ಓಡಸಾಲುನಿಂದ ಹರಿದ ಎಂಆರ್‌ಪಿಎಲ್ ಅಣೆಕಟ್ಟು ನೀರು
ಮಂಗಳೂರು, ಬಂಟ್ವಾಳ ನೀರಿನ ಸಮಸ್ಯೆ
Team Udayavani, Jun 8, 2019, 6:00 AM IST
ಎಂಆರ್‌ಪಿಎಲ್ ಡ್ಯಾಂನಲ್ಲಿ ನೀರನ್ನು ಓಡಸಾಲು (ಬೋಟ್‌ವೇ) ಮೂಲಕ ಹರಿಸಲಾಗುತ್ತಿದೆ.
ಬಂಟ್ವಾಳ: ಕೆಲವು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಬರಡಾಗಿದ್ದ ನೇತ್ರಾವತಿ ನದಿಯಲ್ಲಿ ಅಲ್ಪಸ್ವಲ್ಪ ನೀರು ಕಾಣಿಸಲಾರಂಭಿಸಿದೆ. ಸರಪಾಡಿಯಲ್ಲಿರುವ ಎಂಆರ್‌ಪಿಎಲ್ ಅಣೆಕಟ್ಟಿನಲ್ಲಿ ಸುಮಾರು ಒಂದೂವರೆ ಮೀ. ನೀರು ಸಂಗ್ರಹವಾಗಿದೆ. ಅದನ್ನು “ಓಡಸಾಲು’ (ಬೋಟ್‌ವೇ) ಮೂಲಕ ಬಂಟ್ವಾಳ ಮತ್ತು ತುಂಬೆ ಅಣೆಕಟ್ಟಿಗೆ ಹರಿಸುವ ಪ್ರಯತ್ನ ಮಾಡಲಾಗಿದ್ದು, ನದಿಯಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ.
ಬಂಟ್ವಾಳ, ಮಂಗಳೂರು ನಗರಗಳಲ್ಲಿ ನೀರಿನ ಆತಂಕ ಹೆಚ್ಚಾಗಿದ್ದು, ನೀರು ಪೂರೈಕೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶತಾಯ-ಗತಾಯ ಪ್ರಯತ್ನಿಸುತ್ತಿದ್ದಾರೆ. ನೀರು ಲಭ್ಯವಿ ರುವ ಪ್ರದೇಶದಿಂದ ಬಂಟ್ವಾಳ ಜಾಕ್‌ವೆಲ್ ಮತ್ತು ತುಂಬೆ ಡ್ಯಾಂಗೆ ಹರಿಸುವ ಪ್ರಯತ್ನ ನಡೆದಿದೆ. ಈ ಪ್ರಯತ್ನ ಬಳಿಕ ಜೂ. 5ರಂದು ರಾತ್ರಿ ಉತ್ತಮ ಮಳೆಯಾದ ಪರಿಣಾಮ ಇದೇ ಓಡಸಾಲು ಮೂಲಕ ನೀರು ತುಂಬೆ ಡ್ಯಾಂ ಸೇರಿದೆ.
ನದಿಯಲ್ಲಿ “ಓಡಸಾಲು’ ಕಾಲುವೆ ರೀತಿಯಲ್ಲಿದ್ದು, ಹೂಳನ್ನು ತೆಗೆದರೆ ನೀರು ನೇರವಾಗಿ ಸರಪಾಡಿಯಿಂದ ತುಂಬೆಗೆ ಹರಿಯುತ್ತದೆ. ಅಧಿಕಾರಿಗಳು ಹೇಳುವಂತೆ ಉಪ್ಪಿನಂಗಡಿಯಿಂದ ಮಂಗಳೂರಿನವರೆಗೂ ಈ ವ್ಯವಸ್ಥೆ ಇದೆ.
ಬಂಟ್ವಾಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಪ್ರಸ್ತುತ ಸರಪಾಡಿ ಡ್ಯಾಂನಿಂದ ಬಂಟ್ವಾಳಕ್ಕೆ ನೀರು ಹರಿಸುವ ಯತ್ನ ಮಾಡುತ್ತಿದ್ದಾರೆ. ಇಲ್ಲಿ ಹೆಚ್ಚುವರಿ ನೀರು ಲಭ್ಯವಾದರೆ ಅದು ತುಂಬೆ ಡ್ಯಾಂಗೂ ಅನುಕೂಲವಾಗಲಿದೆ ಎಂಬುದು ತಂಡದ ಅಭಿಪ್ರಾಯ. ಅಂದರೆ ಬೋಟ್‌ವೇ ಇರುವ ಪ್ರದೇಶದಲ್ಲಿ ಎಂಆರ್‌ಪಿಎಲ್ ಡ್ಯಾಂನ ಒಂದು ಗೇಟಿನಲ್ಲಿ ತುಂಬಿರುವ ಮರಳಿನ ಹೂಳನ್ನು ಡ್ರೆಜ್ಜಿಂಗ್ ಮೂಲಕ ತೆರವುಗೊಳಿಸಿ, ಬಳಿಕ ನೀರು ಹರಿಯುವುದಕ್ಕೆ ಅನುಕೂಲ ಮಾಡಿಕೊಡಬೇಕಿದೆ.
ಡ್ಯಾಂನಲ್ಲಿ ನೀರು ಏರಿಕೆ ಹೇಗೆ?
ಅಲ್ಪಸ್ವಲ್ಪ ಮಳೆ ಬರುತ್ತಿರುವ ಕಾರಣ ನದಿಯ ಸುತ್ತಮುತ್ತಲ ಪ್ರದೇಶದ ಜನರು ತೋಟಕ್ಕೆ ನೀರು ಬಿಡುವುದನ್ನು ನಿಲ್ಲಿಸಿರುವುದರಿಂದ ಒಸರಿನ ಪ್ರಮಾಣ ಹೆಚ್ಚಾಗಿದೆ ಎಂಬ ಅಭಿಪ್ರಾಯವೂ ಇದೆ.
ಏನಿದು ಓಡಸಾಲು?
ಹಿಂದಿನ ಕಾಲದಲ್ಲಿ ರಸ್ತೆ ಬಹಳ ಅಪರೂಪವಾಗಿತ್ತು. ಆಗ ಸರಕುಗಳನ್ನು ಜಲ ಮಾರ್ಗದಲ್ಲಿ ಸಾಗಿಸುತ್ತಿದ್ದರು. ಉಪ್ಪಿನಂಗಡಿಯಿಂದ ಮಂಗಳೂರಿಗೆ ಸರಕು ಸಾಗಾಟ ನಡೆಸುವುದಕ್ಕೆ ನದಿಯಲ್ಲಿ ದೋಣಿ ಸಾಗುವ ಸ್ಥಳವನ್ನು ಓಡಸಾಲು (ಬೋಟ್‌ವೇ) ಎಂದು ಕರೆಯಲಾಗುತ್ತದೆ.
ಓಡಸಾಲು ಕಾಲುವೆ ರೀತಿಯಲ್ಲಿರುತ್ತದೆ. ಅಂದರೆ ನೀರು ಕಡಿಮೆ ಇರುವ ಸಂದರ್ಭದಲ್ಲೂ ದೋಣಿ ಸಾಗುವುದಕ್ಕೆ ಅನುಕೂಲವಾಗುವಂತಹ ರಚನೆ.
ಬೋಟ್‌ವೇ ಮೂಲಕ ನೀರು
ಅಣೆಕಟ್ಟಿನಲ್ಲಿ ಶೇಖರವಾಗಿರುವ ನೀರನ್ನು ಪ್ರಸ್ತುತ ಬೋಟ್‌ವೇ ಮೂಲಕ ಬಂಟ್ವಾಳಕ್ಕೆ ಹರಿಸ ಲಾಗುತ್ತಿದೆ. ಹೆಚ್ಚುವರಿಯಾಗಿ ನೀರು ಲಭ್ಯವಾದರೆ ಅದು ನೇರವಾಗಿ ತುಂಬೆಗೂ ಹರಿಯಲಿದೆ. ಬೋಟ್‌ವೇಯಲ್ಲಿ ತುಂಬಿರುವ ಹೂಳನ್ನು ತೆಗೆಯುವುದಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.
– ರಾಜೇಶ್ ನಾೖಕ್‌ಉಳಿಪ್ಪಾಡಿಗುತ್ತು, ಶಾಸಕರು
ತಾತ್ಕಾಲಿಕ ಕಾಮಗಾರಿ
ಕೆಲವು ದಿನಗಳ ಹಿಂದೆ ಮಳೆ ಸುರಿದ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ಡ್ಯಾಂನಲ್ಲಿ ಸುಮಾರು 1.5 ಮೀಟರ್ ನೀರು ಹೆಚ್ಚಾಗಿದ್ದು, ಅದನ್ನು ಬಂಟ್ವಾಳ ಹೊಸ ಜ್ಯಾಕ್‌ವೆಲ್ ಪ್ರದೇಶಕ್ಕೆ ಹರಿಸಲು ತಾತ್ಕಾಲಿಕ ಕಾಮಗಾರಿ ನಡೆಸಲಾಗುವುದು. ಇನ್ನೂ 15 ದಿನಗಳಿಗಾಗುವಷ್ಟು ಪ್ರಸ್ತುತ ನೀರು ನದಿಯಲ್ಲಿ ಲಭ್ಯವಿದೆ.
– ರವಿಚಂದ್ರ ನಾಯ್ಕ, ಸ. ಕಮಿಷನರ್, ಮಂಗಳೂರು
- ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.