ಸಚಿವ ಸ್ಥಾನ: ಅಂಗಾರರಿಗೆ ಕೈಕೊಟ್ಟ ನಾಯಕರು
ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುತ್ತಿರುವ ಬಿಜೆಪಿ ವರಿಷ್ಠರು
Team Udayavani, Aug 21, 2019, 5:00 AM IST
ಸುಳ್ಯ: ವಿಧಾನಸಭಾ ಕ್ಷೇತ್ರ ರಚನೆಗೊಂಡು 57 ವರ್ಷಗಳ ಬಳಿಕ ಮೊದಲ ಬಾರಿಗೆ ಸುಳ್ಯದಿಂದ ಚುನಾಯಿತಗೊಂಡ ಶಾಸಕರೋರ್ವರು ಸಚಿವ ಸ್ಥಾನ ಪಡೆಯುತ್ತಾರೆ ಎನ್ನುವ ಬೆಟ್ಟದಷ್ಟಿದ್ದ ನಿರೀಕ್ಷೆ ಮತೊಮ್ಮೆ ಹುಸಿಯಾಗಿದೆ.
ಯಡಿಯೂರಪ್ಪ ಸರಕಾರದ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆತು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವುದು ಖಚಿತವಾಗಿ ಸೋಮವಾರವೇ ಪಕ್ಷದ ಮುಖಂಡರು, ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದರು. ಆದರೆ ರಾತ್ರೊರಾತ್ರಿ ನಡೆದ ಬೆಳವಣಿಗೆಯಿಂದ ಮಂಗಳವಾರ ರಾಜ್ಯಪಾಲರಿಗೆ ಸಲ್ಲಿಸಲಾದ ಪಟ್ಟಿಯಲ್ಲಿ ಅಂಗಾರ ಅವರ ಹೆಸರಿಲ್ಲದೆ ತಾಲೂಕಿನಲ್ಲಿ ತೀವ್ರ ನಿರಾಸೆ ಉಂಟಾಯಿತು.
ಎರಡನೇ ಬಾರಿ ಅವಕಾಶ ವಂಚಿತ
ಆರು ಬಾರಿ ಚುನಾಯಿತರಾಗಿರುವ ಎಸ್. ಅಂಗಾರ ಅವಿಭಜಿತ ಜಿಲ್ಲೆಯ ಹಿರಿಯ ಶಾಸಕ. ಹೀಗಾಗಿ ಈ ಬಾರಿ ಸಚಿವರಾಗುವುದು ನಿಶ್ಚಿತ ಎನ್ನಲಾಗಿತ್ತು. 2008ರಲ್ಲಿ ಅಂಗಾರ ಅವರಿಗೆ ಅವಕಾಶ ನೀಡಬೇಕು ಎಂದು ಸುಳ್ಯದಿಂದ ನಿಯೋಗದ ಮೂಲಕ ಆಗ್ರಹಿಸಿದ್ದರೂ ಸಿಕ್ಕಿರಲಿಲ್ಲ. ಎರಡನೇ ಬಾರಿಯೂ ಅವಕಾಶ ವಂಚಿತರಾಗಿರುವುದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಭದ್ರಕೋಟೆಯ ನಿರ್ಲಕ್ಷ್ಯ
ಸುಳ್ಯ ಬಿಜೆಪಿಯ ಭದ್ರಕೋಟೆ. ಸಂಘಟನೆ, ಪಕ್ಷ ನಿಷ್ಠೆ, ಶಿಸ್ತು ವಿಚಾರದಲ್ಲಿ ಎಲ್ಲ ಕ್ಷೇತ್ರಕ್ಕಿಂತಲೂ ಮುಂದಿದೆ. 2013ರಲ್ಲಿ ದ.ಕ. ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತಾದರೂ ಸುಳ್ಯದಲ್ಲಿ ಗೆಲುವು ಸಾಧಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿತ್ತು. ಗ್ರಾ.ಪಂ., ತಾ.ಪಂ., ಜಿ.ಪಂ., ಸೊಸೈಟಿ ಚುನಾವಣೆಯಲ್ಲಿಯೂ ಇಲ್ಲಿ ಬಿಜೆಪಿಯದ್ದೆ ಪಾರುಪತ್ಯ. ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಅತ್ಯಧಿಕ ಮುನ್ನಡೆ ಕೊಟ್ಟ ಕ್ಷೇತ್ರ ಇದಾಗಿತ್ತು. ಅಷ್ಟಾಗಿಯು ಬಿಜೆಪಿ ಹೈಕಮಾಂಡ್ ಸುಳ್ಯವನ್ನು ನಿರ್ಲಕ್ಷಿ ಸಿರುವುದು ಕಾರ್ಯಕರ್ತರ, ಮುಖಂಡರ ಅಸಮಾಧಾನಕ್ಕೆ ಕಾರಣವೆನಿಸಿದೆ.
ಕಾಣದ ‘ಕೈ’ವಾಡ
ಹೈಕಮಾಂಡ್‌ಗೆ ರವಾನಿಸಲಾದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಅಂಗಾರ ಅವರ ಹೆಸರು ಇತ್ತು. ಸೋಮವಾರ ರಾತ್ರಿ ತನಕವೂ ಮಂಗಳವಾರ ಪ್ರಮಾಣ ವಚನಕ್ಕೆ ಹಾಜರಾಗಲು ಪಕ್ಷದಿಂದ ಮಾಹಿತಿ ನೀಡಲಾಗಿತ್ತು. ಸೋಮವಾರ ರಾತ್ರಿ ತನಕ ಎಸ್ಕಾರ್ಟ್ ಸಿಬಂದಿ ಶಾಸಕರಿಗೆ ಕರೆ ಮಾಡಿ ಬೆಳಗ್ಗೆ ಹೊರಡುವ ಸಮಯದ ಬಗ್ಗೆಯೂ ಮಾಹಿತಿ ಪಡೆದಿದ್ದರು. ಹೀಗಿದ್ದರೂ ತಡರಾತ್ರಿ ನಡೆದ ಲಾಬಿ ಪರಿಣಾಮ ಅಂಗಾರ ಅವರ ಹೆಸರು ಕೈಬಿಡಲಾಯಿತು ಎಂದು ವಿಶ್ಲೇಷಿಸಲಾಗಿದೆ.
ಉಳಿದ ಶಾಸಕರ ಮೌನ
ಅಂಗಾರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಬಗ್ಗೆ ಜಿಲ್ಲಾಧ್ಯಕ್ಷರು ಭೇಟಿ ಮಾಡಿ ಸಮಾಧಾನದ ಮಾತುಗಳನ್ನಾಡಿರುವುದು ಬಿಟ್ಟರೆ, ಉಳಿದ ಶಾಸಕರು, ಮುಖಂಡರು, ಸಂಸದರು ಬಹಿರಂಗವಾಗಿ ಧ್ವನಿಯೆತ್ತಿಲ್ಲ ಎನ್ನುವ ಆಕ್ರೋಶದ ಕೂಗು ಕೇಳಿ ಬಂದಿದೆ.
ಜಿಲ್ಲಾಧ್ಯಕ್ಷರು ಗುರುವಾರ ಸಭೆ ಸೇರುವ ಬಗ್ಗೆ ತೀರ್ಮಾನಿಸುವ ಬದಲು ಜಿಲ್ಲೆಯ ಎಲ್ಲ ಶಾಸಕರು ತತ್‌ಕ್ಷಣ ನಿರ್ಧಾರ ಪ್ರಕಟಿಸಬೇಕಿತ್ತು ಎಂದು ಕೆಲ ಕಾರ್ಯಕರ್ತರು, ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ವಿಷಯದಲ್ಲಿ ಸುಳ್ಯ ಹೊರತುಪಡಿಸಿ ಉಳಿದ ಕ್ಷೇತ್ರಗಳಿಂದ ಸಿಕ್ಕ ಬೆಂಬಲದ ಬಗ್ಗೆಯು ತೃಪ್ತಿ ಇಲ್ಲ ಎಂದು ಸುಳ್ಯ ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.
57 ವರ್ಷಗಳಿಂದ ಸಿಗದ ಮಂತ್ರಿಗಿರಿ
1962ರಲ್ಲಿ ಹೊಸ ಸುಳ್ಯ ಕ್ಷೇತ್ರ ರಚನೆಗೊಂಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿತ್ತು. 1967ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಇಲ್ಲಿ ಪಕ್ಷದ ರಾಮಚಂದ್ರ, ಪಿ.ಡಿ. ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ. ಕುಶಲ, ಅಂಗಾರ ಅವರು ಕ್ಷೇತ್ರ ಪ್ರತಿನಿಧಿಸಿದ್ದರು.
ಹಾಲಿ ಶಾಸಕ ಎಸ್. ಅಂಗಾರ ಅವರು ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ. ಸುಳ್ಯ ತಾಲೂಕಿನವರಾಗಿ, ಬೇರೆ ಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ, ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಜನಪ್ರತಿನಿಧಿಗಳಿಗೆ ಆ ಭಾಗ್ಯ ಸಿಕ್ಕಿರಲಿಲ್ಲ. ಪುತ್ತೂರು – ಸುಳ್ಯ ತಾಲೂಕು ಏಕ ವಿಧಾನಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ 1952, 57 ಮತ್ತು 62ರಲ್ಲಿ ಸುಳ್ಯದ ಬಾಳುಗೋಡು ನಿವಾಸಿ, ಪುತ್ತೂರಿನಲ್ಲಿ ನ್ಯಾಯವಾದಿಯಾಗಿದ್ದ ಕೂಜುಗೂಡು ವೆಂಕಟರಮಣ ಗೌಡ ಅವರು ಪುತ್ತೂರಿನಿಂದ ಸ್ಪರ್ಧಿಸಿ ಮೂರು ಅವಧಿಗೆ ಶಾಸಕರಾಗಿದ್ದರು.
ಈ ಸಂದರ್ಭ ಕೆ.ವಿ. ಗೌಡ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದ ಆಹ್ವಾನ ಬಂದಿತ್ತು. ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಕೆ.ವಿ. ಗೌಡ ಅವರು ಇದನ್ನು ತಿರಸ್ಕರಿಸಿದ್ದರು. ಈ ಬಾರಿ ಅಂಗಾರ ಅವರಿಗೆ ಸ್ಥಾನ ದೊರೆಯುವ ನಿರೀಕ್ಷೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿದೆ.
ಬೇಸರವಾಗಿದೆ
ಸರಳ ಸಜ್ಜನಿಕೆಗೆ ಹೆಸರಾದ ಸುಳ್ಯದ ನಿಷ್ಠಾವಂತ ಶಾಸಕ ಎಸ್. ಅಂಗಾರ ಅವರಿಗೆ ಸಂಪುಟ ರಚನೆ ವೇಳೆ ಮಂತ್ರಿ ಸ್ಥಾನದಿಂದ ವಂಚಿತರನ್ನಾಗಿಸಿರುವುದು ನೋವಿನ ಸಂಗತಿ. ಯಾವ ಕಾರಣಕ್ಕೆ ಅವರಿಗೆ ಸಚಿವ ಪದವಿ ಕೈತಪ್ಪಿದೆ ಗೊತ್ತಿಲ್ಲ. ಮುಂದಿನ ಬಾರಿಯ ಸಂಪುಟ ಪುನಾರಚನೆ ವೇಳೆಗಾದರೂ ಅವರಿಗೆ ಅವಕಾಶ ನೀಡಿದಲ್ಲಿ ಒಳ್ಳೆಯದು.
– ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ
ಅಂಗಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದನ್ನು ಖಂಡಿಸಿ ಸುಬ್ರಹ್ಮಣ್ಯ, ಕಡಬದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್ ಉಪಾಧ್ಯಕ್ಷ ಎಂ.ಬಿ. ಸದಾಶಿವ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷನಿಷ್ಠ, ಹಿರಿಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡದಿರುವುದು ಸುಳ್ಯಕ್ಕೆ ಮಾಡಿದ ಅವಮಾನ ಎಂದರು. ಸುಬ್ರಹ್ಮಣ್ಯದಲ್ಲಿ ಶಾಸಕರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕಡಬದಲ್ಲೂ ಅತೃಪ್ತಿ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.