಥಿಲವಾದ ಕಟ್ಟಡದ ರಿಪೇರಿ, ಹೊಸ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಮತ್ತು ಕೊಯ್ಯೂರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸುತ್ತಾ ಇದ್ದೇವೆ.ಅದರೆ ಯಾವುದೇ ರೀತಿಯ ಪ್ರಯೋಜನ ಅಗಿಲ್ಲ ಎಂದು ಗ್ರಾಮಾಧಿಕಾರಿ ಹೇಳಿದರು.
-ಕೆ.ಎನ್. ಗೌಡ, ಗೇರುಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.